ಶನಿವಾರ, ಜನವರಿ 18, 2020
20 °C

ಬೆತ್ತದ ಬದಲು ಪೈಪ್

ರವೀಂದ್ರ ಭಟ್ ಬಳಗುಳಿ Updated:

ಅಕ್ಷರ ಗಾತ್ರ : | |

ಮಲೆನಾಡಿನ ಅಡಿಕೆ ಬೆಳೆಗಾರರಿಗೆ ಕಲ್ಲಿ, ಹೆಡಿಗೆ, ಬುಟ್ಟಿಗಳು ವರ್ಷವಿಡೀ ಬೇಕಾಗುತ್ತವೆ. ಸಾಮಾನ್ಯವಾಗಿ ಬೆತ್ತದ ಬಳ್ಳಿಗಳಿಂದ ತಯಾರಿಸುವ ಈ ಪರಿಕರಗಳನ್ನು ತುಂತುರು ನೀರಾವರಿ ಪೈಪ್‌ಗಳಿಂದಲೂ ತಯಾರಿಸಬಹುದು ಎಂದು ತೋರಿಸಿಕೊಟ್ಟಿದ್ದಾರೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ಮಗೇಗಾರ ಸಮೀಪದ ಗಡಿಗದ್ದೆಯ ಯುವ ಕೃಷಿಕ ಪ್ರಕಾಶ ರಾಮಚಂದ್ರ ಹೆಗಡೆ.ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮಾತ್ರ ಬೆಳೆಯುವ ಬೆತ್ತ ಈಗೀಗ ವಿರಳವಾಗುತ್ತಿರುವ ಕಾರಣ ಅವುಗಳಿಂದ ತಯಾರಿಸಲಾದ ಕಲ್ಲಿ, ಬುಟ್ಟಿಗಳ ಧಾರಣೆಯೂ ಗಗನಕ್ಕೇರಿದೆ. ಅದರೊಂದಿಗೆ ಅವುಗಳು ಬಾಳಿಕೆ ಬರುವುದು ಒಂದೆರಡು ವರ್ಷಗಳು ಮಾತ್ರ. ಆದ್ದರಿಂದ ಅಡಿಕೆ ಬೆಳೆಗಾರರು ಇವುಗಳ ಬದಲಿಗೆ ಬೇರೆ ವಸ್ತುಗಳ ಮೊರೆ ಹೋಗುವುದು ಅನಿವಾರ್ಯ.ಇಂತಹ ಸಂದರ್ಭದಲ್ಲಿ ಇವುಗಳ ಬದಲಿಗೆ ಪರ್ಯಾಯ ವಸ್ತುಗಳ ಬಗ್ಗೆ ಯೋಚಿಸಿದ ಪ್ರಕಾಶ, ಹನಿ ನೀರಾವರಿಗೆ ಉಪಯೋಗಿಸುವ ಹಳೆಯ ಪೈಪ್‌ಗಳು ಅಥವಾ ಹೊಸದಾದ ಪೈಪ್‌ಗಳಿಂದ ಕಲ್ಲಿ, ಬುಟ್ಟಿ, ಹೆಡಿಗೆಗಳನ್ನು  ತಯಾರಿಸುವ ಪ್ರಯೋಗಕ್ಕೆ ಮುಂದಾದರು. ಇದರಲ್ಲಿ ಸಾಕಷ್ಟು ಯಶಸ್ಸನ್ನು ಅವರು ಪಡೆದಿದ್ದಾರೆ. ಕಳೆದ ಮೂರು ವರ್ಷಗಳಿಂದ ಈ ಕೃಷಿ ಪರಿಕರಗಳನ್ನು ತಯಾರು ಮಾಡುತ್ತಿರುವ ಅವರು, 30 ಹೆಡಿಗೆಗಳು ಮತ್ತು ನೂರಾರು ಕಲ್ಲಿಗಳನ್ನು ರೈತರಿಗೆ ತಯಾರಿಸಿ ಕೊಟ್ಟಿದ್ದಾರೆ. `ಒಂದು ದಿನಕ್ಕೆ ಒಂದು ಕಲ್ಲಿ ಅಥವಾ ಎರಡು ಹೆಡಿಗೆ ತಯಾರಿಸಬಹುದು. ಕಲ್ಲಿಯನ್ನು ಹಳೆಯ ಪೈಪ್‌ನಿಂದ ತಯಾರಿಸಿದರೆ ಒಂದಕ್ಕೆ 500ರೂಪಾಯಿ ಮತ್ತು ಹೊಸ ಪೈಪ್‌ಗಳಿಂದ ತಯಾರಿಸಿದರೆ 800 ರೂಪಾಯಿಗಳಷ್ಟು ಧಾರಣೆ ಆಗುತ್ತದೆ. ಹೆಡಿಗೆಗೆ 300 ಮತ್ತು ಬುಟ್ಟಿಗೆ 150ರೂಪಾಯಿ ಬೆಲೆ ಆಗುತ್ತದೆ. ಇವುಗಳು 10 ವರ್ಷಗಳ ಕಾಲ ಬಾಳಿಕೆ ಬರುತ್ತದೆ' ಎನ್ನುತ್ತಾರೆ ಪ್ರಕಾಶ. ಈ ಕೆಲಸ ಸುಲಭವಲ್ಲದ ಕಾರಣ ಪೈಪ್‌ಗಳನ್ನು ಸಿಗಿಯುವುದಕ್ಕೆ ತಾವೇ ಕಬ್ಬಿಣದ ಆಯುಧವನ್ನು ರೂಪಿಸಿಕೊಂಡಿದ್ದಾರೆ.ಈ ಕಲ್ಲಿ, ಹೆಡಿಗೆ ಅಥವಾ ಬುಟ್ಟಿಗಳು ಗಟ್ಟಿಮುಟ್ಟಾಗಿರಲು ಅವುಗಳಿಗೆ ಕಬ್ಬಿಣದ ತಂತಿಗಳನ್ನು ಅಡ್ಡಲಾಗಿ ಹಾಕಬೇಕಾಗುತ್ತವೆ. ಒಂದು ಕಲ್ಲಿಗೆ ಮೂರು ಕೆ.ಜಿ ಮತ್ತು ಹೆಡಿಗೆಗೆ ಒಂದೂವರೆ ಕೆ.ಜಿಯಷ್ಟು ತಂತಿಗಳು ಅಗತ್ಯ. ರೈತರು ತೋಟದಲ್ಲಿ ತುಂತುರು ನೀರಾವರಿಗೆ ಉಪಯೋಗ ಮಾಡಿದ ಪೈಪ್‌ಗಳನ್ನು ಕೊಟ್ಟರೆ ಅಥವಾ ಹೊಸದನ್ನು ಖರೀದಿ ಮಾಡಿ ತಂದು ಕೊಟ್ಟರೆ ಅವುಗಳಿಂದ ಈ ಪರಿಕರಗಳು ಸಿದ್ಧವಾಗುತ್ತವೆ.ಉಪಯೋಗವೇನು?                                                                                 

ಮಲೆನಾಡಿನ ಅಡಿಕೆ ಬೆಳೆಗಾರರಿಗೆ ಅಡಿಕೆ ಗೊನೆಗಳನ್ನು ತೋಟದಿಂದ ಹೊತ್ತು ತರಲು, ಗೊಬ್ಬರ ಹೊರಲೂ ಕಲ್ಲಿಗಳೇ ಬೇಕು. ಸುಲಿದ ಹಸಿ ಅಡಿಕೆ ಅಥವಾ ಚಾಲಿ ಅಡಿಕೆ ತುಂಬಲು, ತೋಟದಲ್ಲಿ ಬೀಳುವ ಗೋಟು ಅಡಿಕೆ ಹೆಕ್ಕಲು ಹೆಡಿಗೆ (ದೊಡ್ಡ ಗಾತ್ರದ ಬುಟ್ಟಿ), ಬುಟ್ಟಿ ಮತ್ತು ಕುಕ್ಕೆಗಳು ಬೇಕು. ಆದ್ದರಿಂದ ಈ ವಸ್ತುಗಳು ಮಲೆನಾಡಿನ ರೈತರ ಮನೆಗಳಲ್ಲಿ ಸಾಮಾನ್ಯವಾಗಿ ಕಂಡು ಬರುತ್ತವೆ. ಸಂಪರ್ಕಕ್ಕೆ : 9972714746

 

ಪ್ರತಿಕ್ರಿಯಿಸಿ (+)