ಬೆತ್ತ,ಭಂಡಾರವೇ ಇಲ್ಲಿ ಔಷಧಿ!

ಬುಧವಾರ, ಜೂಲೈ 17, 2019
27 °C

ಬೆತ್ತ,ಭಂಡಾರವೇ ಇಲ್ಲಿ ಔಷಧಿ!

Published:
Updated:

ಯಾದಗಿರಿ: ವಿಜ್ಞಾನ ಪ್ರಗತಿ ಸಾಧಿಸಿದಂತೆ ಸೂಜಿ ರಹಿತ ಚಿಕಿತ್ಸೆ, ಹೊಲಿಗೆ ಹಾಕದೆಯೇ ಶಸ್ತ್ರಚಿಕಿತ್ಸೆ ಮಾಡುವ ಪದ್ಧತಿಗಳು ಆವಿಷ್ಕಾರವಾದವು. ಮೈಮೇಲೆ ಯಾವುದೇ ಗಾಯಗಳಿಲ್ಲದೇ ಶಸ್ತ್ರಚಿಕಿತ್ಸೆ ಮಾಡುವಂತಹ ಸಾಧನಗಳೂ ಬಂದಿವೆ. ಆದರೆ ತಾಲ್ಲೂಕಿನ ಗೌಡಗೇರಾ ಗ್ರಾಮದಲ್ಲಿ ಮಾತ್ರ ಈ ಆವಿಷ್ಕಾರ, ಸಂಶೋಧನೆಗಳು ಯಾವುದೇ ಲೆಕ್ಕಕ್ಕಿಲ್ಲ. ಇಲ್ಲಿ ಕೇವಲ ಬೆತ್ತ, ಭಂಡಾರಗಳಿದ್ದರೆ, ಎಂತಹ ರೋಗವನ್ನೂ ಗುಣಪಡಿಸಬಹುದು!ಹೌದು, ತಾಲ್ಲೂಕಿನ ಗೌಡಗೇರಾ ಗ್ರಾಮದ ವೈದ್ಯನಾಥ ಮೈಲಾರಲಿಂಗೇಶ್ವರ ಮಠದಲ್ಲಿ ಕಳೆದ ಹಲವಾರು ವರ್ಷಗಳಿಂದ ಇಂತಹ ಚಿಕಿತ್ಸೆ ನಡೆಯುತ್ತಲೇ ಬಂದಿದೆ. ಇಲ್ಲಿ ರಕ್ತ ಬಂದ ಗಾಯಗಳನ್ನು ಹೊರತುಪಡಿಸಿ, ಯಾವುದೇ ರೋಗಗಳಿದ್ದರೂ ಗುಣಪಡಿಸಲಾಗುತ್ತದೆ. ಜನರಲ್ಲಿಯೂ ಈ ಬಗ್ಗೆ ಅಪಾರ ನಂಬಿಕೆಯೂ ಇದೆ.ಮಾನಸಿಕ ಅಸ್ವಸ್ಥರು, ಮಾಟ ಮಂತ್ರದ ಪ್ರಭಾವಕ್ಕೆ ಒಳಗಾದವರು, ಅಂಗವೈಕಲ್ಯ ಹೊಂದಿದವರು ಹೀಗೆ ಹತ್ತಾರು ಬಗೆಯ ರೋಗಿಗಳು ನಿತ್ಯವೂ ಬರುತ್ತಾರೆ. ಇವರಿಗೆ ಕೇವಲ ವಿಭೂತಿ, ಭಂಡಾರ ಹಚ್ಚಿ, ತೀರ್ಥ ನೀಡಲಾಗುತ್ತದೆ. ನಂತರ ಬೆತ್ತವನ್ನು ಚಿಕಿತ್ಸೆ ಅಗತ್ಯವಿರುವ ಭಾಗದ ಮೇಲೆ ಆಡಿಸಲಾಗುತ್ತದೆ. ಇಷ್ಟಾದರೆ ಸಾಕು, ರೋಗಿಗಳಲ್ಲಿ ಚೇತರಿಕೆ ಕಂಡು ಬರುತ್ತದೆ ಎಂದು ದೇವಸ್ಥಾನಕ್ಕೆ ಆಗಮಿಸಿರುವ ಹಲವಾರು ಭಕ್ತಾದಿಗಳು ಹೇಳುತ್ತಾರೆ.ಮಾನಸಿಕ ಅಸ್ವಸ್ಥರು ಓಡಿ ಹೋಗುವುದು, ಕಿರಿಚಾಡುವುದು, ಯಾರಿಗಾದರೂ ಅನಾಹುತ ಮಾಡಬಹುದು ಎಂಬ ಉದ್ದೇಶದಿಂದ ಅವರ ಕಾಲುಗಳಿಗೆ ಸರಪಳಿ ಹಾಕಿ ಕೂಡ್ರಿಸಲಾಗುತ್ತದೆ. ಚಿಕಿತ್ಸೆ ಪಡೆಯುವ ವ್ಯಕ್ತಿಗಳು ಗುಣಮುಖರಾಗುವವರೆಗೂ ಈ ಸರಪಳಿಗಳು ಇರುತ್ತವೆ. ಗುಣಮುಖರಾದ ನಂತರ ಸರಪಳಿಗಳನ್ನು ಬಿಚ್ಚಿ ಊರಿಗೆ ಕಳುಹಿಸಲಾಗುತ್ತದೆ ಎಂದು ಗ್ರಾಮದ ಜನರು ತಿಳಿಸುತ್ತಾರೆ.ರಾಯಚೂರಿನಿಂದ ಬರುವ ವ್ಯಕ್ತಿಯೊಬ್ಬರು ಈ ಎಲ್ಲ ರೋಗಿಗಳಿಗೆ ಚಿಕಿತ್ಸೆ ನೀಡುತ್ತಾರೆ. ಯಾವುದೇ ರೋಗವಿದ್ದರೂ ಅದಕ್ಕೆ ಚಿಕಿತ್ಸೆ ನೀಡಲಾಗುತ್ತದೆ. ಆದರೆ ಗಾಯವಾಗಿ, ರಕ್ತ ಬಂದಿರಬಾರದು. ಅಂತಹ ರೋಗಿಗಳಿಗೆ ಇಲ್ಲಿ ಚಿಕಿತ್ಸೆ ನೀಡಲಾಗುತ್ತದೆ ಎಂದು ಚಿಕಿತ್ಸೆ ಪಡೆಯಲು ಆಗಮಿಸಿದ್ದ ರೋಗಿಯ ಸಂಬಂಧಿಯೊಬ್ಬರು ತಿಳಿಸಿದರು.ದೇವದುರ್ಗದ ಶರೀಫ್ ಎಂಬ ಮಾನಸಿಕ ಅಸ್ವಸ್ಥ ಯುವಕ, ರಾಯಚೂರು ಜಿಲ್ಲೆಯ ವಕ್ರಾಣಿ ಗ್ರಾಮದ ಪ್ರಭಯ್ಯ ಹಾಗೂ ಅಂಬಯ್ಯ ಎಂಬ ಅಂಗವೈಕಲ್ಯದಿಂದ ಬಳಲುತ್ತಿರುವ ರೋಗಿಗಳು ಸೇರಿದಂತೆ ರಾಯಚೂರು ಜಿಲ್ಲೆ, ಶಹಾಪುರ ತಾಲ್ಲೂಕು, ಯಾದಗಿರಿ ತಾಲ್ಲೂಕಿನ ಹಲವಾರು ಜನರು ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ದೊಡ್ಡ ಮಗ ಪ್ರಭಯ್ಯ ಏಳನೆತ್ತೇ ಓದಿದ್ದಾನೆ. ಬರಬರ‌್ತ ಕುಂತ ಏಳೋದ ಕಷ್ಟ ಆತು. ಇವನ ತಮ್ಮ ಅಂಬಯ್ಯಗೂ ಇಂಥಾದ ತ್ರಾಸ ಐತಿ ಗೌಡಗೇರ‌್ಯಾಗ ಗುಣ ಮಾಡತಾರ ಅಂತ ಕೇಳಿದ್ವಿ. ಅದಕ ಇಲ್ಲಿಗೆ ಬಂದೇವಿ ಎಂದು ತಾಯಿ ಅಂಬ್ರಮ್ಮ ಹೇಳುತ್ತಾರೆ.ಶಹಾಪುರ ತಾಲ್ಲೂಕಿನ ಟೋಕಾಪುರ ತಾಂಡಾದ ದೇವಲಾ ಎಂಬ ವ್ಯಕ್ತಿ ಕಳೆದ ಮೂರು ತಿಂಗಳಿಂದ ಮಾನಸಿಕ ಅಸ್ವಸ್ಥನಾಗಿದ್ದು, ಮೈಮೇಲಿನ ಬಟ್ಟೆಗಳನ್ನು ಕಿತ್ತು ಹಾಕುತ್ತಿದ್ದ. ಹೀಗಾಗಿ ಆತನ ಕಾಲಿಗೆ ಸರಪಳಿ ಹಾಕಲಾಗಿದೆ. ಸಾಕಷ್ಟು ಆಸ್ಪತ್ರೆಗಳಿಗೆ ತೋರಿಸಿ ಸಾಕಾಗಿದೆ. ಇಲ್ಲಿ ಚಿಕಿತ್ಸೆ ದೊರೆಯುತ್ತದೆ ಎಂಬುದನ್ನು ಕೇಳಿ ಇಲ್ಲಿಗೆ ಬಂದಿದ್ದೇವೆ ಎಂದು ಆತನ ಪತ್ನಿ ತಾರಿಬಾಯಿ ಹೇಳುತ್ತಾರೆ. ಇಂತಹ ಹಲವಾರು ರೋಗಿಗಳು ಇಲ್ಲಿಗೆ ಬರುತ್ತಾರೆ.ಅಮಾವಾಸ್ಯೆಯ ದಿನವಂತೂ ರೋಗಿಗಳ ಸಂಖ್ಯೆ ಹೆಚ್ಚಾಗಿರುತ್ತದೆ. ಅನೇಕ ರೋಗಿಗಳೂ ಗುಣ ಹೊಂದಿದ್ದಾರೆ ಎಂದು ಇಲ್ಲಿಗೆ ಬರುವ ಜನರು ಹೇಳುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry