ಸೋಮವಾರ, ಆಗಸ್ಟ್ 26, 2019
28 °C

ಬೆನಕಟ್ಟಿಯಲ್ಲಿ ಭಕ್ತಿ ಭಾವದ ಆಷಾಢ ಪರ್ವ

Published:
Updated:

ಅಮೀನಗಡ: ಬಾಗಲಕೋಟೆ ತಾಲ್ಲೂಕಿನ ಬೆನಕಟ್ಟಿ ಗ್ರಾಮದಲ್ಲಿ  ಎಂಕಂಚೆಪ್ಪನ  ಪರು `ಆಷಾಢಪರ್ವ' ಕಾರ್ಯಕ್ರಮ ಇತ್ತೀಚೆಗೆ ಸಂಜೆ ಭಕ್ತಿ-ಭಾವ, ಸಡಗರ ಸಂಭ್ರಮದಿಂದ ನಡೆಯಿತು.ಮಧ್ಯಾಹ್ನ  ಸುರಿದ ಮಳೆ ಕಾರ್ಯಕ್ರಮಕ್ಕೆ ಅಡ್ಡಿ ಮಾಡಿತ್ತಾದರೂ ನಿಗದಿತ ಸಮಯಕ್ಕೆ ಮೋಡಗಳು ಸರಿದು ಸೂರ್ಯ ಇಣುಕಿದಾಗ ಆತಂಕ ಮರೆಯಾಗಿ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಯಿತು.ಸಂಜೆ 5 ಗಂಟೆಗೆ ಗ್ರಾಮದ ಪ್ರತಿ ಮನೆಯ ಪುರುಷರು ತಮ್ಮ ಮನೆಗಳಲ್ಲಿ ತಯಾರಿಸಿದ ಜೋಳದ ಕಿಚಡಿಯ ಗಡಿಗೆಯನ್ನು ಬುಟ್ಟಿಯಲ್ಲಿ ಹೊತ್ತು ಹನಮಂತ ದೇವರ ದೇವಸ್ಥಾನದಿಂದ ಬಾಜಾ ಭಜಂತ್ರಿ, ಹಲಗೆ, ಡೊಳ್ಳು ಮೇಳದೊಂದಿಗೆ ಮೆರವಣಿಗೆಯಲ್ಲಿ ಊರ ಹೊರವಲಯದ ಕಂಚಿವೆಂಕಟೇಶ್ವರ (ಎಂಕಂಚೆಪ್ಪ) ದೇವಸ್ಥಾನಕ್ಕೆ ಬಂದರು.ಮಾರ್ಗದುದ್ದಕ್ಕೂ `ವೆಂಕಟರಮಣ ಗೋವಿಂದಾ..ಗೋವಿಂದ..' ಎಂದು ಹೇಳುತ್ತಾ ದೇವಸ್ಥಾನಕ್ಕೆ ಆಗಮಿಸಿದ ನಂತರ ಅಲ್ಲಿರುವ ಕಟ್ಟೆಯ ಮೇಲೆ ಎಲ್ಲರೂ ತಂದಿದ್ದ ಜೋಳದ ಕಿಚಡಿಯನ್ನು ಒಂದೇ ರಾಶಿಯಲ್ಲಿ ಸುರಿದು ದೇವರಿಗೆ ನೈವೇದ್ಯ ಅರ್ಪಿಸಿದರು.  ಈ ವರ್ಷ ಒಳ್ಳೆಯ ಮಳೆ, ಬೆಳೆ ಕೊಡುವಂತೆ ದೇವರಲ್ಲಿ ಪ್ರಾರ್ಥಿಸಿದರು. ಎಲ್ಲ ಪೂಜಾ ಕಾರ್ಯಕ್ರಮಗಳನ್ನು ಪೂರೈಸಿದ ನಂತರ ಪಾಲ್ಗೊಂಡ ಭಕ್ತರು  ಕಿಚಡಿ ಹಾಗೂ ಕಟ್ಟಿನ ಮತ್ತು ಮಜ್ಜಿಗೆ ಸಾರಿನ ಸವಿಯನ್ನು ಸವಿದರು.

Post Comments (+)