ಬೆನಕಟ್ಟಿ ದುರ್ಗಮ್ಮಳ ಹುಗ್ಗಿ ಜಾತ್ರೆ 23ರಿಂದ

7

ಬೆನಕಟ್ಟಿ ದುರ್ಗಮ್ಮಳ ಹುಗ್ಗಿ ಜಾತ್ರೆ 23ರಿಂದ

Published:
Updated:

ಶಕ್ತಿಯಲ್ಲಿ ಮಹಾಶಕ್ತಿ, ಆದಿಶಕ್ತಿ ಎನಿಸಿಕೊಂಡಿರುವ ಸವದತ್ತಿ ತಾಲ್ಲೂಕಿನ ಸುಕ್ಷೇತ್ರ ಬೆನಕಟ್ಟಿಯ ಶ್ರೀ ದುರ್ಗಾದೇವಿ ಜಾತ್ರೆ ಉತ್ತರ ಕರ್ನಾಟಕದಲ್ಲಿ ವಿಶಿಷ್ಟ ಹಾಗೂ ಹೆಸರುವಾಸಿ.ಲಕ್ಷಾಂತರ ಭಕ್ತರ ಪಾಲಿನ ಶಕ್ತಿದೇವತೆಯಾಗಿ ಪರಿಣಮಿಸಿರುವ ಈ ದೇವತೆ ನಂಬಿದ ಭಕ್ತರಿಗೆ ಕಾಮಧೇನು ಕಲ್ಪವಕ್ಷ. ರಾಜ್ಯಾದ್ಯಂತ “ಬೆನಕಟ್ಟಿ ದುರಗಮ್ಮ~ನೆಂಬ ಅನ್ವರ್ಥನಾಮದಿಂದ ಗುರುತಿಸಿಕೊಂಡಿರುವ ಈ ದೇವಿ ವಿಶೇಷವಾಗಿ ಉತ್ತರ ಕರ್ನಾಟಕದ ಜನರ ಪಾಲಿನ ಆರಾಧ್ಯ ದೇವತೆ.ಸವದತ್ತಿ ಯಲ್ಲಮ್ಮನ ಹಾಗೇ ಖ್ಯಾತಿ ಹೊಂದಿರುವ ಈ ದೇವಿಯ ಜಾತ್ರೆ ಶಿವರಾತ್ರಿ ಪ್ರಯುಕ್ತ ಪ್ರಾಚೀನ ಕಾಲದಿಂದಲೂ ನಡೆದು ಬಂದಿದೆ. ತನ್ಮೂಲಕ ಈ ಭಾಗದಲ್ಲಿ ಅತೀ ಹೆಚ್ಚು ಭಕ್ತರು ಸೇರುವ ಬಯಲು ಜಾತ್ರೆ ಎಂದೇ ಭಕ್ತ ವಲಯದಲ್ಲಿ ಜನಜನಿತ. ಆಧುನಿಕತೆಯ ಇಂದಿನ ದಿನಗಳಲ್ಲೂ ದೇವಿ ತನ್ನ  ಮಹಿಮೆ ಕಾಯ್ದುಕೊಂಡಿದ್ದಾಳೆ.ಮೂಢನಂಬಿಕೆಗೆ ಮಣೆ ಇಲ್ಲ: ದೇವಿಯ ಜಾತ್ರೆಗೆ ಯಾರಾದರೂ ಹೊರಟಿದ್ದಾರೆಂದರೆ ಸಾಕು, “ದುರ್ಗಮ್ಮಗ ಭೇಟಿಯಾಗಿ ನಮಗೂ ಆಕೆಯ ಪ್ರಸಾದ ತಗೊಂಡ ಬರಬೇಕು ಎಂದು ತಮಗೆ ಸಾಧ್ಯವಾದಷ್ಟು ಧನ ಕನಕಾದಿ ನೀಡುವುದು ರೂಢಿ. ಪುರಾಣ ಪ್ರಸಿದ್ಧ ಈ ದೇವಿಯು ನಿರ್ವಿಕಲ್ಪ ಸಮಾಧಿಸ್ಥ ಕರ್ತೃ ಗದ್ದುಗೆಯನ್ನು ಹೊಂದಿದೆ.ಮೂಢನಂಬಿಕೆಯಂಥ ಅನಿಷ್ಠ ಪದ್ದತಿಗಳಿಗೆ ಅವಕಾಶವಿಲ್ಲದ ಈ ಜಾತ್ರೆಯಲ್ಲಿ ದೇವಿಯನ್ನು ಬೆಳ್ಳಿ ಪಲ್ಲಕ್ಕಿಯಲ್ಲಿ ಅಲಂಕರಿಸಿ ದೇವಿಯ ಸಾನ್ನಿಧ್ಯದಲ್ಲಿ ಪ್ರಶ್ನೆಗಳನ್ನು ಕೇಳಿ ದೇವಿ ಕೊಟ್ಟ ವ್ಯಾಖ್ಯಾನದಂತೆ ಭಕ್ತರು ನಡೆದುಕೊಳ್ಳುವುದು ಈ ಜಾತ್ರೆಯ ವಿಶೇಷ.ಜಾತ್ರೆಯಲ್ಲಿ ವಿಭಿನ್ನ ಕೋಮುಗಳ ವಿಭಿನ್ನ ಮನೋಧರ್ಮದ ಜನರು ಜಾತಿ, ಮತಭೇದವಿಲ್ಲದೇ ಪರಸ್ಪರ ಪ್ರೀತಿ, ನಮ್ರತೆಗಳಿಂದಲೇ ಜಾತ್ರೆಯನ್ನು ವಿಶಿಷ್ಟವಾಗಿ ಆಚರಿಸುತ್ತಿರುವುದು ದೇವಿಯ ಕ್ರಿಯಾಶಕ್ತಿ ಹಾಗೂ ಸಂಕಲ್ಪ ಶಕ್ತಿಗಳ ಧ್ಯೋತಕ ಎಂಬುದು ಪರ ಊರಿನಿಂದ ಜಾತ್ರೆಗೆ ಆಗಮಿಸುವ ಭಕ್ತರ ಅಭಿಪ್ರಾಯ.ರುಚಿಕಟ್ಟಾದ ಹುಗ್ಗಿ ಜಾತ್ರೆ : 800 ಮೀಟರ್‌ದುದ್ದಕ್ಕೂ ಭಕ್ತರು ಕುಳಿತುಕೊಂಡು ಹುಗ್ಗಿಯ ಸವಿ ಸವಿಯುವುದು ಈ ಜಾತ್ರೆಯ ಇನ್ನೊಂದು ವಿಶೇಷ. ಇದರಿಂದಾಗಿ ಈ ಜಾತ್ರೆ ಹುಗ್ಗಿಯ ಜಾತ್ರೆ ಎಂದೂ ಹೆಸರುವಾಸಿಯಾಗಿದೆ. ಜಾತ್ರೆಯ ಎರಡನೇ ದಿನ ಊರವರು ಬಡಿಸುವ ಅನ್ನಸಂತರ್ಪಣೆ ಕಾರ್ಯಕ್ರಮ ರಾಜ್ಯಕ್ಕೆ ಮಾದರಿ ಎಂಬುದು ಭಕ್ತರ ನಿಲುವು. ಜಾತಿ, ಮತಭೇದವಿಲ್ಲದೇ ಈ ಜಾತ್ರೆಯಲ್ಲಿ ಪ್ರಸಾದ ವಿತರಣೆ ಮಾಡುವುದು ಇತರೆ ಜಾತ್ರೆಗಳಿಗೆ ಮಾದರಿ ಎನ್ನುತ್ತಾರೆ ದೂರದ ಊರುಗಳಿಂದ ಬರುವ ಭಕ್ತಾಧಿಗಳು.ಭಕ್ತ ಸಮೂಹವನ್ನು ಉದ್ಧರಿಸುವ ವಿಶಿಷ್ಟ ಜಾತ್ರೆಗೆ ಒಮ್ಮೆ ಆಗಮಿಸಿದರೆ ಸಾಕು, ಪ್ರತಿವರ್ಷ ಆಗಮಿಸಬೇಕೆನ್ನುವಷ್ಟರ ಮಟ್ಟಿಗೆ ಈ ಜಾತ್ರೆ ಅಂದವಾಗಿ ನಡೆಯುತ್ತದೆ.  ಇಂಥ ಬಹುವಿಶಿಷ್ಟ ಹಾಗೂ ಬಯಲು ಜಾತ್ರೆ ಎಂದೇ ಖ್ಯಾತಿಯ ಬೆನಕಟ್ಟಿ ಜಾತ್ರೆ ಇದೇ 23 ರಿಂದ 25 ರವರೆಗೆ ಮೂರು ದಿನಗಳ ಕಾಲ ಅದ್ದೂರಿಯಾಗಿ ನಡೆಯಲಿದೆ. ಅದಕ್ಕಾಗಿ ಸಕಲ ಸಿದ್ಧತೆ ನಡೆದಿದೆ. ದೇವಾಲಯವೀಗ ಸುಣ್ಣ-ಬಣ್ಣದಿಂದ ಅಲಂಕತಗೊಂಡಿದೆ. 23ರಂದು ಸಂಜೆ 5ಗಂಟೆಗೆ ದೇವಿಯ ಬೆಳ್ಳಿ ಪಲ್ಲಕ್ಕಿ ಉತ್ಸವ ಮದ್ಲೂರಿಗೆ ತೆರಳುವುದು. ರಾತ್ರಿ ಡೊಳ್ಳಿನ ಪದಗಳಿಂದ ಜಾಗರಣೆ.  24 ರಂದು ದೇವಿಯ ಪಲ್ಲಕ್ಕಿ ಉತ್ಸವ ಪುನಃ ಆಗಮನ. ನಾನಾ ವಾದ್ಯ ವೈಭವಗಳೊಂದಿಗೆ ಬರಮಾಡಿಕೊಳ್ಳಲಾಗುವುದು.ನಂತರ ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ಬಹತ್ ಡೊಳ್ಳಿನ ಓಲಗ ಹಾಗೂ ಕರಡಿ ಮಜಲು ಕಾರ್ಯಕ್ರಮ ನಡೆಯಲಿದೆ. ರಾತ್ರಿ ಪ್ರಸಾದ ವಿನಿಯೋಗ. ಇದೇ 25ರಂದು ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಲಿದ್ದು, ಸಂಜೆ ಭಂಡಾರ ಒಡೆಯುವ ಮೂಲಕ ಜಾತ್ರೆ ಮಂಗಳಗೊಳ್ಳಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry