ಶನಿವಾರ, ಏಪ್ರಿಲ್ 17, 2021
32 °C

ಬೆನಕನಾಳ: ಕೆಲಸ ನೀಡುವಂತೆ ಒತ್ತಾಯಿಸಿ ಗ್ರಾ.ಪಂ.ಗೆ ಮುತ್ತಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹನುಮಸಾಗರ:  ಸಮೀಪದ ಬೆನಕನಾಳ ಗ್ರಾಮಸ್ಥರು ಬರಗಾಲದ ಈ ದಿನದಲ್ಲಿ ಜನ ಸೇರಿದಂತೆ ಜಾನುವಾರುಗಳಿಗೆ ತಿನ್ನಲು ಅನ್ನವಿಲ್ಲದಂತಾಗಿದೆ, ಗ್ರಾಮೀಣ ಅಭಿವೃದ್ಧಿ ಯೋಜನೆಯಡಿಯಲ್ಲಿ ಕೆಲಸ ನೀಡುವಂತೆ ಒತ್ತಾಯಿಸಿ ಗುರುವಾರ ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.ಕಳೆದ ಎರಡು ವರ್ಷಗಳಿಂದ ಮಳೆ ಇಲ್ಲದೆ ಕಂಗಾಲಾಗಿದ್ದೇವೆ, ಗ್ರಾಮದ ಬಹುತೇಕ ರೈತರು ಉದ್ಯೋಗವಿಲ್ಲದೆ ಈಗಾಗಲೇ ವಿವಿಧ ನಗರಗಳಿಗೆ ಗುಳೆ ಹೋಗಿದ್ದಾರೆ, ಅಳಿದುಳಿದ ಜನರಿಗಾದರೂ ಉದ್ಯೋಗ ನೀಡಿ ಅನ್ನಕ್ಕೆ ದಾರಿ ಮಡಿಕೊಡಿ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯ ಮುಂದೆ ಅಳಲು ತೋಡಿಕೊಂಡರು.ಕೂಲಿಕಾರರೊಂದಿಗೆ ಮಾತನಾಡಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ನೀವು ಕೇಳಿದ ತಕ್ಷಣ ಉದ್ಯೋಗ ನೀಡಲು ಸಾಧ್ಯವಿಲ್ಲ, ಅದಕ್ಕೂ ಸರ್ಕಾರದ ನಿಯಮಾವಳಿಗಳಿವೆ, ಕೆಲಸಗಳಿಗೆ ಸಂಬಂಧಿಸಿದಂತೆ ಕ್ರಿಯಾ ಯೋಜನೆ ತಯಾರಿಸಬೇಕು.  ಆದಷ್ಟು ಬೇಗನೆ ಕ್ರಿಯಾಯೋಜನೆ ತಯಾರಿಸಿ ಪಂಚಾಯಿತಿಯ ಸಭೆ ಮೂಲಕ ಮಂಜೂರಾತಿ ಪಡೆದುಕೊಂಡು ಕೆಲಸ ನೀಡಲು ಪ್ರಯತ್ನಿಸುತ್ತೇವೆ ಎಂದು ಹೇಳಿದರು.ಇದಕ್ಕೆ ಸಮಾಧಾನಗೊಳ್ಳದ ಕೂಲಿಕಾರ್ಮಿಕರು ಸಭೆ, ಸಮಾರಂಭ ತೊಗೊಂಡು ನಾವೇನು ಮಾಡಬೇಕೈತೆ, ನಾವು ಮಾರ್ಚ ತಿಂಗಳಿನಲ್ಲಿಯೇ ಕೆಲಸಕ್ಕಾಗಿ ಅರ್ಜಿ ತುಂಬಿಕೊಟ್ಟಿದ್ದೇವೆ, ಬರಗಾಲ ಐತಂತ ಉದ್ಯೋಗ ಕೇಳ್ತೀವಿ, ಕೆಲಸ ಕೊಡ್ರಿ ಇಲ್ಲಂದ್ರ ದಿನದ ಕೂಲಿ ಹಾಕಿ ನಮಗೆ ಪಗಾರ ಕೊಡ್ರಿ ಎಂದು ಹರಿಹಾಯ್ದರು.ಮಹಾತ್ಮಗಾಂಧಿ ಗ್ರಾಮೀಣ ಅಭಿವೃದ್ಧಿ ಯೋಜನೆಯಲ್ಲಿ ಈ ವರ್ಷ ನಮ್ಮ ಪಂಚಾಯಿತಿಗೆ ರೂ.10 ಲಕ್ಷ ಮಂಜೂರಾಗಿದೆ, ಕ್ರಿಯಾಯೋಜನೆ ತಯಾರಿಸಿ ಅದರಲ್ಲಿ ಅರಣ್ಯ ಇಲಾಖೆಯಲ್ಲಿ ಕೆಲಸ ನಿರ್ವಹಿಸುವ ಕೂಲಿ ಕಾರ್ಮಿಕರಿಗೆ ಶೇಕಡ 20 ರಷ್ಟು ಕೆಲಸ ಕೊಡಬೇಕೆಂಬುದು ಸರ್ಕಾರದ ಆದೇಶವಿದೆ. ನಿಯಮಾವಳಲಿಗಳ ಮೂಲಕ  ಆದಷ್ಟು ಬೇಗನೆ ಕೂಲಿ ಕಾರ್ಮಿಕರಿಗೆ ಕೆಲಸ ನೀಡುವುದಾಗಿ ಅಭಿವೃದ್ಧಿ ಅಧಿಕಾರಿ ಭರವಸೆ ನೀಡಿದರು.ತಾಲ್ಲೂಕು ಪಂಚಾಯಿತಿ ಸದಸ್ಯ ಶಿವನಗೌಡ ಪಾಟೀಲ್, ಗ್ರಾಮ ಪಂಚಾಯಿತಿ ಸದಸ್ಯರಾದ ಮಲ್ಲಪ್ಪ ನೂಲ್ವಿ, ಮಲ್ಲಪ್ಪ ಚೆಳ್ಳಾರಿ, ನಾಗರತ್ನ ಪಟ್ಟಣಟ್ಟಿ, ಹನಮಗೌಡ ಪಾಟೀಲ್ ಈ ಸಂದರ್ಭದಲ್ಲಿ ಇದ್ದರು.ನಾಳೆ ಗುರುಪೂಜಾ ಉತ್ಸವ

ಗಂಗಾವತಿ: ಸರ್ಕಾರಿ ಜ್ಯೂನಿಯರ್ ಕಾಲೇಜು ಆವರಣದ ಹಿಂದಿರುವ ಭಾರತೀಯ ವೈದ್ಯಕೀಯ ಭವನದಲ್ಲಿ (ಐಎಂಎ) ಭಾನುವಾರ ಬೆಳಗ್ಗೆ 11ಗಂಟೆಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ಗುರುಪೂಜಾ ಉತ್ಸವ ಹಮ್ಮಿಕೊಳ್ಳಲಾಗಿದೆ.ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಉತ್ತರ ಕರ್ನಾಟಕ ಪ್ರಾಂತ ಸೇವಾ ಪ್ರಮುಖ ಶೀ.ಲ. ಕೃಷ್ಣಮೂರ್ತಿ ಬೌದ್ಧಿಕ (ಉಪನ್ಯಾಸ) ನೀಡುವರು. ವೈದ್ಯ ವಿವೇಕ ಎಂ. ಪಾಟೀಲ್ ಅಧ್ಯಕ್ಷತೆ ವಹಿಸುವರು ಎಂದು ಸಂಘದ ಪ್ರಕಟಣೆ ತಿಳಿಸಿದೆ.ಕುಷ್ಟಗಿಯಲ್ಲಿ ಶ್ರದ್ಧಾಂಜಲಿ ಸಭೆ

ಕುಷ್ಟಗಿ:  ಇಲ್ಲಿಯ ನಿವೃತ್ತ ಶಿಕ್ಷಕ ವಿಠಲಾಚಾರ್ಯ ಡಬೇರ ನಿಧನಕ್ಕೆ ಬ್ರಾಹ್ಮಣ ಸಮಾಜ ಸಂತಾಪ ವ್ಯಕ್ತಪಡಿಸಿದೆ.ಈಚೆಗೆ ರಾಘವೇಂದ್ರಸ್ವಾಮಿ ಮಠದಲ್ಲಿ ಪ್ರಮುಖರಾದ ತಿಮ್ಮಪ್ಪಯ್ಯ ದೇಸಾಯಿ ಅಧ್ಯಕ್ಷತೆಯಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ವಿಠಲಾಚಾರ್ಯ ಡಬೇರ ಅವರು ಸಮಾಜಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಲಾಯಿತು.ಬ್ರಾಹ್ಮಣ ಸಮಾಜದ ಅನೇಕ ಪ್ರಮುಖರು, ಹಿರಿಯರು, ವಿದ್ಯಾರ್ಥಿಗಳು ಮತ್ತು ಅಭಿಮಾನಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.