ಬುಧವಾರ, ನವೆಂಬರ್ 13, 2019
18 °C

ಬೆನ್ನಿಗೆ ಚೂರಿ ಹಾಕಿ ಮೋಸ ಮಾಡಿದರು: ಯಡಿಯೂರಪ್ಪ

Published:
Updated:

ಬೈಲಹೊಂಗಲ: `ನಾನು ಯಾರನ್ನು ನಂಬಿದ್ದೆನೋ, ಅವರೆಲ್ಲರೂ ನನ್ನ ಬೆನ್ನಿಗೆ ಚೂರಿ ಹಾಕಿ ಕೈಕೊಟ್ಟು ಮೋಸ ಮಾಡಿದ್ದಾರೆ. ವಿನಾಕಾರಣ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ, ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಷಡ್ಯಂತ್ರ ಮಾಡಿದರು' ಎಂದು ಮಾಜಿ ಮುಖ್ಯಮಂತ್ರಿ, ಕೆಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅಲವತ್ತುಕೊಂಡರು.ಪಕ್ಷದ ಅಭ್ಯರ್ಥಿ ಡಾ. ವಿಶ್ವನಾಥ ಪಾಟೀಲ ಪರ ಮತಯಾಚನೆ ಪ್ರಯುಕ್ತ ಸೋಮವಾರ ಏರ್ಪಡಿಸಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿದರು.`ನಾನು ಯಾರಿಗೂ ವಿಶ್ವಾಸ ದ್ರೋಹ ಮಾಡಿಲ್ಲ. ಐದು ವರ್ಷಗಳ ವರೆಗೆ ನಾನೂ ಮುಖ್ಯಮಂತ್ರಿಯಾಗಿರದೇ ಇದ್ದರೂ, ಮುಖ್ಯಮಂತ್ರಿ ಪದವಿಗೆ ರಾಜೀನಾಮೆ ಕೊಟ್ಟ ನಂತರವೂ ನನ್ನ ಬೆಂಬಲಿಗ ಸಚಿವರಿಗೆ ಅವರಿಗಿದ್ದ ಇಲಾಖೆಗಳಲ್ಲಿಯೇ ಮುಂದುವರಿಸುವಂತೆ ಸೂಚನೆ ನೀಡಿದ್ದೇನೆ' ಎಂದು ತಿಳಿಸಿದರು.`ಯಡಿಯೂರಪ್ಪನವರೇ ನೀವು ಬಿಜೆಪಿಯಲ್ಲಿದ್ದರೂ ನಾವು ಇರುವುದಿಲ್ಲ ಎಂದು ಭರವಸೆ ನೀಡಿದ್ದ ಶಾಸಕರು, ಸಚಿವರು ನನ್ನನ್ನು ನಂಬಿಸಿ ಮೋಸ ಮಾಡಿದ್ದಾರೆ. ಅಂಥವರಿಗೆ ನಾಡಿನ ಜನರು ಮೇ 5ರಂದು ತಕ್ಕ ಉತ್ತರ ನೀಡುವರು' ಎಂದು ಹೇಳಿದರು.

`ನನ್ನ ಅಧಿಕಾರದ ಅವಧಿಯಲ್ಲಿ ರಾಜ್ಯವನ್ನು ಅಭಿವೃದ್ಧಿ ಪಡಿಸಿದ್ದೇನೆ ಎನ್ನುವ ತೃಪ್ತಿ ಇದೆ. ರಾಜ್ಯದ ಜನತೆಯೇ ನನ್ನ ಹೈಕಮಾಂಡ್, ಅವರ ಸಮಗ್ರ ಅಭಿವೃದ್ಧಿಯೇ ನನ್ನ ಗುರಿ' ಎಂದು ಹೇಳಿದರು.ರೈತರಿಗೆ ಪಿಂಚಣಿ, ರೈತರ ರೂ ಒಂದು ಲಕ್ಷದ ವರೆಗಿನ ಸಾಲ ಮನ್ನಾ, ಸ್ತ್ರೀಶಕ್ತಿ ಸ್ವಸಹಾಯಗಳ ಹೈನುಗಾರಿಕೆ ಹಾಗೂ ಗುಡಿ ಕೈಗಾರಿಕೆಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ವಿತರಣೆ, ಮಧ್ಯಮ ವರ್ಗದವರಿಗೂ ಭಾಗ್ಯಲಕ್ಷ್ಮಿ ಯೋಜನೆ, ನಂಜುಂಡಪ್ಪ ವರದಿ ಪ್ರಕಾರ ರಾಜ್ಯದ 224 ಮತಕ್ಷೇತ್ರಗಳ ಅಭಿವೃದ್ಧಿ ಪಡಿಸುವುದು ಕೆಜೆಪಿಯ ಪ್ರಣಾಳಿಕೆ ಎಂದು ನುಡಿದರು.ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ಡಾ. ವಿಶ್ವನಾಥ ಪಾಟೀಲ ಕ್ಷೇತ್ರದ ಅಭಿವೃದ್ಧಿಯ ಕನಸು ಕಂಡಿದ್ದಾರೆ. ಅವರ ಆಯ್ಕೆ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.ಕೆಜೆಪಿ ಅಭ್ಯರ್ಥಿ ಡಾ.ವಿಶ್ವನಾಥ ಪಾಟೀಲ ಮಾತನಾಡಿ ಮತಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಯ ಜೊತೆಗೆ, ಕಳಸಾ ಬಂಡೂರಿ ಯೋಜನೆಗೆ ಚಾಲನೆ, ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಅಶ್ವಾರೂಢ ಚನ್ನಮ್ಮಾಜಿ ಪುತ್ಥಳಿ ಪ್ರತಿಷ್ಠಾಪನೆ ಮಾಡುವುದಾಗಿ ಭರವಸೆ ನೀಡಿದರು.ಈ ಸಂದರ್ಭದಲ್ಲಿ 50ಕ್ಕೂ ಹೆಚ್ಚು ವಕೀಲರು, ವಿವಿಧ ಗ್ರಾಮಗಳ ಜನರು ಕೆಜೆಪಿ ಸೇರ್ಪಡೆಯಾದರು. ಪಕ್ಷದ  ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಶಂಕರಗೌಡ ಪಾಟೀಲ, ಜಿಲ್ಲಾ ಯುವ ಘಟಕದ ಅಧ್ಯಕ್ಷ ರಾಜು ಟೋಪಣ್ಣವರ, ಜಿಲ್ಲಾ ಘಟಕದ ಅಧ್ಯಕ್ಷ ಉಮೇಶ ಬಾಳಿ, ಗೋಕಾಕ ಮತಕ್ಷೇತ್ರದ ಅಭ್ಯರ್ಥಿ ಎನ್.ಬಿ. ನಿರ್ವಾಣಿ, ಎಫ್.ಎಸ್. ಸಿದ್ಧನಗೌಡ್ರ, ಶ್ರೀಶೈಲ ಯಡಳ್ಳಿ ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)