ಬೆನ್ನು ತಟ್ಟುತ ಬದುಕು (ಬೋರ್ಡ್ ರೂಮಿನ ಸುತ್ತಮುತ್ತ)

7

ಬೆನ್ನು ತಟ್ಟುತ ಬದುಕು (ಬೋರ್ಡ್ ರೂಮಿನ ಸುತ್ತಮುತ್ತ)

Published:
Updated:
ಬೆನ್ನು ತಟ್ಟುತ ಬದುಕು (ಬೋರ್ಡ್ ರೂಮಿನ ಸುತ್ತಮುತ್ತ)

ಚೆನ್ನ ನಿನ ಮಾತುಗಳು, ಚೆಂದ ನಿನ ನಡವಳಿಕೆ/

ಚೆನ್ನ ನೀನೆಸಗುತಿಹ ಕೆಲಸ ಕಾರ್ಯ//

ಎನ್ನುತ್ತ ಇನಿತಿನಿತು ಪರರ ಹುರಿದುಂಬಿಸುತ/

ಬೆನ್ನು ತಟ್ಟುತ ಬದುಕು

        -ನವ್ಯಜೀವಿ//ಹಿಂದಿನ ಲೇಖನವೊಂದರಲ್ಲಿ ಬೋರ್ಡ್‌ರೂಮಿನ ಸುತ್ತಮುತ್ತಲಿನವರಿಗೂ ಹಾಗೂ ಅವರ ತಂಡದವರಿಗೂ ನಡುವೆ ತಂದೆ-ಮಗನ ನೇರ ಸಂಬಂಧವಿಲ್ಲದಿದ್ದರೂ, ಆ ಸಂಬಂಧದ ಎಳೆಯೊಂದಾದರೂ ಇರಲೇಬೇಕೆಂದು ಬರೆದಿದ್ದೆ. ಇದರ ಹಿನ್ನೆಲೆಯಲ್ಲೇ ಹಿಂದಿನ ಒಂದು ಘಟನೆ ನೆನಪಿಗೆ ಬರುತ್ತಿದೆ.ಬಹಳ ವರ್ಷಗಳ ಹಿಂದೆ ಜರ್ಮನಿಗೆ ಕೆಲಸದ ನಿಮಿತ್ಮವಾಗಿ ಹೋಗಿದ್ದೆ. ಆಗಿನ್ನೂ ಮದುವೆಯಾಗಿರಲಿಲ್ಲ. ನಾನು ಅಲ್ಲಿದ್ದ ಶನಿವಾರದ ಒಂದು ಸಂಜೆ ನನ್ನ ಜರ್ಮನಿಯ ಸಹೋದ್ಯೋಗಿ ಪೀಟರ್ ನೇಗಿ ನನ್ನನ್ನು ತನ್ನ ಮನೆಗೆ ರಾತ್ರಿಯ ಭೋಜನಕ್ಕೆಂದು ಆಹ್ವಾನಿಸಿದ್ದ. ಅಚ್ಚುಕಟ್ಟಾದ ಮನೆಯಲ್ಲಿ ಅವನು, ಅವನ ಹೆಂಡತಿ ಹಾಗೂ ಅವನ ಒಬ್ಬಳೇ ಮಗಳು ವಾಸವಿದ್ದರು. ಮಗಳು ಆಗ ಪ್ರಾಯಶಃ ಎಂಟನೆಯ ತರಗತಿಯಲ್ಲಿ ಇದ್ದಳೆಂದು ತೋರುತ್ತದೆ. ಊಟ ಮುಗಿಸಿ ಪೀಟರ್ ಹಾಗೂ ಅವನ ಪತ್ನಿಯೊಡಗೂಡಿ ಹಿತ್ತಲಿನ ಹುಲ್ಲುಹಾಸಿನ ಮೇಲೆ ಆರಾಮವಾಗಿ ಕುಳಿತು ಹರಟುತ್ತಿದ್ದೆ. ಅವನ ಮಗಳು ತಾನು ಬಿಡಿಸಿದ್ದ ಚಿತ್ರವೊಂದನ್ನು ಕೈಯಲ್ಲಿ ಹಿಡಿದು ಪೀಟರ್ ಬಳಿ ಬಂದು ಅದನ್ನು ಅವನ ಮುಂದೆ ಹಿಡಿದಿದ್ದಳು. ನಮ್ಮ ಮಾತಿಗೆ ಕಡಿವಾಣ ಹಾಕಿ ತಕ್ಷಣವೇ ಪೀಟರ್ ಹಾಗೂ ಅವನ ಪತ್ನಿ ಇಬ್ಬರೂ ಆ ಚಿತ್ರವನ್ನೇ ತದೇಕಚಿತ್ತದಲ್ಲಿ ಕ್ಷಣ ಹೊತ್ತು ವೀಕ್ಷಿಸಿ ತಮ್ಮ ಮಗಳ ಕಲಾನೈಪುಣ್ಯತೆಯನ್ನು ಬಹಳವೇ ಹೊಗಳಿದರು. ಅವಳು ಎಳೆದಿರುವ ಗೆರೆಗಳ ವೈಶಿಷ್ಟ್ಯ ಹಾಗೂ ಅದಕ್ಕೆ ಅವಳು ತುಂಬಿರುವ ರಂಗುಗಳ ವೈವಿಧ್ಯ, ಹೀಗೆ ಒಟ್ಟಾರೆ ಅವಳ ಚಿತ್ರವನ್ನು ಹೊಗಳುತ್ತಾ ಅವಳನ್ನು ಪದೇ ಪದೇ ಬೆನ್ನು ತಟ್ಟುತ್ತಲಿರುವಾಗ ಆ ಮುದ್ದು ಹುಡುಗಿಯ ಸಂತೋಷಕ್ಕೆ ಪಾರವೇ ಇರಲಿಲ್ಲ.ಕಡೆಗೆ ಆ ಚಿತ್ರದ ಹಾಳೆ ನನ್ನ ಕೈಗೂ ಬಂತು. ಕುತೂಹಲದಿಂದ ಆ ಚಿತ್ರವನ್ನು ದಿಟ್ಟಿಸಿ ನೋಡಿದೆ. ಆದರೆ, ಅದರಲ್ಲಿ ಆ ಪಾಟಿ ಹೊಗಳುವ ಯಾವ ವಿಶೇಷತೆಯೂ ನನಗೆ ಕಾಣಲಿಲ್ಲ. ನಮ್ಮಲ್ಲಿನ ಮೂರನೇ ಕ್ಲಾಸಿನ ಪೋರ ಇದಕ್ಕಿಂತ ಚೆನ್ನಾಗಿ ಚಿತ್ರ ಬಿಡಿಸಬಲ್ಲ. ಏನು ಹೇಳಬೇಕೆಂದು ತೋರದೆ ಪೇಚಿಗೆ ಬಿದ್ದಿದ್ದೆ. ಬಲವಂತವಾಗಿ ಮುಖದಲ್ಲೊಂದು ಮೆಚ್ಚುಗೆಯ ನಗೆಯನ್ನು ಸೂಸಿ ಆ (ವಿ)ಚಿತ್ರವನ್ನು ಹುಬ್ಬೇರಿಸಿ ಪ್ರಶಂಸಿಸಿ ಆ ಹುಡುಗಿಯ ಬೆನ್ನು ತಟ್ಟಿ ಕೈ ತೊಳೆದುಕೊಂಡಿದ್ದೆ!. ವರುಷಗಳ ನಂತರ ನನಗೂ ಮದುವೆಯಾಗಿ ಮಕ್ಕಳಾದವು. ನನ್ನ ಮೊದಲ ಮಗ ಮೂರನೆಯ ತರಗತಿಯಲ್ಲಿ ಇದ್ದ ಎನ್ನಿಸುತ್ತದೆ. ತಾನು ಬಿಡಿಸಿದ ಚಿತ್ರವೊಂದನ್ನು ನನ್ನ ಮುಂದೆ ಹಿಡಿದಿದ್ದ. ಅವನ ವಯಸ್ಸಿಗೆ ಮೀರಿದ ಕಲಾನೈಪುಣ್ಯತೆ ಆ ಚಿತ್ರದಲ್ಲಿ ಸ್ಪಷ್ಟವಾಗಿ ತೋರಿಬರುತ್ತಿತ್ತು. ಆದರೂ ಅವನನ್ನು ನಿರರ್ಗಳವಾಗಿ ಹೊಗಳಲು ಅದೇನೋ ಹಿಂಜರಿಕೆ. ಹೊಗಳಿಕೆ ಅವನ ತಲೆಗೆ ಏರಬಹುದೆಂಬ ತರ್ಕ. ನನ್ನ ಮಗನಾಗಿದ್ದರಿಂದ ಅವನು ಇನ್ನೂ ಚೆನ್ನಾಗಿ ಚಿತ್ರ ಬಿಡಿಸಬಹುದಾಗಿತ್ತು ಎಂಬ ಆಶಯ. ಚೆನ್ನಾಗಿ ಚಿತ್ರ ಬಿಡಿಸಿದ್ದೀಯೆ ಎಂದು ಔಪಚಾರಿಕವಾಗಿ ಹೇಳಿ ತದನಂತರವೇ ಬಹಳ ಹೊತ್ತು ಅವನಿಗೆ ಗೆರೆಗಳನ್ನು ಇನ್ನೂ ಸ್ಪಷ್ಟ ಮೂಡಿಸಬೇಕೆಂದೂ ಹಾಗೂ ರಂಗುಗಳ ಬಳಕೆಯಲ್ಲಿ ಇನ್ನೂ ಹೆಚ್ಚು ಎಚ್ಚರ ವಹಿಸಬೇಕೆಂದೂ ಗಟ್ಟಿ ಉಪದೇಶ ನೀಡಿದ್ದೆ. ಪಾಪ ಸುಮ್ಮನೆ ತಲೆಯಲ್ಲಾಡಿಸಿ ಅವನು ಅಲ್ಲಿಂದ ಕಾಲ್ಕಿತ್ತಿದ್ದ. ಅವನ ಬೆನ್ನು ತಟ್ಟುವುದನ್ನು ಮರೆತು ಅವನಿಗೆ ಅದೇನೋ ಮಹತ್ತರವಾದ ಪಾಠವೊಂದನ್ನು ಹೇಳಿಕೊಟ್ಟೆನೆಂಬ ತಪ್ಪು ಗ್ರಹಿಕೆಯಲ್ಲಿ ನಾನು ನನ್ನದೇ ಕೆಲಸದಲ್ಲಿ ನಿರತನಾಗಿಬಿಟ್ಟೆ.ಮೇಲಿನ ಎರಡೂ ಪ್ರಸಂಗಗಳು ಒಂದಕ್ಕೊಂದು ತದ್ವಿರುದ್ಧ. ತಲೆಯಲ್ಲಿನ ಕೂದಲು ಬೆಳ್ಳಗಾಗುತ್ತಿರುವಾಗ ನನಗೆ ಅವೆರಡೂ ತಪ್ಪೆಂದು ತೋರಿಬರುತ್ತಿದೆ. ಸೂಕ್ತವಾದ ತತ್ವವೊಂದು ಅವೆರಡರ ನಡುವೆ ಎಲ್ಲೋ ಅಡಕವಾಗಿದೆ ಎಂದು ಗೋಚರಿಸುತ್ತಿದೆ.ಕಂಪೆನಿಯ ಸ್ತರದಲ್ಲಿ ಮ್ಯಾನೇಜರ್ ಆದವನು ತನ್ನ ತಂಡದವರ ಎಲ್ಲ ಕೆಲಸಗಳನ್ನೂ ಪೀಟರ್‌ನ ಹಾಗೆ ಸುಮ್ಮಸುಮ್ಮನೆ ಹೊಗಳಲೂ ಬಾರದು ಅಥವಾ ನನ್ನಂತೆ ಹೊಗಳಿದ ಹಾಗೆ ನೆಪ ಮಾಡಿ ಅದರಡಿಯಲ್ಲೇ ಉಪದೇಶದ ಕುಂಭದ್ರೋಣವನ್ನು ಹರಿಸಲೂ ಬಾರದು. ಅವನ ವ್ಯವಹಾರವೆಂದೂ ಈ ಎರಡರ ನಡುವಿನ ಪ್ರಾಮಾಣಿಕವಾದ ಹಾದಿಯಲ್ಲಿ ಬೆನ್ನು ತಟ್ಟುತ್ತ ಸಾಗಬೇಕೆಂಬುದೇ ಬೋರ್ಡ್‌ರೂಮಿನ ಸುತ್ತಮುತ್ತಲಿನ ನನ್ನ ಕಲಿಕೆಯೂ ಆಗಿದೆ.ತಂಡದವನೊಬ್ಬನ ಕೆಲಸ ಎಣಿಕೆಗೆ ಹತ್ತಿರವಾಗಿದ್ದರೆ ಅಥವಾ ಎಣಿಕೆಯನ್ನೂ ಮೀರಿದ್ದರೆ ಆತನನ್ನು ಆಗಿದ್ದಾಂಗಲೇ ಬರಮಾಡಿಕೊಂಡು ಎಲ್ಲರೆದುರು ಅವನ ಕೆಲಸದ ಬಗ್ಗೆ ಒಂದೆರಡು ಪ್ರೋತ್ಸಾಹದ ಚೆನ್ನುಡಿಗಳನ್ನಾಡುವುದೇ ಉಚಿತ. ಇದು ತಂಡದ ಇನ್ನಿತರರಿಗೂ ಒಳ್ಳೆಯ ಪ್ರೇರಣೆಯಾಗುತ್ತದೆ. ಇದು ಬಹಳವೇ ಸುಲಭವೆಂದು ತೋರಿದರೂ ಅನುಷ್ಠಾನಕ್ಕೆ ತರುವುದು ಅಷ್ಟೊಂದು ಸರಳವಲ್ಲ. ಅದರಲ್ಲೂ ಭಾರತೀಯರಾದ ನಮಗೆ ಇದು ಸ್ವಲ್ಪ ಕಷ್ಟಕರವೇ ಹೌದು.ಏಕೆಂದರೆ, ನಮಗೆ ನಮ್ಮ ಮೇಲಧಿಕಾರಿಗಳ ಚಮಚಾಗಿರಿ ಮಾಡಲು ಅಡ್ಡಿಯಾಗದ ವ್ಯಕ್ತಿತ್ವವೆಲ್ಲ ನಮ್ಮ ಕೈಕೆಳಗಿನವರನ್ನು ಹೊಗಳಲೇಬೇಕಾದಾಗಲೂ ಹೊಗಳಬೇಕಾದ ಸಂದರ್ಭದಲ್ಲಿ ಅಡ್ಡ ಬಂದು ಬಿಡುತ್ತದೆ. ನಾಲಗೆ ಸಲೀಸಾಗಿ ಹೊರಳದಾಗುತ್ತದೆ! ಇವರನ್ನು ಹೊಗಳಿ ಅಟ್ಟಕ್ಕೇರಿಸುವುದು ಹೊನ್ನ ಶೂಲಕ್ಕೆ ತಾವೇ ಬಲಿಯಾದಂತೆ ಎಂಬ ವೇದಾಂತ ಕಾಡುತ್ತದೆ!ಹಾಗೆಯೇ ತಂಡದವನೊಬ್ಬನ ಕೆಲಸ ಎಣಿಕೆಗೆ ಬಾರದಿದ್ದಾಗ ಅವನನ್ನು ಎಲ್ಲರೆದುರೂ ಜರಿಯುವುದಿದೆಯಲ್ಲ, ಇದು ಖಂಡಿತವಾಗಿಯೂ ಸಮ್ಮತವಾದುದಲ್ಲ. ಎಲ್ಲರೂ ಮನುಷ್ಯರೇ ಆದ್ದರಿಂದ ಎಲ್ಲರೂ ಒಮ್ಮೆಯಾದರೂ ಎಡವಿ ಬೀಳುವುದು ಸಹಜವೇ ಎಂಬ ಉದ್ಧಾತ ಭಾವನೆಯೊಂದಿಗೆ ಅವನ ತಪ್ಪನ್ನು ಆತನಿಗೆ ಮನವರಿಕೆ ಮಾಡಿಕೊಟ್ಟು ಅವನ ಕಾರ್ಯ ವೈಖರಿಯನ್ನು ಇನ್ನೂ ಉತ್ತಮಗೊಳಿಸುತ್ತ ಮುಂದೆ ಸಾಗುವುದೇ ಬೋರ್ಡ್‌ರೂಮಿನ ಸುತ್ತಮುತ್ತಲಿನವರ ಆದ್ಯ ಕರ್ತವ್ಯ.ಇಂತಹ ಸಂದರ್ಭಗಳಲ್ಲಿ ತಪ್ಪೆಸಗಿದವನನ್ನು ಏಕಾಂತದಲ್ಲಿ ಸಂಧಿಸಿ ಅವನ ತಪ್ಪುಗಳನ್ನು ಮುಖಾಮುಖಿಯಾಗಿ ಪರಾಮರ್ಶಿಸಿ ಹೊರ ಜಗತ್ತಿಗೆ ತಿಳಿಯದ ಹಾಗೆ ಅವನನ್ನು ಸರಿ ದಾರಿಗೆ ತರುವುದೇ ಸೂಕ್ತ. ಎಲ್ಲರೆದುರಿಗೂ ಒಮ್ಮೆ ಹೋದ ಮಾನ ಮತ್ತೆ ಸಾವಿರ ಸಂಬಳ ಕೊಟ್ಟರೂ ದಕ್ಕದೆಂಬ ಸತ್ಯದ ಅರಿವಿರಬೇಕು. ಈ ಸೂಕ್ಷ್ಮತೆಯನ್ನು ತನ್ನದಾಗಿಸಿಕೊಂಡವನೊಬ್ಬ ಉತ್ತಮ ನಾಯಕನಾಗುವುದರಲ್ಲಿ ಸಂಶಯವೇ ಇಲ್ಲ.ಇಲ್ಲಿ ನಾನು ಹಿಂದೆ ಕೆಲಸದಲ್ಲಿದ್ದ ಕಂಪನಿಯೊಂದರ ನನ್ನ ಬಾಸಿನ ನೆನಪಾಗುತ್ತಿದೆ. ಅವರ ಹೆಸರು ಮನೋಜ್ ಚತುರ್ವೇದಿ. ಅವರೀಗ ನಿವೃತ್ತಿಯಾಗಿ ವರುಷಗಳೇ ಆಗಿವೆ. ಅವರದ್ದು ಒಂದು ಪರಿಪಾಠವಿತ್ತು.ನಮ್ಮ ಯಾವುದೇ ಕೆಲಸ ಅವರಿಗೆ ಇಷ್ಟವಾಗದೇ ಇದ್ದಾಗ ನಮ್ಮನ್ನು ಅವರೇ ಫೋನ್ ಮೂಲಕ ತಮ್ಮ ಕಚೇರಿಗೆ ಬರಮಾಡಿಕೊಂಡು, ಬಾಗಿಲನ್ನು ಭದ್ರಪಡಿಸಿ, ನಮಗೆ ಮಾತ್ರ ಕೇಳುವಷ್ಟರ ದನಿಯಲ್ಲಿ ಪಾಠ ಹೇಳಿ ತಿದ್ದುತ್ತಿದ್ದರು. ಹಾಗೊಮ್ಮೆ ಅವರಿಗೆ ನಮ್ಮ ಕೆಲಸದ ಬಗ್ಗೆ ಈ ಪರಿಯ ಮಾತನಾಡಬೇಕೆಂದೆನ್ನಿಸಿದಾಗ ನಾವು ನಮ್ಮ ಸ್ಥಳದಲ್ಲಿಲ್ಲದಿದ್ದರೆ (ಮೊಬೈಲ್‌ಗಳು ಇಲ್ಲದಿದ್ದ ಕಾಲ ಅದು!), ನಮ್ಮ ಟೇಬಲ್ಲಿಗೆ ತಾವೇ ಖುದ್ದಾಗಿ ಬಂದು ಒಂದು ಕಾಗದದ ಚೂರಿನಲ್ಲಿ `ನನ್ನನ್ನು ದಯವಿಟ್ಟು ಬಂದು ನೋಡುವುದು~ ಎಂದು ಬರೆದು, ಆ ಕಾಗದವನ್ನು ಲಕೋಟೆಯೊಂದರಲ್ಲಿ ಭದ್ರಪಡಿಸಿ, ಆ ಲಕೋಟೆಯ ಮೇಲೆ ನಮ್ಮ ಹೆಸರನ್ನು ಬರೆದು ನಮ್ಮ ಟೇಬಲಿನ ಮೇಲಿಡುತ್ತಿದ್ದರು.ಈ ಕೆಲಸಕ್ಕಾಗಿ ಅವರೆಂದಿಗೂ ತಮ್ಮ ಖಾಸಗಿ ಸೆಕ್ರೆಟರಿಯನ್ನು ಬಳಸಿಕೊಂಡದಿಲ್ಲ. ಈ ಒಂದು ವಿಷಯದಲ್ಲಿ ಅವರ ಬಗ್ಗೆ ನಮ್ಮೆಲ್ಲರಿಗೂ ಗೌರವ. ಅವರು ನೀಡುತ್ತಿದ್ದ ಸಲಹೆಗಳನ್ನು ಸಕಾರಾತ್ಮಕವಾಗಿ ಪರಿಗಣಿಸಬೇಕೆಂಬ ಸಹಜ ಹಂಬಲವೂ ನಮಗಿತ್ತು ಎಂದರೆ ತಪ್ಪಿಲ್ಲ. ಹೊಗಳಲೇ ಬೇಕಾದ ಸಂದರ್ಭದಲ್ಲಿ ಮುಕ್ತ ಮನಸ್ಸಿನಿಂದ ಎಲ್ಲರೆದುರೂ ಹೊಗಳುವುದರ ಜೊತೆಯಲ್ಲೇ ತೆಗಳಲೇಬೇಕಾದ ಸನ್ನಿವೇಶಗಳಲ್ಲಿ ಏಕಾಂತದಲ್ಲಿ ಪರಾಮರ್ಶಿಸುತ್ತ ಸುಮ್ಮನೇ ತೆಗಳುವುದಕ್ಕಿಂತ, ಸಕಾರಾತ್ಮಕವಾಗಿ ಆತನನ್ನು ತಿದ್ದುವ ಪ್ರಾಮಾಣಿಕ ಪ್ರಯತ್ನ ಮಾಡುವುದೇ ಬೋರ್ಡ್‌ರೂಮಿನ ಸುತ್ತಮುತ್ತಲಿನ ಮಂದಿಯು ತಮ್ಮದಾಗಿಸಿಕೊಳ್ಳಲೇಬೇಕಾದ ಒಂದು ಗುಣ. ಹೀಗೆ ಮಾಡಿದಾಗ ಆತನ ಸಹಪಾಠಿಗಳೆಲ್ಲ ಅವನ ಹೊಗಳಿಕೆಗೆ ಅದೆಷ್ಟು ಸಂತೋಷಿಸಿ ತಮ್ಮನ್ನೇ ತಾವು ಇನ್ನೂ ಉತ್ತಮಗೊಳಿಸಿಕೊಳ್ಳುವ ಹಾದಿಯಲ್ಲಿ ಹೆಜ್ಜೆ ಹಾಕುತ್ತಾರೋ, ಅಂತೆಯೇ ಅವನ ತಿದ್ದುವಿಕೆಯನ್ನೂ ಅಷ್ಟೇ ಗೌರವಿಸಿ ತಮ್ಮನ್ನೇ ತಾವು ತಿದ್ದಿಕೊಳ್ಳುವ ಪ್ರಾಮಾಣಿಕ ಪ್ರಯತ್ನವನ್ನೂ ಮಾಡುತ್ತಾರೆ. ಇವೆರಡೂ ಕಡೆಯಲ್ಲಿ ಅವರನ್ನೆಲ್ಲ ಮುನ್ನಡೆಸುವ ನಾಯಕನ ಸ್ವಂತ ಯಶಸ್ಸಿಗೆ ಪೂರಕವಾಗಿಯೇ ಕೆಲಸ ಮಾಡುತ್ತದೆ ಎಂಬುದೇ ಮೇಲೆ ಥಟ್ ಎಂದು ಗೋಚರಿಸಿದ ಒಳಸತ್ಯ!

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry