ಬೆಮಲ್ ಮಡಿಲಲ್ಲೇ ತ್ಯಾಜ್ಯ...

7

ಬೆಮಲ್ ಮಡಿಲಲ್ಲೇ ತ್ಯಾಜ್ಯ...

Published:
Updated:
ಬೆಮಲ್ ಮಡಿಲಲ್ಲೇ ತ್ಯಾಜ್ಯ...

ಕೆಜಿಎಫ್: ಅವಧಿ ಮೀರಿದ ಔಷಧಿಗಳು, ಸಮಾರಂಭಗಳ ತ್ಯಾಜ್ಯ, ರಾಶಿಗಟ್ಟಲೆ ಪ್ಲಾಸ್ಟಿಕ್‌  ಚೀಲಗಳು.. ಹೀಗೆ ಪರಿಸರಕ್ಕೆ ಧಕ್ಕೆ ಮಾಡಲು ಏನೇನು ಬೇಕೋ ಅವೆಲ್ಲದರ ಶೇಖರಣಾ ಕೇಂದ್ರವಾಗಿ ಬೆಮಲ್‌ ಕಾರ್ಖಾನೆಯ ಮೈದಾನ ಮಾರ್ಪಟ್ಟಿದೆ.ಬೇತಮಂಗಲ ರಸ್ತೆಯಲ್ಲಿ ಎಚ್‌ ಅಂಡ್‌ ಪಿ ಪಕ್ಕದಲ್ಲಿರುವ ಬೃಹತ್‌ ಮೈದಾನ­ವನ್ನು ಬಿಜಿಎಂಎಲ್‌ನಿಂದ ಎರವಲು ಪಡೆದ ಬೆಮಲ್‌ ಅದನ್ನು ಸುಸ್ಥಿತಿಯಲ್ಲಿಡಲು ವಿಫಲ­ವಾಗಿದೆ ಎಂದು ಸ್ಥಳೀಯರು ಆರೋಪಿ­ಸುತ್ತಾರೆ.ಅಪರೂಪದ ಕೃಷ್ಣಮೃಗಗಳಿಂದ ತುಂಬಿ­ರುವ ಈ ಮೈದಾನ ಈಚೆಗೆ ಬಿದ್ದ ಮಳೆಯಿಂದಾಗಿ ಹಸಿರಿನಿಂದ ಕಂಗೊಳಿ­ಸುತ್ತಿದೆ. ಕೃಷ್ಣಮೃಗಗಳ ಜೊತೆಗೆ ಸುತ್ತ­ಮುತ್ತಲಿನ ಗ್ರಾಮಗಳ ಜಾನುವಾರು­ಗಳಿಗೂ ಅದೇ ಗೋಮಾಳವಾಗಿ ಪರಿ­ಣಮಿಸಿದೆ. ಅಲ್ಲಲ್ಲಿ ಹೊಂಡದಲ್ಲಿ ತುಂಬಿ­ರುವ ನೀರು ಪ್ರಾಣಿಗಳಿಗೆ ಜಲ­ಮೂಲವಾಗಿ ಪರಿಣಮಿಸಿದೆ. ಆದರೆ ಈ ನೀರನ್ನು ಕುಡಿಯುವ ಪ್ರಾಣಿಗಳು ಎಲ್ಲಿ ಅಸ್ವಸ್ಥಗೊಂಡು ಪ್ರಾಣ ತ್ಯಜಿಸುತ್ತ­ವೆಯೋ ಎಂಬ ಭಯ ಕೂಡ ಕಾಡುತ್ತಿದೆ.ಸುತ್ತಮುತ್ತಲಿನ ಪ್ರದೇಶದಲ್ಲಿ ಕ್ಲಿನಿಕ್ ನಡೆಸುವ ವೈದ್ಯರು ಈ ಪ್ರದೇಶವನ್ನು ತ್ಯಾಜ್ಯ ವಿಲೇವಾರಿ ಸ್ಥಳವನ್ನಾಗಿ ಮಾರ್ಪಡಿ­ಸಿಕೊಂಡಿದ್ದಾರೆ. ವೈದ್ಯಕೀಯ ತ್ಯಾಜ್ಯಗಳನ್ನು ವಿಲೇವಾರಿ ಮಾಡುವ ಬಗ್ಗೆ ಪರಿಸರ ಇಲಾಖೆ ಸ್ಪಷ್ಟ ನಿರ್ದೇಶನ ನೀಡಿರುವುದನ್ನು ಕಡೆಗಣಿಸಿ ಈ ಜಾಗ­ದಲ್ಲಿ ವೈದ್ಯಕೀಯ ತ್ಯಾಜ್ಯಗಳನ್ನು ತಂದು ಸುರಿಯಲಾಗುತ್ತಿದೆ.

ಮಳೆ ನೀರಿನೊಡನೆ ಸೇರುವ ವೈದ್ಯ­ಕೀಯ ತ್ಯಾಜ್ಯ  ಹೊಂಡಗಳಲ್ಲಿ ತುಂಬಿ­ರುವ ನೀರಿನೊಡನೆ ಬೆರೆತಾಗಿದ್ದು, ಜಲ­ವನ್ನು ಸಹ ಕಲುಷಿತಗೊಳಿಸಿದೆ ಎಂದು ಸ್ಥಳೀಯರು ದೂರುತ್ತಿದ್ದಾರೆ.ಇದರ ಜೊತೆಗೆ ಮೈದಾನದಲ್ಲಿ ಅಲ್ಲಲ್ಲಿ ಸಿಗುವ ಒಂಟಿ ಮರಗಳ ಬುಡ ಮದ್ಯ­ಪ್ರೇಮಿಗಳಿಗೆ ಆಶ್ರಯ ನೀಡಿದೆ. ಗುಂಪು ಗುಂಪಾಗಿ ಅಲ್ಲಿಗೆ ಬರುವ ಪುಂಡರ ಗುಂಪು ಎಲ್ಲೆಂದರಲ್ಲಿ ಮದ್ಯ ಬಾಟಲಿ­ಗಳನ್ನು ಎಸೆದು, ತಾವು ತಂದಿರುವ ಪದಾರ್ಥಗಳ ಪೊಟ್ಟಣವನ್ನು ಬಿಸಾಡಿ ಹೋಗುತ್ತಿದ್ದಾರೆ. ಬೇತಮಂಗಲ–ಬೆಮಲ್ ರಸ್ತೆಯಿಂದ ಒಮ್ಮೆ ಈ ಮೈದಾನವನ್ನು ಅವಲೋಕಿಸಿದರೆ ಸಾಕು. ಇಡೀ ಮೈದಾದದಲ್ಲಿ ಪ್ಲಾಸ್ಟಿಕ್‌ ಚೀಲಗಳ ರಾಶಿ ಎದ್ದು ಕಾಣುತ್ತದೆ.ಸಾಕಷ್ಟು ಭದ್ರತಾ ಸಿಬ್ಬಂದಿಯನ್ನು ಹೊಂದಿ­ರುವ ಬೆಮಲ್ ಆಡಳಿತ ವರ್ಗ ತನ್ನ ಮಡಿಲಲ್ಲೇ ಈ ರೀತಿ ಪರಿಸರ ಹಾನಿ­ಯಾಗುತ್ತಿರುವುದನ್ನು ಕಣ್ಣು­ಮುಚ್ಚಿ­ಕೊಂಡು ನೋಡುತ್ತಿದೆ. ಅತಿ­ಕ್ರಮಿಗಳ ಮೇಲೆ ಮೊಕದ್ದಮೆ ದಾಖಲಿಸಿ­ದರೆ ಅತಿ­ಕ್ರಮಣ ನಿಲ್ಲಬಹುದು ಎಂಬುದು ಪರಿ­ಸರ ಪ್ರೇಮಿಗಳ ಆಶಯ­ವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry