ಮಂಗಳವಾರ, ಮೇ 11, 2021
24 °C

ಬೆಮೆಲ್ ಸುತ್ತಮುತ್ತ ಗಲೀಜುಮಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆಜಿಎಫ್: ಬಂಗಾರಪೇಟೆ ದಾಟಿ ಬೆಮೆಲ್ ನಗರ ಪ್ರವೇಶಿಸುತ್ತಿದ್ದಂತೆಯೆ ಸುಂದರವಾದ ಬೆಮೆಲ್ ಟೌನ್‌ಶಿಪ್ ಕಾಣಸಿಗುತ್ತದೆ. ಸದಾ ಕಾಲ ಅಚ್ಚ ಹಸಿರಾದ ಮರಗಿಡಗಳು, ಒಪ್ಪವಾಗಿ ಕಟ್ಟಲ್ಪಟ್ಟ ಮನೆಗಳು, ಅದರ ಮುಂದೆ ಸಣ್ಣದಾದರೂ ಚೊಕ್ಕವಾಗಿರುವ ರಸ್ತೆಗಳು ದಾರಿಹೋಕರನ್ನು ಆಕರ್ಷಿಸುತ್ತದೆ.ಭೂಮಿಯಲ್ಲಿ ಚಲಿಸುವ ದೈತ್ಯ ಗಾತ್ರದ ಯಂತ್ರ ತಯಾರಿಸುವ ಬೆಮೆಲ್ ಸಂಸ್ಥೆ ಉದ್ಯೋಗಿಗಳಿಗೆ ಸಾಕಷ್ಟು ಸವಲತ್ತು ಕೊಡುವ ಜೊತೆ ಪರಿಸರ ಸ್ನೇಹಿ ವಾತಾವರಣ ಸೃಷ್ಟಿಸಿತ್ತು. ಆದರೆ ಈಚಿನ ದಿನಗಳಲ್ಲಿ ಬೆಮೆಲ್ ಸಂಸ್ಥೆಯ ಮುಕ್ತ ಪ್ರದೇಶ ಗಲೀಜುಮಯವಾಗುತ್ತಿದ್ದು, ಇದೇನು ಈ ರೀತಿ ಪರಿಸ್ಥಿತಿ ಉಂಟಾಗಿದೆಯೆಲ್ಲ ಎಂದು ಉದ್ಗಾರ ತೆಗೆಯುವಂತಾಗಿದೆ.ದಾಸರಹೊಸಹಳ್ಳಿಗೆ ಅಂಟಿಕೊಂಡಂತೆ ಇರುವ ಜೋಡಿ ರಸ್ತೆಯಲ್ಲಿ ಸರ್ ಎಂ.ವಿಶ್ವೇಶ್ವರಯ್ಯನವರ ಸ್ವಾಗತ ಕಮಾನು ಕೆಜಿಎಫ್ ಪ್ರವೇಶಿಸುವವರಿಗೆ ಸ್ವಾಗತ ಕೋರುತ್ತದೆ. ಒಂದೆಡೆ ಆಫೀಸರ್ಸ್‌   ಕ್ವಾರ್ಟ್ಸ್‌ಸ್ ಮತ್ತೊಂದೆಡೆ ಗಿಡಮರಗಳಿಂದ ಕೂಡಿದ ಪ್ರದೇಶ ಇದೆ.ಬಹುತೇಕ ಸಂಪೂರ್ಣವಾಗಿ ಬೆಳೆದ ನೀಲಗಿರಿ ಮರಗಳು. ಅದರ ಮಧ್ಯೆ ಇರುವ ಹೊಂಗೆ ಮರಗಳು ಮತ್ತಿತರ ಜಾತಿಯ ಮರಗಳು, ಇವುಗಳ ಕೆಳಗೆ ಚೆಕ್‌ಡ್ಯಾಂ ರೀತಿಯಲ್ಲಿ ಕಟ್ಟಲ್ಪಟ್ಟಿರುವ ಸಣ್ಣ ಕೆರೆ ಈ ಪ್ರದೇಶಕ್ಕೆ ಸೌಂದರ್ಯ ತಂದು ಕೊಟ್ಟಿದೆ.ಕಮ್ಮಸಂದ್ರದ ಕೋಟಿಲಿಂಗೇಶ್ವರ ದೇವಾಲಯ, ಗುಟ್ಟಹಳ್ಳಿಯ ವೆಂಕಟೇಶ್ವರ ದೇವಸ್ಥಾನಕ್ಕೆ ಹೋಗುವ ಪ್ರವಾಸಿಗರು ಇದೇ ಪ್ರದೇಶದಲ್ಲಿ ತಮ್ಮ ವಾಹನ ನಿಲ್ಲಿಸಿ, ನೆಲದಲ್ಲಿ ಬಟ್ಟೆ ಹಾಸಿ ಕುಟುಂಬ ಸಮೇತ ಊಟ ಮಾಡುತ್ತಿದ್ದರು. ಅಚ್ಚ ಹಸಿರು ಮತ್ತು ಸ್ವಚ್ಛ ಗಾಳಿ ಅವರ ಪ್ರಯಾಣದ ದಣಿವು ಸಹ ನಿವಾರಿಸುತ್ತಿತ್ತು. ಮಕ್ಕಳು ಹಸಿರು ಹುಲ್ಲಿನಲ್ಲಿ ಆಟವಾಡುತ್ತಿದ್ದರು.ಇಂಥ ಪ್ರದೇಶ ಈಚಿನ ದಿನಗಳಲ್ಲಿ ತ್ಯಾಜ್ಯ ವಸ್ತುಗಳ ಸಂಗ್ರಹಾಲಯವಾಗಿ ಮಾರ್ಪಟ್ಟಿದೆ. ಮೊದಲು ಸಿಗುತ್ತಿದ್ದ ಆಹ್ಲಾದಕರ ಗಾಳಿಯ ಬದಲು ಈಗ ಗಬ್ಬು ವಾಸನೆ ಮೂಗಿಗೆ ಅಡರುತ್ತದೆ. ಇಡೀ ಪ್ರದೇಶ ಕೋಳಿ ಪುಕ್ಕಗಳು, ಪ್ಲಾಸ್ಟಿಕ್ ಕವರ್‌ಗಳು ಮತ್ತಿತರ ವಸ್ತುಗಳ ಭಂಡಾರವಾಗಿದೆ. ರಸ್ತೆಯಲ್ಲಿ ಸಾಗುತ್ತಿದ್ದಂತೆಯೇ ಇಡೀ ಪ್ರದೇಶ ಬೆಮೆಲ್ ಸಾಧನೆಗೆ ಕಪ್ಪು ಚುಕ್ಕೆಯಂತೆ ಕಾಣುತ್ತಿದೆ.ತ್ಯಾಜ್ಯ ವಸ್ತು ತಿನ್ನಲು ಬರುವ ಬೀದಿ ನಾಯಿಗಳ ಗುಂಪು, ಬಿಡಾಡಿ ದನಗಳ ಹಿಂಡು ಈಗ ಈ ಪ್ರದೇಶ ಆವರಿಸಿಕೊಂಡಿದೆ. ವಿಜಯನಗರಕ್ಕೆ ಶಾರ್ಟ್‌ಕಟ್ ದಾರಿಯಾಗಿ ಬಳಸುತ್ತಿದ್ದ ಈ ದಾರಿಯಲ್ಲಿ ಪ್ರವೇಶಿಸಲು ಅಸಹ್ಯವಾಗಿ, ಆ ಭಾಗದ ಜನ ಬೇರೊಂದು ದಾರಿ ಹಿಡಿಯುತ್ತಿದ್ದಾರೆ. ರಾತ್ರಿ ಹೊತ್ತು ವಾಕಿಂಗ್ ಬರುವ ಜನರಿಗೆ ಇಲ್ಲೇ ಬೀಡು ಬಿಟ್ಟಿರುವ ಬೀದಿ ನಾಯಿಗಳ ಕಾಟ ಅನುಭವಿಸುತ್ತಿದ್ದಾರೆ.ಬೆಮೆಲ್ ಸಂಸ್ಥೆ ತನ್ನದೇ ಆದ ಭದ್ರತಾ ವ್ಯವಸ್ಥೆ ಹೊಂದಿದೆ. ತೋಟಗಾರಿಕೆ ಇಲಾಖೆ ಸಹ ಹೊಂದಿದೆ. ಆದರೆ ತನ್ನ ಪ್ರದೇಶದಲ್ಲಿ ಈ ರೀತಿಯ ವಾತಾವರಣ ಉಂಟಾಗಿರುವುದು ತಿಳಿದಿದ್ದರೂ ಯಾಕೆ ಸುಮ್ಮನಿದೆ ಎಂದು ಸುತ್ತಮುತ್ತಲಿನ ನಾಗರಿಕರ ಪ್ರಶ್ನೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.