ಬೆರಗಿನ ಉತ್ತುಂಗ

7
ಬಗೆದಷ್ಟೂ ಮಿಗುವ ಪಿರಮಿಡ್

ಬೆರಗಿನ ಉತ್ತುಂಗ

Published:
Updated:

‘ಮನುಷ್ಯ ಕಳೆದು ಹೋಗುತ್ತಿರುವ ಕಾಲಕ್ಕೆ ಹೆದರಿದರೆ, ಸರಿಯುತ್ತಿರುವ ಕಾಲ ಪಿರಮಿಡ್ಡುಗಳನ್ನು ಕಂಡು ಹೆದರುತ್ತದೆ’ ಎಂಬ ಆಡುಮಾತು ಈಜಿಪ್ಟಿನಲ್ಲಿದೆ. ಕಾಲವನ್ನೇ ಹೆದರಿಸುವಂತೆ ಪ್ರಾಚೀನ ಜಗತ್ತಿನ ಏಳು ಅದ್ಭುತಗಳಲ್ಲಿ ಈಗ ಉಳಿದಿರುವುದು ಪಿರಮಿಡ್ ಮಾತ್ರವೇ. ಅಶಾಶ್ವತ ಜೀವದ ಮಾನವನ ಶಾಶ್ವತತೆಯ ಕುರುಹಾಗಿ, ಚಳಿ ಗಾಳಿ ಮಳೆ ಬಿಸಿಲು ಎಲ್ಲಕ್ಕೂ ಸೆಟೆದು ನಿಂತು ಕಾಲಕ್ಕೆ ಸವಾಲೆಸೆದಿದೆ ಪಿರಮಿಡ್.ಅತ್ಯಂತ ದೊಡ್ಡದು ಮತ್ತು ಪುರಾತನವಾದುದು ಎಂಬ ಒಂದು ಮಾತಿನಿಂದ ಪಿರಮಿಡ್ಡನ್ನು ಬಣ್ಣಿಸಿದರೂ ಇದಿಷ್ಟೇ. ೪,೪೦೦ ವರ್ಷಗಳ ಹಿಂದಿನ ಈ ಬೃಹತ್ ನಿರ್ಮಾಣವನ್ನು ವಿವರಿಸಲಾರದು. ಇದು ಎಷ್ಟು ಎತ್ತರ ಎಂದು ಬಣ್ಣಿಸಬೇಕೆಂದರೆ, ೧9ನೇ ಶತಮಾನದವರೆಗೂ ೪೩ ಶತಮಾನಗಳ ಕಾಲ ಇದರಷ್ಟು ಎತ್ತರದ ಮಾನವ ನಿರ್ಮಿತಿಯೇ ಪ್ರಪಂಚದಲ್ಲಿರಲಿಲ್ಲ.

೧೭೯೮ರಲ್ಲಿ ಈಜಿಪ್ಟನ್ನು ವಶಪಡಿಸಿಕೊಂಡ ನೆಪೋಲಿಯನ್ ಇಡೀ ಫ್ರಾನ್ಸ್ ದೇಶದ ಸುತ್ತ ಮೂರು ಅಡಿ ಎತ್ತರದ ಗೋಡೆ ನಿರ್ಮಿಸುವಷ್ಟು ಕಲ್ಲುಗಳು ಈ ಪಿರಮಿಡ್‌ನಲ್ಲಿರುವುದಾಗಿ ಲೆಕ್ಕ ಹಾಕಿದ್ದ. ಒಂದು ರಾತ್ರಿಯಿಡೀ ಪಿರಮಿಡ್ ಒಳಗೆ ಕಳೆದ ಈ ಸೇನಾನಿ ಆ ಅನುಭವವನ್ನು ಹಂಚಿಕೊಳ್ಳಲು ಅಳುಕಿದ್ದ. ಇನ್ನು ವಯಸ್ಸಿಗೆ ಸಂಬಂಧಿಸಿದಂತೆ ಪಿರಮಿಡ್ಡುಗಳು ಏಸು ಕ್ರಿಸ್ತನು ಜನಿಸುವ ವೇಳೆಗೇ ಸಾಕಷ್ಟು ಹಳತಾಗಿದ್ದವು. ಕ್ರಿಸ್ತನ ನಂತರದ ಕಾಲಕ್ಕಿಂತಲೂ ಕ್ರಿಸ್ತ ಪೂರ್ವದ ಕಾಲವನ್ನು ಇವು ಹೆಚ್ಚಾಗಿ ಕಂಡಿವೆ.
ಪಿತಾ ಈಜಿಪ್ಟರ ದೇವರುಗಳಲ್ಲೊಬ್ಬರು. ಕುಶಲಕರ್ಮಿ, ಸೃಷ್ಟಿಕರ್ತ ಎಂದು ಈ ದೇವರನ್ನು ನಂಬುತ್ತಾರೆ. ನಾವು ಸೃಷ್ಟಿಕರ್ತ ಬ್ರಹ್ಮನನ್ನು ಅಗ್ರಪಿತ ಎನ್ನುತ್ತೇವೆ.

ಈಜಿಪ್ಟ್‌ನ ಪುರಾತನ ರಾಜಧಾನಿ ಮೆಂಫಿಸ್ ನಗರದಲ್ಲಿ ಈ ದೇವರಿಗೊಂದು ದಿವ್ಯವಾದ ದೇವಾಲಯವನ್ನು ನಿರ್ಮಿಸಿದ್ದರು.

ಅದನ್ನವರು ‘ಹಟ್ ಕಾ ಪಿತಾ’ ಎಂದು ಕರೆಯುತ್ತಿದ್ದರು. ಗ್ರೀಕರು ಮೆಂಫಿಸ್‌ನ ‘ಹಟ್ ಕಾ ಪಿತಾ’ ದೇವಾಲಯವನ್ನು ‘ಐ ಜಿ ಪ್ಟೋಸ್’ ಎಂದು ಕರೆದರು. ಈ ಹೆಸರೇ ಆಂಗ್ಲರು ಈಜಿಪ್ಟ್ ಎಂದು ಹೆಸರಿಸಲು ಕಾರಣವಾಯಿತು.

ಕೈರೋದಿಂದ ಪಿರಮಿಡ್ ರಸ್ತೆಯ ಮೂಲಕ ನಾವು ಪಿರಮಿಡ್‌ನ ಆವರಣವನ್ನು ಪ್ರವೇಶಿಸುತ್ತೇವೆ. ಇಲ್ಲಿ ಮೂರು ಪಿರಮಿಡ್‌ಗಳಿವೆ. ಈ ಮೂರರಲ್ಲಿ ಅತ್ಯಂತ ಹಳೆಯದು ಕ್ರಿಸ್ತ ಪೂರ್ವ ೨೫೬೦ರಲ್ಲಿ ಖುಫು ನಿರ್ಮಿಸಿರುವ ಪಿರಮಿಡ್. ಇದೇ ಪ್ರಾಚೀನ ಜಗತ್ತಿನ ಏಳು ಅದ್ಭುತಗಳ ಪಟ್ಟಿಯಲ್ಲಿ ಇದ್ದುದು. ಎರಡನೆಯ ಪಿರಮಿಡ್ ಖೆಫ್ರೆನ್ ನಿರ್ಮಿಸಿದ್ದು, ಮೂರನೆಯದು ಮೈಸಿರಿನಸ್ ರೂಪಿಸಿದ್ದು.ಪಿರಮಿಡ್ ಬಗ್ಗೆ ಗ್ರೀಕ್ ಯಾತ್ರಿಕ ಹಿರೋಡೆಟಸ್ ವಿವರಣೆ ಒಂದು ಐತಿಹಾಸಿಕ ದಾಖಲೆಯಾಗಿದೆ. ಲಿಬಿಯನ್ ಮತ್ತು ಅರೇಬಿಯನ್ ಬೆಟ್ಟಗಳ ಕ್ವಾರಿಯಿಂದ ಕಲ್ಲುಗಳನ್ನು ನೈಲ್ ನದಿಯವರೆಗೆ ಮರಳುಗಾಡಿನಲ್ಲಿ ಎಳೆದುತರಲಾಗಿದೆ.

ಸುಮಾರು ಒಂದು ಲಕ್ಷ ಜನರನ್ನು ಈ ಕಾರ್ಯಕ್ಕಾಗಿ ಉಪಯೋಗಿಸಲಾಗಿದೆ. ಪಿರಮಿಡ್‌ನ ಹೊರಪಾರ್ಶ್ವಕ್ಕೆ ಕೆತ್ತನೆ ಮಾಡಿರುವ ಕಲ್ಲುಗಳನ್ನು ಬಳಸಲಾಗಿದೆ. ನೈಲ್ ಹರಿವನ್ನೇ ತಿರುಗಿಸಿ ಈ ಪಿರಮಿಡ್‌ನ ತಾಣದವರೆಗೂ ಹರಿದು ಬರುವಂತೆ ಕಾಲುವೆಗಳನ್ನು ನಿರ್ಮಿಸಲಾಗಿತ್ತು ಎಂದು ವಿವರಿಸಿದ್ದಾನೆ ಹಿರೋಡೆಟಸ್.

ವೈಭೋವಪೇತ ನಿರ್ಮಾಣಗಳು!

ಪಿರಮಿಡ್‌ನ ಶಿಲೆಯ ಮೇಲಿನ ಬರಹದ ಪ್ರಕಾರ, ಇವುಗಳ ನಿರ್ಮಾಣದಲ್ಲಿ ಬಳಸಲಾದ ಒಂಟೆ, ಕುದುರೆಗಳ ಆಹಾರಕ್ಕಾಗಿ ೧೬೦೦ ಬೆಳ್ಳಿಯ ಟಾಲೆಂಟ್ಸ್‌ಗಳನ್ನು ಅಂದರೆ ೪೧,೮೮೪ ಕೇಜಿ ಬೆಳ್ಳಿಯನ್ನು ಖರ್ಚು ಮಾಡಲಾಗಿದೆಯಂತೆ. ಅದು ನಿಜವಾದಲ್ಲಿ ಇನ್ನುಳಿದ ಖರ್ಚು ಕಲ್ಪನಾತೀತ ಅನ್ನಿಸುತ್ತದೆ.ಗೀಜಾದ ಪಿರಮಿಡ್‌ಗಳು ತಮ್ಮ ಬೃಹತ್ ಆಕೃತಿಯಿಂದಲ್ಲದೆ, ಅದರ ಸೃಷ್ಟಿ, ಕಲ್ಪನೆ, ನಿರ್ಮಾಣ ಮುಂತಾದ ಹಲವಾರು ಬಗೆಯಿಂದ ಜಗತ್ತನ್ನು ಕಾಡುತ್ತಿವೆ. ನೂರರಿಂದ ನೂರಿಪ್ಪತ್ತು ಅಡಿ ಎತ್ತರದವರೆಗೆ ೫೦ರಿಂದ ೬೦ ಟನ್ ತೂಕದ ಕಲ್ಲುಗಳನ್ನು ಸಾಗಿಸಿರುವ ಬಗೆ ಹಾಗೂ ಲಕ್ಷಾಂತರ ಕಲ್ಲುಗಳನ್ನು ಜೋಡಿಸಿರುವ ರೀತಿಗೆ ವಾಸ್ತು ಶಿಲ್ಪಿಗಳು ಚಕಿತರಾಗಿದ್ದಾರೆ.ಪಿರಮಿಡ್‌ನ ವಿವಿಧ ಕೋನಗಳು ತಪ್ಪಿಲ್ಲದೆ ರೂಪುಗೊಂಡಿರುವುದರ ಬಗ್ಗೆ ಗಣಿತಶಾಸ್ತ್ರಜ್ಞರು ಚರ್ಚಿಸುವಂತಾಗಿದೆ. ಮೂರು ಪಿರಮಿಡ್‌ಗಳ ತುದಿಯನ್ನು ಒಂದು ರೇಖೆಯಲ್ಲಿ ಹಿಡಿದಿಟ್ಟರೆ ಅವು ನಕ್ಷತ್ರಪುಂಜವೊಂದರ ಪ್ರಮುಖ ನಕ್ಷತ್ರವೊಂದರ ಸಾಲಿನಲ್ಲಿರುವುದನ್ನು ಕಂಡು ಖಗೋಳಶಾಸ್ತ್ರಜ್ಞರು ಬೆರಗಾಗಿದ್ದರೆ. ಇವುಗಳ ಸೃಷ್ಟಿಯ ಹಿಂದಿನ ಕಾರಣವನ್ನು ಹುಡುಕುವಲ್ಲಿ ಇತಿಹಾಸಕಾರರು ಮಗ್ನರಾಗಿದ್ದಾರೆ.ರಾಬರ್ಟ್ ಬವಲ್ ಎಂಬಾತ ೧೯೯೪ರಲ್ಲಿ ಬರೆದ ‘ದಿ ಓರಿಯಾನ್ ಮಿಸ್ಟರಿ’ ಎಂಬ ಕೃತಿ ಪಿರಮಿಡ್‌ಗಳ ಕುರಿತಂತೆ ಸಾಕಷ್ಟು ಚರ್ಚೆಗೆ ಗ್ರಾಸವಾಯಿತು. ಈ ಪಿರಮಿಡ್‌ಗಳು ಕೇವಲ ಸಮಾಧಿಗಳಲ್ಲ, ಆಕಾಶದಲ್ಲಿ ಮೂಡುವ ಓರಿಯಾನ್ ನಕ್ಷತ್ರ ಪುಂಜವನ್ನು ಪುನರ್‌ಸೃಷ್ಟಿಸಲು ರೂಪಿಸಿದ ಆಕೃತಿಗಳು ಎಂದು ಆತ ವಿವರಿಸಿದ. ಗೀಜಾದಲ್ಲಿರುವ ಪಿರಮಿಡ್‌ಗಳು ಓರಿಯಾನ್ ನಕ್ಷತ್ರಪುಂಜದ ನಕ್ಷತ್ರಗಳೊಂದಿಗೆ ಒಂದೇ ರೇಖೆಯಲ್ಲಿ ಕೂಡುತ್ತವೆ ಎಂಬುದನ್ನು ದಾಖಲೆಗಳೊಂದಿಗೆ ತೋರಿಸಿದ.ಪಿರಮಿಡ್‌ಗಳನ್ನು ಕೆಲವು ನಕ್ಷತ್ರಗಳ ಸ್ಥಾನವನ್ನು ಗಮನದಲ್ಲಿಟ್ಟುಕೊಂಡು ಕಟ್ಟಲಾಗಿದೆ. ನೈಲ್ ನದಿಯಲ್ಲಿ ಪ್ರವಾಹ ಬರುವ ಕೆಲ ದಿನಗಳ ಮೊದಲು ಪೂರ್ವದಲ್ಲಿ ಸೂರ್ಯೋದಯಕ್ಕೆ ಮುನ್ನ ಸಿರಿಯಸ್ ಎಂಬ ಅತ್ಯಂತ ಪ್ರಕಾಶಮಾನವಾದ ನಕ್ಷತ್ರವನ್ನು ಕಂಡುಕೊಂಡಿದ್ದ ಅವರು ಈ ನಕ್ಷತ್ರದ ಆಧಾರದ ಮೇಲೆ ಕ್ಯಾಲೆಂಡರನ್ನು ರಚಿಸಿದ್ದರು.

ವರ್ಷಕ್ಕೆ ೩೬೫ ದಿನಗಳಾಗುವುದನ್ನು ಖಚಿತವಾಗಿ ಹೇಳಿದ್ದರು. ಸದಾ ಕಾಣುವ ಸೂರ್ಯ ಚಂದ್ರರನ್ನು ಬಿಟ್ಟು ಎಲ್ಲೋ ದೂರದಲ್ಲಿ ಚುಕ್ಕೆಯಂತೆ ಮಿನುಗಿ ಮಾಯವಾಗುವ ಸಿರಿಯಸ್ ನಕ್ಷತ್ರವನ್ಯಾಕೆ ಈಜಿಪ್ಟಿಯನ್ನರು ಅಷ್ಟೊಂದು ಸೀರಿಯಸ್ ಆಗಿ ತೆಗೆದುಕೊಂಡಿದ್ದರು ಎಂಬುದು ಈಗಲೂ ಪ್ರಶ್ನೆಯಾಗಿಯೇ ಉಳಿದಿದೆ.

ಕೌತುಕಗಳ ಒಡಲು

ಇತರ ನಾಗರಿಕತೆಗಳಂತೆ ಇರದೆ ಸಕಲ ಜ್ಞಾನ, ತಾಂತ್ರಿಕತೆ, ಭಾಷೆ ಎಲ್ಲವನ್ನೂ ಒಳಗೊಂಡು ದಿಢೀರನೆ ಉದ್ಭವಿಸಿದಂತೆ ಕಂಡುಬರುವ ಈಜಿಪ್ಟಿಯನ್ ನಾಗರಿಕತೆ ಹಲವು ಕೌತುಕಗಳನ್ನು ತನ್ನೊಡಲಿನಲ್ಲಿ ಇರಿಸಿಕೊಂಡಿದೆ. ಅಸಾಧಾರಣ ನಗರಗಳು, ಬೃಹದಾಕಾರದ ದೇವಾಲಯಗಳು, ಭವ್ಯವಾದ ಶಿಲ್ಪಗಳು, ವೈಭವೋಪೇತ ಬೀದಿಗಳು, ಕರಾರುವಕ್ಕಾಗಿ ರಚಿಸಿದ್ದ ಒಳಚರಂಡಿ ವ್ಯವಸ್ಥೆ, ಕಲ್ಲಿನಲ್ಲಿ ಕೆತ್ತಿರುವ ವೈಭವವಾದ ಸಮಾಧಿ ಸ್ಥಳಗಳು, ಶಿಲ್ಪಶಾಸ್ತ್ರದ ಚಾತುರ್ಯಕ್ಕೆ ಸಾಕ್ಷಿಯಾಗಿ ನಿಂತ ವಿಶ್ವ ವಿಖ್ಯಾತ ಪಿರಮಿಡ್ಡುಗಳು ಮುಂತಾದವು ಈಜಿಪ್ಟರ ಬೌದ್ಧಿಕೋನ್ನತಿಯನ್ನು ಸಾರುತ್ತವೆ.ಪಿರಮಿಡ್‌ಗಳ ನಿರ್ಮಾಣದಲ್ಲಿ ಬಳಸಲಾದ ಬೃಹತ್ ಗಾತ್ರದ ಕಲ್ಲುಗಳನ್ನು ಸಾಗಿಸಲು ಅವರು ಗುಂಡಾದ ಮರದ ತೊಲೆಗಳನ್ನು ಬಳಸಿರುವರೆನ್ನುತ್ತಾರೆ. ಆದರೆ ಇದಕ್ಕಾಗಿ ಇವರು ಮರಗಳನ್ನು ಎಲ್ಲಿಂದ ತಂದಿರುವರೆಂಬುದೇ ಪ್ರಶ್ನೆಯಾಗಿ ಕಾಡುತ್ತದೆ. ನೈಲ್ ನದಿಯ ಪಾತ್ರದಲ್ಲಿ ಬೆಳೆಯಲಾಗುತ್ತಿದ್ದ ಜನರ ಜೀವನಾಡಿಯಾಗಿದ್ದ ಅಲ್ಪ ಸಂಖ್ಯೆಯ ಖರ್ಜೂರದ ಮರಗಳನ್ನು ಮರದ ತೊಲೆಗಳಿಗಾಗಿ ಅವರು ಕಡಿದಿರಲಾರರು. ಈಜಿಪ್ಟರು ಮರಗಳನ್ನು ಆಮದು ಮಾಡಿಕೊಂಡಿರಬಹುದು.

ಈ ಉದ್ದೇಶಕ್ಕಾಗಿಯೇ ಸುಸಜ್ಜಿತ ನೌಕಾಪಡೆ ಅಲ್ಲಿ ನೆಲೆಸಿರಬಹುದು. ಅಲೆಕ್ಸಾಂಡ್ರಿಯಾಗೆ ಬಂದ ಮರದ ದಿಮ್ಮಿಗಳನ್ನು ನೈಲ್ ನದಿಯ ಹರಿವಿನ ವಿರುದ್ಧ ದಿಕ್ಕಿನಲ್ಲಿ ಯಾನ ಮಾಡಿ ಕೈರೋಗೆ ಸಾಗಿಸುತ್ತಿದ್ದಿರಬೇಕು. ಚಕ್ರವನ್ನು ಕಂಡು ಹಿಡಿದು ಕುದುರೆಗಾಡಿಗಳನ್ನು ಬಳಸಲು ಪ್ರಾರಂಭಿಸಿದ್ದು ಕ್ರಿ.ಪೂ ೧೬೦೦ರ ನಂತರವಾದ್ದರಿಂದ ಅವರಿಗೆ ಬೇರಾವ ದಾರಿಯೂ ಇರಲಿಲ್ಲವಷ್ಟೆ.ಭೂಮಿ ಮತ್ತು ಸೂರ್ಯನ ನಡುವಣ ಅಂತರ ೯,೩೦,೦೦,೦೦೦ ಮೈಲುಗಳೆಂದು ಇಂದು ಎಲ್ಲರಿಗೂ ತಿಳಿದಿದೆ. ಖುಫು ಪಿರಮಿಡ್ ಎತ್ತರ ಈ ಅಂತರದ ಭಾಗಲಬ್ಧವಾಗಿದೆ. ಪಿರಮಿಡ್‌ನ ಮಧ್ಯದಲ್ಲಿ ಹಾದುಹೋಗುವ ರೇಖೆ, ಭೂಮಿಯ ಖಂಡಗಳು ಹಾಗೂ ಸಾಗರಗಳನ್ನು ಎರಡು ಸರಿಸಮಾನವಾದ ಭಾಗಗಳನ್ನಾಗಿ ವಿಭಜಿಸುತ್ತದೆ.

ಇಲ್ಲಿನ ಪಿರಮಿಡ್‌ಗಳ ತಲಪ್ರದೇಶದ ವಿಸ್ತೀರ್ಣವನ್ನು ಅದರ ಎತ್ತರವನ್ನು ದ್ವಿಮಡಿಗೊಳಿಸಿ ಭಾಗಿಸಿದಾಗ ಬರುವ ಭಾಗಲಬ್ದವು ಪೈ (ಎಂದರೆ ೩.೧೪೧೫೯) ಆಗಿರುತ್ತದೆ. ಪಿರಮಿಡ್‌ಗಳನ್ನು ಬಹುತೇಕ ಶಿಲಾವೃತ ಪ್ರದೇಶಗಳಲ್ಲಿಯೇ ನಿರ್ಮಿಸಿದ್ದು, ಆ ಭೂಭಾಗಗಳನ್ನು ಅತಿ ಎಚ್ಚರಿಕೆಯಿಂದ ಮತ್ತು ಅತ್ಯಂತ ನಿಖರವಾಗಿ ಸಮತಟ್ಟು ಮಾಡಲಾಗಿದೆ.ವೈಜ್ಞಾನಿಕವಾಗಿ, ತಾಂತ್ರಿಕವಾಗಿ ಅಗಾಧ ಮುನ್ನಡೆಯನ್ನು ಸಾಧಿಸಿರುವ ನಾವು ಸಹಸ್ರಾರು ವರ್ಷಗಳ ಹಿಂದೆಯೇ ನಿರ್ಮಿಸಲಾದ ಷಿಯೋಪ್ಸನ ಪಿರಮಿಡ್ಡನ್ನು ಯಥಾವತ್ತಾಗಿ ನಕಲು ಮಾಡಲೂ ಅಸಮರ್ಥರಾಗಿದ್ದೇವೆ. ಪಿರಮಿಡ್ಡುಗಳ ಕಲ್ಲುಗಳನ್ನು ಬಂಧಿಸಿರುವ ಗಾರೆಯನ್ನು ರಾಸಾಯನಿಕ ಪರೀಕ್ಷೆಗೆ ಒಳಪಡಿಸಿ ನೋಡಿದರೂ ಮತ್ತೆ ಅಂಥದೇ ಗಾರೆಯನ್ನು ತಯಾರಿಸಲು ಸಾಧ್ಯವಾಗುತ್ತಿಲ್ಲವಂತೆ.ಹೀಗಾಗಿ ಈ ಎಲ್ಲ ಪಿರಮಿಡ್‌ಗಳೂ ಕೇವಲ ಶವ ಸಂರಕ್ಷಣಾ ಕೇಂದ್ರಗಳಾಗಿರದೆ, ಗಣಿತ ಹಾಗೂ ಖಭೌತ ಶಾಸ್ತ್ರಗಳ ನಿಯಮಗಳಿಗನುಸಾರವಾಗಿ ನಿರ್ಮಾಣಗೊಂಡಿರಬಹುದೆಂಬ ವಾದಕ್ಕೆ ಪುಷ್ಠಿ ಸಿಗುತ್ತದೆ. ಷಿಯೋಪ್ಸನ ಪಿರಮಿಡ್ ನಿರ್ಮಿಸಲು ಬಳಸಿರುವ ೨೩,೦೦,೦೦೦ ಬೃಹತ್ ಗಾತ್ರದ ಕಲ್ಲುಗಳನ್ನು ಕೆತ್ತಿ ಗಣಿ ಪ್ರದೇಶದಿಂದ ಸಾಗಿಸಿ ಒಪ್ಪವಾಗಿ ಗಾಳಿ ಕೂಡ ಸಾಗದಷ್ಟು ಬಿಗಿಯಾಗಿ ಜೋಡಿಸಿಟ್ಟ ಪರಿ ನಿಬ್ಬೆರಗಾಗಿಸುತ್ತದೆ.

ಒಂದು ಲೆಕ್ಕಾಚಾರದಂತೆ ಖುಫು ಫೆರೋ ಆಳಿದ್ದ ೨೦ ವರ್ಷಗಳ ಅವಧಿಯಲ್ಲಿ ಗೀಜಾ ಪಿರಮಿಡ್ ಕಟ್ಟಿರುವರೆಂದರೆ, ಇದಕ್ಕೆ ಬಳಸಿರುವ ೨೩,೦೦,೦೦೦ ಕಲ್ಲುಗಳನ್ನು ಜೋಡಿಸಲು, ಪ್ರತಿದಿನ ೧೨ ಗಂಟೆಯಂತೆ ಕೆಲಸ ಮಾಡಿ ೨.೩ ನಿಮಿಷಕ್ಕೊಂದು ಕಲ್ಲಿನಂತೆ ಜೋಡಿಸಿಟ್ಟರೆ ಮಾತ್ರ ಸಾಧ್ಯವಾಗಬಲ್ಲದು.

ಪರದ ಹಂಬಲದಲ್ಲಿ ಸ್ಥಾವರ!

ಈಜಿಪ್ಟಿನ ಇತಿಹಾಸಕಾರರ ಪ್ರಕಾರ ಈ ಪಿರಮಿಡ್‌ಗಳನ್ನು ಕಟ್ಟಿದ ರಾಜರು ಸೂರ್ಯನ ಆರಾಧಕರು. ಇವರು ತಮ್ಮ ಸಮಾಧಿಗೆ ಪಿರಮಿಡ್‌ಗಳನ್ನು ಕಟ್ಟಿಸಿದ್ದು ಎತ್ತರೆತ್ತರಕ್ಕೆ ಏರಿದಷ್ಟೂ ತಮ್ಮ ಆತ್ಮ ದೇವರನ್ನು ತಲುಪಲು ಸುಲಭ ಎಂಬ ಆಶಯದಿಂದ. ಗೀಜಾದ ಈ ಅದ್ಭುತ ಸೃಷ್ಟಿಗೆ ಹಿಂದೆ ಸಕಾರ ಎಂಬ ಪ್ರದೇಶದಲ್ಲಿ ಈಜಿಪ್ಟಿನ ಖ್ಯಾತ ವಾಸ್ತುಶಿಲ್ಪಿ ಇಮ್ಹೊತೆಪ್ ನಿರ್ಮಿಸಿದ ಸ್ಟೆಪ್ ಪಿರಮಿಡ್‌ಗಳೇ ಸ್ಫೂರ್ತಿ.

ಅಲ್ಲಿ ಪಿರಮಿಡ್‌ಗಳು ಕುಸಿಯಲು ಕಾರಣವನ್ನು ಕಂಡುಕೊಂಡು ಆ ತಪ್ಪುಗಳನ್ನು ಇಲ್ಲಿ ಅವರು ತಿದ್ದಿಕೊಂಡಿದ್ದಾರೆ. ಒಟ್ಟಾರೆ ೪೫೦೦ ವರ್ಷಗಳ ಹಿಂದಿನ ಈ ಪ್ರಾಚೀನ ಸ್ಮಾರಕ ಆಧುನಿಕ ಮನುಷ್ಯರ ಪಾಲಿಗೆ ನಿಗೂಢವಾಗಿಯೇ ಉಳಿದಿದೆ. ಖುಫುನ ಪಿರಮಿಡ್ ನಿರ್ಮಿತವಾದಾಗ ೪೮೨ ಅಡಿ ಎತ್ತರವಿತ್ತು. ಕೈರೋ ನಗರವನ್ನು ನಿರ್ಮಿಸುವಾಗ ಈ ಪಿರಮಿಡ್‌ಗಳಿಂದ ಹೊರಭಾಗದಲ್ಲಿದ್ದ ಗ್ರಾನೈಟ್ ಶಿಲೆಗಳನ್ನು ಹೊತ್ತೊಯ್ಯುವಾಗ ಸುಮಾರು ಹತ್ತು ಅಡಿಗಳಷ್ಟು ಎತ್ತರವನ್ನು ಅದು ಕಳೆದುಕೊಂಡಿತು.ಪಿರಮಿಡ್ ಒಳಗೆ ಪ್ರವೇಶಿಸಲು ಅನುಮತಿಯಿದೆ. ಹತ್ತಲು ಮೇಲ್ಮುಖವಾಗಿ ಮೆಟ್ಟಿಲುಗಳಿವೆ. ಬೃಹದಾಕಾರದ ಕಲ್ಲು ಚಪ್ಪಡಿಗಳನ್ನು ಜೋಡಿಸಿ ನಿರ್ಮಿಸಿರುವ ಗ್ರಾಂಡ್ ಗ್ಯಾಲರಿಯಿದೆ. ಮೆಟ್ಟಿಲುಗಳನ್ನು ಏರಿ ಹೋದ ಮೇಲೆ ಪುಟ್ಟ ಕೋಣೆಯೊಂದು ಸಿಗುತ್ತದೆ. ಅದರಲ್ಲಿ ಗ್ರಾನೈಟ್‌ನ ತೊಟ್ಟಿಯೊಂದಿದೆ. ರಾಜನ ದೇಹವನ್ನು ಅಥವಾ ಮಮ್ಮಿಯನ್ನು ಇಡುತ್ತಿದ್ದ ತೊಟ್ಟಿಯಿದು. ಆದರೆ ಇದರಲ್ಲಿ ಖುಫು ದೊರೆಯ ಮಮ್ಮಿಯೇನೂ ಸಿಕ್ಕಿಲ್ಲ. ಕೆಲವು ಇತಿಹಾಸಕಾರು ರಾಜನ ದೇಹವನ್ನು ಬೇರೆಡೆ ಸಾಗಿಸಿದ್ದಾರೆ ಎನ್ನುತ್ತಾರೆ.ಖುಫುನ ಪಿರಮಿಡ್ ಬಳಿ ಸೋಲಾರ್ ಬೋಟ್ ಎಂದು ಕರೆಯುವ ದೋಣಿಯನ್ನಿರಿಸಿದ್ದಾರೆ. ಪಿರಮಿಡ್ ಪಕ್ಕದ ಮರಳ ರಾಶಿಯಲ್ಲಿ ಹೂತು ಹೋಗಿದ್ದ ಈ ದೋಣಿ ಬೆಳಕು ಕಂಡಿದ್ದು ೧೯೫೪ರಲ್ಲಿ. ಈಜಿಪ್ಟರ ಧಾರ್ಮಿಕ ನಂಬಿಕೆಗನುಗುಣವಾಗಿ ರಾಜನ ಮರಣಾನಂತರದ ಬದುಕಿನ ಯಾತ್ರೆಗೆ ಸಹಕಾರಿಯಾಗಲೆಂದು ಈ ದೋಣಿಯನ್ನು ಇಡಲಾಗಿದೆ. ಮೂರು ಪ್ರಖ್ಯಾತ ಪಿರಮಿಡ್‌ಗಳ ಸುತ್ತ ಹಲವಾರು ಚಿಕ್ಕ ಪಿರಮಿಡ್‌ಗಳಿವೆ. ಈ ಸಣ್ಣಪುಟ್ಟ ಪಿರಮಿಡ್‌ಗಳನ್ನು ರಾಣಿ, ರಾಜನ ಹತ್ತಿರದ ಬಂಧುಗಳು, ಮಂತ್ರಿಗಳು ಮತ್ತು ಅಧಿಕಾರಿಗಳಿಗಾಗಿ ನಿರ್ಮಿಸಲಾಗಿದೆ..ಶಿವಲಿಂಗದ ಮುಂದೆ ಬಸವಣ್ಣನಂತೆ ಮೂರೂ ಪಿರಮಿಡ್‌ಗಳ ಮುಂದೆ ಸಿಂಹ ಶರೀರ ಹಾಗೂ ಮನುಷ್ಯನ ಮುಖವನ್ನು ಹೊಂದಿರುವ ಬೃಹತ್ ಪ್ರತಿಮೆಯಿದೆ. ಅದುವೇ ಜಗದ್ವಿಖ್ಯಾತ ಸ್ಫಿಂಕ್ಸ್. ೭೩.೫ ಮೀಟರ್ ಉದ್ದ ಹಾಗೂ ೨೦ ಮೀಟರ್ ಎತ್ತರದ ಈ ಶಿಲ್ಪ ಹಲವಾರು ಶತಮಾನಗಳ ಕಾಲ ಮರಳಿನಲ್ಲಿ ಹೂತು ಹೋಗಿತ್ತು. ಈಜಿಪ್ಟರು ಇದನ್ನು ‘ಹೊರ್ ಎಂ ಎಖತ್’ ಎಂದು ಕರೆಯುತ್ತಿದ್ದರು.

ಅದರರ್ಥ ‘ಉದಯಿಸುತ್ತಿರುವ ಸೂರ್ಯ’ ಎಂದು. ಅರಬ್ಬರು ಅದನ್ನು ‘ಅಬು ಎಲ್ ಹೊಲ್’ ಎಂದು ಕರೆದರು. ಭೀಭತ್ಸದ ಪಿತಾಮಹ ಎಂದಿದರ ಅರ್ಥ. ಮಾಮುಲೆಕ್ ಸಂತತಿಯ ಅರಸರು ಸ್ಫಿಂಕ್ಸ್ ಮುಖವನ್ನು ಬಂದೂಕಿನ ಗುರಿಗಾರಿಕೆಯ ಅಭ್ಯಾಸಕ್ಕಾಗಿ ಬಳಸಿದ್ದರಿಂದಾಗಿ ಸುಂದರವಾಗಿದ್ದ ಅದರ ಮುಖ ಕುರೂಪಗೊಂಡಿದೆ.ನಾವ್ಯಾರೂ ಕಾಣಲಾಗದಷ್ಟು ಸೂರ್ಯೋದಯ ಸೂರ್ಯಾಸ್ತಗಳನ್ನು ಕಂಡಿರುವ ಈ ಸ್ಫಿಂಕ್ಸ್ ಅದನ್ನು ನಿರ್ಮಿಸಿದ್ದ ಫೆರೋ ದೊರೆಗಳನ್ನು ಮಾತ್ರವಲ್ಲ ಜಗದೇಕವೀರ ಅಲೆಕ್ಸಾಂಡರನನ್ನೂ ಕಂಡಿದೆ. ನೈಲ್ ನದಿಯ ಹರಿವಿನಂತೆ ಮನುಷ್ಯನ ಸುಖ, ದುಃಖ, ಕಷ್ಟ, ದರ್ಪ, ದೌರ್ಜನ್ಯ, ದುರಾಸೆ, ವಿನಾಶ, ಅಂತಃಕರಣಗಳಿಗೆ ಸಾಕ್ಷಿಯಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry