ಗುರುವಾರ , ಮೇ 13, 2021
16 °C

ಬೆರಗಿನ ಬೆಂಗಳೂರು

ರೋಹಿಣಿ ಮುಂಡಾಜೆ Updated:

ಅಕ್ಷರ ಗಾತ್ರ : | |

ನಾಡಪ್ರಭು ಕೆಂಪೇಗೌಡರು ಅಡಿಪಾಯ ಹಾಕಿದ ಬೆಂಗಳೂರು ಮಹಾನಗರಿಗೆ ಈಗ ಬರೋಬ್ಬರಿ 475 ವರ್ಷಗಳು. ಎಲ್ಲವನ್ನೂ, ಎಲ್ಲರನ್ನೂ ಸೆಳೆಯುವ, ತನ್ನೊಳಗೆ ಒಂದಾಗಿಸಿಕೊಳ್ಳುವ ಗುಣದಿಂದಾಗಿ ಅದು ವಿಶ್ವ ಮಟ್ಟದಲ್ಲೂ ಹೆಸರು ಪಡೆದಿದೆ. ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಕೂಡ ಅಸೂಯೆ ಪಡುವಂತೆ ಬೆಳೆಯುತ್ತಿರುವ ಅದರ ಪರಿಯೇ ಅದ್ಭುತ.ವಿಜಯನಗರ ಸಾಮ್ರಾಜ್ಯದ ಸಾಮಂತ, ಯಲಹಂಕದ ಪಾಳೇಗಾರ ಮೊದಲನೆಯ ಕೆಂಪೇಗೌಡರು ಅಂದು ಕುಳಿತಿದ್ದ ಜಾಗ ಹೆಸರಘಟ್ಟ ಬಳಿಯ ಶಿವನಸಮುದ್ರ ಗ್ರಾಮ. ತನ್ನ `ಸಾಮ್ರಾಜ್ಯ~ದ ಪರಿಶೀಲನೆಗಾಗಿ ಹೊರಟಿದ್ದ ಕೆಂಪೇಗೌಡರೊಂದಿಗೆ ಇದ್ದವರು ಮಂತ್ರಿ ವೀರಣ್ಣ ಹಾಗೂ ಸಲಹೆಗಾರ ಗಿಡ್ಡೇಗೌಡ.ಅಷ್ಟರಲ್ಲಾಗಲೇ ಯಲಹಂಕದಿಂದ ಹತ್ತು ಮೈಲಿ ದೂರ ಕುದುರೆ ಸವಾರಿ ಸಾಗಿತ್ತು. ವಿಶ್ರಾಂತಿಗಾಗಿ ಮರದಡಿ ಕುಳಿತ ಈ ಚತುರ ಆಡಳಿತಗಾರ ಪಾಳೇಗಾರನಿಗೆ ಹೊಸ ಚಿಂತನೆಯೊಂದು ತಲೆಯಲ್ಲಿ ಚಿಗುರೊಡೆಯಿತು.ಅದು ಭವಿಷ್ಯದ ಮಹಾನಗರಿಯೊಂದರ ಕಲ್ಪನೆಯ ಚಿಗುರು. ಒಂದು ಕೋಟೆ, ಜಲಾಶಯಗಳು, ದೇವಸ್ಥಾನಗಳು, ವ್ಯಾಪಾರ ವಹಿವಾಟು, ವೃತ್ತಿಕೌಶಲ್ಯವಿರುವ ಜನಸಾಗರ... ಹೀಗೆ ವೈವಿಧ್ಯಗಳ ಆಗರವಾದ ಮಹಾನಗರವೊಂದು ನಿರ್ಮಾಣವಾದರೆ ಹೇಗಿದ್ದೀತು ಎಂದು ಯೋಚಿಸಿದರು. ನೂರಾರು ವರ್ಷಗಳ ನಂತರ ತನ್ನ ಕನಸಿನ ಊರು ಹೇಗಾದೀತು ಎಂದು ಭ್ರಮಾಧೀನರಾದರು.ಆದರೆ, ಅದು ರಾಜಕಾರಣದ ಮತ್ತು ಸ್ವಾರ್ಥದ ಗಂಧಗಾಳಿಯಿಲ್ಲದ ಚಿಂತನೆಯಾದ್ದರಿಂದ ನಿರ್ಭಿಡೆಯಿಂದ ತನ್ನೊಡೆಯ ವಿಜಯನಗರದ ಅರಸ ಅಚ್ಯುತದೇವರಾಯನ ಬಳಿ ತನ್ನ ಆ ಚಿಂತನೆಯನ್ನು ತೆರೆದಿಟ್ಟರು.ಅರಸರು ಭೇಷ್ ಅಂದರು. ನಗರ ಕಟ್ಟುವ ಪ್ರಕ್ರಿಯೆಗೆ ಹಸಿರು ನಿಶಾನೆ ದೊರಕಿತು. ಕೆಂಪೇಗೌಡರು ತಮ್ಮ ರಾಜಧಾನಿಯನ್ನು ಯಲಹಂಕದಿಂದ `ಬೆಂಗಳೂರು~ ಪಟ್ಟಣಕ್ಕೆ ವರ್ಗಾಯಿಸುವ ಮೂಲಕ ತಮ್ಮ ಮಹಾನಗರದ ಕನಸಿಗೆ ಮೂರ್ತರೂಪ ಕೊಡಲಾರಂಭಿಸಿದರು.-ಹೀಗೆ, ಕ್ರಿ.ಶ. 1537ರಲ್ಲಿ ಬೆಂಗಳೂರು ನಗರ ಎಂಬ ಕೂಸು ಕಣ್ಬಿಟ್ಟಿತು. ಇದಕ್ಕೀಗ ಬರೋಬ್ಬರಿ 475 ವರ್ಷ!ಇದಕ್ಕೂ ಹಿಂದೆ, ಚೋಳರು ದಕ್ಷಿಣ ಭಾರತದಲ್ಲಿ ಚಕ್ರಾಧಿಪತ್ಯ ಸ್ಥಾಪಿಸಿದ್ದ ಕಾಲದಲ್ಲಿ ನಡೆಯಿತೆನ್ನಲಾದ ಒಂದು ಕತೆ ಬೆಂಗಳೂರಿನ ಇತಿಹಾಸವನ್ನು 11ನೇ ಶತಮಾನಕ್ಕೆ ಕೊಂಡೊಯ್ಯುತ್ತದೆ. ಅದು ಹೀಗಿದೆ- ಚೋಳ ರಾಜ ವೀರಬಲ್ಲಾಳ ಕಾಡು ದಾರಿಯ ಮೂಲಕ ಪ್ರಯಾಣಿಸುತ್ತಿದ್ದ ಸಂದರ್ಭ ವಿಪರೀತ ಹಸಿವು, ನೀರಡಿಕೆಯಾಗುತ್ತದೆ.ಸಹಚರರಲ್ಲೂ ತಿನ್ನಲು ಏನೇನೂ ಇರುವುದಿಲ್ಲ. ಆಗ ಮುದುಕಿಯೊಬ್ಬಳು ಅರಸನ ಮೇಲೆ ಕರುಣೆ ತೋರಿ ತನ್ನಲ್ಲಿದ್ದ ಬೆಂದ ಕಾಳುಗಳನ್ನೇ ತಿನ್ನಲು ಕೊಟ್ಟಳಂತೆ. ಅದನ್ನು ತಿಂದು ಹಸಿವು ನೀಗಿಸಿಕೊಂಡ ಅರಸ `ನನಗೆ ಬೆಂದ ಕಾಳುಗಳನ್ನು ಕೊಟ್ಟ ಈ ಊರು ಬೆಂದಕಾಳೂರು~ ಎಂದು ಕರೆದುಬಿಟ್ಟನಂತೆ. ಮುಂದೆ ಬೆಂದಕಾಳೂರು ಮಾತಿನಲ್ಲಿ ಕರಗಿ ಕರಗಿ ಬೆಂಗಳೂರು ಆಯಿತು ಎಂದು ಹೇಳಲಾಗುತ್ತದೆ. ಇದು ಕಟ್ಟುಕತೆ ಎಂಬ ವಾದವೂ ಇದೆಯೆನ್ನಿ.ಕೆಂಪೇಗೌಡರ ಅದ್ಭುತ ವ್ಯವಸ್ಥಿತ ನಗರ ಯೋಜನೆಯ ಪರಿಣಾಮವಾಗಿ ರೂಪುಗೊಂಡ ಆ ಬೆಂಗಳೂರು ಇಂದು ಸಿಲಿಕಾನ್ ಸಿಟಿ, ಕಾರ್ಪೊರೇಟ್ ಜಗತ್ತಿನ ಹೆಬ್ಬಾಗಿಲು ಆಗಿ ಬೆಳೆದಿದೆ.

ತಮ್ಮ ಕನಸಿನ ಮಹಾನಗರ ನಿರ್ಮಾಣ ಯೋಜನೆಯಂತೆ ಕೆಂಪೇಗೌಡರು 1537ರಲ್ಲೇ ಕಲಾಸಿಪಾಳ್ಯ ಪ್ರದೇಶ (ಕೃಷ್ಣರಾಜ ಮಾರುಕಟ್ಟೆ)ದಲ್ಲಿ ಮಣ್ಣಿನ ಕೋಟೆಯನ್ನು ಕಟ್ಟಿಸಲಾರಂಭಿಸಿದರು.ಅದನ್ನು ಕಲ್ಲಿನ ಕೋಟೆಯಾಗಿ ಮೇಲ್ದರ್ಜೆಗೇರಿಸಿದ್ದು ಹೈದರ್ ಅಲಿ, 1761ರಲ್ಲಿ. ಮುಂದೆ ಕರುನಾಡಿನಲ್ಲೂ ಬ್ರಿಟಿಷರ ಆಧಿಪತ್ಯ ಸ್ಥಾಪನೆಯಾದಾಗ ಟಿಪ್ಪೂ ಸುಲ್ತಾನನಿಗೆ ಈ ಕೋಟೆಯು ಪ್ರಬಲ ರಕ್ಷಣಾ ಕೇಂದ್ರವಾಗಿತ್ತು (1791ರಲ್ಲಿ ಮೂರನೇ ಮೈಸೂರು ಕದನದಲ್ಲಿ ಈಸ್ಟ್ ಇಂಡಿಯಾ ಕಂಪೆನಿಯು ಈ ಕೋಟೆಯನ್ನು ತನ್ನ ವಶಪಡಿಸಿಕೊಂಡಿತು).

ಕೆಂಪೇಗೌಡರು ನಿರ್ಮಿಸುತ್ತಿದ್ದ ಮಣ್ಣಿನ ಕೋಟೆಗೆ ಪ್ರವೇಶದ್ವಾರ ಕಟ್ಟುತ್ತಿರುವಾಗ ಅಚ್ಚರಿಯೊಂದು ನಡೆಯುತ್ತದೆ. ದಿನದ ಕೆಲಸ ಮುಗಿಸಿ ತೆರಳಿದ ಆಳುಗಳು ಮರುದಿನ ಬಂದು ನೋಡುವಷ್ಟರಲ್ಲಿ ಅದು ನೆಲಕ್ಕೆ ಉರುಳಿರುತ್ತಿತ್ತಂತೆ.ಇದರಿಂದ ಕೆಂಪೇಗೌಡರು ಬಹಳ ನೊಂದುಕೊಳ್ಳುತ್ತಾರೆ. ಇದನ್ನು ಗಮನಿಸಿದ ಸೊಸೆ ಲಕ್ಷ್ಮಮ್ಮ ರಾತ್ರಿ ಹೊತ್ತಿನಲ್ಲಿ ರಹಸ್ಯವಾಗಿ ಕೋಟೆಗೆ ತೆರಳಿ ತನ್ನ ಶಿರಚ್ಛೇದ ಮಾಡಿಕೊಂಡು `ಕೋಟೆಗೆಹಾರ~ವಾಗುತ್ತಾಳಂತೆ. ಮರುದಿನ ಕೆಲಸಕ್ಕೆ ಮರಳಿದ ಕಾರ್ಮಿಕರು ಪ್ರವೇಶದ್ವಾರ ಸ್ವಸ್ಥಾನದಲ್ಲಿರುವುದನ್ನು ಕೆಂಪೇಗೌಡರಿಗೆ ತಿಳಿಸುತ್ತಾರೆ.

 

ಆದರೆ ಅದು ತನ್ನ ಸೊಸೆಯ ಆತ್ಮಾಹುತಿಯ ಫಲಶ್ರುತಿ ಎಂಬ ಅಂಶ ಬೆಳಕಿಗೆ ಬರುತ್ತಲೇ ಅವರು ಕುಗ್ಗಿಹೋಗುತ್ತಾರೆ. ಇದಕ್ಕೆ ಪ್ರಾಯಶ್ಚಿತ್ತವಾಗಿ ಬೆಂಗಳೂರಿನ ಕೋರಮಂಗಲದಲ್ಲಿ ಗುಡಿಯೊಂದನ್ನು ಕಟ್ಟಿಸಿದರು ಎಂದು ದಾಖಲೆಗಳು ಹೇಳುತ್ತವೆ.ಕೆಂಪೇಗೌಡರು ಚತುರ ಆಡಳಿತಗಾರ ಎಂಬುದಕ್ಕೆ ಅವರು ರೂಪಿಸಿದ ಬೆಂಗಳೂರಿಗಿಂತ ಬೇರೆ ಸಾಕ್ಷಿ ಬೇಕಿಲ್ಲ. ಜಾತಿ ವ್ಯವಸ್ಥೆ ಪ್ರಬಲವಾಗಿದ್ದ ಕಾಲವದು. ಅಂತೆಯೇ ಕುಲ ಕಸುಬುಗಳೂ. ಈ ಕುಲ ಕಸುಬುದಾರರಿಗೆ ಪ್ರೋತ್ಸಾಹ ಕೊಡುವ ನಿಟ್ಟಿನಲ್ಲಿ ಬೆಂಗಳೂರಿನ ಹೃದಯಭಾಗದಲ್ಲಿ ದೊಡ್ಡಪೇಟೆ, ಚಿಕ್ಕಪೇಟೆ, ನಗರ್ತ ಪೇಟೆ, ಅರಳೇ (ಕಾಟನ್)ಪೇಟೆ, ತರಗುಪೇಟೆ, ಅಕ್ಕಿಪೇಟೆ, ಬಳೆಪೇಟೆ, ರಾಗಿಪೇಟೆ, ಕುಂಬಾರಪೇಟೆ, ಕುರುಬರಪೇಟೆ, ಗಾಣಿಗರ ಪೇಟೆ, ಉಪ್ಪಾರಪೇಟೆ ಇತ್ಯಾದಿ ಆರಂಭಿಸಿದರು.ಬೆಂಗಳೂರು ಪ್ರಮುಖ ವಾಣಿಜ್ಯ ಕೇಂದ್ರವಾಗಿ ಬೆಳೆಯಬೇಕು ಎಂಬ ಕನಸು ಕೆಂಪೇಗೌಡರಲ್ಲಿತ್ತು ಎಂಬುದು ಇಲ್ಲಿ ಸ್ಪಷ್ಟವಾಗುತ್ತದೆ. ಸಂಪ್ರದಾಯ ಶರಣರಾದ ಪುರೋಹಿತವರ್ಗ ಜನಸಾಮಾನ್ಯರಿಂದ ಪ್ರತ್ಯೇಕವಾಗಿರುವುದು ಸೂಕ್ತ ಎಂಬ ಚಿಂತನೆಯೊಂದಿಗೆ ಅವರಿಗಾಗಿ ಅಗ್ರಹಾರಗಳನ್ನು ಮೀಸಲಿಟ್ಟರು. ತನ್ನ `ಸಾಮ್ರಾಜ್ಯ~ದೆಲ್ಲೆಡೆ ದೇವಸ್ಥಾನಗಳನ್ನು, ನೂರಾರು ಕೆರೆಗಳನ್ನು ನಿರ್ಮಿಸಿದರು.ಕಂಡಕಂಡಲ್ಲಿ ಸಾಲು ಮರಗಳನ್ನು ನೆಡಿಸಿದರು.

ಹೀಗೆ, ಎಲ್ಲಾ ಕ್ಷೇತ್ರಗಳನ್ನೂ ಸಮತಾಭಾವದಿಂದ ಪ್ರಗತಿಪಥದಲ್ಲಿ ಕೊಂಡೊಯ್ಯುತ್ತಿದ್ದ ಕೆಂಪೇಗೌಡರು ವಿಜಯನಗರ ಸಾಮ್ರಾಜ್ಯದಲ್ಲಿ ಪ್ರಭಾವಶಾಲಿ ಪಾಳೇಗಾರರಾಗಿ ಬೆಳೆಯತೊಡಗಿದರು.ಇದಕ್ಕೆ ಪೂರಕವಾಗಿ ಅವರಿಗೆ ವಿಜಯನಗರ ಸಾಮ್ರಾಜ್ಯವು ಯಲಹಂಕ, ಬೇಗೂರು, ಚಿಕ್ಕಪೇಟೆ, ಬಳೇಪೇಟೆ, ಹೆಸರಘಟ್ಟ, ಬಾಣಾವಾರ, ಕನ್ನಳ್ಳಿ, ವರ್ತೂರು, ಹಲಸೂರು, ಕೆಂಗೇರಿ, ತಲಘಟ್ಟಪುರ, ಜಿಗಣಿ ಹಾಗೂ ಕುಂಬಳಗೋಡು ಪ್ರದೇಶಗಳನ್ನು ಉಂಬಳಿಯಾಗಿ ಬಿಟ್ಟುಕೊಟ್ಟಿತು. ಹೀಗೆ, ಬೆಂಗಳೂರಿನ ವ್ಯಾಪ್ತಿ ವಿಸ್ತರಣೆಯಾಗುತ್ತಾ ಹೋಯಿತು.ನಗರ ನಿರ್ಮಾಣಕ್ಕೆ ಅವಶ್ಯವಾದ ಭೂಮಿಯನ್ನು ನಾಗರಿಕರೊಂದಿಗೆ ಸೌಹಾರ್ದದಿಂದಲೇ ಪಡೆದುಕೊಂಡರು ಕೆಂಪೇಗೌಡರು. ಇದರಿಂದ ಪಾಳೇಗಾರರ ಆಡಳಿತದ ವರ್ಷದ ಆದಾಯ 30 ಸಾವಿರ ಪಗೋಡಗಳಿಗೆ (3.5 ರೂಪಾಯಿ ಮುಖಬೆಲೆಯ ಚಿನ್ನದ ನಾಣ್ಯ -ಪಗೋಡ) ಏರಿತು.ಸತತ 56 ವರ್ಷಗಳ ಕಾಲ ರಾಜ್ಯಭಾರ ಮಾಡಿ ಅನುಕ್ಷಣವೂ ಪ್ರಜೆಗಳ ಹಿತಕ್ಕಾಗಿ ದೂರದೃಷ್ಟಿಯ ಯೋಜನೆಗಳನ್ನು ಜಾರಿಗೆ ತಂದು ಜನರ ಕಣ್ಮಣಿಯಾಗಿ ಮೆರೆದ ಕೆಂಪೇಗೌಡರು 1569ರಲ್ಲಿ ನಿಧನರಾದ ಮೇಲೆ ಅವರ ಮಗ ಗಿಡ್ಡೇಗೌಡರು (1570-1585), ನಂತರ ಎರಡನೇ ಕೆಂಪೇಗೌಡರು ಆಡಳಿತದ ಚುಕ್ಕಾಣಿ ಹಿಡಿದರು. ಆದರೆ ಮೊದಲನೆ ಕೆಂಪೇಗೌಡರ ಮಾದರಿಯಲ್ಲಿ ಆಡಳಿತ ಮತ್ತೆಂದೂ ಮರುಕಳಿಸಲಿಲ್ಲ.ಕೆಂಪೇಗೌಡರ ಚಿತ್ತ ವಾಣಿಜ್ಯ ಕೇಂದ್ರಿತವಷ್ಟೇ ಆಗಿರದೆ ಕೃಷಿ, ತೋಟಗಾರಿಕೆ, ನೀರಾವರಿ ಕ್ಷೇತ್ರದ ಕಡೆಗೂ ಇತ್ತು ಎಂಬುದು ಗಮನಾರ್ಹ. ಅಗರ, ಅಲ್ಲಸಂದ್ರ ಮುಂತಾದೆಡೆ ಕೆರೆ ನಿರ್ಮಾಣ ಮಾಡಿದ್ದಲ್ಲದೆ, 1533ರಲ್ಲೇ ಹೆಸರಘಟ್ಟದ ಬಳಿ ಅರ್ಕಾವತಿ ನದಿಗೆ `ದೇವರ ಅಣೆ~ ಎಂಬ ಜಲಾಶಯವನ್ನು ನಿರ್ಮಿಸಿದ ಮಹಾನುಭಾವ ಅವರು.ಮುಂದೆ, ಬ್ರಿಟಿಷರ ಕಾಲದಲ್ಲಿ ಬಹುತೇಕ ಎಲ್ಲಾ ಕ್ಷೇತ್ರಗಳಲ್ಲೂ ಐರೋಪ್ಯ ಶೈಲಿಗೆ ತನ್ನನ್ನು ಒಡ್ಡಿಕೊಂಡ ಬೆಂಗಳೂರು ಆಧುನಿಕತೆ ಹೆದ್ದಾರಿಯಲ್ಲಿ ಸಾಗುತ್ತಾ ಬಂದಿತು. ವಿಶ್ವದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮಹಾನಗರಿ ಎಂಬ ಹೆಗ್ಗಳಿಕೆಯ ಬೆಂಗಳೂರಲ್ಲಿ ಭಾರತೀಯ ಭಾಷೆಗಳನ್ನು ಮಾತ್ರವಲ್ಲದೆ ವಿಶ್ವದ ವಿವಿಧೆಡೆಯ ಭಾಷೆಗಳನ್ನೂ ಮಾತನಾಡುವ ಜನರಿದ್ದಾರೆ. ಒಂದರ್ಥದಲ್ಲಿ ಇದು ಅಂತರ‌್ರಾಷ್ಟ್ರೀಯ ಮಹಾನಗರ.

ಅದು ಬೆಳೆದ, ಈಗಲೂ ಬೆಳೆಯುತ್ತಿರುವ ಬಗೆಯೇ ಒಂದು ಅದ್ಭುತ, ಸೋಜಿಗ.  

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.