ಬೆರಗಿನ ಹೆಣ್ಣು ನೋಡುವ ಕಣ್ಣು

7

ಬೆರಗಿನ ಹೆಣ್ಣು ನೋಡುವ ಕಣ್ಣು

Published:
Updated:

ಚಿತ್ರಕ್ಕೆ, ಸಂಗೀತಕ್ಕೆ ಭಾಷೆಯೆಂಬುದು ಇದ್ದರೆ ಅದು ವಿಶ್ವಭಾಷೆ ಮಾತ್ರ. ಎಲ್ಲಿಯ ಖಂಡೇವಾಲ ಎಲ್ಲಿಯ ಕರ್ನಾಟಕ. ಆದರೆ ಈ ವಿಶ್ವಭಾಷೆಯೇ ಖಂಡೇವಾಲದ ಬೈಜನಾಥ್ ಸರಾಫ್ ಅವರನ್ನು ಹಾಗೂ ಐವರು ಕಲಾವಿದೆಯರನ್ನು ನಗರಕ್ಕೆ ಕರೆತಂದಿದೆ.ಬೈಜನಾಥ್ ಮೂರು ದಶಕಗಳಿಂದ ಬಣ್ಣದ ಲೋಕದಲ್ಲಿ ಮುಳುಗಿ ಹೋದವರು. ಕಲೆಯನ್ನು ಹೊರತುಪಡಿಸಿದರೆ ಬೇರೇನೂ ಗೊತ್ತಿಲ್ಲ ಎಂಬಷ್ಟು ತನ್ಮಯತೆಯಿಂದ ಅದರಲ್ಲಿ ತೊಡಗಿಕೊಂಡವರು. ಲಖನೌದ ಕಲಾ ಏವಂ ಶಿಲ್ಪ ಮಹಾವಿದ್ಯಾಲಯದಲ್ಲಿ ಕಲೆಯನ್ನು ಕಲಿತವರು. ಭೀಲ್ ಬುಡಕಟ್ಟಿನ ಕಲೆಯನ್ನೇ ಆಧರಿಸಿ ಈ ಹಿಂದೆ ಅವರು ರಚಿಸಿದ ಕಲಾಕೃತಿಗಳು ಸಾಕಷ್ಟು ಜನಮನ್ನಣೆ ಗಳಿಸಿವೆ. ಈಗ ಈ ಆರು ಜನ ಕಲಾವಿದರ ಪ್ರಯತ್ನವೇ `ಎಸೆನ್ಸ್ ಆಫ್ ಡೆಪ್ತ್~. ಪ್ರದರ್ಶನದಲ್ಲಿರುವ ಬೈಜನಾಥ್ ಅವರ ಒಂದು ಕಲಾಕೃತಿ ಎರಡು ಕಾರಣಕ್ಕೆ ಗಮನ ಸೆಳೆಯುತ್ತದೆ. ಹೆಣ್ಣನ್ನು ವಸ್ತುವಾಗಿರಿಸಿಕೊಂಡಿರುವ ರೀತಿ ಹಾಗೂ ಇವರು ಬಣ್ಣಗಳೊಂದಿಗೆ ಆಡಿರುವ ಆಟ. ಕಲಾಕೃತಿಯ ಮುಖ ನೀಲಿಗಟ್ಟಿರುವುದು ಹಾಗೂ ಹಸಿರು ಹಳದಿಯ ಬಣ್ಣಗಳು ಸುತ್ತಲೂ ಆವರಿಸಿರುವುದು ಹೆಣ್ಣಿನ ಅಸ್ತಿತ್ವ ಕುರಿತಂತೆ ಹಲವು ಅರ್ಥಗಳನ್ನು ಹೊಮ್ಮಿಸಬಲ್ಲದು.

 

ಉಜ್ವಲಾ ನಾಯಕ್ ಅವರ ಕಲಾಕೃತಿ ಸಂಜೆಗಣ್ಣಲ್ಲಿ ಹೆಣ್ಣಿನ ಬದುಕನ್ನು ನೋಡುತ್ತದೆ. ಇಲ್ಲಿ ಮೂವರು ಹೆಣ್ಣುಮಕ್ಕಳು ಅಕ್ಕಪಕ್ಕ ಕುಳಿತಿದ್ದಾರೆ. ಒಬ್ಬಾಕೆ ಇನ್ನೊಬ್ಬಳ ಭುಜದ ಮೇಲೆ ಒರಗಿದ್ದಾಳೆ. ಇಡೀ ಆಕಾಶ ಕೆಂಪು ಬಣ್ಣದಲ್ಲಿ ಮಿಂದಿದೆ. ಅರ್ಥಗಳನ್ನು ಹುಡುಕಿಕೊಳ್ಳುವುದು ಸಹೃದಯಿಗೆ ಸೇರಿದ್ದು ಎಂಬಂತೆ ಕಲಾಕೃತಿ ಧೀಮಂತವಾಗಿ ನಿಂತಿದೆ. ಆಕೃತಿ ಆತ್ರೆ ಅವರ ಕಲಾಕೃತಿಯಲ್ಲಿ ಹಲವು ಕವಿತೆಗಳೇ ಸೇರಿರುವಂತೆ ಭಾಸವಾಗುತ್ತದೆ.ಉಜ್ವಲಾ ಹಾಗೂ ಆಕೃತಿ ಅವರ ಕಲಾಕೃತಿಗಳಲ್ಲಿ ಅನೇಕ ಸಾಮ್ಯತೆಗಳಿವೆ. ಇಬ್ಬರೂ ಹೆಚ್ಚಾಗಿ ಬಳಸಿರುವ ಬಣ್ಣ ಕೆಂಪು. ಎರಡೂ ಕಲಾಕೃತಿಗಳಲ್ಲಿ ಹೆಣ್ಣಿಗೆ ಮುಖವಿಲ್ಲ. ಉಜ್ವಲಾ ಅವರದ್ದು ಒಂದು ಚೌಕಟ್ಟಿನಲ್ಲಿ ನಿಂತು ಹೆಣ್ಣಿನ ಬದುಕನ್ನು ನೋಡುವ ವಿಧಾನವಾದರೆ ಆಕೃತಿ, ಎಲ್ಲೆಗಳನ್ನು ಮೀರುವ ಯತ್ನದಲ್ಲಿದ್ದಾರೆ. ಪ್ರಿಯಾಂಕಾ ದತ್, ಪೂಜಾ ಸೂರಿ, ಸಂಜನಾ ಪಟೇಲ್ ಅವರ ಕಲಾಕೃತಿಗಳು ಹೊಸ ಸಂಕೇತಗಳೊಡನೆ ಗಮನ ಸೆಳೆಯುತ್ತವೆ.ಉಜ್ವಲಾ ಸೇವಾ ಭಾರತಿ ಖಂಡ್ವಾದ ಅಧ್ಯಕ್ಷೆ. ವರ್ಲಿ ಮತ್ತು ಜನಪದ ಕಲೆಯಲ್ಲಿ ಪರಿಣತಿ ಪಡೆದವರು. ಸರಾಫ್ ಅವರ ಮಾರ್ಗದರ್ಶನದಲ್ಲಿ ಇದೇ ಮೊದಲ ಬಾರಿಗೆ ಅವರು ಚಿತ್ರಗಳನ್ನು ಪ್ರದರ್ಶಿಸುತ್ತಿದ್ದಾರೆ. ದೆಹಲಿಯಲ್ಲಿ ಜನಿಸಿದ ಪೂಜಾ ಸೂರಿ ಕೋಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ವಾಣಿಜ್ಯ ಪದವಿ ಪಡೆದಿದ್ದಾರೆ. ಕಲೆ ಇವರ ಪ್ರವೃತ್ತಿ. ಪಂಜಾಬ್‌ನ ಪ್ರಿಯಾಂಕಾ ಮಾನವ ಸಂಪನ್ಮೂಲ ಕುರಿತು ಸ್ನಾತಕೋತ್ತರ ಪದವಿ ಗಳಿಸಿದ್ದಾರೆ.ಚಿಕ್ಕಂದಿನಿಂದಲೂ ಕಲೆಯನ್ನು ಹಚ್ಚಿಕೊಂಡು ಬೆಳೆದವರು. ಕಲಾ ವಿದ್ಯಾರ್ಥಿನಿಯಾದ ಸಂಜನಾ ಮುಂದೆ ಚಿತ್ರಕಲೆಯಲ್ಲೇ ಸಂಪೂರ್ಣವಾಗಿ ತೊಡಗಿಕೊಳ್ಳುವ ಕನಸು ಹೊತ್ತವರು. ತನ್ನ ತಾಯಿಯ ಮಾರ್ಗದರ್ಶನದಲ್ಲಿ ನಿಮರಿ ಜನಪದ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಪ್ರದರ್ಶನದ ಕಿರಿಯ ಕಲಾವಿದೆ ಆಕೃತಿ ಆತ್ರೇಯ. ಹಲವಾರು ಚಿತ್ರಕಲಾ ಸ್ಪರ್ಧೆಗಳಲ್ಲಿ ಇವರ ಕೃತಿಗಳಿಗೆ ಬಹುಮಾನ ದೊರೆತಿದೆ.ರಂಗಕೃತಿ ಸಂಸ್ಥೆ ನಗರದ ಕನ್ನಿಂಗ್‌ಹ್ಯಾಮ್ ರಸ್ತೆಯ ರಿನೈಸಾನ್ಸ್ ಗ್ಯಾಲರಿಯಲ್ಲಿ ಆಯೋಜಿಸಿರುವ ಪ್ರದರ್ಶನವು ಫೆಬ್ರುವರಿ 4ರವರೆಗೆ ನಡೆಯಲಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry