ಶುಕ್ರವಾರ, ಜೂನ್ 18, 2021
23 °C

ಬೆರಗು ಮೂಡಿಸಿದ ಮತ್ಸ್ಯಾವತಾರ!

ವಿನಾಯಕ ಭಟ್/ ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಗೋಲ್ಡ್ ಫಿಶ್‌ಗಳ ಚಿನ್ನಾಟ, ಮಿನುಗುವ ಗೋಲ್ಡನ್ ಸೆವರನ್; ಗತ್ತಿನಲ್ಲಿ ಈಜಾಡುವ ಲಯನ್ ಫಿಶ್ ಹಾಗೂ ಟೈಗರ್ ಬಾರ್ಬ್ ಮೀನುಗಳು ಕಣ್ಮನಗಳಿಗೆ ಮುದ ನೀಡಿದರೆ, ಅಲ್ಲೇ ಪಕ್ಕದಿಂದ ತೇಲಿ ಬರುವ ಬಗೆ ಬಗೆಯ ಮೀನುಗಳ ಖಾದ್ಯಗಳ ಸುಗಂಧ ಬಾಯಲ್ಲಿ ನೀರೂರಿಸುತ್ತದೆ!ಮೀನುಗಾರಿಕೆ ಇಲಾಖೆ ಹಾಗೂ ಜಿಲ್ಲಾ ಪಂಚಾಯಿತಿ ಆಶ್ರಯದಲ್ಲಿ ಕುಮಾರ ಗಂಧರ್ವ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಮೂರು ದಿನಗಳ ಬೆಳಗಾವಿ ವಿಭಾಗ ಮಟ್ಟದ `ಮತ್ಸ್ಯ ಮೇಳ 2012~ಕ್ಕೆ ಭೇಟಿ ನೀಡಿದರೆ `ಮತ್ಸ್ಯಾವತಾರ ದರ್ಶನ~ವಾಗುತ್ತದೆ. ನೂರಕ್ಕೂ ಹೆಚ್ಚು ಬಗೆ ಬಗೆಯ ಅಲಂಕಾರಿಕ ಮೀನುಗಳ ದರ್ಶನ ಪಡೆದು, ಹತ್ತಕ್ಕೂ ಹೆಚ್ಚು ಬಗೆಯ ಮೀನುಗಳ ಆಹಾರದ ರುಚಿಯನ್ನು ಸವಿಯಬಹುದು.ಮೇಳಕ್ಕೆ ಭೇಟಿ ನೀಡಿದರೆ ನಾವು ಇದುವರೆಗೆ ಕಾಣದ ಹಲವು ವೈವಿಧ್ಯಮಯ ಅಲಂಕಾರಿಕ ಮೀನುಗಳನ್ನು ನೋಡಬಹುದು. ಸಿಲ್ವರ್ ಶಾರ್ಕ್, ರೆಡ್ ಟೈಲ್ ಶಾರ್ಕ್, ಶುಬಮಕಿನ್ ಗೋಲ್ಡ್, ಬ್ಲ್ಯಾಕ್ ಮೂರ್  ಗೋಲ್ಡ್, ಕಾಲಿಕೊ ಗೊಲ್ಡ್, ಲಯನ್ ಹೆಡ್ ಗೋಲ್ಡ್, ಟೈಗರ್ ಬಾರ್ಬ್, ಫೈರ್ ಮೌಥ್ ಕಿಚ್ಲಿಡ್, ಥ್ರೀ ಸ್ಪಾಟ್ ಗೌರಮಿ, ರೆಡ್ ಕ್ಯಾಪ್ ಫಿಶ್, ಮಿಲ್ಕ್ ವೈಟ್ ಕೊಯಿ ಕಾರ್ಪ್... ಹೀಗೆ ಹಲವು ಅಲಂಕಾರಿಕ ಮೀನುಗಳನ್ನು ಕಂಡಾಗ, ಅವುಗಳು ಬಹುಕಾಲದವರೆಗೆ ಮನದ ಮೂಲೆಯಲ್ಲಿ ಈಜಾಡುತ್ತಿರುತ್ತವೆ!ಇಲ್ಲಿ ಮಾರಾಟಕ್ಕೆ ಬಂದಿರುವ ವಾಸ್ತು ಮೀನುಗಳಾದ ಫ್ಲಾವರ್ ಹಾರ್ನ್ ಒಂದು ಮೀನಿಗೆ 10 ಸಾವಿರ ರೂಪಾಯಿ! ಅರೊವನಾ ಮೀನಿನ ಒಂದು ಮರಿಗೆ 40 ಸಾವಿರ ರೂಪಾಯಿ. ಸಮುದ್ರ ನೀರಿನಲ್ಲಿ ಬದುಕುವ ಲಯನ್ ಫಿಶ್ ಮರಿಗೆ 2 ಸಾವಿರ ರೂಪಾಯಿ. ಅದೇ ರೀತಿ ಎಲಿಗೇಟರ್ ಜೋಡಿ ಮೀನಿನ ಮರಿಗೆ ರೂ. 2 ಸಾವಿರ, ರೆಡ್ ಕ್ಯಾಪ್ ವರಾಂಡ ಜೋಡಿ ಮೀನಿನ ಮರಿಗೆ ರೂ. 1800 ಇದೆ. ಹೀಗೆ ಹಲವು ಬಗೆಯ ಅಲಂಕಾರಿಕ ಮೀನುಗಳು ಮಾರಾಟಕ್ಕೆ ಲಭ್ಯವಿದೆ. ವಿಶೇಷ ಆಕರ್ಷಣೆಯಾಗಿ ಮಲೇಷಿಯಾದ ಹಸಿರು ಆಮೆ ಮರಿಯೂ ಒಂದಕ್ಕೆ 230 ರೂಪಾಯಿಯಂತೆ ಮಾರಾಟಕ್ಕೆ ಇಡಲಾಗಿದೆ.“ಅಬ್ಬಬ್ಬಾ! ಇಷ್ಟೊಂದು ಬಗೆಯ ಮೀನುಗಳಿವೆ ಎಂಬುದೇ ತಿಳಿದಿರಲಿಲ್ಲ. ಒಂದಕ್ಕಿಂತ ಒಂದು ಸುಂದರವಾಗಿದೆ. ಇಂಥ ಮೇಳಗಳನ್ನು ಏರ್ಪಡಿಸುವುದರಿಂದ ಮತ್ಸ್ಯೋದ್ಯಮದತ್ತವೂ ಹಲವು ಜನರು ಒಲವು ಮೂಡಿಸಿಕೊಳ್ಳಲು ಅನುಕೂಲವಾಗುತ್ತದೆ” ಎನ್ನುತ್ತಾರೆ ಪ್ರದರ್ಶನ ವೀಕ್ಷಿಸಲು ಬಂದಿದ್ದ ವಿನೋದ ಪಾಟೀಲ.“ಇಂದು ವಾಸ್ತು ಮೀನುಗಳನ್ನು ಬೆಳೆಸುವ `ಟ್ರೆಂಡ್~ ಹೆಚ್ಚಾಗುತ್ತಿದೆ. ಗೋಲ್ಡ್ ಫಿಶ್, ವಾಸ್ತು ಫಿಶ್, ಅರೊವನಾ ಮೀನುಗಳಿಗೆ ಹೆಚ್ಚೆಚ್ಚು ಬೇಡಿಕೆ ಬರುತ್ತಿದೆ. ಮನೆಯಲ್ಲಿ ಹೆಚ್ಚು ಜಾಗ ಇರುವವರು ಪ್ಲೆಂಟೇಶನ್ ಟ್ಯಾಂಕ್‌ಗಳಲ್ಲಿ ಟೆಟ್ರಾ ಫಿಶ್‌ಗಳನ್ನು ಬೆಳೆಸಲು ಇಷ್ಟಪಡುತ್ತಾರೆ. ಜಗತ್ತಿನಲ್ಲಿ ಇಂದು ಮೀನು ಬೆಳೆಸುವ ಹವ್ಯಾಸ ಎರಡನೇ ಸ್ಥಾನಕ್ಕೆ ತಲುಪಿದ್ದು, ಅಲಂಕಾರಿಕಾ ಮೀನುಗಾರಿಕೆ ಕೈಗೊಳ್ಳುವವರಿಗೆ ಉತ್ತಮ ಭವಿಷ್ಯವಿದೆ” ಎಂದು ಬೆಳಗಾವಿಯ ಏಂಜಲ್ ಅಕ್ವೇರಿಯಂನ ಸಚಿನ್ ಚಿಕೊರ್ಡೆ `ಪ್ರಜಾವಾಣಿ~ಗೆ ತಿಳಿಸಿದರು.ಮಾಹಿತಿ ಕಣಜ

ಮತ್ಸ್ಯ ಮೇಳದಲ್ಲಿ ಮೀನುಗಾರಿಕೆ ಬಗೆಗಿನ ಮಾಹಿತಿ ಕಣಜವನ್ನೇ ಇಡಲಾಗಿದೆ. ನಿತ್ಯ ಭೇಟಿ ನೀಡುವ ಸಾರ್ವಜನಿಕರಿಗೆ, ರೈತರಿಗೆ ಇಲಾಖೆಯ ಅಧಿಕಾರಿಗಳು ಹಾಗೂ ಮೀನುಗಾರಿಕೆ ಸಂಘದವರು ಹಲವು ಮಾಹಿತಿಗಳನ್ನು ನೀಡುತ್ತಿದ್ದಾರೆ. ಇಲಾಖೆಯ ಮಳಿಗೆಯಲ್ಲಿ ಮೀನುಗಾರಿಕೆ ಕೈಗೊಳ್ಳುವವರಿಗೆ ಸರ್ಕಾರ ನೀಡುವ ಹಲವು ಸೌಲಭ್ಯಗಳ ಬಗ್ಗೆ ಮಾಹಿತಿಗಳನ್ನು ಪ್ರದರ್ಶಿಸಲಾಗಿದೆ. ಮಳಿಗೆಗೆ ಭೇಟಿ ನೀಡಿದ ರೈತರು, ಸರ್ಕಾರದ ಹಲವು ಸಬ್ಸಿಡಿ ಸೌಲಭ್ಯಗಳನ್ನು ಕಂಡು ತಮ್ಮ ಹೊಲದ ಕೆರೆಯಲ್ಲೂ ಮೀನುಗಾರಿಕೆ ಕೈಗೊಳ್ಳಬಹುದಲ್ಲ ಎಂದು ಲೆಕ್ಕ ಹಾಕುತ್ತಿದ್ದಾರೆ. ಮೀನುಗಾರಿಕೆ ಕಸುಬನ್ನು ವಿವರಿಸುವ ಸಾಕ್ಷ್ಯಚಿತ್ರಗಳನ್ನು ಪ್ರದರ್ಶಿಸಲಾಯಿತು.ರುಚಿಕರ ಖಾದ್ಯ

ಮೇಳದಲ್ಲಿ ಬಗೆ ಬಗೆಯ ಮೀನುಗಳ ರುಚಿಯನ್ನೂ ಸವಿಯಲು ಅವಕಾಶ ಕಲ್ಪಿಸಲಾಗಿದೆ. ಹೋಟೆಲ್ ಈಫಾ ತಂಡದವರು ಸುರ್ಮಾಯಿ ಫ್ರೈ, ಪಾಂಪ್ಲೆಟ್ ಫ್ರೈ, ಲೇಡಿ ಫಿಶ್ ರವಾ ಫ್ರೈ, ಬಂಗಡಾ ರವಾ ಫ್ರೈ ಹಾಗೂ ಪಾಂಲ್ಪೆಟ್ ಕರಿ, ಕಟ್ಲಾ ಫಿಶ್ ಕರಿ, ರೊಹು ಫಿಶ್ ಕರಿ ಸೇರಿದಂತೆ ಹಲವು ಬಗೆಯ ಮೀನುಗಳ ಖಾದ್ಯಗಳನ್ನು ರುಚಿ ರುಚಿಯಾಗಿ ಸಿದ್ಧಪಡಿಸಿಕೊಡುತ್ತಿದ್ದಾರೆ.ಸೋಮವಾರ `ಮತ್ಸ್ಯ ಮೇಳ~ ಕೊನೆಗೊಳ್ಳಲಿದ್ದು, ನೀವೂ ಭೇಟಿ ನೀಡಿ ಆಕರ್ಷಕ ಅಲಂಕಾರಿಕ ಮೀನುಗಳ ಸೌಂದರ್ಯಗಳನ್ನು ಕಣ್ತುಂಬಿಕೊಂಡು, ಮೀನುಗಳ ಖಾದ್ಯಗಳ ರುಚಿಯನ್ನು ಸವಿದು ಬರಬಹುದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.