ಬೆಲೆಯೂ ಇಲ್ಲ: ಮಾರುಕಟ್ಟೆಯೂ ಇಲ್ಲ!

7

ಬೆಲೆಯೂ ಇಲ್ಲ: ಮಾರುಕಟ್ಟೆಯೂ ಇಲ್ಲ!

Published:
Updated:

ಯಾದಗಿರಿ: ಜಿಲ್ಲೆಯಲ್ಲಿ ಎರಡು ನದಿಗಳು ಹರಿದಿರುವುದರಿಂದ ಸಹಜವಾಗಿಯೇ ರೈತರ ಆರ್ಥಿಕ ಸ್ಥಿತಿ ಉತ್ತಮವಾಗಿರಬಹುದು ಎಂಬ ನಿರೀಕ್ಷೆ ರಾಜ್ಯದ ಜನರಲ್ಲಿದೆ. ಆದರೆ ಇದು ಅಕ್ಷರಶಃ ತಪ್ಪು. ಎರಡು ನದಿಗಳು ಹರಿದಿದ್ದರೂ, ರೈತರು ಸಾಕಷ್ಟು ದುಡಿಮೆ ಮಾಡಿದರೂ, ಅನ್ನದಾತನ ಅಳಲು ಮಾತ್ರ ಮುಗಿಯುತ್ತಿಲ್ಲ.ಜಿಲ್ಲೆಯ ಕೃಷ್ಣಾ ಹಾಗೂ ಭೀಮಾ ನದಿ ತೀರದ ಪ್ರದೇಶಗಳ ರೈತರು ಸಾವಿರಾರು ಎಕರೆಗಳಲ್ಲಿ ಬತ್ತ ಬೆಳೆದಿದ್ದಾರೆ. ಬತ್ತಕ್ಕೆ ಸೂಕ್ತ ಬೆಲೆ ಇಲ್ಲದೇ ಇದೀಗ ಕಂಗಾಲಾಗಿದ್ದಾರೆ. ರೈತರು ಸೋನಾ, ಡಬಲ್ 55 ನಂ. ಹೀಗೆ ನಾನಾ ತಳಿಗಳ ಬತ್ತವನ್ನು ಬೆಳೆದಿದ್ದಾರೆ. ಬತ್ತ ಬೆಳೆಯಲು ರಾತ್ರಿ-ಹಗಲು ಎನ್ನದೇ ಹೊಲಗಳಲ್ಲಿ ಇದ್ದು ಸಾಕಷ್ಟು ಶ್ರಮ ವಹಿಸಿದ್ದಾರೆ. ಅಲ್ಲದೇ ದುಬಾರಿ ಬೆಲೆಯ ಕೀಟನಾಶಕ, ರಸಗೊಬ್ಬರ, ದುಪ್ಪಟ್ಟು ಹಣ ನೀಡಿ ಕೃಷಿ ಕೂಲಿಕಾರರನ್ನು ಕೆಲಸಕ್ಕೆ ಹೆಚ್ಚಿದ್ದಾರೆ. ಇದೀಗ ಬೆಲೆಯೇ ಇಲ್ಲದಂತಾಗಿರುವುದು ರೈತರಿಗೆ ಹಾಕಿರುವ ಹಣವೂ ಮರಳಿ ಬರದಂತಾಗಿದೆ. ಮಾಡಿದ ಸಾಲ ತೀರಿಸುವುದು ಹೇಗೆ ಎನ್ನುವ ಚಿಂತೆ ರೈತರನ್ನು ಆವರಿಸುತ್ತಿದೆ.ಮೊದಲೇ ಬರದಿಂದ ತತ್ತರಿಸಿರುವ ರೈತರು ಈಗ ಬೆಳೆದ ಬೆಳೆಗೆ ಸೂಕ್ತ ಬೆಲೆ ಇಲ್ಲದಿರುವುದರಿಂದ ಗಾಯದ ಮೇಲೆ ಬರೆ ಎಳೆದಂತಾಗಿದೆ. ರೈತರ ಪರಿಸ್ಥಿತಿ ಕೇಳುವವರ‌್ಯಾರು ಇಲ್ಲದಂತಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಏನ್ ಮಾಡಾಕ ಆಕ್ಕೇತಿ. ನಾವು ನೋಡ್ರಿ ವರ್ಷ ಪೂರ್ತಿ ಎಕರೆಕ 30-40 ಸಾವಿರ ರೊಕ್ಕಾ ಹಾಕೇವಿ. ಈಗ ನೋಡಿದ್ರ ರೇಟ್ ಇಲ್ಲ. ಹೀಂಗಾದ್ರ ನಮ್ಮ ಗೋಳ ಕೇಳಾವ್ರ ಯಾರರಿ. ಮೈಮೂರೆ ದುಡದ್ರು, ಕಿಸೆ ಹರಕೊಂಡ ಓಡಾಡು ಹಂಗ ಆಗೇತಿ” ಎಂದು ರೈತ ಶರಣಪ್ಪ ತಮ್ಮ ಅಳಲು ತೋಡಿಕೊಳ್ಳುತ್ತಾರೆ.ರಾಜಕೀಯ ಮುಖಂಡರು ಅಧಿಕಾರಕ್ಕಾಗಿ ನಿತ್ಯ ಕಚ್ಚಾಟ, ಬಿಜೆಪಿ, ಕೆಜೆಪಿ ಹೀಗೆ ವರ್ಷಕ್ಕೊಮ್ಮೆ ಪ್ರಾದೇಶಿಕ ಪಕ್ಷಗಳ ಉದಯ, ರಾಜಕೀಯ ನಾಯಕರು ಅವರ ಮೇಲೆ ಇವರು, ಇವರು ಅವರ ಮೇಲೆ ಆರೋಪ, ಪ್ರತ್ಯಾರೋಪ, ಕೆಸರೆರಚಾಟಗಳಲ್ಲಿ ನಿರತರಾಗಿದ್ದು, ಅನ್ನದಾತನ ಅಳಲು ಕೇಳದಂತಾಗಿದೆ ಎಂದು ದೂರುತ್ತಾರೆ.

ಬತ್ತಕ್ಕೆ ರೂ. 2500 ಬೆಲೆ ನಿಗದಿ ಮಾಡಬೇಕು. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಆಹಾರ ಕೊರತೆ ಎದುರಿಸಬೇಕಾದೀತು. ರೈತರ ಬೆಳೆದ ಬತ್ತಕ್ಕೆ ಖರೀದಿ ಕೇಂದ್ರಗಳನ್ನು ಆರಂಭಿಸಬೇಕು ಎಂಬುದು ರೈತರ ಆಗ್ರಹವಾಗಿದೆ.ಬತ್ತದ ಖರೀದಿ ಕೇಂದ್ರವೂ ಜಿಲ್ಲೆಯಲ್ಲಿ ಇಲ್ಲದೇ ಇರುವುದರಿಂದ ರೈತರು ದೂರದ ರಾಯಚೂರಿಗೆ ಹೋಗಿ ಬತ್ತ ಮಾರಾಟ ಮಾಡುವಂತಾಗಿದೆ. ಇದರಿಂದ ರೈತರಿಗೆ ಇನ್ನಷ್ಟು ಹೊರೆ ಬೀಳುವಂತಾಗಿದೆ. ಕೂಡಲೇ ರೈತರ ಬಗ್ಗೆ ಗಮನ ಹರಿಸಬೇಕು ಎಂದು   ಒತ್ತಾಯಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry