ಬೆಲೆ ಏರಿಕೆ ವಿರೋಧಿಸಿ ವಿವಿಧೆಡೆ ಪ್ರತಿಭಟನೆ

7

ಬೆಲೆ ಏರಿಕೆ ವಿರೋಧಿಸಿ ವಿವಿಧೆಡೆ ಪ್ರತಿಭಟನೆ

Published:
Updated:

ಬೀದರ್: ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲ ಬೆಲೆ ಹೆಚ್ಚಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ವಿರೋಧಿಸಿ ಬಿಜೆಪಿ ಬೀದರ್ ಹಾಗೂ ಬೀದರ್ ದಕ್ಷಿಣ ಘಟಕದಿಂದ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.ಜಿಲ್ಲಾ ಬಿಜೆಪಿ ಕಚೇರಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ರ್‍ಯಾಲಿ ನಡೆಸಿ ಮನವಿ ಪತ್ರ ಸಲ್ಲಿಸಲಾಯಿತು.

ಯುಪಿಎ ಸರ್ಕಾರ ಕಳೆದ ಎರಡು ತಿಂಗಳಲ್ಲಿ ಆರು ಬಾರಿ ಪೆಟ್ರೋಲ್ ಬೆಲೆಯನ್ನು ಹೆಚ್ಚಿಸಿದೆ. ಡೀಸೆಲ್ ಬೆಲೆಯನ್ನು ಜನವರಿಯಿಂದ ಈವರೆಗೆ ಎಂಟು ಬಾರಿ ಏರಿಸಿದೆ. ಎಂಟು ತಿಂಗಳ ಅವಧಿಯಲ್ಲಿ ಅಡುಗೆ ಅನಿಲದ ಬೆಲೆಯನ್ನು 100 ರೂಪಾಯಿಯಷ್ಟು ಹೆಚ್ಚಳ ಮಾಡಿದೆ.

ತೈಲ ಬೆಲೆ ಏರಿಕೆಯಿಂದಾಗಿ ಅಗತ್ಯ ವಸ್ತುಗಳ ಬೆಲೆಯಲ್ಲಿ ಹೆಚ್ಚಳವಾಗಿದ್ದು, ಮಧ್ಯಮ ವರ್ಗದವರು ಜೀವನ ನಡೆಸುವುದು ಕಷ್ಟಕರವಾಗಿದೆ ಎಂದು ರಾಜ್ಯಪಾಲರಿಗೆ ಬರೆದ ಮನವಿ ಪತ್ರದಲ್ಲಿ ಆಪಾದಿಸಿದ್ದಾರೆ.ಕೇಂದ್ರದ ಅಸಮರ್ಪಕ ಆರ್ಥಿಕ ನೀತಿಗಳಿಂದಾಗಿ ಡಾಲರ್ ಎದುರು ರೂಪಾಯಿ ಅಪಮೌಲ್ಯಕ್ಕೀಡಾಗಿದೆ. ಆದರೂ, ರೂಪಾಯಿ ಮೌಲ್ಯ ಕುಸಿತ ತಡೆಯುವಲ್ಲಿ ಸರ್ಕಾರ ವಿಫಲವಾಗಿದೆ. ಆರ್ಥಿಕ ತಜ್ಞರಾಗಿರುವ ಪ್ರಧಾನಿ ಮನಮೋಹನ್‌ಸಿಂಗ್ ಹಾಗೂ ಹಣಕಾಸು ಸಚಿವ ಪಿ. ಚಿದಂಬರಂ ದೇಶದ ಆರ್ಥಿಕ ವ್ಯವಸ್ಥೆಯ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಆರೋಪಿಸಿದ್ದಾರೆ.ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲ ಬೆಲೆ ಏರಿಕೆ ನಿರ್ಧಾರವನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದ್ದಾರೆ.

ವಿಧಾನ ಪರಿಷತ್ ಸದಸ್ಯ ರಘುನಾಥರಾವ್ ಮಲ್ಕಾಪುರೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾಬುವಾಲಿ, ಬಿಜೆಪಿ ನಗರ ಹಾಗೂ ಗ್ರಾಮಾಂತರ ಘಟಕದ ಅಧ್ಯಕ್ಷ ಮಹೇಶ್ ಪಾಲಂ, ಬೀದರ್ ದಕ್ಷಿಣ ಕ್ಷೇತ್ರ ಅಧ್ಯಕ್ಷ ಮಲ್ಲಿಕಾರ್ಜುನ ಎಂ. ಪಾಟೀಲ್, ಪ್ರಮುಖರಾದ ಶಾಂತಪ್ಪ ಜಿ. ಪಾಟೀಲ್, ಉಪೇಂದ್ರ ದೇಶಪಾಂಡೆ, ಬಸವರಾಜ ಪವಾರ್, ಶಶಿಧರ ಹೊಸಳ್ಳಿ, ರವಿ ಸ್ವಾಮಿ, ಶಾಂತಕುಮಾರ್ ಪನಸಾಲೆ, ರಾಜಕುಮಾರ್ ಚಿದ್ರಿ ಮತ್ತಿತರರು ಪಾಲ್ಗೊಂಡಿದ್ದರು.ಔರಾದ್ ವರದಿ: ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಬಿಜೆಪಿ ಕಾರ್ಯಕರ್ತರು ಸೋಮವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.ಶಾಸಕ ಪ್ರಭು ಚವ್ಹಾಣ್, ಬಿಜೆಪಿ ತಾಲ್ಲೂಕು ಅಧ್ಯಕ್ಷ ಪ್ರಕಾಶ ಅಲ್ಮಾಜೆ, ಜಿಲ್ಲಾ ಉಪಾಧ್ಯಕ್ಷ ಭಗವಾನ ಖೂಬಾ, ಜಿಲ್ಲಾ ಸ್ಲಂ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶ್ರೀರಂಗ ಪರಿಹಾರ ನೇತೃತ್ವದಲ್ಲಿ ಪಟ್ಟಣದ ಕನ್ನಡಾಂಬೆ ವೃತ್ತದಿಂದ ಬಸ್ ನಿಲ್ದಾಣ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಅಲ್ಲಿ ಸಮಾವೇಶಗೊಂಡರು.ಈ ವೇಳೆ ಮಾತನಾಡಿದ ಅನಿಲ ವಾಡೆಕರ್, ಕೇಂದ್ರ ಯುಪಿಎ ಸರ್ಕಾರದ ಅಸಮರ್ಪಕ ಆರ್ಥಿಕ ನೀತಿಯಿಂದ ಡಾಲರ್ ಎದುರು ರೂಪಾಯಿ ಮೌಲ್ಯ ಕಳೆದುಕೊಳ್ಳುತ್ತಿದೆ.ಇದರಿಂದ ಜಗತ್ತಿನ ಎದುರು ಭಾರತ ತಲೆ ತಗ್ಗಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.ಶಾಸಕ ಪ್ರಭು ಚವ್ಹಾಣ್ ಮಾತನಾಡಿ, ಕಳೆದ ಎರಡು ತಿಂಗಳಲ್ಲಿ ಆರು ಬಾರಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಸುವ ಮೂಲಕ ಕೇಂದ್ರ ಸರ್ಕಾರ ಮಧ್ಯಮ ವರ್ಗದವರ ಬದುಕು ದುಸ್ತರವಾಗಿ ಮಾಡಿದೆ. ಸರ್ಕಾರ ಪೆಟ್ರೋಲಿಯಂ ಕಂಪನಿಗಳಿಗೆ ಅನುಕೂಲಮಾಡಿಕೊಟ್ಟು ದೇಶದ ಜನರ ಮೇಲೆ ಬರೆ ಎಳೆಯುತ್ತಿದೆ ಎಂದು ದೂರಿದರು.ಕೂಡಲೇ ಈ ಸರ್ಕಾರ ಅಧಿಕಾರದಿಂದ ಕೆಳಗಿಳಿದು ನರೇಂದ್ರ ಮೋದಿ ಪ್ರಧಾನಿಯಾದರೆ ಮಾತ್ರ ದೇಶದಲ್ಲಿ ಜನಪರ ಅಡಳಿತ ಬರಲು  ಸಾಧ್ಯ ಎಂದು ಬಿಜೆಪಿ ಧುರೀಣ ಅನಿಲ ಹೊಳಸಮುದ್ರ ಹೇಳಿದರು.ಇದೇ ವೇಳೆ ಕೇಂದ್ರದ ಜನವಿರೋಧಿ ನೀತಿಗೆ ಕಡಿವಾಣ ಹಾಕುವಂತೆ ರಾಷ್ಟ್ರಪತಿ ಹೆಸರಿಗೆ ಬರೆದ ಮನವಿಪತ್ರ ತಹಸೀಲ್ದಾರ್ ವೆಂಕಣ್ಣ ಅವರಿಗೆ ನೀಡಿದರು.ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಕಿರಣ ಪಾಟೀಲ, ರೈತ ಮೋರ್ಚಾ ಅಧ್ಯಕ್ಷ ರಮೇಶ ಪಾಟೀಲ, ಶೇಷಾರಾವ ಕೊಳಿ, ಚನ್ನಬಸಪ್ಪ ಬಿರಾದಾರ, ಬಸವರಾಜ ಪಾಟೀಲ, ದಯಾನಂದ ಹಳ್ಳಿಖೇಡೆ ಸೇರಿದಂತೆ ಪಕ್ಷದ ಪದಾಧಿಕಾರಿಗಳು ಕಾರ್ಯಕರ್ತರು ಪಾಲ್ಗೊಂಡರು.ಹುಮನಾಬಾದ್ ವರದಿ: ಕೇಂದ್ರದ ಯುಪಿಎ ಸರ್ಕಾರದ ಬೆಲೆ ಏರಿಕೆ ನೀತಿ ಖಂಡಿಸಿ, ತಾಲ್ಲೂಕು ಬಿಜೆಪಿ ಘಟಕದ ವತಿಯಿಂದ ಸೋಮವಾರ ಬೃಹತ್ ಪ್ರತಿಭಟನಾ ರ‌್ಯಾಲಿ ನಡೆಸಿ, ತಹಶೀಲ್ದಾರ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು.ಜೂನ್ ತಿಂಗಳಿಂದ ಈವರೆಗೆ ಪೆಟ್ರೋಲ್ ಬೆಲೆಯಲ್ಲಿ ಏರಿಕೆಯಾಗಿದ್ದು, ವ್ಯಾಟ್ ಹೊರತುಪಡಿಸಿ, ಒಟ್ಟಾರೆ 9.7ರಷ್ಟು ಏರಿಕೆಯಾಗಿದೆ. ಈಗ ಮತ್ತೆ ಪ್ರತಿ ಲೀಟರ್ ಪೆಟ್ರೋಲ್‌ಗೆ ರೂ. 2.35, ಡಿಸೇಲ್‌ಗೆ 50ಪೈಸೆ ಹೆಚ್ಚಿಸಲಾಗಿದೆ.ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ರೂಪಾಯಿ ಮೌಲ್ಯ ಕುಸಿತದ ಕಾರಣ ಸೆಪ್ಟೆಂಬರ್ 6ರ ಅಧಿವೇಶನ ನಂತರ ಪೆಟ್ರೋಲ್, ಡಿಸೇಲ್ ಮತ್ತ ಎಲ್‌ಪಿಜಿ ಬೆಲೆ ಏರಿಕೆ ಮಾಡುವುದಕ್ಕೆ ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿರುವ ವಿಷಯ ಮಧ್ಯಮಗಳಿಂದ ತಿಳಿದುಬಂದಿದೆ.

ಇದು ಕೇಂದ್ರ ಆಡಳಿತದ ವೈಫಲ್ಯ ಹಾಗೂ ದಿವಾಳಿತನ ಸೂಚಿಸುತ್ತದೆ. ಆಡಳಿತ ನಡೆಸುವಲ್ಲಿ ಸಂಪೂರ್ಣ ವಿಫಲವಾಗಿರುವ ಕೇಂದ್ರ ಸರ್ಕರವನ್ನು ವಜಾಗೊಳಿಸಿಬೇಕು. ಬೆಲೆ ಏರಿಕೆ ಹಿಂದಕ್ಕೆ ಪಡೆಯಬೇಕು ಎಂದು ರಾಷ್ಟ್ರಪತಿ ಅವರಿಗೆ ಬರೆದ ಖಂಡನಾ ಪತ್ರದಲ್ಲಿ ತಿಳಿಸಲಾಗಿದೆ.ಪಕ್ಷದ ರಾಜ್ಯ ಘಟಕದ ಮುಖಂಡ ಬಸವರಾಜ ಆರ್ಯ, ಪಕ್ಷದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಶಿವಾನಂದ ಮಂಠಾಳಕರ್ ಎಸ್.ಟಿ ಮೋರ್ಚಾ ಪ್ರಮುಖ ನಾರಾಯಣ ರಾಂಪೂರೆ ಕೇಂದ್ರದ ಯುಪಿಎ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷ ಸೂರ್ಯಕಾಂತ ಮಠಪತಿ, ಕಾರ್ಯದರ್ಶಿ ಅಣ್ಣಾರಾವ ಪುರುಷೋತ್ತಮ, ಮಲ್ಲಿಕಾರ್ಜುನ ಕುಂಬಾರ, ಝರೆಪ್ಪ ಮಣಗಿರೆ, ಶಿವಪುತ್ರ ಸ್ವಾಮಿ, ಸಂಜೀವರೆಡ್ಡಿ ಸೇಡೋಳ, ಅನೀಲ ಜೋಷಿ ಚಿಟಗುಪ್ಪ ಮತ್ತಿತರರು ಇದ್ದರು.ಬಸವಕಲ್ಯಾಣ ವರದಿ: ಬಸವಕಲ್ಯಾಣ: ತೈಲ ಬೆಲೆ ಏರಿಕೆ ಖಂಡಿಸಿ ಬಿಜೆಪಿ ತಾಲ್ಲೂಕು ಘಟಕದಿಂದ ಸೋಮವಾರ ಇಲ್ಲಿ ಬೈಕ್ ರ್‍ಯಾಲಿ ನಡೆಸಿ ತಹಸೀಲ್ದಾರರಿಗೆ ಮನವಿ ಪತ್ರ ಸಲ್ಲಿಸಲಾಯಿತು.ಪಕ್ಷದ ಜಿಲ್ಲಾ ಮುಖಂಡರಾದ ಸಂಜಯ ಪಟವಾರಿ, ವಿಜಯಲಕ್ಷ್ಮಿ ಹೂಗಾರ, ಸುಧೀರ ಕಾಡಾದಿ, ತಾಲ್ಲೂಕು ಅಧ್ಯಕ್ಷ ಸೂರ್ಯಕಾಂತ ಚಿಲ್ಲಾಬಟ್ಟೆ ಮಾತನಾಡಿ ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿಗೆ ತೀವ್ರ ವಿರೋಧ ವ್ಯಕ್ತಪಡಿಸಿದರು.ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಶಂಕರ ನಾಗದೆ ಮನವಿ ಪತ್ರ ಓದಿದರು. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಲತಾ ಹಾರಕೂಡೆ, ನಗರ ಘಟಕದ ಅಧ್ಯಕ್ಷ ಅರವಿಂದ ಮುತ್ತೆ, ದೀಪಕ ಗಾಯಕವಾಡ, ಮಹಾದೇವ ಹಲಸೆ, ಜೀವನಪ್ರಕಾಶ ಬಡದಾಳೆ, ರಮೇಶ ಕಾಂಬಳೆ, ಶಾಂತಕುಮಾರ ಹಾರಕೂಡೆ, ಮಹಾದೇವ ಪೂಜಾರಿ ಹಾರಕೂಡ, ಕಲ್ಯಾಣರಾವ ಮುಡಬೆ, ಬಾಲಾಜಿ ಅದೆಪ್ಪ ಮುಂತಾದವರು ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry