ಬೆಲೆ ಕುಸಿತ: ಬೆಂಬಲ ಬೆಲೆಗಾಗಿ ರಸ್ತೆತಡೆ

ಶುಕ್ರವಾರ, ಜೂಲೈ 19, 2019
24 °C

ಬೆಲೆ ಕುಸಿತ: ಬೆಂಬಲ ಬೆಲೆಗಾಗಿ ರಸ್ತೆತಡೆ

Published:
Updated:

ಶ್ರೀನಿವಾಸಪುರ: ಪಟ್ಟಣದ ಹೊರ ವಲಯದಲ್ಲಿನ ಎಪಿಎಂಸಿ ಮಾರುಕಟ್ಟೆ ಸಮೀಪ ಮಾವಿನ ಕಾಯಿಗೆ ಬೆಂಬಲ ಬೆಲೆ ನೀಡುವಂತೆ ಒತ್ತಾಯಿಸಿ ಮಾವು ಬೆಳೆಗಾರರು ರಸ್ತೆತಡೆ ನಡೆಸಿದರು. ಇದರಿಂದ ಶ್ರೀನಿವಾಸಪುರ-ಚಿಂತಾಮಣಿ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿತ್ತು.ಬುಧವಾರ ಮಧ್ಯಾಹ್ನ ಎಪಿಎಂಸಿ ಮಾರುಕಟ್ಟೆಗೆ ಮಾವಿನ ಕಾಯಿ ತೆಗೆದುಕೊಂಡು ಹೋದ ರೈತರು ತೀವ್ರ ಬೆಲೆ ಕುಸಿತ ವಿರೋಧಿಸಿ ಪ್ರತಿಭಟಿಸಿದರು. ಸ್ವಲ್ಪ ಹೊತ್ತಿನಲ್ಲೇ ರೈತರ ಸಂಖ್ಯೆ ಬೆಳೆಯಿತು. ನೂರಾರು ರೈತರು ಎಪಿಎಂಸಿ ಪ್ರಾಂಗಣದಿಂದ ರಸ್ತೆಯತ್ತ ಸಾಗಿ ಬಂದು ರಸ್ತೆತಡೆ ನಡೆಸಿದರು. ರಸ್ತೆ ಮಧ್ಯೆ ಟೈರು ಸುಟ್ಟ ಪರಿಣಾಮ ಯಾವುದೇ ವಾಹನ ಸಂಚರಿಸಲು ಸಾಧ್ಯವಾಗಲಿಲ್ಲ.ರೈತರು ಮಾರುಕಟ್ಟೆಗೆ ತಂದ ಮಾವಿನ ಕಾಯಿಯನ್ನು ರಸ್ತೆಯಲ್ಲಿ ಸುರಿದು ಆಕ್ರೋಶ ವ್ಯಕ್ತಪಡಿಸಿದರು.ಸರ್ಕಾರ ತಕ್ಷಣ ಬೆಂಬಲ ಬೆಲೆ ಕೊಡಬೇಕು ಎಂದು ಘೋಷಣೆ ಕೂಗಿದರು. ಉದ್ರಿಕ್ತ ರೈತರನ್ನು ಸಮಾಧಾನ ಪಡಿಸಲು ಪೊಲೀಸರು ಹೆಣಗಾಡಬೇಕಾಯಿತು.ಜಿ.ಪಂ.ಉಪಾಧ್ಯಕ್ಷ ಜಿ.ಸೋಮಶೇಖರ್ ಮಾತನಾಡಿ, ತಾಲ್ಲೂಕಿನ ಜನರ ಜೀವಾಳವಾದ ಮಾವಿನ ಬೆಲೆ ಕುಸಿತದಿಂದ ಬೆಳೆಗಾರರು ಕಂಗಾಲಾಗಿದ್ದಾರೆ. ಈಗ ಟನ್ನೊಂದಕ್ಕೆ ರೂ.1500ರಿಂದ ರೂ.3000ವರೆಗೆ ಖರೀದಿಸಲಾಗುತ್ತಿದೆ. ಈ ಬೆಲೆಯಲ್ಲಿ ಕಾಯಿ ಕಿತ್ತ ಕೂಲಿ ಮತ್ತು ಸಾಗಣೆ ವೆಚ್ಚವೂ ಬರುವುದಿಲ್ಲ. ಬೇಡಿಕೆ ಕುಸಿತದಿಂದ ಬೇಸತ್ತಿರುವ ಮಂಡಿ ಮಾಲೀಕರು ಅಗಾಧ ಪ್ರಮಾಣದ ಮಾವನ್ನು ಖರೀದಿಸಲು ನಿರಾಕರಿಸುತ್ತಿದ್ದಾರೆ ಎಂದು ಹೇಳಿದರು.ಸರ್ಕಾರ ಕೂಡಲೆ ಮಧ್ಯಪ್ರವೇಶಿಸಿ ಮಾವಿಗೆ ಲಾಭದಾಯಕ ಬೆಂಬಲ ಬೆಲೆ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದ ಅವರು, ಕಷ್ಟ ಕಾಲದಲ್ಲಿ ರೈತರ ಕೈ ಹಿಡಿಯಬೇಕು. ಇಲ್ಲವಾದರೆ ಪರಿಸ್ಥಿತಿ ಹದಗೆಡುತ್ತದೆ ಎಂದರು.ಕಳೆದ ವರ್ಷ ಮಾವಿಗೆ ಒಳ್ಳೆ ಬೆಲೆ ಬಂದಿದ್ದರಿಂದ ಪ್ರೇರಿತರಾಗಿ ತೋಟಗಳ ಮೇಲೆ ಫಸಲು ಖರೀದಿಸಿದ್ದ ವ್ಯಾಪಾರಿಗಳು ಬೆಲೆ ಕುಸಿತದ ಪರಿಣಾಮ ತಾವು ಮುಳುಗಿ ಹೋಗಿರುವುದಾಗಿ ತಿಳಿದರು.

 

ಸರ್ಕಾರ ಶೀಘ್ರವಾಗಿ ಬೆಂಬಲ ಬೆಲೆ ಘೋಷಿಸದಿದ್ದರೆ ಮಾವು ತೋಟಗಳಲ್ಲಿಯೇ ಕೊಳೆತು ಇನ್ನಷ್ಟು ನಷ್ಟ ಉಂಟಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.ತಮ್ಮ ಬೇಡಿಕೆ ಒಳಗೊಂಡ ಮನವಿ ಪತ್ರವನ್ನು ಕ್ಷೇತ್ರದ ಶಾಸಕರಿಗೆ ಸಲ್ಲಿಸಲು ನಿರ್ಧರಿಸಿದ ಪ್ರತಿಭಟನಕಾರರು ಸಂಜೆ ವೇಳೆಗೆ ರಸ್ತೆತಡೆ ತೆರವುಗೊಳಿಸಿದರು. ಆ ನಂತರ ರಸ್ತೆಯ ಎರಡೂ ಕಡೆ ಕೆಲವು ಕಿ.ಮೀ ದೂರ ನಿಂತಿದ್ದ ವಾಹನಗಳಿಗೆ ಚಾಲನೆ ದೊರೆಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry