ಬೆಲೆ ದುಬಾರಿ ಆದರೂ ಸಂಭ್ರಮದ ಗೌರಿ

7

ಬೆಲೆ ದುಬಾರಿ ಆದರೂ ಸಂಭ್ರಮದ ಗೌರಿ

Published:
Updated:
ಬೆಲೆ ದುಬಾರಿ ಆದರೂ ಸಂಭ್ರಮದ ಗೌರಿ

ಬೆಂಗಳೂರು: ಗೌರಿ-ಗಣೇಶ, ಈದ್ ಉಲ್ ಫಿತ್ರ್, ಸಂತ ಮೇರಿ ಉತ್ಸವ.. ಹೀಗೆ ವಿವಿಧ ಧರ್ಮಗಳ ಹಬ್ಬಗಳು ಜೊತೆ ಜೊತೆಯಲ್ಲಿಯೇ ಬಂದಿವೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದರೂ ಹಬ್ಬದ ಆಚರಣೆಗೆ ಮಾತ್ರ ಜನರ ಉತ್ಸಾಹ ಕುಗ್ಗಿಲ್ಲ.

 

ಬೆಲೆ ಏರಿಕೆಯ ಬಿಸಿ ನಡುವೆಯೂ ನಗರದ ವಿವಿಧೆಡೆಗಳ ಮಾರುಕಟ್ಟೆಯಲ್ಲಿ ಹಬ್ಬದ ಮುನ್ನಾ ದಿನವಾದ ಮಂಗಳವಾರ ಜನ ಹೂವು, ಹಣ್ಣು- ತರಕಾರಿ ಖರೀದಿಸಲು ಮುಗಿ ಬಿದ್ದರು. ಮಾರಾಟ ಭರಾಟೆ ಜೋರಾಗಿಯೇ ನಡೆದಿತ್ತು.ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಬಾರಿಯೂ ಗಣೇಶ ಮತ್ತು ಗೌರಿಯ ಮೂರ್ತಿಗಳಿಗೆ ಬೇಡಿಕೆ ಕುಂದಿಲ್ಲ. ವಿವಿಧ ಗಾತ್ರ ಮತ್ತು ವಿನ್ಯಾಸದ ಗಣಪನ ಮೂರ್ತಿಗಳನ್ನು ಪೇರಿಸಿಟ್ಟ ವ್ಯಾಪಾರಿಗಳು ಗ್ರಾಹಕರ ನಿರೀಕ್ಷೆಯಲ್ಲಿದ್ದರು.ವಿಗ್ರಹಗಳ ಬೆಲೆ ಹೆಚ್ಚಳ: ಈ ಬಾರಿ ಹಲವು ಬಗೆಯ ವಿಶಿಷ್ಟ ರೂಪದ ಗೌರಿ ಮತ್ತು ಗಣೇಶನ ವಿಗ್ರಹಗಳು ಮಾರುಕಟ್ಟೆಗೆ ಇಳಿದಿದ್ದವು. ನಾಟ್ಯರೂಪದ ಗಣಪ, ಸರ್ಪದ ಮೇಲೆ ಅಭಯ ಹಸ್ತ ನೀಡುವ ಗಣೇಶ, ಸಂಗೀತ ವಾದ್ಯ ನುಡಿಸುತ್ತಿರುವ ವಿಘ್ನನಾಶಕ.. ಹೀಗೆ ವೈವಿಧ್ಯಮಯ ಬಣ್ಣದ ಗಣೇಶನ ವಿಗ್ರಹಗಳು ಮಾರುಕಟ್ಟೆಯಲ್ಲಿ ಗಮನಸೆಳೆದವು.ಅರ್ಧ ಅಡಿಯಿಂದ 12 ಅಡಿ ಎತ್ತರದವರೆಗಿನ ವಿಗ್ರಹಗಳು ಮಾರುಕಟ್ಟೆಯಲ್ಲಿ ಕಾಣಿಸಿಕೊಂಡವು. ಕನಿಷ್ಠ 30 ರೂಪಾಯಿಯಿಂದ ಗರಿಷ್ಠ 12,000 ರೂಪಾಯಿ ಮೌಲ್ಯದ ಮೂರ್ತಿಗಳು ನಗರದ ವಿವಿಧ ಮಾರುಕಟ್ಟೆಯಲ್ಲಿ ರಾರಾಜಿಸುತ್ತಿವೆ. ಪರಿಸರ ಸಂರಕ್ಷಣೆಯ ಉದ್ದೇಶದಿಂದ ಬಣ್ಣ ಲೇಪಿಸದ ಮಣ್ಣಿನ ಗಣೇಶ ವಿಗ್ರಹಗಳು ಮತ್ತು ನೈಸರ್ಗಿಕ ಬಣ್ಣ ಲೇಪಿತ ವಿಗ್ರಹಗಳೂ ಖರೀದಿಗೆ ದೊರೆಯುತ್ತಿವೆ. ಕಳೆದ ವರ್ಷ 10 ರೂಪಾಯಿಗೂ ಗಣೇಶ ವಿಗ್ರಹ ದೊರೆಯುತ್ತಿತ್ತು. ಆದರೆ ಈ ಬಾರಿ ಗಣಪ ಮೂರ್ತಿ ತುಸು ದುಬಾರಿಗೊಂಡಿದೆ.ಬಾಳೆ ದಿಂಡಿನ ಬೆಲೆ ಗಗನಕ್ಕೆ: ಈ ಬಾರಿ ಬಾಳೆ ದಿಂಡಿನ ಬೆಲೆ ಕೂಡ ಗಗನಕ್ಕೇರಿದೆ. ಅಲ್ಲದೆ, ಮಾವಿನ ಸೊಪ್ಪು, ಗರಿಕೆ, ತುಳಸಿ, ಬಟ್ಟಲು ಅಡಿಕೆ, ನಿಂಬೆಹಣ್ಣು, ತಾಳೆಗರಿ ಮತ್ತು ಕಬ್ಬಿನ ಜಲ್ಲೆಯ ಬೆಲೆಯೂ ಏರಿಕೆಯಾಗಿದೆ. ಇದರಿಂದಾಗಿ ಹಬ್ಬದ ಖರೀದಿಯ ವೇಳೆ ಚೌಕಾಸಿ ಮಾಡುವವರ ಸಂಖ್ಯೆಯೂ ಹೆಚ್ಚಿರುವುದು ಕಂಡು ಬಂತು.ತುಮಕೂರು, ರಾಮನಗರ ಸೇರಿದಂತೆ ನೆರೆಯ ಕೆಲ ಜಿಲ್ಲೆಗಳ ಗ್ರಾಮೀಣ ಪ್ರದೇಶದ ರೈತರು ವ್ಯಾಪಾರಕ್ಕೆಂದು ಬಾಳೆ ದಿಂಡು, ಕಬ್ಬಿನ ಜಲ್ಲೆ, ಮಾವಿನ ಸೊಪ್ಪು ಮತ್ತಿತರ ವಸ್ತುಗಳೊಂದಿಗೆ ರಸ್ತೆ ಬದಿಯಲ್ಲೇ ಠಿಕಾಣಿ ಹೂಡಿದ್ದಾರೆ. ಹಬ್ಬ ಮುಗಿಯುವವರೆಗೂ ಇಲ್ಲೇ ಇದ್ದು ವ್ಯಾಪಾರ ಪೂರ್ಣಗೊಳಿಸಿ ವಾಪಸ್ಸಾಗಲು ನಿರ್ಧರಿಸಿದ್ದಾರೆ.ಹೂಗಳಿಗೂ ಎಲ್ಲಿಲ್ಲದ ಬೇಡಿಕೆ:
ಗಣಪನ ಅಲಂಕಾರಕ್ಕಾಗಿ ವಿವಿಧ ಬಗೆಯ ಹೂಗಳಿಗೆ ಎಲ್ಲಿಲ್ಲದ ಬೇಡಿಕೆ. ಮನೆಯ ಮುಂಬಾಗಿಲಿಗೆ ತಳಿರು- ತೋರಣಗಳ ಜೊತೆ ಹೂಮಾಲೆ, ಕಹಿಬೇವು, ಬಿಲ್ವಪತ್ರೆ, ಗರಿಕೆ ಹುಲ್ಲು ಸೇರಿದಂತೆ ವರ್ಣಮಯ ಹೂಮಾಲೆಗಳು ಭರ್ಜರಿಯಿಂದ ಖರೀದಿಗೊಂಡವು.`ಹಬ್ಬದ ಸಂದರ್ಭದಲ್ಲಿ ಹೂಗಳ ಬೆಲೆ ಸಹಜವಾಗಿಯೇ ಏರಿಕೆಯಾಗುತ್ತದೆ. ಅದರಂತೆ ಈ ಬಾರಿ ಕೂಡ ಬೆಲೆ ಹೆಚ್ಚಾಗಿದೆ. ಆದರೂ ಮಾರಾಟಕ್ಕೆ ಹೆಚ್ಚಿನ ಅಡ್ಡಿಯಾಗಿಲ್ಲ. ಜನರು ಎಂದಿನಂತೆ ಹೂವು ಖರೀದಿಸುತ್ತಿದ್ದಾರೆ. ಗಣೇಶ ಮೂರ್ತಿ ಅಲಂಕಾರಕ್ಕೆ ರುದ್ರಾಕ್ಷಿ ಹೂವು ಹಾಗೂ ಎಕ್ಕದ ಹೂವುಗಳನ್ನು ಬಳಸುವುದರಿಂದ ಬೆಲೆ ಏರಿಕೆಯಾಗಿದೆ.100 ರೂಪಾಯಿಗೆ ಒಂದು ಮಾರು ಸೇವಂತಿ ಹಾರ ಮಾರಾಟವಾಗುತ್ತಿದೆ. ಮಲ್ಲಿಗೆ, ಕಮಲದ ಹೂವಿನ ದರವೂ  ತುಸು ಹೆಚ್ಚಾಗಿದೆ~ ಎನ್ನುತ್ತಾರೆ ಮಲ್ಲೇಶ್ವರ ಮಾರುಕಟ್ಟೆಯ ಹೂವಿನ ವ್ಯಾಪಾರಿ ಪುಟ್ಟಲಕ್ಷ್ಮಿ.

`ತರಕಾರಿ, ಹೂವು ಮತ್ತು ಹಣ್ಣಿನ ದರದ ಮೇಲೆ ಲಾರಿ ಮುಷ್ಕರದ ಬಿಸಿ ತಟ್ಟಿದೆ. ತರಕಾರಿಗಳು ನಿರೀಕ್ಷಿತ ಪ್ರಮಾಣದಲ್ಲಿ ಮಾರುಕಟ್ಟೆಗೆ ಬಾರದ ಕಾರಣ ಬೆಲೆ ಹೆಚ್ಚಳವಾಗಿದೆ~ ಎಂದು ತರಕಾರಿ ವ್ಯಾಪಾರಿ ಗೋವಿಂದರಾಜು ಹೇಳುತ್ತಾರೆ.ಗೌರಿ ಬಳೆ ದುಬಾರಿ: ಗೌರಿ ಹಬ್ಬಕ್ಕೆ ಮೆರುಗು ನೀಡುವ ಗೌರಿ ಬಳೆ ಡಜನ್‌ಗೆ 20ರಿಂದ 25 ರೂಪಾಯಿವರೆಗೆ ಮಾರಾಟವಾಯಿತು. ಇದರೊಂದಿಗೆ ಇತರೆ ಬಳೆಗಳ ದರವು ದುಬಾರಿಗೊಂಡಿದೆ.ರಂಜಾನ್ ಮತ್ತು ಫೀಸ್ಟ್ ಸಂಭ್ರಮ: ಶಿವಾಜಿನಗರ ಸೇರಿದಂತೆ ವಿವಿಧೆಡೆ ರಂಜಾನ್ ಮತ್ತು ಸಂತ ಮೇರಿ ಉತ್ಸವದ ಖರೀದಿ ಭರಾಟೆ ಜೋರಾಗಿದ್ದು, ಹಬ್ಬದ ಪ್ರಯುಕ್ತ ಮಾರಾಟ ಭರಾಟೆಯಿಂದ ಬಟ್ಟೆ ಮಳಿಗೆಗಳು ಜನರಿಂದ ತುಂಬಿ ತುಳುಕುತ್ತಿದ್ದವು. ಪ್ರತಿಷ್ಠಿತ ಚಿನ್ನದ ಮಳಿಗೆಗಳಲ್ಲಿ ಜನ ತುಂಬಿರುವ ದೃಶ್ಯ ಸಹಜವಾಗಿತ್ತು.

ಹಬ್ಬದ ಪ್ರಭಾವ ಯಾವ್ಯಾವುದಕ್ಕೆ ಎಷ್ಟೆಷ್ಟು?

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry