ಶನಿವಾರ, ಜೂನ್ 19, 2021
26 °C

ಬೆಲೆ ನಿಗದಿ ಅಧಿಕಾರ ರೈತರಿಗೆ ಕೊಡಿ: ಬೋಪಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗೋಣಿಕೊಪ್ಪಲು: ಕೃಷಿಗೆ ಎಲ್ಲ ರೀತಿಯ ಸೌಲಭ್ಯಗಳನ್ನು ಸರ್ಕಾರ ನೀಡುತ್ತಾ ಬಂದರೂ ರೈತರ ಬಾಳು ಹಸನಾಗಲಿಲ್ಲ. ರೈತರು ನಿತ್ಯವೂ ಕಣ್ಣೀರಿಡು ಸ್ಥಿತಿ ಎದುರಾಗಿದೆ ಎಂದು ವಿಧಾನಸಭಾ ಅಧ್ಯಕ್ಷ ಕೆ.ಜಿ.ಬೋಪಯ್ಯ ಹೇಳಿದರು.ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ವಿರಾಜಪೇಟೆ ತಾಲ್ಲೂಕು ಕೃಷಿ ಉತ್ಸವ ಸಮಿತಿ ಬಾಳೆಲೆ ವಲಯದ ವತಿಯಿಂದ ಗೋಣಿಕೊಪ್ಪ ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಭಾನುವಾರ ಏರ್ಪಡಿಸಿದ್ದ `ಕೃಷಿ ಉತ್ಸವ-2012~ ಕಾರ್ಯಕ್ರಮದಲ್ಲಿ ಪ್ರಗತಿಪರ ಕೃಷಿಕರನ್ನು ಸನ್ಮಾನಿಸಿ ಅವರು ಮಾತನಾಡಿದರು.ಕೃಷಿ ಬಿಟ್ಟು ಇತರ ವಸ್ತುಗಳನ್ನು ಉತ್ಪಾದಿಸುವ ಮಾಲೀಕರು ಅವುಗಳ ಬೆಲೆ ನಿಗದಿ ಮಾಡುತ್ತಾರೆ. ಆದರೆ ರೈತ ಬೆಳೆದ ಬೆಳೆಗೆ ಬೆಲೆಯನ್ನು ನಿಗದಿ ಮಾಡುವ ಅಧಿಕಾರವಿಲ್ಲ. ಬದಲಿಗೆ ಮಧ್ಯವರ್ತಿ ನಿಗದಿಗೊಳಿಸುತ್ತಾರೆ. ಇದರಿಂದ ರೈತರ ಕಣ್ಣೀರು ಆರಿಲ್ಲ. ರೈತ ತನ್ನ ಬೆಳೆಗೆ ತಾನೇ ಬೆಲೆ ನಿಗದಿ ಮಾಡಿಕೊಳ್ಳುವ ಅಧಿಕಾರ ದೊರೆತಾಗ ಮಾತ್ರ ರೈತನ ಬಾಳು ಹಸನಾದೀತು ಎಂದು ಅಭಿಪ್ರಾಯಪಟ್ಟರು.ಕೃಷಿಕರು ಬೆಳೆಯಲ್ಲಿ ಗುಣಮಟ್ಟ ಕಾಪಾಡಿ ಕೊಳ್ಳಬೇಕು. ಕೆಸಲಕ್ಕೆ ಯಂತ್ರೋಪಕರಣ ಬಳಸಿಕೊಂಡರೂ ಪರಸ್ಪರ ಪ್ರೀತಿ ವಿಶ್ವಾಸ ಕಳೆದುಕೊಳ್ಳಬಾರದು. ಸಹಕಾರ ಪದ್ಧತಿ ಮೂಲಕ ವೆಚ್ಚವನ್ನು ಕಡಿಮೆ ಮಾಡಿಕೊಳ್ಳ ಬೇಕು. ಕೃಷಿ ವಸ್ತುಗಳನ್ನು ಕಲಬೆರಕೆ ಮಾಡದೆ ಸಹಬಾಳ್ವೆ ಕೃಷಿ ಪದ್ಧತಿ ಮುಂದುವರಿಸಿಕೊಂಡು ಹೋಗಬೇಕು. ಸಾವಯವ ಕೃಷಿಗೆ ಸರ್ಕಾರ ಹೆಚ್ಚು ಪ್ರೋತ್ಸಾಹ ನೀಡುತ್ತಿದೆ. ಆದರೆ ಇದರಿಂದ ಕೊಡಗಿಗೆ ಹೆಚ್ಚು ಪ್ರಯೋಜನವಾಗಿಲ್ಲ. ಇಲ್ಲಿನ ಹವಾಗುಣ ಪದ್ಧತಿ ಇದಕ್ಕೆ ಸೂಕ್ತವಾಗಿಲ್ಲ. ಸರ್ಕಾರ ಯಾವುದೇ ಯೋಜನೆ ರೂಪಿಸಿದರೂ ಅದು ಜಿಲ್ಲೆಯಿಂದ ಜಿಲ್ಲೆಗೆ ಬದಲಾಗಬೇಕು. ವಿದೇಶಗಳ ಕೃಷಿ ಉತ್ಪಾದನೆಗೆ ಹೋಲಿಸಿದರೆ ದೇಶದ ಉತ್ಪಾದನೆ ಆಶಾದಾಯಕವಾಗಿಲ್ಲ. ಕೃಷಿ ಮೇಳಗಳು ರೈತರಲ್ಲಿ ಸ್ವಾಭಿಮಾನ ತುಂಬಬೇಕು ಎಂದು ಹೇಳಿದರು.ವಿಧಾನ ಪರಿಷತ್ ಮಾಜಿ ಸದಸ್ಯ ಸಿ.ಎಸ್.ಅರುಣ್ ಮಾಚಯ್ಯ ಮಾತನಾಡಿ, ಕೃಷಿ ದೇಶದ ಬೆನ್ನೆಲುಬು. ಶೇ. 80ರಷ್ಟು ಕೃಷಿಯನ್ನು ಅವಲಂಬಿಸಿದ್ದ ಜನತೆ ಇಂದು ಶೇ. 60ಕ್ಕೆ ಇಳಿದಿದ್ದಾರೆ. ಕೃಷಿಯಿಂದ ನಷ್ಟ ಅನುಭವಿಸುತ್ತಿರುವುದೇ ಕೃಷಿ ಬಿಡಲು ಕಾರಣ. ದೇಶದ ಆರ್ಥಿಕ ಕ್ಷೇತ್ರಕ್ಕೆ ಕೃಷಿ ಕ್ಷೇತ್ರದ ಕೊಡುಗೆ ಅಪಾರ. ಇದನ್ನು ಕಡೆಗಣಿಸಿದರೆ ದೇಶದ ಆರ್ಥಿಕ ವ್ಯವಸ್ಥೆಗೆ ದೊಡ್ಡ ಪೆಟ್ಟು ಬೀಳಲಿದೆ ಎಂದರು.ರೈತರ ಆತ್ಮಹತ್ಯೆ ನಡೆಯುತ್ತಿರುವ ರಾಜ್ಯದ 6 ಜಿಲ್ಲೆಗಳಲ್ಲಿ ಕೊಡಗು ಜಿಲ್ಲೆಯೂ ಸೇರಿದೆ. 2006ರಲ್ಲಿ ಪ್ರಧಾನಮಂತ್ರಿಗಳೇ ಘೋಷಿಸಿದ ವಿದರ್ಭ ಯೋಜನೆಯ ಬಳಿಕವೂ 1,300 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೂ. 60 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಲಾಯಿತು ಎಂದ ಮೇಲೂ ಯಾವುದೇ ಯೋಜನೆಗಳು, ಪ್ಯಾಕೇಜ್‌ಗಳು ರೈತರ ಸಮಸ್ಯೆಗಳನ್ನು ನೀಗಿಸಲಾರವು ಎಂದು ಹೇಳಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಿರಿಯ ನಿರ್ದೇಶಕ ಶ್ರೀಹರಿ ಮಾತನಾಡಿದರು.ಬಾಳೆಲೆ ಪ್ರಗತಿಪರ ಕೃಷಿಕ ಕಳ್ಳಿಚಂಡ ರವಿ ಕಾರ್ಯಕ್ರಮ ಉದ್ಘಾಟಿಸಿದರು. ಕೃಷಿ ಉತ್ಸವ ಸಮಿತಿ ಅಧ್ಯಕ್ಷ ಕೊಪ್ಪೀರ ಸನ್ನಿಸೋಮಯ್ಯ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ.ಸದಸ್ಯೆ ಶಕುಂತಲಾ ರವೀಂದ್ರ, ತಾ.ಪಂ. ಸದಸ್ಯೆ ಹಬೀಬುನ್ನೀಸ, ಗ್ರಾ.ಪಂ. ಅಧ್ಯಕ್ಷ ರಾಜೇಶ್, ಉಪಾಧ್ಯಕ್ಷೆ ಬೋಜಮ್ಮ, ಮಾಯಮುಡಿ ವ್ಯವಸಾಯ ಸೇವಾ ಸಹಕಾರ ಬ್ಯಾಂಕ್ ಅಧ್ಯಕ್ಷ ಎಸ್.ಎಸ್.ಸುರೇಶ್, ಮಾಜಿ ಅಧ್ಯಕ್ಷ ಕೆ.ಟಿ.ಬಿದ್ದಪ್ಪ, ಕಿರುಗೂರು ಗ್ರಾ.ಪಂ. ಸದಸ್ಯ ಸರಾ ಚಂಗಪ್ಪ ಹಾಜರಿದ್ದರು. ತಾ.ಪಂ. ಸದಸ್ಯ ಟಾಟು ಮೊಣ್ಣಪ್ಪ ಸ್ವಾಗತಿಸಿದರು. ಬಿ.ಎನ್.ಪ್ರಕಾಶ್ ನಿರೂಪಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.