`ಬೆಳಕಿನ ಕುಡಿಗಳಾಗಿ, ಬೆಂಕಿಯ ಕಿಡಿಯಲ್ಲ'

7

`ಬೆಳಕಿನ ಕುಡಿಗಳಾಗಿ, ಬೆಂಕಿಯ ಕಿಡಿಯಲ್ಲ'

Published:
Updated:

ಬೈಂದೂರು: ವಿದ್ಯಾರ್ಥಿ ಸಮುದಾಯದ ಮೇಲೆ ಪ್ರಸ್ತುತ ಹಲವು ಆರೋಪಗಳನ್ನು ಹೊರಿಸಲಾಗುತ್ತಿದೆ. ಅದರಲ್ಲಿ ಪೂರ್ಣ ಸತ್ಯಾಂಶವಿಲ್ಲ. ಆದರೂ ಮಕ್ಕಳು ಬೆಳಕಿನ ಕುಡಿಗಳಾಗಬೇಕೇ ಹೊರತು ಬೆಂಕಿಯ ಕಿಡಿಗಳಾಗಬಾರದು ಎಂದು ಹಿರಿಯ ಸಾಹಿತಿ ಅಂಬಾತನಯ ಮುದ್ರಾಡಿ ಹೇಳಿದರು.ಇಲ್ಲಿನ ರಾಜರಾಜೇಶ್ವರಿ ಕಲಾ ಮಂದಿರದ ಮೊಗೇರಿ ಗೋಪಾಲಕೃಷ್ಣ ಅಡಿಗ ವೇದಿಕೆಯಲ್ಲಿ ನಡೆಯುತ್ತಿರುವ ಕುಂದಾಪುರ ತಾಲ್ಲೂಕು 12ನೆಯ ಕನ್ನಡ ಸಾಹಿತ್ಯ ಸಮ್ಮೇಳನದದಲ್ಲಿ ಭಾನುವಾರ ವಿದ್ಯಾರ್ಥಿ ಸಾಹಿತ್ಯ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಮಕ್ಕಳ ಚಿಂತನೆ, ವಿಚಾರ, ಕನಸು, ಕಲ್ಪನೆಗಳನ್ನು ಮೊಟಕುಗೊಳಿಸಿ ಅವರನ್ನು ಪುಸ್ತಕದ ಹುಳುಗ ಳಾಗಿಸಬೇಡಿ ಎಂದು ಹಿರಿಯರಿಗೆ ಸಲಹೆ ನೀಡಿದ ಮುದ್ರಾಡಿ, ಮಕ್ಕಳು ಹೃದಯ ವಂತರಾಗಿ ಬೆಳೆಯುವುದಕ್ಕೆ, ಸಾಹಿತ್ಯದ ಸಾಮೀಪ್ಯ ಸಾಧಿಸಿ, ಅದರೊಂದಿಗೆ ಸಂವಹನ, ಸಲ್ಲಾಪ ನಡೆಸುವ ಮೂಲಕ ಕವಿ, ಲೇಖಕರಾಗಲು, ಆಗದಿದ್ದರೆ ಕನಿಷ್ಠ ಸಹೃದಯಿಗಳಾಗಲು ಅಗತ್ಯ ವಾತಾವರಣ ಕಲ್ಪಿಸಬೇಕು ಎಂದರು. ಪರಂಪರೆಯನ್ನು ಮುಂದುವರಿಸಿ: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ತೃತೀಯ ಬಿಬಿಎಂ ವಿದ್ಯಾರ್ಥಿನಿ ರಮ್ಯಾ ಜಿ.ಎಸ್.ಜೈನ್ ಆಶಯ ಭಾಷಣ ಮಾಡಿ, ನಾಡಿನಲ್ಲಿ 2ಸಾವಿರ ವರ್ಷಗಳಲ್ಲಿ ಹಿರಿಯರು ಸೃಷ್ಟಿಸಿದ ಕನ್ನಡದ ಸಮೃದ್ಧ ಸಾಹಿತ್ಯ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಹೊಣೆ ಯುವಜನರ ಮೇಲಿದೆ. ಅದಕ್ಕೆ ಅಗತ್ಯವಿರುವ ಶಿಕ್ಷಣ, ಸಾಮರ್ಥ್ಯವನ್ನು ಗಳಿಸಿಕೊಳ್ಳಬೇಕು ಎಂದರು.ಸಮ್ಮೇಳನಾಧ್ಯಕ್ಷ ಯು.ಚಂದ್ರಶೇಖರ ಹೊಳ್ಳ ಅಧ್ಯಕ್ಷತೆ ವಹಿಸಿದ್ದರು. ಸ್ಥಳೀಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಸಯೀದಾ ಬಾನು ಶುಭಾಶಂಸನೆಗೈದರು. ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ವರಮಹಾಲಕ್ಷ್ಮಿ ಹೊಳ್ಳ ಸಂಪಾದಿಸಿದ ವಿದ್ಯಾರ್ಥಿ ಕವನ ಸಂಕಲನ ಸುಮಿತ್ರಾ ಐತಾಳರ `ಫಲಿತಾಂಶ' ಕಥಾಸಂಕಲನ ಬಿಡುಗಡೆಗೊಳಿಸಿದರು.ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಚಂದ್ರಶೇಖರ,  ಲೇಖಕ ಡಾ.ಉಮೇಶ ಪುತ್ರನ್ ಅತಿಥಿಗಳಾಗಿದ್ದರು. ಪತ್ರಕರ್ತ ಜಾನ್ ಡಿ'ಸೋಜ ಅವರನ್ನು ಸನ್ಮಾನಿಸಲಾಯಿತು.ರಾಮಕೃಷ್ಣ ದೇವಾಡಿಗ ತಾಲ್ಲೂಕು ಕಸಾಪ ಅಧ್ಯಕ್ಷ ಕೆ.ನಾರಾಯಣ ಖಾರ್ವಿ, ಕರುಣಾಕರ ಶೆಟ್ಟಿ  ಎಂ. ಗೋವಿಂದ, ರಾಘವೇಂದ್ರ ಇತರರು ಸಮಾರಂಭದಲ್ಲಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry