ಸೋಮವಾರ, ಮೇ 23, 2022
21 °C

ಬೆಳಕಿನ ಹಾಡಿಗೆ ಎಪ್ಪತ್ತೈದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |ಬರಿಗೈಯಲ್ಲಿ ಏಕಾಂಗಿಯಾಗಿ ಮೈಸೂರಿಗೆ ಬಂದ ವಿದ್ಯಾರ್ಥಿಯೊಬ್ಬ ತನ್ನ ಸಾಧನೆಯ ಬಲದಿಂದ ಏರಿದ ಎತ್ತರ ದೊಡ್ಡದು. ಕನ್ನಡದಲ್ಲಿ ಎಂ.ಎ., ಪಿಎಚ್.ಡಿ ಪದವಿಗಳನ್ನು ಪಡೆದು, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಹಲವು ಬಗೆಯ ಕಾರ್ಯಭಾರಗಳನ್ನು ಸಮರ್ಥವಾಗಿ ನಿರ್ವಹಿಸಿದವರು ಎನ್ನೆಸ್ಸೆಲ್.ಭಟ್ಟರ ಸಾಹಿತ್ಯ ರಚನೆ ಬಹುಮುಖಿಯಾದದ್ದು. ‘ಭಾಳ ಒಳ್ಯೋರ್ ನಂಮಿಸ್ಸು ಏನ್ ಹೇಳಿದ್ರೂ ಎಸ್ ಎಸ್ಸು’ ರೀತಿಯ ಶಿಶುಗೀತೆಯಿಂದ ಹಿಡಿದು, ‘ಒಳಗೆಲ್ಲೊ ಗುಟ್ಟಾಗಿ ಹರಿಯುವ ಸರಸ್ವತಿಯ ಅಮೃತದಾಳಗಳಲ್ಲಿ ಮೀಯಬೇಕು’ ಎಂಬ ಉತ್ಕೃಷ್ಟ ಕಾವ್ಯಪಂಕ್ತಿಯ ಪ್ರೌಢ ಕವಿತೆಗಳವರೆಗೆ ಇವರ ಕಾವ್ಯವ್ಯಾಪ್ತಿ ಹರಡಿದೆ. ‘ವೃತ್ತ’, ‘ಸುಳಿ’, ‘ನಿನ್ನೆಗೆ ನನ್ನ ಮಾತು’, ‘ಚಿತ್ರಕೂಟ’, ‘ಹೊಳೆಸಾಲಿನ ಮರ’, ‘ಪಾಂಚಾಲಿ’, ‘ಅರುಣಗೀತ’, ‘ದೆವ್ವದ ಜತೆ ಮಾತುಕಥೆ’ ಅವರ ಕೆಲವು ಕೃತಿಗಳು.ಭಟ್ಟರು ಸೃಜನಶೀಲ ಕಾವ್ಯದಲ್ಲಷ್ಟೇ ಅಲ್ಲ, ಶಾಸ್ತ್ರದಲ್ಲೂ ಪರಿಣತರು. ‘ಭಾರತೀಯ ಗ್ರಂಥಸಂಪಾದನಾ ಪರಿಚಯ’, ‘ಕನ್ನಡ ಮಾತು’, ‘ರೀಡಿಂಗ್ಸ್ ಇನ್ ಕನ್ನಡ’, ‘ಶಾಸ್ತ್ರಭಾರತಿ’ಗಳಲ್ಲಿ ಇವರ ನಿಶಿತವಾದ ಪಾಂಡಿತ್ಯ ಅನುಭವಕ್ಕೆ ಬರುತ್ತದೆ. ‘ಊರ್ವಶಿ’ ಅವರ ಮಹತ್ವಾಕಾಂಕ್ಷೆಯ ಗೀತ ನಾಟಕ. ಜೀವನ ಚರಿತ್ರೆ, ವ್ಯಕ್ತಿಚಿತ್ರ, ಮಕ್ಕಳ ಸಾಹಿತ್ಯ- ಹೀಗೆ, ಕಳೆದ ನಾಲ್ಕು ದಶಕಗಳಲ್ಲಿ ಇವರು ರಚಿಸಿರುವ ಸಾಹಿತ್ಯ ಸಮೃದ್ಧಿಯಾದುದು.ಷೇಕ್ಸ್‌ಪಿಯರನ 100 ಸಾನೆಟ್‌ಗಳ ಅನುವಾದ ಕೃತಿ ‘ಷೇಕ್ಸ್‌ಪಿಯರ್ ಸಾನೆಟ್‌ಚಕ್ರ’ ಮತ್ತು ಏಟ್ಸ್ ಕವಿಯ ಕಾವ್ಯಾನುವಾದ ‘ಚಿನ್ನದಹಕ್ಕಿ’ ಮತ್ತು ಎಲಿಯಟ್ ಕಾವ್ಯ ಸಂಪುಟ- ಭಟ್ಟರ ಪ್ರತಿಭೆ-ಆಸಕ್ತಿಗೆ ಹಿಡಿದ ಕನ್ನಡಿಗಳು. ಈ ಕೃತಿಗಳು ಕನ್ನಡ ಕಾವ್ಯ ಪ್ರಪಂಚವನ್ನು ಹಿಗ್ಗಿಸಿವೆ. ಭಟ್ಟರು ತಮ್ಮ ಕೃತಿಗಳಿಗೆ ಮೂರು ಬಾರಿ ಸಾಹಿತ್ಯ ಅಕಾಡೆಮಿ ಬಹುಮಾನವನ್ನೂ, ಸಮಗ್ರ ಸಾಹಿತ್ಯಕ್ಕೆ ಶಿವರಾಮ ಕಾರಂತ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ ಅವರಿಗೆ ಸಂದ ಕೆಲವು ಗೌರವಗಳು.ಯಾವುದೇ ಸಂಸ್ಕೃತಿಯ ಸಂದರ್ಭದಲ್ಲಿ ಓದಿಗೆ ಮಾತ್ರ ದಕ್ಕುವ ಬಿಕ್ಕಟ್ಟಿನ ಕವಿತೆಗಳಂತೆಯೇ, ಹಾಡಿಗೆ ಒದಗಬಲ್ಲ ಮಧುರಗೀತೆಗಳೂ ಬೇಕು ಎಂಬುದು ಭಟ್ಟರ ಅಚಲ ನಂಬಿಕೆ. ಅದಕ್ಕೆಂದೇ ನವ್ಯದ ನಂತರ ಬಲವಾಗುತ್ತಿದ್ದ ಗೀತ ಸಂಪ್ರದಾಯದಲ್ಲಿ ಅವರು ಪ್ರಮುಖ ಪಾತ್ರ ವಹಿಸಿದರು.‘ದೀಪಿಕಾ’, ‘ಭಾವಸಂಗಮ’, ‘ನೀಲಾಂಜನ’ ಮುಂತಾದ ಭಾವಗೀತ ಕೃತಿಗಳನ್ನು ಹೊರತಂದರು. ಇವರ ಗೀತೆಗಳಿರುವ ಹಲವಾರು ಧ್ವನಿಸುರುಳಿಗಳೂ ಬಂದವು. ಶಿಶುನಾಳದ ಶರೀಫ್ ಸಾಹೇಬರ ಗೀತೆಗಳನ್ನು ನಾಡಿನ ಉದ್ದಗಲಕ್ಕೆ ಪರಿಚಯಿಸಿದ ಕೀರ್ತಿಯೂ ಅವರದ್ದೇ.ಪ್ರಸ್ತುತ ಎಪ್ಪತ್ತೈದರ ಹೊಸಿಲಿಗೆ ಕಾಲಿಟ್ಟಿರುವ ಎನ್ನೆಸ್ಸೆಲ್ ಅವರಿಗೆ ಈ ತಿಂಗಳ 29ರಂದು ಸಂಗೀತಧಾಮ ಸಂಸ್ಥೆ ಸಂಭ್ರಮದ ಅಭಿನಂದನದ ಸಮಾರಂಭ ಏರ್ಪಡಿಸಿದೆ. ಎನ್ನೆಸ್ಸೆಲ್ ಗೀತೆಗಳ ಹೊಸ ಧ್ವನಿಮುದ್ರಿಕೆ ‘ಬೆಳಕಿನ ಹಾಡು’ ಮತ್ತು ಎನ್ನೆಸ್ಸೆಲ್‌ರ ‘ಕಾವ್ಯಪ್ರತಿಮೆ’ ಎಂಬ ಅಪರೂಪದ ಗ್ರಂಥಗಳೂ ಲೋಕಾರ್ಪಣೆಗೊಳ್ಳುತ್ತಿವೆ.‘ಕಾವ್ಯಪ್ರತಿಮೆ’ ಕನ್ನಡ ಕಾವ್ಯಮೀಮಾಂಸೆಯ ಕ್ಷೇತ್ರಕ್ಕೆ ಹೊಸ ಸೇರ್ಪಡೆ. ಈ ಕೃತಿಯಲ್ಲಿ ಕಾವ್ಯಪ್ರತಿಮೆಯ ಸ್ವರೂಪವನ್ನೂ ಅದರ ಪ್ರಭೇದಗಳನ್ನೂ ವಿವರವಾಗಿ ನಿರೂಪಿಸಲಾಗಿದೆ. ಹೋಮರ್, ವರ್ಜಿಲ್, ಮಿಲ್ಟನ್, ಷೇಕ್ಸ್‌ಪಿಯರ್, ಕೀಟ್ಸ್, ಎಲಿಯಟ್ ರಾಬರ್ಟ್ ಫ್ರಾಸ್ಟ್, ಆಡೆನ್‌ರಂಥ ಪಾಶ್ಚಾತ್ಯ ಕವಿಗಳಿಂದ ಸಂಸ್ಕೃತದ ಭಾಸ, ಕಾಳಿದಾಸ, ಭವಭೂತಿವರೆಗೆ ಹಾಗೂ ಕನ್ನಡದ ಪಂಪ, ರನ್ನ, ಕುಮಾರವ್ಯಾಸ, ಕುವೆಂಪು, ಬೇಂದ್ರೆ, ಅಡಿಗ ಮೊದಲಾದ ಶ್ರೇಷ್ಠ ಕವಿಗಳ ಕವಿತಾಭಾಗಗಳಿಂದ ‘ಕಾವ್ಯಪ್ರತಿಮೆ’ ಗಮನಸೆಳೆಯುವಂತಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.