ಬೆಳಗಾವಿಗೆ ಬಾರದ ಬೃಹತ್ ಉದ್ಯಮ

7

ಬೆಳಗಾವಿಗೆ ಬಾರದ ಬೃಹತ್ ಉದ್ಯಮ

Published:
Updated:
ಬೆಳಗಾವಿಗೆ ಬಾರದ ಬೃಹತ್ ಉದ್ಯಮ

ಬೆಳಗಾವಿ: ಮಲೆನಾಡಿನ ಸೆರಗಿನಲ್ಲಿರುವ ಬೆಳಗಾವಿ ಜಿಲ್ಲೆಯನ್ನು ಸಂಪರ್ಕಿಸಲು ಅತ್ಯುತ್ತಮ ರಸ್ತೆ, ರೈಲು ಹಾಗೂ ವಿಮಾನ ನಿಲ್ದಾಣಗಳ ಸೌಲಭ್ಯಗಳಿವೆ. ಹೀಗಿದ್ದರೂ ಬೆರಳೆಣಿಕೆಯಷ್ಟು ಬೃಹತ್ ಉದ್ಯಮಗಳು ಮಾತ್ರ ಜಿಲ್ಲೆಯಲ್ಲಿ ಬಂಡವಾಳ ಹೂಡಲು ಒಲವು ತೋರುತ್ತಿರುವುದರಿಂದ ಹೇಳಿಕೊಳ್ಳುವಷ್ಟು ಉದ್ಯೋಗ ಸೃಷ್ಟಿಯಾಗಿಲ್ಲ.ಜಿಲ್ಲೆಯಲ್ಲಿ ಅತಿ ಹೆಚ್ಚು ಕಬ್ಬು ಬೆಳೆಯುತ್ತಿರುವುದರಿಂದ ಸದ್ಯ 20 ಸಕ್ಕರೆ ಕಾರ್ಖಾನೆಗಳು ಕಾರ್ಯನಿರ್ವಹಿಸುತ್ತಿವೆ. 4 ಸಕ್ಕರೆ ಕಾರ್ಖಾನೆ ಸ್ಥಾಪಿಸಲು ಉದ್ಯಮಿಗಳು ಮುಂದಾಗಿದ್ದಾರೆ. ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿರುವ ಬೆಳಗಾವಿಯ ಫೌಂಡ್ರಿ, ಆಟೊಮೊಬೈಲ್ ಉದ್ಯಮಗಳ ಬಿಡಿ ಉತ್ಪನ್ನಗಳು ಯುರೋಪ್ ದೇಶಗಳಿಗೆ ಭಾರಿ ಪ್ರಮಾಣದಲ್ಲಿ ರಫ್ತಾಗುತ್ತಿವೆ. ಜಿಲ್ಲೆಯಲ್ಲಿನ ಸಕ್ಕರೆ ಕಾರ್ಖಾನೆಗಳು ಹಾಗೂ ಫೌಂಡ್ರಿ ಉದ್ಯಮ ಹಲವರಿಗೆ ಕೆಲಸ ಕೊಟ್ಟಿದೆ. ಆದರೆ, ಜಿಲ್ಲೆಯಲ್ಲಿ ಈವರೆಗೂ ಬೃಹತ್ ಉದ್ಯಮಗಳು ನೆಲೆಯೂರದೇ ಇರುವುದರಿಂದ ಭಾರಿ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಯಾಗಿಲ್ಲ.ಬೆಂಗಳೂರಿನಲ್ಲಿ 2010ರಲ್ಲಿ ನಡೆದ `ಜಾಗತಿಕ ಹೂಡಿಕೆದಾರರ ಸಮಾವೇಶ~(ಜಿಮ್)ದಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ರೂ 21,787 ಕೋಟಿ ರೂಪಾಯಿ ಬಂಡವಾಳದಲ್ಲಿ 14 ಬೃಹತ್ ಉದ್ಯಮಗಳನ್ನು ಸ್ಥಾಪಿಸಲು ಹೂಡಿಕೆದಾರರು ಮುಂದೆ ಬಂದಿದ್ದರು. 18 ಸಾವಿರ ಉದ್ಯೋಗ ಸೃಷ್ಟಿ ನಿರೀಕ್ಷೆಯೂ ಇದ್ದಿತು. ಉದ್ಯಮ ಸ್ಥಾಪನೆಗೆ ಅನುಮೋದನೆ ಪಡೆದ 14ರಲ್ಲಿ 3 ಉದ್ಯಮಗಳು ಮಾತ್ರ ಕಾರ್ಯಾರಂಭ ಮಾಡಿವೆ.`ಮಾ.5ರಂದು ಹುಬ್ಬಳ್ಳಿಯಲ್ಲಿ, ಏ. 8ರಂದು ಬೆಳಗಾವಿಯಲ್ಲಿ ನಡೆದ ಹೂಡಿಕೆದಾರರ ಸಮಾವೇಶದಲ್ಲಿ ಜಿಲ್ಲೆಯಲ್ಲಿ ಒಟ್ಟು 32 ಉದ್ಯಮಗಳಲ್ಲಿ ರೂ. 2149 ಕೋಟಿ ಬಂಡವಾಳ ಹೂಡಲು ಒಡಂಬಡಿಕೆ (ಎಂಒಯು) ಮಾಡಿಕೊಳ್ಳಲಾಗಿದೆ. ಇದರಿಂದ 5 ಸಾವಿರಕ್ಕೂ ಹೆಚ್ಚು ಜನರಿಗೆ ನೌಕರಿ ಸಿಗಲಿದೆ~ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಎ.ಡಿ.ಪರಡ್ಡಿ `ಪ್ರಜಾವಾಣಿ~ಗೆ ತಿಳಿಸಿದರು.`ರೂ. 3.5 ಕೋಟಿಯಿಂದ ರೂ. 315 ಕೋಟಿವರೆಗೆ 32 ಉದ್ಯಮಗಳಲ್ಲಿ ಬಂಡವಾಳ ಹೂಡಲು ಉದ್ಯಮಿಗಳು ಮುಂದೆ ಬಂದಿದ್ದಾರೆ. ಸಕ್ಕರೆ ಕಾರ್ಖಾನೆ, ಕೋ- ಜನರೇಶನ್, ಆಹಾರ ಸಂಸ್ಕರಣಾ ಘಟಕ, ಔಷಧ ತಯಾರಿಕೆ ಕಂಪೆನಿ, ಏರೋಸ್ಪೇಸ್ ಕ್ಷೇತ್ರದ ಉಪಕರಣ, ವಾಹನಗಳ ತಯಾರಿಕೆ ಮತ್ತು ಎಂಜಿನಿಯರಿಂಗ್ ಉದ್ಯಮ ಸ್ಥಾಪಿಸಲು ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಇವುಗಳಿಗೆ ಬೇಕಿರುವೆಡೆ ಭೂಮಿ ನೀಡುವಲ್ಲಿ ವಿಳಂಬವಾಗುತ್ತಿರುವುದರಿಂದ ಉದ್ಯಮಗಳ ಸ್ಥಾಪನೆಗೆ ಹಿನ್ನಡೆಯಾಗುತ್ತಿದೆ~ ಎಂಬುದು ಎ.ಡಿ.ಪರಡ್ಡಿ ಅವರ ವಿವರಣೆ.`2010ರ `ಜಿಮ್~ನಲ್ಲಿ `ಜುವಾರಿ ಆಗ್ರೊ~ ಕಂಪೆನಿಯು ಜಿಲ್ಲೆಯಲ್ಲಿ ರೂ. 5,500 ಕೋಟಿ ಬಂಡವಾಳ ಹೂಡಲು ಮುಂದೆ ಬಂದಿತ್ತು. ರೂ. 10 ಕೋಟಿಯನ್ನು ಕೆಐಡಿಬಿಗೆ ಪಾವತಿಸಿದ್ದರೂ 800 ಎಕರೆ ಭೂಮಿಯನ್ನು ಇನ್ನೂ ನೀಡಿಲ್ಲ. ಉದ್ಯಮಗಳಿಗೆ ಭೂಮಿ ನೀಡುವಲ್ಲಿಯೇ ವಿಫಲವಾಗುತ್ತಿರುವುದರಿಂದ ಬೃಹತ್ ಉದ್ಯಮಗಳು ಆರಂಭವಾಗುತ್ತಿಲ್ಲ. ಹೀಗಾಗಿ ಜಿಲ್ಲೆಯಲ್ಲಿ ಸ್ಥಳೀಯವಾಗಿ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಯಾಗುತ್ತಿಲ್ಲ~ ಎಂಬುದು ಬೆಳಗಾವಿ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಬಸವರಾಜ ಜವಳಿ ಅವರ ಬೇಸರದ ನುಡಿ.`ಬೆಳಗಾವಿಯ ಫೌಂಡ್ರಿ ಹಾಗೂ ಆಟೊಮೊಬೈಲ್ ಬಿಡಿಭಾಗಗಳಿಗೆ ದೇಶ-ವಿದೇಶಗಳಿಂದ ಭಾರಿ ಬೇಡಿಕೆ ಇದೆ. ಪರಿಸರ ಮಾಲಿನ್ಯದ ಸಮಸ್ಯೆ ಎದುರಾಗುವುದರಿಂದ ಧಾರವಾಡ- ಬೆಳಗಾವಿ ನಡುವಿನ ಕಿತ್ತೂರಿನ ಬಳಿ 500 ಎಕರೆ ಪ್ರದೇಶದಲ್ಲಿ `ಬೆಳಗಾವಿ ಫೌಂಡ್ರಿ ಕೇಂದ್ರ~ ಸ್ಥಾಪಿಸುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದೇವೆ. ಈವರೆಗೂ ಕಾರ್ಯಾರೂಪಕ್ಕೆ ಬಂದಿಲ್ಲ. ಇದೇ 7-8ರಂದು ನಡೆಯುವ `ಜಿಮ್~ನಲ್ಲಿಯಾದರೂ ಹೂಡಿಕೆದಾರರು ಬೆಳಗಾವಿಯತ್ತ ಬಂದರೆ, ಅವರಿಗೆ ಭೂಮಿ ಹಾಗೂ ಅಗತ್ಯ ಮೂಲಸೌಲಭ್ಯ ಕಲ್ಪಿಸಲು ಜನಪ್ರತಿನಿಧಿಗಳು ಇಚ್ಛಾಶಕ್ತಿ ತೋರಬೇಕು~ ಎಂಬುದು ಜವಳಿ ಅವರ ಒತ್ತಾಯ.

`ಭೂಮಿ ನೀಡಲು ವಿಫಲ~

`2010ರ `ಜಿಮ್~ನಲ್ಲಿ `ಜುವಾರಿ ಆಗ್ರೊ~ ಕಂಪೆನಿ ಜಿಲ್ಲೆಯಲ್ಲಿ 5,500 ಕೋಟಿ ಬಂಡವಾಳ ಹೂಡಲು ಮುಂದೆ ಬಂದಿತ್ತು. ರೂ. 10 ಕೋಟಿಯನ್ನು ಕೆಐಡಿಬಿಗೆ ಪಾವತಿಸಿದ್ದರೂ 800 ಎಕರೆ ಭೂಮಿ ನೀಡಿಲ್ಲ. ಈ ವೈಫಲ್ಯದಿಂದಲೇ ಬೃಹತ್ ಉದ್ಯಮ ಆರಂಭವಾಗುತ್ತಿಲ್ಲ.

 ಬಸವರಾಜ ಜವಳಿ, ಅಧ್ಯಕ್ಷ 

 ಬೆಳಗಾವಿ ವಾಣಿಜ್ಯೋದ್ಯಮ ಸಂಸ್ಥೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry