ಬೆಳಗಾವಿಯಲ್ಲಿ ವಿಶ್ವ ಕನ್ನಡ ಸಮ್ಮೇಳನ : ಸ್ವಾಗತ ಭವನ ಕಾಮಗಾರಿ ನೆನೆಗುದಿಗೆ

7

ಬೆಳಗಾವಿಯಲ್ಲಿ ವಿಶ್ವ ಕನ್ನಡ ಸಮ್ಮೇಳನ : ಸ್ವಾಗತ ಭವನ ಕಾಮಗಾರಿ ನೆನೆಗುದಿಗೆ

Published:
Updated:
ಬೆಳಗಾವಿಯಲ್ಲಿ ವಿಶ್ವ ಕನ್ನಡ ಸಮ್ಮೇಳನ : ಸ್ವಾಗತ ಭವನ ಕಾಮಗಾರಿ ನೆನೆಗುದಿಗೆ

ಬೆಳಗಾವಿ: ವಿಶ್ವ ಕನ್ನಡ ಸಮ್ಮೇಳನ ಸ್ವಾಗತ ಭವನ ಹಾಗೂ ಸುವರ್ಣ ಸಾಂಸ್ಕೃತಿಕ ಸಮುಚ್ಚಯ ಭವನದ ನಿರ್ಮಾಣ ಕಾರ್ಯ ಮೂರು ವರ್ಷಗಳಿಂದ ನಡೆದಿದೆ. ಮಾರ್ಚ್‌ನಲ್ಲಿ ವಿಶ್ವ ಕನ್ನಡ ಸಮ್ಮೇಳನ ನಡೆಯಲಿದೆ. ಆದರೆ ಕಟ್ಟಡ ಕಾಮಗಾರಿ ಮಾತ್ರ ಇನ್ನೂ ಪೂರ್ಣಗೊಂಡಿಲ್ಲ.ಬೆಳಗಾವಿಯಲ್ಲಿ ವಿಶ್ವ ಕನ್ನಡ ಸಮ್ಮೇಳನ ನಡೆಸಲು 2007ನೇ ಸಾಲಿನಲ್ಲಿ ನಿರ್ಧರಿಸಲಾಯಿತು. ಮುಂದೆ 2008ರಲ್ಲಿ 1.50 ಕೋಟಿ ರೂಪಾಯಿ ವೆಚ್ಚದಲ್ಲಿ ಸಮ್ಮೇಳನದ ಸ್ವಾಗತ ಭವನವನ್ನು ಜಿಲ್ಲಾ ಕ್ರೀಡಾಂಗಣದ ಬಳಿ ನಿರ್ಮಿಸಲು ನಿರ್ಧರಿಸಲಾಯಿತು.ರಾಜಕೀಯ ಒತ್ತಡಗಳಿಗೆ ಮಣಿದು ಸ್ವಾಗತ ಭವನವನ್ನು ಕುಮಾರ ಗಂಧರ್ವ ರಂಗಮಂದಿರದ ಹಿಂಭಾಗದಲ್ಲಿರುವ ಜಾಗದಲ್ಲಿ ನಿರ್ಮಿಸಲು ನಿರ್ಧರಿಸಲಾಯಿತು. ಉಸ್ತುವಾರಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ನೀಡಲಾಯಿತು. ನಿರ್ಮಾಣದ ಜವಾಬ್ದಾರಿಯನ್ನು ಬೆಳಗಾವಿ ಅಭಿವೃದ್ಧಿ ಪ್ರಾಧಿಕಾರಕ್ಕೆ ವಹಿಸಲಾಯಿತು.ವಿಶ್ವ ಕನ್ನಡ ಸಮ್ಮೇಳನ ದಿನಾಂಕ ಹೇಗೆ ಮುಂದಕ್ಕೆ ಹೋಗುತ್ತಾ ಹೋಯಿತೋ ಅದರಂತೆಯೇ ಸ್ವಾಗತ ಭವನದ ನಿರ್ಮಾಣ ಕಾರ್ಯವೂ ಮುಂದೆ ಹೋಗುತ್ತಲೇ ಹೋಯಿತು. ಕೆಲವೊಮ್ಮೆ ಹಣದ ಸಮಸ್ಯೆ, ಕೆಲವೊಮ್ಮೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಇಂದಿಗೂ ಕಾಮಗಾರಿ ಪೂರ್ಣಗೊಂಡಿಲ್ಲ.ನೆಲ ಮಹಡಿಯಲ್ಲಿ ಸ್ವಾಗತ ಕೇಂದ್ರ, ವಸ್ತು ಸಂಗ್ರಹಾಲಯ ಹಾಗೂ ಜಾನಪದ ವಿಭಾಗ, ಮೊದಲ ಮಹಡಿಯಲ್ಲಿ ವಸ್ತು ಸಂಗ್ರಹಾಲಯ, ಸಾಹಿತ್ಯ -ಸಾಂಸ್ಕೃತಿಕ ವಿಭಾಗ ಹಾಗೂ ವಿಡಿಯೊ ಕೇಂದ್ರ, ಎರಡನೇ ಮಹಡಿಯಲ್ಲಿ ಗ್ರಂಥಾಲಯ, ಆರ್ಟ್ ಗ್ಯಾಲರಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯನ್ನು ಕಟ್ಟಡ ಒಳಗೊಂಡಿದೆ.ಆದರೆ ಇಲ್ಲಿಯವರೆಗೆ ಯಾವುದೇ ಹಂತದ ಕಾಮಗಾರಿ ಪೂರ್ಣಗೊಂಡು ಉಪಯೋಗಕ್ಕೆ ಲಭ್ಯವಾಗಿಲ್ಲ. ಮೊದಲ ಹಂತದ ಕಾಮಗಾರಿ ಪೂರ್ಣಗೊಂಡಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಆ ಕಟ್ಟಡ ಇಲ್ಲಿಯವರೆಗೆ ಸುಣ್ಣ-ಬಣ್ಣ ಕಂಡಿಲ್ಲ.ಎರಡನೇ ಹಂತದ ಕಾಮಗಾರಿಗೆ ಈಗಷ್ಟೇ ಅನುಮತಿ ದೊರೆತಿದೆ. ಇನ್ನು ಮೇಲಷ್ಟೇ ಕಾಮಗಾರಿ ಆರಂಭವಾಗಬೇಕಿದೆ.

ಗಡಿ ಭವನ: ಕನ್ನಡ ಚಟುವಟಿಕೆಗಳಿಗೆ ಅನುಕೂಲ ಒದಗಿಸಿಕೊಡಲು 20 ಲಕ್ಷ ರೂಪಾಯಿ ವೆಚ್ಚದಲ್ಲಿ 2007ನೇ ಸಾಲಿನಲ್ಲಿ ವಡಗಾವಿ ಪ್ರದೇಶದಲ್ಲಿ ಗಡಿ ಕನ್ನಡ ಭವನ ನಿರ್ಮಾಣಗೊಂಡಿದೆ. ಆದರೆ ಇಂದಿಗೂ ಉದ್ಘಾಟನೆಯಾಗಿಲ್ಲ.ಉದ್ಘಾಟನೆಗೆ ಮುನ್ನವೇ ಭವನ ಮಳೆಗೆ ಸೋರಲಾರಂಭಿಸಿತು. ಕಳಪೆ ಕಾಮಗಾರಿಯನ್ನು ಖಂಡಿಸಿ ಪ್ರತಿಭಟನೆ ನಡೆಸಿದ ಕನ್ನ ಪರ ಸಂಘಟನೆಗಳವರು, ದುರಸ್ತಿ ಕಾಮಗಾರಿ ಪೂರ್ಣಗೊಳಿಸುವವರೆಗೂ ಉದ್ಘಾಟನೆಗೆ ಅವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದರು.ಆ ನಂತರ ಅದನ್ನು ದುರಸ್ತಿ ಮಾಡಲಾಯಿತು. 6 ಲಕ್ಷ ರೂಪಾಯಿ ಖರ್ಚು ಮಾಡಿ ಫಾಲ್ಸ್ ಸೀಲಿಂಗ್ ಅಳವಡಿಸಲಾಯಿತು. ಅಳವಡಿಸಿದ ಆರು ತಿಂಗಳಿನಲ್ಲೇ  ಫಾಲ್ಸ್ ಸೀಲಿಂಗ್ ಕುಸಿಯುವ ಮೂಲಕ ಮತ್ತೊಮ್ಮೆ ಕಳಪೆ ಕಾಮಗಾರಿಯ ಅನಾವರಣವಾಯಿತು.ದಾಖಲೆಗಳಲ್ಲಿ ಕಾಮಗಾರಿ ಪೂರ್ಣಗೊಂಡು ಮೂರು ವರ್ಷ ಕಳೆದಿದೆ. ಶೀಘ್ರದಲ್ಲಿಯೇ ಉದ್ಘಾಟನೆ ಮಾಡುವುದಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳು ಹೇಳುತ್ತ ಬಂದಿದ್ದಾರೆ. ಆದರೆ ಇಲ್ಲಿಯವರೆಗೂ ಅದಕ್ಕೆ ಉದ್ಘಾಟನೆಯ ಭಾಗ್ಯ ದೊರಕಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry