ಸೋಮವಾರ, ಏಪ್ರಿಲ್ 19, 2021
32 °C

ಬೆಳಗಾವಿಯ ಹಾಕಿ ರತ್ನತ್ರಯರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿಯ ಹಾಕಿಪ್ರಿಯರಿಗೆ 1950 ಹಾಗೂ 60ರ ದಶಕ ಸುವರ್ಣಯುಗ. ಆ ಸಮಯದಲ್ಲಿ- ಒಬ್ಬರಲ್ಲ ಇಬ್ಬರಲ್ಲ ಮೂವರು ಒಲಿಂಪಿಕ್ ಹಾಕಿ ಆಟಗಾರರು -ಅದೂ ದೇಶಕ್ಕಾಗಿ ಬಂಗಾರವನ್ನೇ ಗೆದ್ದು ತಂದವರು- ಈ `ಛೋಟಾ ಮಹಾಬಳೇಶ್ವರ~ದಲ್ಲಿ ನೆಲೆಸಿದ್ದರು.

 

ಜಗತ್ತಿನ ಸರ್ವಶ್ರೇಷ್ಠ ಗೋಲ್ ಕೀಪರ್‌ಗಳಲ್ಲಿ ಒಬ್ಬರೆನಿಸಿದ ಶಂಕರ್ ಲಕ್ಷ್ಮಣ, ಫಾರ್ವರ್ಡ್ ಆಟಗಾರ ಬಂಡು ಪಾಟೀಲ ಹಾಗೂ ಡಿಫೆನ್ಸ್‌ನಲ್ಲಿ ಪ್ರಮುಖ `ಸೇನಾನಿ~ಯಾಗಿದ್ದ ಶಾಂತಾರಾಮ್ ಜಾಧವ್ ಅವರೇ ಆ ರತ್ನತ್ರಯರು.



ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಹೊಸತರಲ್ಲಿ ಬೆಳಗಾವಿ ಹಾಕಿ ಮಾಯೆಯಲ್ಲಿ ಮುಳುಗಿತ್ತು. ಈ ರಾಷ್ಟ್ರೀಯ ಕ್ರೀಡೆಯನ್ನು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಕೆ.ಟಿ. ಪೂಜಾರಿ, ಸ್ಟೇಶನ್ ಗ್ರೌಂಡ್‌ನಲ್ಲಿ ಟೂರ್ನಿಯನ್ನು ಸಂಘಟಿಸುತ್ತಿದ್ದರು.

 

ಮರಾಠಾ ಲೈಟ್ ಇನ್‌ಫೆಂಟ್ರಿ ರೆಜಿಮೆಂಟಲ್ ಸೆಂಟರ್ (ಎಂಎಲ್‌ಐಆರ್‌ಸಿ), ಬೆಳಗಾವಿ ಪೊಲೀಸ್, ಲಕ್ಕಿ ಸ್ಟಾರ್, ಯಂಗ್ ಮರಾಠ, ಬೇಯಾನ್ ಸ್ಮಿತ್ ಹಾಗೂ ಸರ್ದಾರ್ ಹೈಸ್ಕೂಲ್‌ನಂತಹ ಪ್ರತಿಷ್ಠಿತ ತಂಡಗಳು ಅದರಲ್ಲಿ ಪಾಲ್ಗೊಳ್ಳುತ್ತಿದ್ದವು.



ಹನುಮಂತರಾವ್ ಸಾವಂತ್, ಆಗ್ರಾ ಸಹೋದರರು, ಬಾಬುರಾವ್ ಸಾವಂತ್, ದತ್ತಾ ಜಾಧವ್, ಜ್ಯೋತಿಬಾ ಲಗಾಡೆ, ಪರಶುರಾಮ್ (ಮಾಮಾ), ಬಾಬುರಾವ್ ಪಾಟೀಲ (ಬಂಡು ಪಾಟೀಲ ಅವರ ತಂದೆ) ಅವರಂತಹ ಘಟಾನುಘಟಿ ಆಟಗಾರರು ತಮ್ಮ ಕೌಶಲ್ಯ ಪೂರ್ಣವಾದ ಆಟದಿಂದ ಹಾಕಿಪ್ರಿಯರ ಮನಸೂರೆಗೊಂಡಿದ್ದರು. ಆದರೆ ಈ ಪ್ರತಿಭಾವಂತ ಸಾಧಕರಿಗೆ ಬೆಳಗಾವಿಯಿಂದ ಹೊರಗೆ ಆಡುವಂತಹ ಅದೃಷ್ಟ ಸಿಗಲಿಲ್ಲ.



ಹಾಕಿ ಚಟುವಟಿಕೆಗೆ ಒಂದು ಸಂಘಟನಾತ್ಮಕ ಚೌಕಟ್ಟನ್ನು ಒದಗಿಸುವ ದೃಷ್ಟಿಯಿಂದ ಕರ್ನಲ್ ಮೋಯಿನುದ್ದೀನ್ 1950ರಲ್ಲಿ ಬೆಳಗಾವಿ ಜಿಲ್ಲಾ ಹಾಕಿ ಸಂಸ್ಥೆಗೆ ಶ್ರೀಕಾರ ಹಾಡಿದರು. ಆಗಲೇ ಈ ಪುಟ್ಟ ನಗರದ ಹಾಕಿ ಸುವರ್ಣಯುಗಕ್ಕೆ ಮುನ್ನುಡಿ ಬಿತ್ತು. ಏಕಕಾಲದಲ್ಲೇ ಮೂವರು ಒಲಿಂಪಿಯನ್‌ಗಳನ್ನು ರಾಷ್ಟ್ರೀಯ ತಂಡಕ್ಕೆ ಎತ್ತಿ ಕೊಟ್ಟಿದ್ದರಿಂದ ಬೆಳಗಾವಿ ರಾಷ್ಟ್ರಮಟ್ಟದಲ್ಲಿ ಪ್ರಕಾಶಿಸಿತು.



ಬೆಳಗಾವಿ ಪೊಲೀಸ್ ತಂಡದಲ್ಲಿದ್ದ ಅಪ್ಪ ಬಾಬುರಾವ್ ಪಾಟೀಲರ ಆಟವನ್ನು ನೋಡುತ್ತಲೇ ಬೆಳೆದವರು ಬಂಡು. ಚಾವಟ್ ಗಲ್ಲಿ ಮನೆಯಿಂದ ಹಾಕಿ ಆಟವನ್ನು ಕಣ್ತುಂಬಿಕೊಳ್ಳಲೆಂದೇ ಅವರು ಸ್ಟೇಶನ್ ಗ್ರೌಂಡ್‌ಗೆ ಓಡಿ ಬರುತ್ತಿದ್ದರು. ಸಹಜವಾಗಿಯೇ ಅಪ್ಪನ ಕಲಾತ್ಮಕ ಆಟ ಅವರಿಗೂ ಸಿದ್ಧಿಸಿತು.



`ಗಂಡೆದೆ ಇದ್ದವರಿಗಷ್ಟೇ ಹಾಕಿ~ ಎನ್ನುವಂತಹ ಕಾಲದಲ್ಲಿ ಮೈದಾನಕ್ಕೆ ಧುಮುಕಿದ ಈ ಜೂನಿಯರ್ ಪಾಟೀಲ, ತಂತ್ರಗಾರಿಕೆಯಲ್ಲಿ ಪಳಗಿದ ಹುಲಿಯಾಗಿದ್ದರು. ತೆಳ್ಳನೆ ಶರೀರ ಹಾಗೂ ಲವಲವಿಕೆ ವ್ಯಕ್ತಿತ್ವ ಅವರನ್ನು ಒಳ್ಳೆಯ ಫಾರ್ವರ್ಡ್ ಆಟಗಾರನನ್ನಾಗಿ ರೂಪಿಸಿತು.



ಸ್ಟೇಶನ್ ಗ್ರೌಂಡ್‌ನಲ್ಲಿ ಬಂಡು ತೋರುತ್ತಿದ್ದ ಚಾಕಚಕ್ಯತೆ ಆಟ ಬಹುಬೇಗ ಮಿಲಿಟರಿ ಆಟಗಾರರ ಗಮನವನ್ನೂ ಸೆಳೆಯಿತು. ತಮ್ಮ 17ನೇ ವಯಸ್ಸಿನಲ್ಲಿ (ಜನನ 1936 ಜನವರಿ 1) ಅವರು, ಎಂಎಲ್‌ಐಆರ್‌ಸಿಯಲ್ಲಿ ಸೈನಿಕರಾಗಿ ಸೇರ್ಪಡೆಯಾದರು. ಅಲ್ಲಿ ದೊರೆತ ಶಂಕರ್ ಹಾಗೂ ಶಾಂತಾರಾಮ್ ಅವರ ಸಾಂಗತ್ಯ ಬಂಡು ಅವರನ್ನು ಎತ್ತರೆತ್ತರಕ್ಕೆ ಬೆಳೆಸಿತು.



ಬೆಳಗಾವಿಯ ಈ ಹೆಮ್ಮೆಯ ಪುತ್ರ ಎರಡು ಒಲಿಂಪಿಕ್ ಕೂಟಗಳಲ್ಲಿ (ರೋಮ್-1960, ಟೋಕಿಯೊ-1964) ಆಡಿದರು. ರೋಮ್‌ನಲ್ಲಿ ಬೆಳ್ಳಿ ಹಾಗೂ ಟೋಕಿಯೊದಲ್ಲಿ ಬಂಗಾರದ ಪದಕವನ್ನು ಹೆಕ್ಕಿ ತಂದಿತು ಭಾರತ ತಂಡ. 1962ರಲ್ಲಿ (ಇಂಡೋನೇಷ್ಯಾ) ನಡೆದ ಏಷ್ಯನ್ ಹಾಕಿ ಚಾಂಪಿಯನ್‌ಷಿಪ್‌ನಲ್ಲಿ ಕೂಡ ಅವರು ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದ್ದರು.



`ಸ್ಟಿಕ್ ಬಾಯಿಗೆ ಚೆಂಡು ಸಿಕ್ಕರೆ ಸಾಕು, ಯಾರ ಕೈಗೂ ಸಿಗದೆ ಫೀಲ್ಡ್‌ನಲ್ಲಿ ಚಿರತೆಯಂತೆ ಅವರು ಓಡುತ್ತಿದ್ದರು. ನಾವು ಆಡುವ ದಿನಗಳಲ್ಲಿ ಇಷ್ಟೊಂದು ಚುರುಕಿನ ಫಾರ್ವರ್ಡ್ ಆಟಗಾರನನ್ನು ಕಂಡಿದ್ದೇ ಕಡಿಮೆ~ ಎನ್ನುತ್ತಾರೆ ಆಗಿನ ದಿನಗಳಿಂದಲೂ ಬೆಳಗಾವಿ ಹಾಕಿ ಬೆಳವಣಿಗೆಯನ್ನು ಗಮನಿಸುತ್ತಾ ಬಂದಿರುವ ಶ್ಯಾಮ್ ದಮುನೆ.

 

`ಭಾರತ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ ಆಟಗಾರ ಬಂಡು~ ಎಂಬುದನ್ನು ದಮುನೆ ಸೇರಿದಂತೆ ಹಲವು ಹಿರಿಯ ಆಟಗಾರರು ಪ್ರತಿಪಾದಿಸುತ್ತಾರೆ. ಆದರೆ, ಬಂಡು ಅವರ ಗೋಲು ಗಳಿಕೆ ವಿಷಯವಾಗಿ ಪರಿಪೂರ್ಣವಾದ ಮಾಹಿತಿ ಎಲ್ಲಿಯೂ ಸಿಗುವುದಿಲ್ಲ. `ಆಗಿನ ದಾಖಲೆಗಳನ್ನು ಲೆಕ್ಕ ಇಟ್ಟವರು ಯಾರು~ ಎಂದು ಅವರು ಮರುಪ್ರಶ್ನೆ ಹಾಕುತ್ತಾರೆ.



ಶಂಕರ್, ಶಾಂತಾರಾಮ್ ಹಾಗೂ ಬಂಡು ಅವರಿದ್ದ ಎಂಎಲ್‌ಐಆರ್‌ಸಿ ತಂಡ 1963ರಲ್ಲಿ ಆಗಾಖಾನ್ ಗೋಲ್ಡ್ ಕಪ್ ಹಾಕಿ ಟ್ರೋಫಿಯನ್ನು ಗೆದ್ದುಕೊಂಡು ಬಂದಿತು. ಯುರೋಪ್, ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದ ಬಂಡು, ತಮ್ಮ ಆಟದ ಮೂಲಕ ಆ ಮೂರೂ ಖಂಡಗಳ ಪ್ರೇಕ್ಷಕರನ್ನು ರಂಜಿಸಿದ್ದರು.



ಕ್ರೀಡಾ ಜೀವನದ ಉತ್ತುಂಗದ ದಿನಗಳನ್ನು ಕಂಡ ಬಳಿಕವೂ ಬಂಡು ಅವರ ಹಾಕಿ ಹೃದಯ ತಣಿಯಲಿಲ್ಲ. ಬೆಳಗಾವಿ ಮತ್ತು ಕೊಲ್ಲಾಪುರದ ಯುವ ಆಟಗಾರರಿಗೆ ಅವರು, ಸ್ಟಿಕ್ ಹಿಡಿದು `ಹಾಕಿ ಮೇಷ್ಟ್ರಾ~ಗಿ ಕ್ರೀಡಾ ಸೇವೆ ಮಾಡಿದರು.

 

ತನ್ನ ಮನೆ ಅಂಗಳದಲ್ಲಿ ಬೆಳೆದು ಮಾಧುರ್ಯ ಪಸರಿಸಿದ ಈ ಕ್ರೀಡಾ ಕುಸುಮದ ಹೆಸರಿನಲ್ಲಿ ರಾಷ್ಟ್ರಮಟ್ಟದ ಹಾಕಿ ಟೂರ್ನಿಯನ್ನು ಆಯೋಜಿಸುತ್ತಾ ಬಂದಿರುವ ಬೆಳಗಾವಿ ಹಾಕಿ ಸಂಸ್ಥೆ ಬಂಡು ಅವರ ನೆನಪು ಹಸಿರಾಗಿರುವಂತೆ ಮಾಡಿದೆ.



ಬೆಳಗಾವಿಯ ಮೂವರೂ ಒಲಿಂಪಿಯನ್ ತಾರೆಗಳ `ಗಳಿಕೆ~ಯಿಂದ ಎಂಎಲ್‌ಐಆರ್‌ಸಿ ಕ್ರೀಡಾ ವಸ್ತು ಸಂಗ್ರಹಾಲಯ ಶ್ರೀಮಂತವಾಗಿದೆ. ಕ್ರೀಡಾ ಉಡುಪು ಧರಿಸಿ ತಮ್ಮ ಸೈನ್ಯಾಧಿಕಾರಿ ಜೊತೆಯಲ್ಲಿ ನಿಂತ ಈ ಕ್ರೀಡಾಪಟುಗಳ ವರ್ಣಚಿತ್ರ ಗಮನಸೆಳೆಯುತ್ತದೆ. ಕ್ರೀಡಾ ಸಾಧಕರ ಮಧ್ಯೆ ಬ್ಲೇಜರ್ ಹಾಕಿಕೊಂಡು ನಿಂತಿರುವ ಮೇಜರ್ ಬಿ.ಎ. ಸಯ್ಯದ್, ಆ ಗೌರವ ಸಿಕ್ಕಿದ್ದಕ್ಕೆ ಹೆಮ್ಮೆಯಿಂದ ಎದೆಯುಬ್ಬಿಸಿದ್ದಾರೆ.



ಎಂಎಲ್‌ಐಆರ್‌ಸಿಗೆ ಭೇಟಿ ನೀಡಿದ ವಿವಿಧ ಸೈನ್ಯಾಧಿಕಾರಿಗಳ ಜೊತೆ ಈ ಆಟಗಾರರು ತೆಗೆಸಿಕೊಂಡ ಭಾವಚಿತ್ರಗಳು, ಟೋಕಿಯೊದಲ್ಲಿ ಭರ್ತಿಯಾಗಿದ್ದ ಕ್ರೀಡಾಂಗಣದಲ್ಲಿ ಫೋಟೋಕ್ಕೆ ಬಂಡು ಪಾಟೀಲ ನೀಡಿದ ಪೋಸು, ಜಪಾನ್‌ನಲ್ಲಿ ಒಲಿಂಪಿಕ್ ಸ್ವರ್ಣ ಸಂಭ್ರಮ ಆಚರಿಸಿಕೊಂಡ ಬಳಿಕ ಪ್ರಧಾನಿ ಜವಾಹರಲಾಲ್ ನೆಹರೂ ಅವರನ್ನು ಭಾರತ ತಂಡ ಭೇಟಿ ಮಾಡಿದ ಅಪೂರ್ವ ಕ್ಷಣ...

 

ಇವೇ ಮೊದಲಾದ ಬಿಂಬಗಳು ಇಲ್ಲಿಯ ಬಣ್ಣದ ಫ್ರೇಮಿನಲ್ಲಿ ಬಂಧಿಯಾಗಿವೆ. ಶಂಕರ್, ಬಂಡು ಹಾಗೂ ಶಾಂತಾರಾಮ್ ಬಳಸಿದ ಹಾಕಿ ಸ್ಟಿಕ್‌ಗಳು, ಚರ್ಮದ ಕಿಟ್‌ಗಳು, ಬೂಟುಗಳು, ಪ್ಯಾಡ್‌ಗಳು, ರಾಷ್ಟ್ರೀಯ ತಂಡದ ಬ್ಲೇಜರ್‌ಗಳು ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾ ಕುಳಿತಿವೆ. ಗೌರವ ಕ್ಯಾಪ್ಟನ್ ಹುದ್ದೆಗೇರಿದ ಶಂಕರ್, ದೊರೆತ ಎಲ್ಲ ಮೆಡಲ್‌ಗಳನ್ನು ತುರಾಯಿಯಂತೆ ಕಿಸೆಯ ಮೇಲೆ ಚುಚ್ಚಿಕೊಂಡು ಮಿಲಟರಿ ಉಡುಪಿನಲ್ಲಿ ತೆಗೆಸಿಕೊಂಡ ಫೋಟೋ ಖುಷಿ ಕೊಡುತ್ತದೆ.



ನಿವೃತ್ತಿ ಬಳಿಕ ಶಂಕರ್ ತಮ್ಮ ತವರು ಮಧ್ಯ ಪ್ರದೇಶದ ಸೇನಾನೆಲೆಯಾದ ಮಾವ್ ಪಟ್ಟಣಕ್ಕೆ ತೆರಳಿದರೆ, ಬಂಡು ಚಾವಟ್ ಗಲ್ಲಿಯ ತಮ್ಮ ಪೂರ್ವಿಕರ ಮನೆಯಲ್ಲೇ ತಂಗಿದ್ದರು. 1988ರ ಆಗಸ್ಟ್ 23ರಂದು ಅಸುನೀಗಿದರು.

 

ಅವರ ಮಕ್ಕಳು ವಾಸವನ್ನು ಈಗ ಬದಲಿಸಿದ್ದಾರೆ. ಶಾಂತಾರಾಮ್ ಮೂಲತಃ ಪುಣೆಯವರು. ತಮ್ಮ ವಿಶ್ರಾಂತ ಜೀವನಕ್ಕೆ ಅವರು ಆಯ್ದುಕೊಂಡಿದ್ದು ಅದೇ ನಗರವನ್ನು. 1960ರ ಒಲಿಂಪಿಕ್ ಕೂಟದಲ್ಲಿ ಆಡಿದ್ದ ಅವರು, ಪಾಕಿಸ್ತಾನ ವಿರುದ್ಧದ ಫೈನಲ್‌ನಲ್ಲಿ `ಡಿ~ ಸರ್ಕಲ್‌ನಲ್ಲಿ ನಮಗೆ ಸಾಕಷ್ಟು ಅವಕಾಶಗಳು ಸಿಕ್ಕರೂ ಅವುಗಳನ್ನು ಬಳಸಿಕೊಳ್ಳಲು ವಿಫಲರಾದೆವು.



ಪಾಕಿಸ್ತಾನ ಅದರ ಸಂಪೂರ್ಣ ಪ್ರಯೋಜನ ಪಡೆದುಕೊಂಡು ಗೆಲುವಿನ ನಗೆ ಬೀರಿತು ಎಂದು ಹೇಳಿದ್ದರಂತೆ. ಪಾಕಿಸ್ತಾನದ ವಿರುದ್ಧ ಹಾಕಿ ಫೈನಲ್‌ನಲ್ಲಿ ಸೋತರೂ 1965 ಹಾಗೂ 1971ರಲ್ಲಿ ನಡೆದ ಯುದ್ಧದಲ್ಲಿ ಪಾಲ್ಗೊಂಡು ಆ ದೇಶವನ್ನು ಸೋಲಿಸಿದ ತೃಪ್ತಿ ಇದೆ ಎಂದು ಅವರು ಹೇಳಿದ್ದನ್ನು ಬೆಳಗಾವಿ ಆಟಗಾರರು ಸ್ಮರಿಸಿಕೊಳ್ಳುತ್ತಾರೆ.

ಬೆಳಗಾವಿ ಹಾಕಿ ಪ್ರಪಂಚವನ್ನು ಮಾತ್ರ ಈ ಮೂವರೂ ಒಲಿಂಪಿಯನ್ನರು ಮತ್ತೆ ಮತ್ತೆ ನೆನಪಾಗಿ ಕಾಡುತ್ತಲೇ ಇದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.