ಬೆಳಗಾವಿ ಅಧಿವೇಶನದಲ್ಲಿ16 ಮಸೂದೆಗಳು ಚರ್ಚೆಗೆ

7

ಬೆಳಗಾವಿ ಅಧಿವೇಶನದಲ್ಲಿ16 ಮಸೂದೆಗಳು ಚರ್ಚೆಗೆ

Published:
Updated:

ಬೆಂಗಳೂರು: ರಾಜ್ಯಪಾಲರಿಂದ ವಾಪಸ್ ಬಂದಿರುವ ಕರ್ನಾಟಕ ಪಂಚಾಯತ್ ರಾಜ್ ತಿದ್ದುಪಡಿ ಮಸೂದೆ, ಕರ್ನಾಟಕ ಭೂ ಕಂದಾಯ ತಿದ್ದುಪಡಿ ಮಸೂದೆ ಸೇರಿದಂತೆ 16 ಮಸೂದೆಗಳು ಬೆಳಗಾವಿ ಅಧಿವೇಶನದಲ್ಲಿ ಚರ್ಚೆಗೆ ಬರಲಿವೆ ಎಂದು ವಿಧಾನಸಭೆಯ ಸ್ಪೀಕರ್ ಕೆ.ಜಿ.ಬೋಪಯ್ಯ ತಿಳಿಸಿದರು.

ಇದೇ 5ರಿಂದ 12ರವರೆಗೆ ಒಟ್ಟು ಆರು ದಿನ, ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಅಧಿವೇಶನ ನಡೆಯಲಿದೆ. ಇದಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಈ ಮೊದಲೇ ಮಂಡನೆಯಾಗಿರುವ ಕರ್ನಾಟಕ ಭೂ ಸುಧಾರಣೆಗಳ ತಿದ್ದುಪಡಿ ಮಸೂದೆ, ಕರ್ನಾಟಕ ರಾಜ್ಯ ಮುಕ್ತವಿಶ್ವವಿದ್ಯಾಲಯ ತಿದ್ದುಪಡಿ ಮಸೂದೆ, ಮಣಿಪಾಲ ವಿಶ್ವವಿದ್ಯಾಲಯ ಮಸೂದೆ, ಅರ್ಕ ವಿಶ್ವವಿದ್ಯಾಲಯ ಮಸೂದೆ, ದಯಾನಂದ ಸಾಗರ ವಿಶ್ವವಿದ್ಯಾಲಯ ಮಸೂದೆ, ವೆಲ್ಲೂರು ತಾಂತ್ರಿಕ ವಿಶ್ವವಿದ್ಯಾಲಯ ಮಸೂದೆ, ಎಂ.ಎಸ್. ರಾಮಯ್ಯ ಅನ್ವಯಿಕ ವಿಶ್ವವಿದ್ಯಾಲಯ ಮಸೂದೆ, ದೇವರಾಜ್ ಅರಸು ವಿಶ್ವವಿದ್ಯಾಲಯ ಮಸೂದೆ, ಕರ್ನಾಟಕ ಪೌರನಿಗಮಗಳ ತಿದ್ದುಪಡಿ ಮಸೂದೆಗಳು ಚರ್ಚೆಗೆ ಬರಲಿವೆ ಎಂದು ತಿಳಿಸಿದರು.

ಇದಲ್ಲದೆ ಕರ್ನಾಟಕ ವಿಧಾನಮಂಡಲದ ವೇತನಗಳು, ನಿವೃತ್ತಿ ವೇತನಗಳು ಮತ್ತು ಭತ್ಯೆಗಳ (ಎರಡನೇ ತಿದ್ದುಪಡಿ) ಮಸೂದೆ, ಕರ್ನಾಟಕ ಭೂ ಸುಧಾರಣೆಗಳ (ಎರಡನೇ ತಿದ್ದುಪಡಿ) ಮಸೂದೆ, ಕರ್ನಾಟಕ ನರ್ಸಿಂಗ್ ಮತ್ತು ಅರೆವೈದ್ಯಕೀಯ ವಿಜ್ಞಾನಗಳ ಶಿಕ್ಷಣ (ನಿಯಂತ್ರಣ) ಪ್ರಾಧಿಕಾರ ಮಸೂದೆ, ಕರ್ನಾಟಕ ಗೋಹತ್ಯೆ ನಿಷೇಧ ಮತ್ತು ಜಾನುವಾರು ಸಂರಕ್ಷಣೆ (ತಿದ್ದುಪಡಿ) ಮಸೂದೆ ಹಾಗೂ ದಿ ಕರ್ನಾಟಕ ಲಿಫ್ಟ್ ಎಸ್ಕಲೇಟರ್ಸ್‌ ಅಂಡ್ ಪ್ಯಾಸೆಂಜರ್ ಕನ್ವೆಯರ್ಸ್‌ ಬಿಲ್ ಮಂಡನೆಯಾಗಲಿವೆ ಎಂದರು.

ಒಟ್ಟು 705 ಪ್ರಶ್ನೆಗಳು ಬಂದಿದ್ದು, 704 ಪ್ರಶ್ನೆಗಳು ಅಂಗೀಕಾರವಾಗಿವೆ. 34 ಗಮನ ಸೆಳೆಯುವ ಸೂಚನೆಗಳು, ನಿಯಮ 59ರ ಅಡಿ 14 ಸೂಚನೆಗಳು ಬಂದಿವೆ ಎಂದು ಹೇಳಿದರು.

ವಸತಿ ವ್ಯವಸ್ಥೆ

ವಿಧಾನಸಭೆಯ ಸ್ಪೀಕರ್, ಉಪಾಧ್ಯಕ್ಷರು, ವಿರೋಧ ಪಕ್ಷದ ನಾಯಕರು, ಸರ್ಕಾರಿ ಮುಖ್ಯ ಸಚೇತಕರು, ವಿರೋಧ ಪಕ್ಷದ ಮುಖ್ಯ ಸಚೇತಕರಿಗೆ ಬೆಳಗಾವಿ ವಿಶ್ವವಿದ್ಯಾಲಯದ ಅತಿಥಿ ಗೃಹದಲ್ಲಿ ತಂಗಲು ವ್ಯವಸ್ಥೆ ಮಾಡಲಾಗಿದೆ. ಶಾಸಕರಿಗೆ ಪ್ರಮುಖ ಹೋಟೆಲ್‌ಗಳಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.

ವಿಧಾನಸಭೆಯ ಸಭಾಂಗಣದ ನವೀಕರಣ ಕಾರ್ಯ ಈಗಾಗಲೇ ಆರಂಭವಾಗಿದೆ.ಜನವರಿ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಒಟ್ಟು 15 ಕೋಟಿ ರೂಪಾಯಿ ವೆಚ್ಚ ಮಾಡಲಾಗುವುದು ಎಂದು ತಿಳಿಸಿದರು.ಇದೇ ಸಂದರ್ಭದಲ್ಲಿ ವಿಧಾನಸಭೆ ಸಚಿವಾಲಯದ ಸಿಬ್ಬಂದಿ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದೂ ಬೋಪಯ್ಯ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry