ಬೆಳಗಾವಿ: ಉತ್ತಮ ಮಳೆ-ರೈತರಲ್ಲಿ ಹರ್ಷ

ಬುಧವಾರ, ಜೂಲೈ 17, 2019
24 °C

ಬೆಳಗಾವಿ: ಉತ್ತಮ ಮಳೆ-ರೈತರಲ್ಲಿ ಹರ್ಷ

Published:
Updated:

ಬೆಳಗಾವಿ: ನಗರ ಸೇರಿದಂತೆ ಜಿಲ್ಲೆಯಲ್ಲಿ ಶುಕ್ರವಾರ ಉತ್ತಮ ಮಳೆಯಾಗಿದೆ. ಬೆಳಗಾವಿ, ಖಾನಾಪುರ, ನಿಪ್ಪಾಣಿಯಲ್ಲಿ ಕೆಲ ಹೊತ್ತು ಭಾರಿ ಮಳೆ ಸುರಿಯಿತು. ಜಿಲ್ಲೆಯ ಉಳಿದ ಎಲ್ಲ ತಾಲ್ಲೂಕುಗಳಲ್ಲಿ ಜಿಟಿಜಿಟಿ ಮಳೆ ಸುರಿಯಲಾರಂಭಿಸಿದೆ.

ಬೆಳಗಾವಿ ಹಾಗೂ ಖಾನಾಪುರದಲ್ಲಿ ಗುರುವಾರ ರಾತ್ರಿಯಿಂದಲೇ ಮಳೆ ಸುರಿಯಲಾರಂಭಿಸಿದೆ.ಬೆಳಗಾವಿಯಲ್ಲಿ ಬಿಟ್ಟು ಬಿಟ್ಟು ಸುರಿದ ಮಳೆಯಿಂದ ತಗ್ಗು ಪ್ರದೇಶದಲ್ಲಿನ ರಸ್ತೆಗಳು ಜಲಾವೃತಗೊಂಡಿದ್ದವು. ದಟ್ಟವಾದ ಮೋಡ ಆವರಿಸಿದ್ದರಿಂದ ಹಗಲು ಹೊತ್ತಿನಲ್ಲಿ ವಾಹನಗಳು ದೀಪ ಹಚ್ಚಿಕೊಂಡು ಸಂಚರಿಸಿದವು. ಶಾಲಾ- ಕಾಲೇಜು ವಿದ್ಯಾರ್ಥಿಗಳು ಮಳೆಯಲ್ಲಿಯೇ ಶಾಲೆಗೆ ಹೋಗುತ್ತಿರುವುದು ಹಾಗೂ ಮರಳಿ ಮನೆಗೆ ಬರುತ್ತಿರುವುದು ಸಾಮಾನ್ಯವಾಗಿತ್ತು.

ಮಳೆಯಿಂದ ಜಿಲ್ಲೆಯಲ್ಲಿ ಯಾವುದೇ ಆಸ್ತಿಪಾಸ್ತಿ ಹಾಗೂ ಜೀವಹಾನಿ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.ನಿಪ್ಪಾಣಿ ವರದಿ

ನಗರ ಮತ್ತು ಸುತ್ತಲಿನ ಪ್ರದೇಶದಲ್ಲಿ ಕಳೆದೆರಡು ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು ಶುಕ್ರವಾರ ದಿನವಿಡೀ ಮಳೆ ಸುರಿಯಿತು. ಬೆಳಿಗ್ಗೆಯಿಂದ ಆರಂಭವಾದ ಮಳೆಯಿಂದಾಗಿ ವಿದ್ಯಾರ್ಥಿಗಳು ಶಾಲಾ ಕಾಲೇಜಿಗೆ ಹೋಗಲು ಪರದಾಡಬೇಕಾಯಿತು. ಸಂಜೆ ಮಳೆ ಸ್ವಲ್ಪ ಬಿಡುವು ನೀಡಿತ್ತು.ಶುಕ್ರವಾರ ಬೆಳಿಗ್ಗೆ 8 ಗಂಟೆಯವರೆಗೆ 10.6 ಮಿ.ಮೀ. ಮಳೆಯಾದ ವರದಿಯಾಗಿದೆ. ಮಳೆಯು ಎಡೆಬಿಡದೇ ಸುರಿದಿದ್ದರಿಂದ ಕೃಷಿ ಚಟುವಟಿಕೆಗಳು ಸ್ಥಗಿತಗೊಂಡಿದ್ದವು. ಕೆಲವೊಮ್ಮೆ ಜಿಟಿಜಿಟಿ ಬೀಳುತ್ತಿದ್ದ ಮಳೆ ಇದ್ದಕ್ಕಿದ್ದಂತೆ ಜೋರಾಗುತ್ತಿತ್ತು.ಬೈಲಹೊಂಗಲ ವರದಿ

ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ಶುಕ್ರವಾರ ಜಿಟಿ ಜಿಟಿ ಮಳೆಯಾಗಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿದೆ.

ಮುರಗೋಡ, ಬೆಳವಡಿ, ನೇಸರಗಿ, ಬುಡಕರಟ್ಟಿ, ದೊಡವಾಡ, ಸಂಪಗಾಂವ, ಗೋವನಕೊಪ್ಪ ಸೇರಿದಂತೆ ತಾಲ್ಲೂಕಿನ ಹಲವೆಡೆ ಜಿಟಿ ಜಿಟಿ ಮಳೆಯಾಗಿದ್ದು, ಹೆಸರು, ವಟಾನಿ, ಬಡಗಡಲೆ ಮುಂತಾದ ಬೆಳೆಗಳಿಗೆ ಅನುಕೂಲಕವಾಗಿದೆ.ಮೂಡಲಗಿ ವರದಿ

ಶುಕ್ರವಾರ ಇಲ್ಲಿ ಬೆಳಿಗ್ಗೆಯಿಂದ ಸಂಜೆಯ ವರೆಗೆ ಸತತವಾಗಿ ಜಿಟಿ ಜಿಟಿ ಮಳೆಯಾಗಿ ರಸ್ತೆಗಳೆಲ್ಲ ಒದ್ದೆಯಾಗಿ, ಇಡೀ ವಾತಾರಣವು ತಂಪಿನಿಂದ ಕೂಡಿತ್ತು. ಇದರಿಂದ  ಶಾಲೆ, ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳು ಒಂದಿಷ್ಟು ತೊಂದರೆ ಅನುಭವಿಸಿದರು. ಈ ವರ್ಷ ಮುಂಗಾರು ಸಂಪೂರ್ಣ ಕೈಕೊಟ್ಟಿದ್ದು, ಈ ವರೆಗೆ ಹೇಳಿಕೊಳ್ಳುವಂತಹ ಮಳೆ ಈ ಭಾಗದಲ್ಲಿ ಆಗಿರುವದಿಲ್ಲ. ಬಿತ್ತನೆಗಳು ಸಹ ಅಷ್ಟಕಷ್ಟೆ ಆಗಿವೆ. ರೈತರಿಗೆ ಒಮ್ಮೆ ಜೋರಾದ ಮಳೆ ಬೇಕಾಗಿದ್ದು, ಮೇಘರಾಜ ಮಾತ್ರ ಇನ್ನು ಕೃಪೆ ತೋರದೆ ಇರುವದು ಈ ಭಾಗದ ರೈತರಲ್ಲಿ ಈಗಲೂ ಆತಂಕ ಉಳಿದಿದೆ.  ಶುಕ್ರವಾರದ ಜಿಟಿ ಜಿಟಿ ಮಳೆಯು `ಇದು ಒಂದು ರೀತಿಯ ಕಸದ ಮಳೆರ‌್ರೀ. ಭೂಮ್ಯಾಗ ಮೊಳಕೆಯೊಡೆದ ಸಸಿಗಳ ಸುತ್ತ ಕಸ ಬೆಳ್ಯಾಕ ಅನುಕೂಲ ಮಾಡಿದ್ಹಾಂಗರ‌್ರೀ, ಇದು ಕಸಕ್ಕ ಮೂಲರ‌್ರೀ' ಎಂಬುದು ಪಟಗುಂದಿ ರೈತ ಪರಸಪ್ಪ ಉಪ್ಪಾರ ಆತಂಕದ ನುಡಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry