ಗುರುವಾರ , ಜೂನ್ 24, 2021
25 °C

ಬೆಳಗಾವಿ: ಕರವೇ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: `ನಾಡದ್ರೋಹಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಮಹಾರಾಷ್ಟ್ರ ಏಕೀಕರಣ ಸಮಿತಿಗೆ (ಎಂಇಎಸ್) 3.5 ಕೋಟಿ ರೂಪಾಯಿ ನೀಡಿರುವ ಮಹಾರಾಷ್ಟ್ರ ಸರ್ಕಾರದ ಕ್ರಮವನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ ಕರವೇ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಣೇಶ ರೋಕಡೆ, `ಭಾರತದಲ್ಲಿರುವ ಉಗ್ರಗಾಮಿ ಸಂಘಟನೆಗಳಿಗೆ ಪಾಕಿಸ್ತಾನವು ಹಣ ನೀಡುವ ರೀತಿಯಲ್ಲಿಯೇ  ಬೆಳಗಾವಿಯಲ್ಲಿ ನಾಡದ್ರೋಹಿ ಚಟುವಟಿಕೆಗಳನ್ನು ನಡೆಸುತ್ತಿರುವ ಎಂಇಎಸ್‌ಗೆ ಮಹಾರಾಷ್ಟ್ರ ಸರ್ಕಾರ ಹಣ ನೀಡುವ ಮೂಲಕ ನಾಡದ್ರೋಹಿ ಕೆಲಸಕ್ಕೆ ಪ್ರೇರಣೆ ನೀಡುತ್ತಿದೆ~ ಎಂದರು.`ಇದರಿಂದಾಗಿ ಕನ್ನಡ ಮತ್ತು ಮರಾಠಿಗರ ನಡುವಿನ ಬಾಂಧವ್ಯದಲ್ಲಿ ವಿಷ ಬೀಜ ಬಿತ್ತುವ ಕೆಲಸವನ್ನು ಮಹಾರಾಷ್ಟ್ರ ಸರ್ಕಾರ ಮಾಡುತ್ತಿದೆ. ರಾಜ್ಯ ಸರ್ಕಾರವು ತಕ್ಷಣ ಇದಕ್ಕೆ ಕಡಿವಾಣ ಹಾಕಿ, ನಾಡದ್ರೋಹಿ ಕೆಲಸ ಮಾಡುತ್ತಿರುವವರನ್ನು ಗಡಿಪಾರು ಮಾಡಬೇಕು. ಎಂಇಎಸ್‌ಗೆ ಬಂದಿರುವ ಆ ಹಣವನ್ನು ಮಹಾರಾಷ್ಟ್ರ ಸರ್ಕಾರಕ್ಕೆ ವಾಪಸ್ ಕಳುಹಿಸಬೇಕು. ಇಲ್ಲವೇ ರಾಜ್ಯ ಸರ್ಕಾರವೇ ಮುಟ್ಟುಗೋಲು ಹಾಕಿಕೊಳ್ಳಬೇಕು~ ಎಂದು ಆಗ್ರಹಿಸಿದರು.ಮರಾಠಿಗರ ಅಭಿವೃದ್ಧಿಗೆ ಹಣ ಬಳಕೆ: `ಬೆಳಗಾವಿಯ ಮರಾಠಿಗರ ಅಭಿವೃದ್ಧಿಗಾಗಿ ಮಹಾರಾಷ್ಟ್ರ ಸರ್ಕಾರದ ಬಜೆಟ್‌ನಲ್ಲಿ ಕಾಯ್ದಿರಿಸಿದ್ದ 3.5 ಕೋಟಿ ರೂಪಾಯಿ ಮಂಜೂರಾಗಿದೆ~ ಎಂಬುದನ್ನು ಮಹಾರಾಷ್ಟ್ರ ಏಕೀಕರಣ ಸಮಿತಿ ಖಚಿತ ಪಡಿಸಿದೆ.ಈ ಕುರಿತು ಎಂಇಎಸ್ ನಗರ ಘಟಕದ ಅಧ್ಯಕ್ಷ ಟಿ.ಕೆ. ಪಾಟೀಲರನ್ನು `ಪ್ರಜಾವಾಣಿ~ ಸಂಪರ್ಕಿಸಿದಾಗ, `ಬೆಳಗಾವಿಯಲ್ಲಿ ನೆಲೆಸಿರುವ ಮರಾಠಿಗರನ್ನು ರಾಜ್ಯ ಸರ್ಕಾರ ಕಡೆಗಣಿಸುತ್ತಿದೆ. ಹೀಗಾಗಿ ಮರಾಠಿಗರ ಅಭಿವೃದ್ಧಿಗಾಗಿ ಅನುದಾನ ನೀಡುವಂತೆ ಎಂಇಎಸ್ ವತಿಯಿಂದ ಮಹಾರಾಷ್ಟ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು.ಇದಕ್ಕೆ ಸ್ಪಂದಿಸಿದ ಮಹಾರಾಷ್ಟ್ರ ಸರ್ಕಾರ ಬಜೆಟ್‌ನಲ್ಲಿ ರೂ. 3.5 ಕೋಟಿ ತೆಗೆದಿಟ್ಟಿತ್ತು. ಈಗಾಗಲೇ ಕೆಲವು ಸಂಸ್ಥೆಗಳಿಗೆ ಹಣ ಬಂದಿದೆ. ಬಾಕಿ ಹಣ ಶೀಘ್ರದಲ್ಲೇ ನಮ್ಮ ಕೈಸೇರಲಿದೆ. ಮರಾಠಿ ಸಂಸ್ಥೆಗಳಿಗೆ ಸಾಹಿತ್ಯ ಚಟುವಟಿಕೆ ಕೈಗೊಳ್ಳಲು ಹಾಗೂ ಮರಾಠಿ ಶಾಲೆಗಳಿಗೆ ಹಣವನ್ನು ನೀಡಲಾಗುವುದು~ ಎಂದು ಅವರು ವಿವರಿಸಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.