ಬೆಳಗಾವಿ ಜಿಪಂ: ಅಧ್ಯಕ್ಷರ ಆಯ್ಕೆ ಅಧಿಕಾರ ಸಚಿವ ಕತ್ತಿಗೆ

7

ಬೆಳಗಾವಿ ಜಿಪಂ: ಅಧ್ಯಕ್ಷರ ಆಯ್ಕೆ ಅಧಿಕಾರ ಸಚಿವ ಕತ್ತಿಗೆ

Published:
Updated:

ಬೆಳಗಾವಿ: ರಾಜ್ಯದಲ್ಲಿಯೇ ದೊಡ್ಡ ಜಿಲ್ಲಾ ಪಂಚಾಯತಿ ಎಂಬ ಖ್ಯಾತಿ ಪಡೆದಿರುವ ಬೆಳಗಾವಿ ಜಿಪಂನಲ್ಲಿ ಅಧ್ಯಕ್ಷ ಗಾದಿಗೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಆದರೆ ಜಿಲ್ಲಾ ಉಸ್ತುವಾರಿ ಸಚಿವರ ಆಯ್ಕೆಯೇ ಅಂತಿಮ ಎಂದು ಹೇಳಲಾಗುತ್ತಿದ್ದು, ಸಚಿವರ ಮನವೊಲಿಕೆಗೆ ಆಕಾಂಕ್ಷಿ ಅಭ್ಯರ್ಥಿಗಳು ತೀವ್ರ ಕಸರತ್ತು ನಡೆಸಿದ್ದಾರೆ.ಬೆಳಗಾವಿ ಜಿಪಂ ಒಟ್ಟು 86 ಸದಸ್ಯರನ್ನು ಹೊಂದಿದೆ. ಈ ಪೈಕಿ 64 ಭಾರತೀಯ ಜನತಾ ಪಕ್ಷದ ಸದಸ್ಯರು, 17 ಕಾಂಗ್ರೆಸ್ ಹಾಗೂ ಎಂಇಇಎಸ್ ಸೇರಿದಂತೆ ಐವರು ಪಕ್ಷೇತರ ಸದಸ್ಯರಿದ್ದಾರೆ. ಜಿಪಂನ ಎರಡನೇ ಅವಧಿಯ ಅಧ್ಯಕ್ಷ ಸ್ಥಾನವನ್ನು ಅನುಸೂಚಿತ ಜಾತಿ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನವನ್ನು ಸಾಮಾನ್ಯ ಮಹಿಳೆಗೆ ಮೀಸಲಾತಿ ನಿಗದಿಪಡಿಸಲಾಗಿದೆ.ಜಿಪಂ ಅಧಿಕಾರವು ಭಾರತೀಯ ಜನತಾ ಪಕ್ಷದ ತೆಕ್ಕೆಯಲ್ಲಿದ್ದು, ಎರಡನೇ ಅವಧಿಯ ಅಧ್ಯಕ್ಷ ಹುದ್ದೆಗೆ ಐವರು ಆಕಾಂಕ್ಷಿಗಳಿದ್ದಾರೆ. ಅಥಣಿ ತಾಲ್ಲೂಕಿನ ಕಾಗವಾಡ ಕ್ಷೇತ್ರದಿಂದ ಆಯ್ಕೆಯಾಗಿದ್ದ ಸುನಿತಾ ಶಿರಗಾಂವ ಕಳೆದ ಅವಧಿಯಲ್ಲಿ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರಿಂದ ಅವರನ್ನು ಅಧ್ಯಕ್ಷ ಹುದ್ದೆಗೆ ಪರಿಗಣಿಸುತ್ತಿಲ್ಲ ಎಂದು ಪಕ್ಷದ ಮುಖಂಡರು ಹೇಳಿದ್ದಾರೆ.ನಾಲ್ವರು ಅನುಸೂಚಿತ ಮಹಿಳಾ ಸದಸ್ಯರು ಅಧ್ಯಕ್ಷ ಹುದ್ದೆಗೆ ರೇಸ್‌ನಲ್ಲಿದ್ದು, ಹುಕ್ಕೇರಿ ತಾಲ್ಲೂಕಿನ ಕಣಗಲಾ ಕ್ಷೇತ್ರದ ನಂದಾ ಸನ್ನಾಯಿಕ ಅವರು ಆಯ್ಕೆಯಾಗುವ ಸಾಧ್ಯತೆಗಳು ಹೆಚ್ಚಿವೆ. ನಂದಾ ಸನ್ನಾಯಿಕ ಅವರನ್ನು ಅಧ್ಯಕ್ಷರನ್ನಾಗಿ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಈಗಾಗಲೇ ಫರ್ಮಾನು ಹೊರಡಿಸಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿವೆ.ಜಿಪಂ ಅಧ್ಯಕ್ಷರ ಆಯ್ಕೆ ಅಧಿಕಾರವನ್ನು ಜಿಲ್ಲೆಯ ಶಾಸಕರು, ಸಂಸದರು ಜಿಲ್ಲಾ ಉಸ್ತುವಾರಿ ಸಚಿವರಿಗೆ ನೀಡಿದ್ದಾರೆ. ಸಚಿವರು ತಮ್ಮ ಅಧಿಕಾರವನ್ನು ಉಪಯೋಗಿಸಿಕೊಂಡು ತಮ್ಮ ಮತಕ್ಷೇತ್ರದ ವ್ಯಾಪ್ತಿಯಲ್ಲಿಯೇ ಬರುವ ಸದಸ್ಯರನ್ನು ಅಧ್ಯಕ್ಷರನ್ನಾಗಿ ಮಾಡಲು ನಿರ್ಧರಿಸಿದ್ದಾರೆ. ಕಾಟಾಚಾರಕ್ಕೆ ಎಂಬಂತೆ ಬುಧವಾರ (ಅ. 16) ಮಧ್ಯಾಹ್ನ ಸದಸ್ಯರ ಅಭಿಪ್ರಾಯ ಪಡೆಯಲು ನಿರ್ಧರಿಸಲಾಗಿದೆ ಎಂದು ಹೇಳಲಾಗಿದೆ.ನಂದಾ ಸನ್ನಾಯಿಕ ಅವರೊಂದಿಗೆ ಚಿಕ್ಕೋಡಿ ತಾಲ್ಲೂಕಿನ ಅಕ್ಕೋಳ ಕ್ಷೇತ್ರದ ಅನಿತಾ ಗೂಗೆ, ರಾಯಬಾಗ ತಾಲ್ಲೂಕಿನ ಹಾರೂಗೇರಿ ಕ್ಷೇತ್ರದ ಶಾಂತಾ ಕಲ್ಲೋಳಿಕರ, ರಾಮದುರ್ಗ ತಾಲ್ಲೂಕಿನ ಹುಲಕುಂದ ಕ್ಷೇತ್ರದ ಮಹಾದೇವಿ ಮೇತ್ರಿ ಅಧ್ಯಕ್ಷ ಹುದ್ದೆಗೆ ರೇಸ್‌ನಲ್ಲಿದ್ದಾರೆ.ಕಳೆದ ಅವಧಿಯಲ್ಲಿ ಅಧ್ಯಕ್ಷರ ಆಯ್ಕೆ ಸಂದರ್ಭದಲ್ಲಿ ಒಪ್ಪಂದ ಮಾಡಿಕೊಂಡಂತೆ ಈ ಅವಧಿಯನ್ನು ಚಿಕ್ಕೋಡಿ ಲೋಕಸಭಾ ಕ್ಷೇತ್ರಕ್ಕೆ ನೀಡಲು ತೀರ್ಮಾನಿಸಲಾಗಿದೆ. ಈ ಒಪ್ಪಂದದಂತೆ ಚಿಕ್ಕೋಡಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮೂವರು ಸದಸ್ಯರಿದ್ದಾರೆ. ಆದರೆ ಸಚಿವರು ನಂದಾ ಸನ್ನಾಯಿಕ ಅವರ ಆಯ್ಕೆ ಬಗ್ಗೆ ಹೆಚ್ಚಿನ ಒಲವು ತೋರಿದ್ದಾರೆ ಎನ್ನಲಾಗಿದೆ.`ಉಸ್ತುವಾರಿ ಸಚಿವರ ಆಯ್ಕೆಯೇ ಅಂತಿಮ. ಸಚಿವರು ಸಹ ತಮ್ಮ ಕ್ಷೇತ್ರದ ನಂದಾ ಸನ್ನಾಯಿಕ ಅವರನ್ನು ಆಯ್ಕೆ ಮಾಡಲು ಒಪ್ಪಿಗೆ ಸೂಚಿಸಿದ್ದಾರೆ. ಆದರೆ ಪಕ್ಷದ ಕೋರ್ ಕಮಿಟಿ ಸಭೆ ಕರೆಯದೇ, ಸಚಿವರು ಸಂಸದರೊಂದಿಗೆ ಚರ್ಚಿಸಿ ನಿರ್ಣಯ ತೆಗೆದುಕೊಂಡಿದ್ದಾರೆ. ನಾವು ಆಡಳಿತಾತ್ಮಕ ವಿಷಯದಲ್ಲಿ ಕೈಹಾಕದೇ, ಸಂಘಟನಾತ್ಮಕ ಕೆಲಸದಲ್ಲಿ ಮಾತ್ರ ತೊಡಗಿದ್ದೇವೆ~ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ತುಬಾಕಿ ಅಧ್ಯಕ್ಷರ ಆಯ್ಕೆಯಲ್ಲಿ ತಮ್ಮ ಅಸಹಾಯಕತೆಯನ್ನು ತೋಡಿಕೊಂಡರು.`ಅಧ್ಯಕ್ಷರ ಆಯ್ಕೆ ಬಗ್ಗೆ ಗುರುವಾರ (ಅ. 18) ಬೆಳಿಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿ ಆಯ್ಕೆ ಮಾಡಲಾಗುವುದು. ಈ ಬಾರಿ ಚಿಕ್ಕೋಡಿ ಲೋಕಸಭಾ ಕ್ಷೇತ್ರಕ್ಕೆ ಅಧ್ಯಕ್ಷ ಸ್ಥಾನವನ್ನು ನೀಡಲಾಗುವುದು~ ಎಂದು ಶಾಸಕ ಸಂಜಯ ಪಾಟೀಲ ಹೇಳಿದರು.`ಈಗಾಗಲೇ ಶಾಸಕರು, ಸಂಸದರ ಅಭಿಪ್ರಾಯ ಕೇಳಲಾಗಿದೆ. ಬುಧವಾರ (ಅ. 17) ಜಿಪಂ ಸದಸ್ಯರ ಅಭಿಪ್ರಾಯ ಪಡೆಯಲಾಗುವುದು. ಸಚಿವರು ತೆಗೆದುಕೊಳ್ಳುವ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿದ್ದೇವೆ~ ಎಂದು ಹೇಳುತ್ತಾರೆ ಜಿಪಂ ಮಾಜಿ ಅಧ್ಯಕ್ಷ ಈರಣ್ಣ ಕಡಾಡಿ.ಜಿಪಂ ಉಪಾಧ್ಯಕ್ಷ ಸ್ಥಾನಕ್ಕೆ ಅಷ್ಟೇನೂ ಪೈಪೋಟಿ ಕಾಣುತ್ತಿಲ್ಲ. ಉಪಾಧ್ಯಕ್ಷರ ಆಯ್ಕೆ ಸಹ ನಾಯಕರಿಗೆ ತಲೆನೋವಾಗಿಲ್ಲ ಎಂದು ಹೇಳಲಾಗಿದೆ. ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಗುರುವಾರ (ಅ. 18) ಚುನಾವಣೆ ನಡೆಯಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry