ಬೆಳಗಾವಿ ಜಿಲ್ಲೆಯಿಂದ ಆರಂಭ: ಕತ್ತಿ

7

ಬೆಳಗಾವಿ ಜಿಲ್ಲೆಯಿಂದ ಆರಂಭ: ಕತ್ತಿ

Published:
Updated:

ಚಿಕ್ಕೋಡಿ: “ಆಡಳಿತದಲ್ಲಿ ಅನಗತ್ಯ ಹಸ್ತಕ್ಷೇಪ ಮಾಡುವ ಮೂಲಕ ರಾಜ್ಯ ಬಿಜೆಪಿ ಸರಕಾರವನ್ನು ಪತನಗೊಳಿಸಲು ಹುನ್ನಾರ ನಡೆಸಿರುವ ರಾಜ್ಯಪಾಲ ಹಂಸರಾಜ್ ಭಾರದ್ವಾಜ್‌ರ ವರ್ತನೆಯನ್ನು ಖಂಡಿಸಿ ‘ರಾಜ್ಯಪಾಲ್ ಹಟಾವೋ-ರಾಜ್ಯಕೋ ಬಚಾವೋ’ ಆಂದೋಲನವನ್ನು ಬೆಳಗಾವಿ ಜಿಲ್ಲೆಯಿಂದಲೇ ಆರಂಭಿಸಲಾಗುತ್ತಿದೆ” ಎಂದು ಕೃಷಿ ಸಚಿವ ಉಮೇಶ ಕತ್ತಿ ಇಂದಿಲ್ಲಿ ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಚಿಕ್ಕೋಡಿ ಪಟ್ಟಣದಲ್ಲಿ ಫೆ.5 ರಂದು ಮಧ್ಯಾಹ್ನ 12 ಗಂಟೆಗೆ ಬೃಹತ್ ಪ್ರತಿಭಟನಾ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ ಅವರು ರಾಜ್ಯಪಾಲರ ವರ್ತನೆಯ ಕುರಿತು ಜನರಿಗೆ ಮನವರಿಕೆ ಮಾಡಿಕೊಡಲಿದ್ದಾರೆ ಎಂದು ಹೇಳಿದರು.ರಾಜ್ಯದಲ್ಲಿ ಸಂವಿಧಾನದ ಮುಖ್ಯಸ್ಥರಾಗಿರುವ ರಾಜ್ಯಪಾಲರು ಸರಕಾರವನ್ನು ಅಭದ್ರಪಡಿಸಲು ಪ್ರಯತ್ನಿಸುತ್ತಿದ್ದು, ಅವರನ್ನು ಹಿಂದಕ್ಕೆ ಕರೆಸಿಕೊಂಡು ಬೇರೊಬ್ಬ ರಾಜ್ಯಪಾಲರನ್ನು ನೇಮಕ ಮಾಡುವಂತೆ ಬಿಜೆಪಿ ವರಿಷ್ಠರು ಮಾಡಿಕೊಂಡ ಮನವಿಗೆ ಸೂಕ್ತ ಸ್ಪಂದನೆ ದೊರಕಿಲ್ಲ. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಮತ್ತು ರಾಷ್ಟ್ರಪತಿಗಳ ಗಮನ ಸೆಳೆಯಲು ರಾಜ್ಯದಲ್ಲಿ ಇಂತಹ ಆಂದೋಲನವನ್ನು ನಡೆಸುವ ಅನಿವಾರ್ಯತೆ ಉಂಟಾಗಿದೆ ಎಂದರು. ಒಕ್ಕಲುತನ ಪ್ರಧಾನವಾದ ದೇಶದಲ್ಲಿ ಕೃಷಿಕ ಮತ್ತು ಗ್ರಾಹಕರಿಬ್ಬರೂ ನೆಮ್ಮದಿಯಿಂದ ಬದುಕು ನಡೆಸಲು ಪೂರಕವಾದ ನೀತಿಗಳನ್ನೊಳ್ಳಗೊಂಡ ಪ್ರತ್ಯೇಕ ಕೃಷಿ ಬಜೆಟ್ ಮಂಡನೆಗೆ ಪ್ರಧಾನಿ ಮನಮೋಹನ ಸಿಂಗ್ ಮತ್ತು ಕೇಂದ್ರ ಕೃಷಿ ಸಚಿವ ಶರದ ಪವಾರ್ ಅವರನ್ನು ಆಗ್ರಹಿಸಲಾಗಿದ್ದು, ಆದರೆ, ಅವರಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೂ ಈ ಕುರಿತು ಮನವಿ ಮಾಡಿಕೊಳ್ಳಲಾಗಿದ್ದು, ಅವರಿಂದ ಸ್ಪಂದನೆ ದೊರಕಿದೆ. ರಾಜ್ಯದಲ್ಲಿ ಪ್ರಮುಖವಾಗಿ ಬೆಳೆಯುವ ಐದು ಬೆಳೆಗಳಿಗೆ ವೈಜ್ಞಾನಿಕ ಬೆಲೆಯನ್ನು ಬಜೆಟ್‌ನಲ್ಲೇ ನಿಗದಿಪಡಿಸಲಾಗುವದು. ಇದರಿಂದ ರೈತರಿಗೆ ಬಿತ್ತನೆಗೂ ಮುಂಚಿತವಾಗಿಯೇ ಬೆಳೆಗಳ ದರ ನಿಗದಿ ಕುರಿತು ಮಾಹಿತಿ ದೊರಕುವುದರಿಂದ ಬೆಲೆಯಲ್ಲಿ ಏರಿಳಿತ ಉಂಟಾಗುವುದಿಲ್ಲ. ಇದರಿಂದ ಗ್ರಾಹಕ ಮತ್ತು ಕೃಷಿಕರಿಬ್ಬರೂ ನೆಮ್ಮದಿಯಿಂದ ಬದುಕಬಹುದಾಗಿದೆ. ದೇಶಕ್ಕೆ ಮಾದರಿಯಾಗುವ ನಿಟ್ಟಿನಲ್ಲಿ ರಾಜ್ಯ ಸರಕಾರ ಪ್ರತ್ಯೇಕ ಕೃಷಿ ಬಜೆಟ್ ಮಂಡನೆಗೆ ಚಿಂತನೆ ನಡೆಸಿದೆ ಉಮೇಶ ಕತ್ತಿ ಹೇಳಿದರು.ನೀರಾವರಿ ಉದ್ದೇಶಕ್ಕಾಗಿ ರೈತರಿಗೆ ನೀಡಲಾಗುವ ಸಬ್ಸಿಡಿಗಳನ್ನು ತಡೆಹಿಡಿಯಲಾಗಿದ್ದು, ಸರಕಾರದ ಆದೇಶವಿಲ್ಲದೇ ಅಧಿಕಾರಿಗಳು ಮತ್ತು ಕಂಪೆನಿಗಳು ರೈತರಿಗೆ ಸಲಕರಣೆಗಳನ್ನು ಒದಗಿಸಿ ಸದ್ಯ ರೂ. 49 ಕೋಟಿ ಬಿಲ್‌ಗಳನ್ನು ಸಲ್ಲಿಸಿದ್ದಾರೆ. ಸರಕಾರದ ನಿರ್ದೇಶನವಿಲ್ಲದೇ ರೈತರಿಗೆ ಪೈಪ್ ಮತ್ತಿತರ ಸಲಕರಣೆಗಳನ್ನು ನೀಡಿ ಸಬ್ಸಿಡಿಗಾಗಿ ಅರ್ಜಿ ಸಲ್ಲಿಸುವುದು ಸಮಂಜಸವಲ್ಲ. ಇದರ ಕುರಿತು ಸೂಕ್ತ ತನಿಖೆ ಬರುವ 15 ದಿನಗಳಲ್ಲಿ ಅರ್ಹ ಫಲಾನುಭವಿಗಳಿಗೆ ರಿಯಾಯತಿ ಮಂಜೂರು ಮಾಡಲಾಗುವದು ಎಂದು ಭರವಸೆ ನೀಡಿದರು.

ಸಂಸದ ರಮೇಶ ಕತ್ತಿ, ವಿಧಾನಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ, ಪುರಸಭೆ ಅಧ್ಯಕ್ಷೆ ಶೋಭಾ ಚೆನ್ನವರ, ಚಿಕ್ಕೋಡಿ ಮಂಡಲ ಬಿಜೆಪಿ ಅಧ್ಯಕ್ಷ ಅಪ್ಪಾಸಾಬ ಚೌಗಲಾ, ಜಿ.ಪಂ ಮಾಜಿ ಸದಸ್ಯ ಬಿ.ಆರ್.ಸಂಗಪ್ಪಗೋಳ ಮುಂತಾದವರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry