ಬೆಳಗಾವಿ: ಬೆಳವಣಿಗೆಯ ಹಾದಿಯಲ್ಲಿ ಟೆನಿಸ್

7

ಬೆಳಗಾವಿ: ಬೆಳವಣಿಗೆಯ ಹಾದಿಯಲ್ಲಿ ಟೆನಿಸ್

Published:
Updated:

ಕನ್ನಡದ ಗಡಿನಾಡು ಬೆಳಗಾವಿ ಬಹುಸಂಸ್ಕೃತಿಯ ಊರು. ಕನ್ನಡ, ಮರಾಠಿ, ಕೊಂಕಣಿ ಹೀಗೆ ನಾನಾ ಭಾಷೆಗಳ ಜನರು, ವೈವಿಧ್ಯಮಯ ಆಚರಣೆಗಳನ್ನು ಈ ಜಿಲ್ಲೆ ತನ್ನೊಳಗೆ ಹೊಂದಿದೆ. ಇಲ್ಲಿ ಸಂಸ್ಕೃತಿಯಷ್ಟೇ ಕ್ರೀಡೆಯೂ ಬೆಳೆದಿದೆ. ಕುಸ್ತಿ ಈ ಭಾಗದ ದೇಸೀಯ ಹಾಗೂ ಜನಪ್ರಿಯ ಕ್ರೀಡೆ. ಊರು ಆಧುನಿಕತೆಗೆ ತನ್ನನ್ನು ಒಡ್ಡಿಕೊಂಡಂತೆ ಇಲ್ಲಿ ಈಜು, ಬ್ಯಾಡ್ಮಿಂಟನ್, ಟೆನಿಸ್‌ನಂತಹ ಕ್ರೀಡೆಗಳಿಗೂ ಪ್ರಾಶಸ್ತ್ಯ ದೊರೆಯುತ್ತಿದೆ.ಟೆನಿಸ್ ವಿಷಯದಲ್ಲಿ ಈ ಊರು ಹೆಚ್ಚು ಸುದ್ದಿಯಾಗುವುದು ಅಂತರರಾಷ್ಟ್ರೀಯ ಟೂರ್ನಿಗಳು ನಡೆದಾಗ ಮಾತ್ರ. 2003ರ ಅಕ್ಟೋಬರ್‌ನಲ್ಲಿ ಎಟಿಪಿ ಚಾಲೆಂಜರ್ ಟೂರ್ನಿಗೆ ಸಾಕ್ಷಿಯಾಗಿದ್ದ ಬೆಳಗಾವಿ ಇದೇ ತಿಂಗಳ 17ರಿಂದ 22ರವರೆಗೆ ಪುರುಷರ ಐಟಿಎಫ್ ಟೂರ್ನಿಯ ಆತಿಥ್ಯ ವಹಿಸಿತ್ತು.

ಒಂದು ವಾರ ಕಾಲ ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿಯು) ಟೆನಿಸ್ ಕಾಂಪ್ಲೆಕ್ಸ್ ಅಂಕಣದಲ್ಲಿ ನಡೆದ ಅಂತರರಾಷ್ಟ್ರೀಯ ಮಟ್ಟದ ಟೂರ್ನಿಯಲ್ಲಿ  ಏಳು ದೇಶಗಳ 32 ಆಟಗಾರರು ಸೆಣೆಸಿದರು. ಇಂತಹ ಕ್ರೀಡಾ ಚಟುವಟಿಕೆಗಳು ಇಲ್ಲಿನ ಟೆನಿಸ್ ಕ್ಷೇತ್ರದ ಬೆಳವಣಿಗೆಗೆ ಪ್ರೇರಣೆಯಾಗಲಿದೆ ಎನ್ನುವುದು ಈ ಭಾಗದ ಕ್ರೀಡಾಪ್ರೇಮಿಗಳ ಮಾತು.ಇಲ್ಲಿ ಟೆನಿಸ್ ಆಟಕ್ಕೆ ಬೇಕಾದ ಮೂಲ ಸೌಕರ್ಯಗಳು ಲಭ್ಯವಿದೆ. ಈ ಬಾರಿಯ ಐಟಿಎಫ್ ಟೂರ್ನಿ ನಡೆದ ವಿಟಿಯು ಟೆನಿಸ್ ಅಂಕಣ ಅಂತರರಾಷ್ಟ್ರೀಯ ಗುಣಮಟ್ಟದಿಂದ ಕೂಡಿದೆ. 2009ರಲ್ಲಿ ವಿಶ್ವವಿದ್ಯಾಲಯವು ನಿರ್ಮಿಸಿದ ಈ ಕಾಂಪ್ಲೆಕ್ಸ್‌ನಲ್ಲಿ ಸಿಂಥೆಟಿಕ್ ಹೊದಿಕೆಯುಳ್ಳ ನಾಲ್ಕು ಕೋರ್ಟ್, ಒಂದು ಸಾವಿರ ಮಂದಿ ಕುಳಿತು ಆಟವನ್ನು ವೀಕ್ಷಿಸಬಹುದಾದ ಗ್ಯಾಲರಿ, ಆಟಗಾರರಿಗಾಗಿ ಪೆವಿಲಿಯನ್, ಕೋಚ್‌ಗಳಿಗಾಗಿ ಕೊಠಡಿ, ಸ್ನಾನಗೃಹ-ಶೌಚಾಲಯ ವ್ಯವಸ್ಥೆಗಳನ್ನು ಇದು ಹೊಂದಿದೆ.ವಿಶ್ವವಿದ್ಯಾಲಯಕ್ಕೆ ಸೇರಿರುವುದರಿಂದ ಇಲ್ಲಿ ಆಗಾಗ್ಗೆ ಟೆನಿಸ್ ಚಟುವಟಿಕೆ ನಡೆಯುತ್ತಲೇ ಇರುತ್ತದೆ. ಅಂತರ ಕಾಲೇಜು ಟೆನಿಸ್ ಟೂರ್ನಿಗಳು, ವಿಶ್ವವಿದ್ಯಾಲಯ, ಅಂತರ ವಿಶ್ವವಿದ್ಯಾಲಯ ಮಟ್ಟದ ಟೂರ್ನಿಗಳು ಇಲ್ಲಿ ನಡೆಯುತ್ತಿರುತ್ತವೆ. ಆ ಮಟ್ಟಿಗೆ ಇಲ್ಲಿ ಟೆನಿಸ್ ಜೀವಂತವಾಗಿದೆ. `ವಿದ್ಯಾರ್ಥಿಗಳು ನಿತ್ಯ ಅಂಕಣದಲ್ಲಿ ಅಭ್ಯಾಸದಲ್ಲಿ ತೊಡಗಿಕೊಳ್ಳುತ್ತಾರೆ. ವಿಶ್ವವಿದ್ಯಾಲಯದ ಮಟ್ಟದಲ್ಲಿ ಇಲ್ಲಿನ ಪ್ರತಿಭೆಗಳು ಮಿಂಚುತ್ತಾರೆ.

ಆದರೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದು ಕಡಿಮೆ' ಎನ್ನುತ್ತಾರೆ ಹೆಸರು ಬಹಿರಂಗಪಡಿಸಲು ಇಚ್ಛಿಸದ ವಿವಿಯ ಕ್ರೀಡಾ ಅಧಿಕಾರಿಗಳು.ಇದಲ್ಲದೆ, ನಗರದ ಹೃದಯ ಭಾಗದಲ್ಲೂ ಒಂದು ಟೆನಿಸ್ ಅಂಕಣವಿದೆ. ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯು 2004-05ರಲ್ಲಿ ನಿರ್ಮಿಸಿರುವ ಈ ಅಂಕಣವನ್ನು ಕೆಎಲ್‌ಇ ಸಂಸ್ಥೆ ನಿರ್ವಹಿಸುತ್ತಿದೆ. ಇಲ್ಲಿಯೂ ಒಟ್ಟು ನಾಲ್ಕು ಅಂಕಣಗಳಿವೆ.

ಇದರಲ್ಲಿ ಒಂದು ಅಂಕಣವನ್ನು ಕಾಲೇಜಿನ ವಿದ್ಯಾರ್ಥಿಗಳ ಉಪಯೋಗಕ್ಕೆ ಹಾಗೂ ಮೂರನ್ನು ಸಾರ್ವಜನಿಕರ ಉಪಯೋಗಕ್ಕೆ ಮೀಸಲಿಡಲಾಗಿದೆ. ಬೆಳಿಗ್ಗೆ 6ರಿಂದ 8ರವರೆಗೆ ಮತ್ತು ಸಂಜೆ 4ರಿಂದ 6ರವರೆಗೆ ಈ ಅಂಕಣದಲ್ಲಿ ಟೆನಿಸ್ ಚೆಂಡಿನ ಸದ್ದು ಕೇಳಿಬರುತ್ತಿರುತ್ತದೆ.`ಇಲಾಖೆಯ ಕ್ರೀಡಾಂಗಣವನ್ನು 30 ವರ್ಷಗಳ ಅವಧಿಗೆ ಕೆಎಲ್‌ಇಗೆ ನಿರ್ವಹಣೆಗೆಂದು ಗುತ್ತಿಗೆ ನೀಡಲಾಗಿದೆ. ನಿತ್ಯ 20-30 ಮಂದಿ ಇಲ್ಲಿ ಅಭ್ಯಾಸ ನಡೆಸುತ್ತಾರೆ. ಯುವಮುಖಗಳೇ ಇದರಲ್ಲಿ ಹೆಚ್ಚು' ಎನ್ನುತ್ತಾರೆ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಬಸವರಾಜು.ಇದಲ್ಲದೆ, ಬೆಳಗಾವಿಯ ಕ್ಲಬ್ ರಸ್ತೆಯಲ್ಲಿರುವ ಜಿಮ್ಖಾನ ಕ್ಲಬ್‌ನಲ್ಲಿ ಟೆನಿಸ್ ಆಟಕ್ಕೆಂದು ಎರಡು ಮಣ್ಣಿನ ಅಂಕಣಗಳಿವೆ. ಆಟವನ್ನು ಅಭ್ಯಾಸಿಸುವವರು ಈ ಅಂಕಣಕ್ಕೆ ಪ್ರಾಶಸ್ತ್ಯ ನೀಡುತ್ತಾರೆ. ಇಲ್ಲಿ ಕೂಡ ಟೆನಿಸ್ ಸಂಬಂಧಿ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿರುತ್ತವೆ. ತಿಲಕ್‌ವಾಡೆಯಂತಹ ಖಾಸಗಿ ಕ್ಲಬ್‌ಗಳಲ್ಲೂ ಟೆನಿಸ್ ಅಭ್ಯಾಸ ನಡೆಯುತ್ತಿರುತ್ತದೆ.

`ಟೆನಿಸ್ ಈ ಭಾಗದಲ್ಲಿ ಬೆಳದದ್ದು ಕಡಿಮೆ.

ಎಟಿಪಿ ಟೂರ್ನಿ ನಡೆದಾಗ ಇಲ್ಲಿ ಹೊಸ ಸಂಚಲನ ಸೃಷ್ಟಿಯಾಗಿತ್ತಾದರೂ ಅದು ಇಲ್ಲಿನ ಆಟದ ಮೇಲೆ ಅಷ್ಟಾಗಿ ಪರಿಣಾಮ ಬೀರಿರಲಿಲ್ಲ. ಆದರೆ ಕಳೆದ ನಾಲ್ಕೈದು ವರ್ಷದಿಂದ ಇಲ್ಲಿನ ಹುಡುಗ-ಹುಡುಗಿಯರು ಹೆಚ್ಚಾಗಿ ಟೆನಿಸ್‌ನತ್ತ ಆಸಕ್ತಿ ತೋರುತ್ತಿದ್ದಾರೆ. ಅಂಕಣದಲ್ಲಿ ಹೊಸ ಮುಖಗಳು ಕಾಣಿಸಿಕೊಳ್ಳುತ್ತಿವೆ. ವೃತ್ತಿಪರವಾಗಿ ತರಬೇತಿ ಹೊಂದಲು ಅವರು ಆಸಕ್ತಿ ತೋರುತ್ತಿದ್ದಾರೆ. ಇದು ಈ ಭಾಗದಲ್ಲಿ ಟೆನಿಸ್‌ಗೆ ಪ್ರಾತಿನಿಧ್ಯ ಸಿಗುತ್ತಿರುವುದರ ಸಂಕೇತ' ಎನ್ನುತ್ತಾರೆ ಗೋಕಾಕ  ಮೂಲದ ಹಿರಿಯ ಟೆನಿಸ್ ಆಟಗಾರ ರವೀಂದ್ರ ಕೋಟ.ಸಂಘಟನೆ ದೃಷ್ಟಿಯಿಂದ ಟೆನಿಸ್ ಕ್ಷೇತ್ರ ಇಲ್ಲಿ ಇನ್ನಷ್ಟು ಬೆಳೆಯಬೇಕಿದೆ. ಸದ್ಯ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಜಿಲ್ಲಾ ಟೆನಿಸ್ ಸಂಸ್ಥೆ ಇದೆಯಾದರೂ ಅದು ಕ್ರಿಯಾಶೀಲವಾಗಿಲ್ಲ ಎನ್ನುವುದು ಕ್ರೀಡಾಪ್ರೇಮಿಗಳ ದೂರು. ಹಿರಿಯ ಆಟಗಾರರನ್ನು ಒಳಗೊಂಡ ಒಂದು ಸಂಘಟನೆಯ ಅವಶ್ಯವಿದೆ. ಅದರಿಂದ ಇಲ್ಲಿನ ಯುವ ಪ್ರತಿಭೆಗಳನ್ನು ಪೋಷಿಸಿ, ಅವರಿಗೆ ವೃತ್ತಿಪರ ತರಬೇತಿ ನೀಡಿದ್ದೇ ಆದಲ್ಲಿ ಇಲ್ಲಿ ಟೆನಿಸ್ ಇನ್ನಷ್ಟು ಬೆಳೆಯಲು ಅವಕಾಶ ಇದೆ ಎನ್ನುತ್ತಾರೆ ಈ ಭಾಗದ ಟೆನಿಸ್ ಪ್ರೇಮಿಗಳು.  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry