ಬೆಳಗಾವಿ ಸಮಸ್ಯೆ: ಹೋರಾಟಕ್ಕೆ ಬೆಂಬಲ

ಬೆಳಗಾವಿ: ‘ಬೆಳಗಾವಿಯಲ್ಲಿ ಮರಾಠಿ ಭಾಷಿಕರು ಅನುಭವಿಸುತ್ತಿರುವ ತೊಂದರೆ ಗಂಭೀರ ಸ್ವರೂಪದ್ದಾಗಿದೆ. ಬೆಳಗಾವಿ ಸಮಸ್ಯೆ ಬಗ್ಗೆ ನಾನೂ ಆಳವಾಗಿ ಅಧ್ಯಯನ ನಡೆಸಿ ನಿಮ್ಮ ಹೋರಾಟಕ್ಕೆ ಕೈಜೋಡಿಸುತ್ತೇನೆ’ ಎಂದು ಎನ್ಸಿಪಿ ಅಧ್ಯಕ್ಷ ಶರದ್ ಪವಾರ ಅವರ ಪುತ್ರಿ, ಮಹಾರಾಷ್ಟ್ರದ ಸಂಸದೆ ಸುಪ್ರಿಯಾ ಸುಳೆ ಹೇಳಿದರು.
ಎನ್ಸಿಪಿ ಅಧ್ಯಕ್ಷ ಶರದ್ ಪವಾರ ಅವರ ಅಮೃತ ಮಹೋತ್ಸವದ ಅಂಗವಾಗಿ ಮಹಾರಾಷ್ಟ್ರ ಏಕೀಕರಣ ಸಮಿತಿ ನಗರದ ಮರಾಠಾ ಮಂದಿರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕೃತಜ್ಞತಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
‘ಸುಪ್ರೀಂ ಕೋರ್ಟ್ನಲ್ಲಿ ಮಹಾರಾಷ್ಟ್ರಪರ ವಾದ ಮಂಡಿಸುತ್ತಿರುವ ಹಿರಿಯ ವಕೀಲ ಹರೀಶ ಸಾಳ್ವೆ ಅವರೊಂದಿಗೆ ನಾನು ಉತ್ತಮ ಬಾಂಧವ್ಯ ಹೊಂದಿದ್ದೇನೆ. ಗಡಿ ವಿಷಯ ಕುರಿತು ಅವರೊಂದಿಗೆ ಚರ್ಚಿಸಿ, ಕರ್ನಾಟಕಕ್ಕೆ ಹಿನ್ನಡೆಯಾಗುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅರಿತುಕೊಂಡು ಮುಂದಿನ ಹೆಜ್ಜೆ ಇಡೋಣ’ ಎಂದು ಹೇಳಿದರು.
‘ಗಡಿ ವಿಷಯದಲ್ಲಿ ಮಹಾರಾಷ್ಟ್ರ ಮತ್ತು ಕರ್ನಾಟಕದ ನಡುವಿನ ಸಂಘರ್ಷ ಹಲವು ವರ್ಷಗಳಿಂದ ನಡೆಯುತ್ತಿದೆ. ಬೆಳಗಾವಿಯ ಮರಾಠಿ ಭಾಷಿಕರು ಅನುಭವಿಸುತ್ತಿರುವ ತೊಂದರೆಯ ಬಗ್ಗೆ ಯುವಕರು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚಿಸುವ ಮೂಲಕ ದೇಶದ ಗಮನ ಸೆಳೆಯಬೇಕು’ ಎಂದು ಅವರು ಹೇಳಿದರು.
‘ಅನೇಕ ವರ್ಷಗಳಿಂದ ಕರ್ನಾಟಕದಲ್ಲಿ ಮರಾಠಿ ಭಾಷಿಕರಿಗೆ ಅನ್ಯಾಯ ಮಾಡಲಾಗುತ್ತಿದೆ. ಗಣೇಶ ಉತ್ಸವದ ಸಂದರ್ಭದಲ್ಲಿ ಪೆಂಡಾಲ್ನಲ್ಲಿ ನಿರ್ಮಿಸುವ ಗಡಿ ವಿಷಯ ಆಧಾರಿತ ರೂಪಕಗಳನ್ನು ಪೊಲೀಸರು ತೆರವುಗೊಳಿಸುವ ಮೂಲಕ ದೌರ್ಜನ್ಯ ನಡೆಸುತ್ತಿದ್ದಾರೆ. ಕರ್ನಾಟಕ ಸರ್ಕಾರದ ದೌರ್ಜನ್ಯವನ್ನು ಮರಾಠಿ ಭಾಷಿಕರು ಸಹಿಸಿಕೊಂಡು ಬರುತ್ತಿದ್ದಾರೆ.
ಇದರ ವಿರುದ್ಧ ಸಂಘಟಿತರಾಗಿ ಹೋರಾಟ ನಡೆಸಬೇಕು’ ಎಂದು ಮಹಾರಾಷ್ಟ್ರದ ಎನ್ಸಿಪಿ ಶಾಸಕ ಜಯಂತರಾವ್ ಪಾಟೀಲ ಹೇಳಿದರು. ‘ಗಡಿ ವಿವಾದದ ವಿಚಾರಣೆ ಸುಪ್ರೀಂ ಕೋರ್ಟ್ನಲ್ಲಿ ನಡೆಯುತ್ತಿದೆ. ಕಳೆದ ಐದು ದಶಕಗಳಿಂದ ಮರಾಠಿ ಭಾಷಿಕರು ಹೋರಾಟ ನಡೆಸುತ್ತಿದ್ದಾರೆ. ಹೋರಾಟದ ನೇತೃತ್ವವನ್ನು ಹೊಸ ಪೀಳಿಗೆ ವಹಿಸಿಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ’ ಎಂದು ಅವರು ನುಡಿದರು.
ಶಾಸಕ, ಮೇಯರ್ ಗೈರು: ಎಂಇಎಸ್ ಏರ್ಪಡಿಸಿದ್ದ ಕೃತಜ್ಞತಾ ಸಮಾರಂಭದಲ್ಲಿ ಎಂಇಎಸ್ ಬೆಂಬಲಿತ ಶಾಸಕ ಸಂಭಾಜಿ ಪಾಟೀಲ, ಮೇಯರ್ ಕಿರಣ ಸಾಯನಾಕ, ಉಪ ಮೇಯರ್ ಮೀನಾ ವಾಜ್ ಅವರು ಗೈರುಹಾಜರಿರುವುದು ಎದ್ದು ಕಂಡುಬಂತು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.