ಗುರುವಾರ , ಏಪ್ರಿಲ್ 15, 2021
26 °C

ಬೆಳಗಿದ ಜಾನಪದ ಗೀತೆಗಳು

ಪ್ರೊ. ಮೈಸೂರು ವಿ ಸುಬ್ರಹ್ಮಣ್ಯ Updated:

ಅಕ್ಷರ ಗಾತ್ರ : | |

ಯವನಿಕಾದಲ್ಲಿ ಭರತನಾಟ್ಯ ಮಾಡಿದ ಜಯಶ್ರೀ ರವಿ ಅವರು ರೇವತಿ ನರಸಿಂಹನ್ ಮತ್ತು ಪ್ರಿಯದರ್ಶಿನಿ ಗೋವಿಂದ್ ಅವರ ಶಿಷ್ಯೆ. ಲಯಾಭಿನಯ ನಾಟ್ಯಧಾಮದಲ್ಲಿ ಶಿಕ್ಷಕಿ. ಸಾಂಪ್ರದಾಯಿಕ ರಚನೆಗಳ ನಂತರ ಮಾಡಿದ ‘ಸ್ವಾಮಿಯ ಕರೆತಾರೆ’ ವರ್ಣದಲ್ಲಿ ಅವರ ವಿದ್ಯೆ, ಸಾಧನೆಗಳು ಹೊರ ಹೊಮ್ಮಿದವು. ಯೋಗಾನರಸಿಂಹ ಅವರ ರಚನೆಯಲ್ಲಿ ರಾಮಾಯಣದ ಕೆಲ ಘಟನೆಗಳನ್ನು ಅಭಿನಯಿಸಿ, ಡಾ. ಶಂಕರ್ ಅವರ ‘ಪಂಚಭಾವ’ ಆಯ್ದರು. ಮೀರಾ, ಹನುಮಂತ, ಸತ್ಯಭಾಮಾ, ಬುದ್ಧ, ಯಶೋದಾ ಪಾತ್ರಗಳ ಅಭಿನಯದ ಮೂಲಕ ಭಿನ್ನ ಭಾವಗಳನ್ನು ಮಾಡಿ ತೋರಿದರು.ಸ್ವಲ್ಪ ದೀರ್ಘವಾದರೂ ಈ ಕೃತಿಯ ಮೂಲಕ ಒಂದು ಭಿನ್ನ- ಹೊಸ ರಚನೆ ನೃತ್ಯರಂಗಕ್ಕೆ ಸೇರ್ಪಡೆಯಾದಂತಾಯಿತು. ಹೆಚ್ಚಿನ ಅನುಭವದಿಂದ ತನ್ನ ಅಭಿನಯವನ್ನು ಜಯಶ್ರೀ ಪರಿಣಾಮಕಾರಿಯಾಗಿ ಮಾಡಬಹುದು. ಬಾಲಸುಬ್ರಹ್ಮಣ್ಯ ಶರ್ಮ, ಅರಣ್ಯ ನಾರಾಯಣ್ ಗುರುಮೂರ್ತಿ ಹಾಗೂ ಜಯರಾಂ ಮೇಳದಲ್ಲಿ ನೆರವಾದರು.ಜನಪದ, ಭಾವಗೀತೆ

ರಂಗ ಸಂಸ್ಥಾನ ನಡೆಸಿದ ಋತುಗಾನ ಸಂಗೀತ ಉತ್ಸವದಲ್ಲಿ ಹಿರಿಯ ಕಿರಿಯ ಕಲಾವಿದರ ದೊಡ್ಡ ತಂಡವೇ ಭಾಗವಹಿಸಿತು. ಅವರು ನಗರದ ಬೇರೆ ಬೇರೆ ಬಡಾವಣೆಗಳಲ್ಲಿ, ಕಾಲೇಜುಗಳಲ್ಲಿ, ಸಂಸ್ಥೆಗಳಲ್ಲಿ ಜಾನಪದ, ಭಾವಗೀತೆ, ತತ್ವಪದಗಳ ಗೀತವಾಹಿನಿ ಹರಿಸಿದರು. ರಂಗ ಸಂಸ್ಥಾನದ ಕಿರಿಯ ವಿದ್ಯಾರ್ಥಿಗಳು ‘ಹಾಲನಾಡಿ, ಮಾತನಾಡೈ, ಶರಣು ಶರಣು, ಮೂಲೋಕದಯ್ಯ’ ಮುಂತಾದ ಜನಪದ ಗೀತೆಗಳನ್ನು ಇಂಪಾಗಿ ಹಾಡಿದರು.ಚಾಮರಾಜನಗರದ ಸಿ.ಎಂ. ನರಸಿಂಹಮೂರ್ತಿ ತಮ್ಮ ತಾರಕ ಕಂಠದಿಂದ ‘ಮಾದೇಶಂಗೆ ಶರಣು ಮತ್ತು ನಾನಾರಿಗಲ್ಲದವಳು’ ಗೀತೆಗಳನ್ನು ಚೆನ್ನಾಗಿ ಹಾಡಿದರು. ಬಂಡ್ಲಹಳ್ಳಿ ವಿಜಯ್‌ಕುಮಾರ್ ‘ಚೆಲ್ಲಿದರು ಮಲ್ಲಿಗೆಯ’ ಹಾಡನ್ನು ಮಧುರವಾಗಿ ಹಾಡಿದರೆ, ‘ಬಾರೊ ಸಾಧನ ಕೇರಿಗೆ’ ಗೀತೆ ಪಂಚಾಮೃತ ಶಾಲೆಯ ಆಯ್ಕೆಯಾಗಿತ್ತು.ಮಧುರ ವೇಣು ನಾದ

ಇಂದಿನ ವೇಣುವಾದಕರಲ್ಲಿ ಸಂಗೀತ ಕಳಾನಿಧಿ ಎನ್. ರಮಣಿ ಅವರಿಗೆ ಅಗ್ರಸ್ಥಾನವಿದೆ. ಅವರು ಕರ್ನಾಟಕ ಕಾಲೇಜ್ ಆಫ್ ಪರ್ಕಷನ್‌ನ ವಾರ್ಷಿಕ ಸಂಗೀತೋತ್ಸವ ಅಂಗವಾಗಿ ಅನನ್ಯದಲ್ಲಿ ತಮ್ಮ ಕಛೇರಿಯನ್ನು ವರ್ಣದಿಂದ ಪ್ರಾರಂಭಿಸಿ, ‘ಶ್ರೀಮಹಾಗಣಪತಿಂ’ನಿಂದ ಮುಂದುವರೆಸಿದರು.ಜನಪ್ರಿಯ ದೇವರನಾಮ ‘ಸಕಲಗ್ರಹಬಲ’ ನಿರೂಪಿಸಿ ಧರ್ಮವತಿ ರಾಗವನ್ನು ವಿಸ್ತಾರ ಆಲಾಪನೆಗೆ ಆಯ್ದರು.ಹಿತಮಿತವಾಗಿ ಆಲಾಪಿಸಿ ‘ಭಜನಸೇಯ’ ಕೃತಿಯನ್ನು ಚೊಕ್ಕವಾಗಿ ನುಡಿಸಿದರು. ಮೋಹನ ರಾಗವನ್ನು ಮಧುರವಾಗಿ ಆಲಾಪಿಸಿ, ಪಲ್ಲವಿಯನ್ನು ಕಿರಿದಾದರೂ ಚೊಕ್ಕವಾಗಿ ಮಂಡಿಸಿದರು. ಮೃದಂಗವಲ್ಲದೆ, ಘಟ, ಖಂಜರಿ, ಡೋಲ್, ರಿದಂ ಪ್ಯಾಡ್, ಡೋಲಕ್, ಖೋಲ್, ಮೋರ್ಚಿಂಗ್ ಮತ್ತು ಕೊನ್ನಕೋಲ್ ಹೀಗೆ 9 ವಾದ್ಯಗಳ ತನಿವಾದನ ರೋಚಕವಾಗಿತ್ತು. ಪಿಟೀಲಿನಲ್ಲಿ ನೆರವಾದವರು ಬಿ. ರಘುರಾಂ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.