ಭಾನುವಾರ, ಏಪ್ರಿಲ್ 11, 2021
21 °C

ಬೆಳಗಿದ ಯುವ ಗಾಯಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕರ್ನಾಟಕ ಸಂಗೀತ ಕ್ಷೇತ್ರದಲ್ಲಿ ಗಾಯನ ಇಳಿಮುಖವಾಗುತ್ತಿದೆಯೇನೋ ಎಂಬ ಆತಂಕ ಹಿರಿಯರಿಗೆ! ಇಂಥ ಸಂದರ್ಭದಲ್ಲಿ ಕೆಲ ಯುವಕರು ತಮ್ಮ ಸಾಧನೆ-ಪ್ರತಿಭೆಗಳಿಂದ ಗಮನ ಸೆಳೆಯುತ್ತಿದ್ದಾರೆ. ಸಂಗೀತದ ನಾಳೆಗಳ ಬಗೆಗೆ ಅಂಥ ಭರವಸೆ ಮೂಡಿಸುತ್ತಿರುವ ಕೆಲವೇ ಯುವ ಕಲಾವಿದರಲ್ಲಿ ಜಿ. ರವಿಕಿರಣ್ ಒಬ್ಬರು. ಹಿರಿಯರಲ್ಲಿ ಕಲಿತು, ಭದ್ರ ಪಾಯ ಹಾಕಿಕೊಂಡು ಕೆಲಕಾಲದಿಂದ ಅವರು ಟಿ.ಎಂ. ಕೃಷ್ಣ ಅವರಲ್ಲಿ ಕಲಿಕೆ ಮುಂದುವರೆಸಿದ್ದಾರೆ.ಶ್ರಿರಾಮ ಲಲಿತಕಲಾ ಮಂದಿರದಲ್ಲಿ ಇತ್ತೀಚೆಗೆ ನಡೆದ ರವಿಕಿರಣ್ ಕಛೇರಿಯಲ್ಲಿ ಪಲ್ಲವಿಯನ್ನೇ ಪ್ರಧಾನವಾಗಿ ಆಯ್ದುದು ಅಭಿನಂದನೀಯ. ಆದರೆ ಪಲ್ಲವಿಗೆ `ಕುಂತಳವರಾಳಿ~ ರಾಗವನ್ನು ಆಯ್ದಾಗ ಸಂಪ್ರದಾಯಸ್ಥರು ಹುಬ್ಬೇರಿಸುವಂತಾಯಿತು!ಕಲ್ಯಾಣಿ, ಶಂಕರಾಭರಣ, ತೋಡಿ, ಭೈರವಿಯಂಥ ಗಾಢ ರಾಗಗಳೇ ಪಲ್ಲವಿಗೆ ಅರ್ಹವಾದುದು ಎಂಬುದು ಹಿರಿಯರ ಅಭಿಪ್ರಾಯ. ಆದರೆ ಹೊಸ ಪೀಳಿಗೆಯ ಕಲಾವಿದರು ಚಿಕ್ಕ ರಾಗಗಳನ್ನೂ ಪಲ್ಲವಿಗೆ ಆಯ್ದು ತಮ್ಮ ಪ್ರತಿಭೆಯನ್ನು ತೋರುತ್ತಿದ್ದಾರೆ.`ಕುಂತಳವರಾಳಿ~ ರಾಗವು ವಕ್ರ ಔಡವ ರಾಗ. ಲಾಲಿತ್ಯದಿಂದ ಕೂಡಿದ ರಕ್ತಿ ರಾಗ. ತ್ಯಾಗರಾಜರ ಕೃತಿಗಳಿಂದ ಈ ರಾಗವು ಹೆಚ್ಚು ಚಾಲ್ತಿಗೆ ಬಂದಿದೆ. ಸ್ವಾತಿ ತಿರುನಾಳರ ಭೋಗೀಂದ್ರ ಶಾಯಿನಂ ಸಹ ಈ ರಾಗದ ಇನ್ನೊಂದು ಪ್ರಸಿದ್ಧ ಕೃತಿ.ರವಿಕಿರಣ್ ಕುಂತಳವರಾಳಿಯನ್ನು ಹಿತಮಿತವಾಗಿ ಆಲಾಪಿಸಿ, ತಿಶ್ರ ತ್ರಿಪುಟದ ಪಲ್ಲವಿಯನ್ನು (ಮಾನಿನಿ ಮನೋಹರ ಮಾರಜನಕ ಶುಭಚರಿತ) ಬೆಳೆಸಿದರು. ಕೊನೆಯಲ್ಲಿ ರಾಗಮಾಲಿಕೆಯ ಸ್ವರವನ್ನು ವರಾಳಿ, ಷಹನ ಮತ್ತು ಗೌಳ ರಾಗಗಳಲ್ಲಿ ನಿರೂಪಿಸಿದರು.ಆದರೆ ರಸಾನುಭವ ಆಗುವಷ್ಟಾದರೂ ರಾಗಮಾಲಿಕೆಯನ್ನು ನಿರೂಪಿಸಬೇಕಿತ್ತು. ಹಾಗೆಯೇ ಹತ್ತಿರದ ರಾಗಗಳಿಗಿಂತ ವೈದೃಶ್ಯವಿರುವ (ಕಾಂಟ್ರಾಸ್ಟ್) ರಾಗಗಳನ್ನು ಆಯ್ದರೆ ಭಿನ್ನ ಅನುಭವ ನೀಡಲು ಸಹಾಯಕ. ಆದರೆ ಕುಂತಳವರಾಳಿ ಚೇತೋಹಾರಿಯಾಗಿದ್ದದ್ದರಲ್ಲಿ ಅನುಮಾನವಿಲ್ಲ.ಸರಸ್ವತೀ ಸ್ತುತಿ

ಆ ಮೊದಲು ಇನ್ನೊಂದು ಘನ ರಾಗವಾದ ಭೈರವಿಯನ್ನು ಘನವಾಗಿ ರವಿಕಿರಣ್ ನಿರೂಪಿಸಿದರು. ಎಲ್ಲರ ಗಮನ ಸೆಳೆದಿರುವ ಭೈರವಿಯಲ್ಲಿ ತ್ರಿಮೂರ್ತಿಗಳು (ಶ್ಯಾಮಾಶಾಸ್ತ್ರಿ, ಮುದ್ದುಸ್ವಾಮಿ ದೀಕ್ಷಿತರು, ತ್ಯಾಗರಾಜರು) ಮೂವರೂ ಕೃತಿಗಳನ್ನು ರಚಿಸಿದ್ದಾರೆ. ಭೈರವಿಯು ಕಲಾವಿದರು - ಕೇಳುಗರು ಇಬ್ಬರಿಗೂ ಮೆಚ್ಚಿನ ರಾಗ. ಹೀಗಾಗಿ ವಿಸ್ತಾರಕ್ಕೆ ಗಾಯಕರು-ವಾದ್ಯಗಾರರು ಇಬ್ಬರೂ ಪ್ರಾಶಸ್ತ್ಯ ಕೊಟ್ಟು ಆರಿಸಿಕೊಳ್ಳುವ ರಾಗ.ರವಿಕಿರಣ್ ಅವರ ಪ್ರತಿಭೆ-ಮನೋಧರ್ಮಗಳಿಗೆ ದ್ಯೋತಕವಾಗಿ ಭೈರವಿ ಬೆಳಗಿತು. ಸ್ವಾತಿ ತಿರುನಾಳರ ಸೊಗಸಾದ ಕೃತಿ `ಜನನಿ ಮಾಮವಾಮೇಯೆ ಭಾರತಿ ಜಯ ಸರಸಿಜಾಸನ ಜಾಯೇ~ ತೆಗೆದುಕೊಂಡು ಸಭೆಯ ಶ್ಲಾಘನೆಗೆ ಒಳಗಾದರು. ನವರಾತ್ರಿ ಗುಚ್ಛದ ಐದನೆಯ ಕೃತಿ (ಪಂಚಮಿ)ಯಾದ ಇದರಲ್ಲಿ ರಾಗ ಭಾವವೂ ಮಡುಗಟ್ಟಿದೆ. ಸಾಹಿತ್ಯವೂ ರಸವತ್ತಾಗಿದೆ.`ತಾಯಿ ಸರಸ್ವತಿ! ಸದಾ ನನ್ನ ಬಾಯಲ್ಲಿ ನೆಲಸಿ ಸ್ಫೂರ್ತಿಯನ್ನು ನೀಡು ದೇವಿ! ಬ್ರಹ್ಮನ ಸಂಗಾತಿಯಾದ ಅವಳನ್ನೇ ದೇವತೆಗಳು ಸ್ತುತಿಸುತ್ತಾರೆ. ಕಮಲದಲ್ಲಿ ವಾಸಿಸುವ ಅವಳು ವೀಣೆಯನ್ನು ನುಡಿಸುತ್ತಾ, ಒಂದು ಕೈಯಲ್ಲಿ ಗಿಳಿಯನ್ನು ಹಿಡಿದು ಮಿಕ್ಕ ಎರಡು ಕೈಗಳಲ್ಲಿ ಅಭಯ ಮತ್ತು ವರದ ಮುದ್ರೆಗಳನ್ನು ಹೊತ್ತಿದ್ದಾಳೆ. ಅಜ್ಞಾನದಿಂದ ಉಂಟಾದ ದುಃಖವನ್ನು ಪರಿಹರಿಸುವವಳೇ, ನನ್ನ ಬುದ್ಧಿಯನ್ನು ನಿನ್ನ ಪಾದದಲ್ಲಿ ನೆಲೆಸಿರುವಂತೆ ಮಾಡು~ ಎಂದು ವಾಗ್ಗೇಯಕಾರ ಪ್ರಾರ್ಥಿಸಿದ್ದಾರೆ. ಕೊನೆಯಲ್ಲಿ ಬರುವ ಶೊಲ್‌ಕಟ್ಟು ಸ್ವರವೂ ಆಕರ್ಷಕವಾಗಿದೆ. ಕೃತಿಗೆ ಮಾಡಿದ ಸ್ವರಪ್ರಸ್ತಾರವೂ ರಾಗಕ್ಕೆ ಪೂರಕವಾಗಿತ್ತು.ಅಪರಾಧಿ ನಾನಲ್ಲ!

ದೀಕ್ಷಿತರ ಭೂಪಾಳ ರಾಗದ ಸದಾಚಲೇಶ್ವರಂ ಭಾವಯೇಹಂ ಇನ್ನೊಂದು ಒಳ್ಳೆಯ ಆಯ್ಕೆ. ಈ ನಡುವೆ ಹೆಚ್ಚಾಗಿ ಜಾವಡಿ ಕೇಳಿಬರುವುದಿಲ್ಲ ಎನ್ನುವ ಕಾಲದಲ್ಲಿ  ವಗಲಾಡಿ ಬೋಧನ ಆಯ್ದುದು ಸ್ವಾಗತಾರ್ಹ. ಮಾಮೂಲಿ ದೇವರನಾಮಗಳ ಬದಲು `ಅಪರಾಧಿ ನಾನಲ್ಲ~ ತೆಗೆದುಕೊಂಡರು. ಪಿಟೀಲಿನಲ್ಲಿ ನಳಿನಾ ಮೋಹನ್, ಮೃದಂಗದಲ್ಲಿ ಮೇಲಕಾವೇರಿ ಬಾಲಾಜಿ ಹಾಗೂ ಖಂಜರಿಯಲ್ಲಿ ಗುರುಪ್ರಸನ್ನ - ಹೊಂದಾಣಿಕೆಯಿಂದ ಪಕ್ಕವಾದ್ಯ ಗಳನ್ನು ನುಡಿಸಿದರು.

 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.