ಬೆಳಗೀಹಳ್ಳಿ ಕೆರೆ ಗೋಳು ಕೇಳುವರಾರು?
ಹಿರೀಸಾವೆ: ಹೋಬಳಿಯ ಬೆಳಗೀಹಳ್ಳಿ ಗ್ರಾಮದ ಸುತ್ತಮುತ್ತ ಹದಿನೈದು ವರ್ಷಗಳಿಂದ ಮಳೆಯಾಗದೆ ಗ್ರಾಮದ ಕೆರೆಗೆ ನೀರು ಬಂದಿಲ್ಲ.
ಗ್ರಾಮದ ಸರ್ವೇ ನಂ 146 ರಲ್ಲಿ 38 ಎಕರೆ ಭೂ ಪ್ರದೇಶವನ್ನು ಹೊಂದಿದೆ. ಇದ್ದ ಒಂದು ತೂಬು ಮುಚ್ಚಿಹೋಗಿದೆ. ಹಲವು ವರ್ಷಗಳಿಂದ ಕೆರೆ ತುಂಬದೆ ಕೆರೆಯ ನೀರನ್ನು ನಂಬಿ ಭತ್ತ ಬೆಳೆಯುತ್ತಿದ್ದ ಭೂಮಿ ಇಂದು ತೆಂಗಿನ ತೋಟವಾಗಿ ಪರಿವರ್ತನೆಯಾಗಿದೆ. ಗ್ರಾಮದಲ್ಲಿರುವ ಇತಿಹಾಸ ಪ್ರಸಿದ್ಧ ಕಂಬದ ನರಸಿಂಹಸ್ವಾಮಿ ದೇವಸ್ಥಾನಕ್ಕೆ ಕೆರೆಯ ಹಿಂಭಾಗದಲ್ಲಿರುವ ಮಜ್ಜನ ಬಾವಿಯಿಂದ ನೀರು ತಂದು ಪೂಜಾ ಕಾರ್ಯಗಳನ್ನು ಮಾಡುತ್ತಿದ್ದರು. ಕೆರೆ ತುಂಬದೆ ಈಗ ಬಾವಿ ಒಣಗಿ ದುಸ್ಥಿತಿಯಲ್ಲಿದೆ.
ಅಕ್ಕ-ಪಕ್ಕ ಇರುವ ಜಮೀನಿನವರು ಕೆರೆಯ ಬಹುಭಾಗವನ್ನು ಒತ್ತುವರಿ ಮಾಡಿದ್ದಾರೆ. ಕೆರೆಯನ್ನು ಅಳತೆ ಮಾಡಿಸುವಂತೆ ಹಲವು ಬಾರಿ ಸಣ್ಣ ನೀರಾವರಿ ಇಲಾಖೆಗೆ ಮನವಿ ಮಾಡಿದರೂ ಗಮನಹರಿಸಿಲ್ಲ ಎಂದು ಗ್ರಾಮಸ್ಥರು ದೂರುತ್ತಾರೆ.
ಮಳೆ ಆಶ್ರಯದಲ್ಲಿಯೇ ಕೆರೆ ತುಂಬಬೇಕು, ಹೇಮಾವತಿ ನದಿಯ ನೀರು ಕಾಲುವೆ ಮೂಲಕ 7 ಕಿ.ಮೀ. ದೂರದಲ್ಲಿ ಹರಿದರೂ ಕೆರೆಗೆ ನೀರು ಹರಿಸುವ ಪ್ರಯತ್ನ ಆಗಿಲ್ಲ. ಕೆರೆ ತುಂಬಿದರೆ ಇದರ ಮುಂದಿನ ಮೇಟಿಕೆರೆ, ಬಾಳಗಂಚಿ ಕೆರೆಗಳಿಗೂ ನೀರು ಹರಿಸಬಹುದು ಎಂದು ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಮಹೇಶ್ ಹೇಳುತ್ತಾರೆ.
ಹಿರೀಸಾವೆಯಿಂದ ತೋಟಿ, ಮಾದಲಗೆರೆ ಅಕ್ಕನಹಳ್ಳಿ ಮೂಲಕ ನುಗ್ಗೇಹಳ್ಳಿಗೆ ಹೋಗಲು ಕೆರೆ ಏರಿ ಮೇಲೆ ಇರುವ ರಸ್ತೆಯಲ್ಲಿಯೆ ಹೋಗಬೇಕು. ಏರಿಯ ಎರಡೂ ಬದಿ ತಡೆಗೋಡೆಗಳಿಲ್ಲ. ಕೆರೆಯ ಹೂಳು ಎತ್ತುವ ಕೆಲಸ ನಡೆದಿದೆ ಆದರೆ ನಿಯಮಾನುಸಾರ ಹೂಳು ತೆಗೆದಿಲ್ಲ ಎಂದು ಗ್ರಾಮದವರು ದೂರುತ್ತಾರೆ.
ಸರ್ಕಾರ ಕೆರೆಗಳ ಅಭಿವೃದ್ಧಿಗೆ ಕೋಟಿಗಟ್ಟಲೆ ಹಣ ಖರ್ಚು ಮಾಡುತ್ತಿದ್ದೆ, ಅದೇರೀತಿ ಸಣ್ಣ ಕೆರೆಗಳಿಗೆ ನೀರು ಹರಿಸುವ ಬಗ್ಗೆಯು ಗಮನ ಹರಿಸಬೇಕಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.