ಬೆಳಗುಂದೆಯಲ್ಲಿ ಕಿರು ಶಿಲಾಶಾಸನ ಪತ್ತೆ

7

ಬೆಳಗುಂದೆಯಲ್ಲಿ ಕಿರು ಶಿಲಾಶಾಸನ ಪತ್ತೆ

Published:
Updated:

ಯಾದಗಿರಿ: ತಾಲ್ಲೂಕಿನ ನಂದಿ ಬೆಳಗುಂದೆ ಗ್ರಾಮದ ಬಸವಣ್ಣನ ದೇವಸ್ಥಾನದಲ್ಲಿ ಎರಡು ಕಿರು ಶಿಲಾಶಾಸನಗಳನ್ನು ಇತಿಹಾಸ ಉಪನ್ಯಾಸಕ ಎ.ಎಂ. ಸೈದಾಪುರ ಪತ್ತೆ ಮಾಡಿದ್ದಾರೆ. ಗುಡಿಯ ಆಧಿಷ್ಠಾನದ ಹಿಂಭಾಗದ ಬಲ ಮೂಲೆಯಲ್ಲಿರುವ ಶಾಸನದ ಒಂದು ಭಾಗದಲ್ಲಿ ಸೂರ್ಯ ಚಂದ್ರರ ರೇಖಾ ಚಿತ್ರಗಳೊಂದಿಗೆ “ಶ್ರೀ ಮೊನೆಯಂಕ ಕಾರ ಶಿವ ಪಾದ ಶೇಖರಂ ಶ್ರೀ” ಎಂಬ ಲಿಖಿತವಿದೆ. ಇನ್ನೊಂದು ಭಾಗದಲ್ಲಿ “ಶ್ರೀಮತ್ ಬ್ರಹ್ಮೇಶ್ವರ ದೇವರ ಗಡಿಂಬದಲು ಶ್ರೀಮತ್ ಮೊನೆಯಂಕಕಾರನು ಬಿಟ್ಟ ಕೇಈ ಮ” ಎಂಬ ವಿವರಗಳಿವೆ.ಈಗಾಗಲೇ ಗೋಗಿಯವರು ಪ್ರಕಟಿಸಿರುವ ದೇವಸ್ಥಾನದ ಮುಂಭಾಗದಲ್ಲಿರುವ ಕ್ರಿ.ಶ. 1040 ರ ಜಯಸಿಂಹನ ಶಾಸನದಲ್ಲಿ “ಮೊನೆಯಂಕಕಾರ...ಶಿವಪಾದಶೇಖರಂ...ಬರ್ಮ್ಮೊರಸರ್‌” ಎಂಬ ವಿಷಯವನ್ನು ಗಮನಿಸಿದಾಗ ಇಲ್ಲಿಯ ಮೊನೆಯಂಕಕಾರ ಬಿರುದಾಂಕಿತನೂ ಬರ್ಮಾರಸರೇ ಎಂಬುದರಲ್ಲಿ ಅನುಮಾನವಿಲ್ಲ. ಆದರೆ ಅಲ್ಲಿ “ಬಳಿಯೂರ ಗಡಿಂಬದಲು” ಎಂದಿದ್ದರೆ, ಇಲ್ಲಿ “ಬ್ರಹ್ಮೇಶ್ವರ ದೇವರ ಗಡಿಂಬದಲು” ಎಂಬ ಪದಗಳು ಜಿಜ್ಞಾಸೆಗೆ ಎಡೆಮಾಡಿಕೊಡುತ್ತವೆ. ಬರ್ಮರಸರು ಕ್ರಿ.ಶ. 1040 ಕ್ಕಿಂತ ಮುಂಚೆ ಅಥವಾ ನಂತರ ಈ ಶಾಸನ ಹಾಕಿಸಿರಬಹುದೆಂದು ಭಾವಿಸಬಹುದಾಗಿದೆ. 300 ಮತ್ತೂರು ಭೂಮಿಯನ್ನು ದಾನ ನೀಡಿರುವ ದತ್ತಿ ಶಾಸನ ಇದಾಗಿದ್ದು, ಜಿಲ್ಲೆಯ ಇತಿಹಾಸ ಪುನರ್‌ರಚನೆಯಲ್ಲಿ ಸಹಕಾರಿ ಆಗಲಿದೆ.ದೇವಸ್ಥಾನದ ನವರಂಗದ ಕಂಬವೊಂದರಲ್ಲಿ ಇರುವ ಕಿರು ಶಾಸನದ ವಿವರಗಳು ಈ ರೀತಿ ಇವೆ. ಕಂಬದ ಪೀಠ ಭಾಗದಲ್ಲಿ ಎರಡು ಸಾಲುಗಳಲ್ಲಿ ಇದನ್ನು ಕಂಡಿರಿಸಲಾಗಿದೆ.“ಗಂಗಪ್ಪಗಳ ಮಗ ಮಾ ಯಂಣನ ಬರಹ(ದ)ಂ 1310” ಎಂದು ಈ ಶಾಸನದಲ್ಲಿ ಉಲ್ಲೇಖವಾಗಿದೆ. ಈ ಶಾಸನದಲ್ಲಿ ಉಲ್ಲೇಖಿತ ಮಾಯಣ್ಣನು ಶಾಸನದ ಪಾಠವನ್ನು ರಚಿಸಿರಬಹುದು ಇಲ್ಲವೇ ಶಾಸನ ಫಲಕರ ಮೇಲೆ ಬರೆದವನಾಗಿರಬಹುದು. ಅಥವಾ ಈತ ಒಬ್ಬ ಅಧಿಕಾರಿಯಾಗಿದ್ದು, ಶಾಸನದಲ್ಲಿ ಸಹಿ (ಬರಹ) ಹಾಕಿರುವ ಸಾಧ್ಯತೆಯನ್ನೂ ಪರಿಗಣಿಸಬೇಕಾಗುತ್ತದೆ.ಶಾಸನದಲ್ಲಿ 1310 ಎಂಬುದು ಕ್ರಿ.ಶ. 1388 ಕ್ಕೆ ಸರಿ ಹೊಂದುತ್ತದೆ. ದೇವಸ್ಥಾನದ ಮುಂಭಾಗದಲ್ಲಿನ ಹಾಗೂ ಹಿಂಭಾಗದಲ್ಲಿನ ಶಾಸನಗಳೆಲ್ಲವೂ ಕ್ರಿ.ಶ.11 ನೇ ಶತಮಾನಕ್ಕೆ ಸೇರಿದವುಗಳಾಗಿವೆ.ಹೀಗಾಗಿ ಮಾಯಣ್ಣನು ಬರೆದ ಶಾಸನ ಯಾವುದು ಎಂಬ ಪ್ರಶ್ನೆ ಹಾಗೆಯೇ ಉಳಿಯುತ್ತದೆ.ದೇವಸ್ಥಾನದ ಬಾವಿಯ ಹತ್ತಿರ ಇನ್ನೊಂದು ಮಧ್ಯಮ ಗಾತ್ರದ ಶಾಸನವೂ ಪತ್ತೆಯಾಗಿದ್ದು, ಬರಹ ಅಸ್ಪಷ್ಟವಾಗಿ ಇರುವುದರಿಂದ ಇನ್ನೂ ಅದರ ಪಾಠ ಸಿದ್ಧಪಡಿಸಲಾಗಿಲ್ಲ. ಹಾಗೆಯೇ ದೇವಸ್ಥಾನ ಬಹಳಷ್ಟು ಜೀರ್ಣೋದ್ಧಾರಗೊಂಡಿದ್ದು, ಅದರ ಬಹುಭಾಗಗಳು ಗ್ರಾಮದಲ್ಲಿ ಚದುರಿ ಹೋಗಿವೆ. ಹೆಚ್ಚಿನ ಅಧ್ಯಯನದ ನಂತರ ಈ ಕುರಿತು ನಿರ್ಣಯ ಕೈಗೊಳ್ಳಬಹುದಾಗಿದೆ ಎಂದು ಎ.ಎಂ. ಸೈದಾ ಪುರ ಅಭಿಪ್ರಾಯಪಡುತ್ತಾರೆ.ಕಚೇರಿ ಕಾರ್ಯದ ನಿಮಿತ್ತ ಗ್ರಾಮಕ್ಕೆ ತೆರಳಿದ ಸಂದರ್ಭದಲ್ಲಿ ತಮ್ಮ ಗಮನಕ್ಕೆ ಬಂದ ಕಂಬದಲ್ಲಿನ ಶಾಸನದ ಬಗ್ಗೆ ಮಾಹಿತಿ ನೀಡಿದ ಅಬಕಾರಿ ನಿರೀಕ್ಷಕ ಶ್ರೀರಾಮ ರಾಠೋಡ, ಶಾಸನ ಪ್ರತಿ ತೆಗೆಯುವ ಕಾರ್ಯದಲ್ಲಿ ಸಹಕರಿಸಿದ ಉಪನ್ಯಾಸಕ ಭೀಮಶೆಪ್ಪ, ಮಲ್ಲಪ್ಪ, ದೇವಣ್ಣ, ಡಾ. ಎಂ.ಎಸ್. ಸಿರವಾಳ, ಕಲ್ಲಪ್ಪ, ಕಾಶೀಪತಿ ಮುಂತಾ ದವರು ಎ.ಎಂ. ಸೈದಾಪುರ ಅಭಿನಂದಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry