ಬುಧವಾರ, ಮೇ 12, 2021
19 °C

ಬೆಳದಿಂಗಳ ಬಾಲೆ ಕೊನೆಗೂ ಒಲಿದಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ಈ ವರ್ಷ ಬರಬಹುದೇನೋ? ಮುಂದಿನ ವರ್ಷ ಬರಬಹುದೇನೋ? ಎಂದು ಉತ್ಸಾಹದಿಂದ ಕಾಯುತ್ತಿರುವಾಗ ಪ್ರಶಸ್ತಿ ಬರಲಿಲ್ಲ. ಇದೀಗ ಬಂದಿದೆ. ಉತ್ಸಾಹ ಉಳಿದಿಲ್ಲ~ ಎನ್ನುತ್ತಾರೆ ರಮೇಶ್ ಭಟ್. ಅವರು ಚಿತ್ರರಂಗಕ್ಕೆ ಕಾಲಿಟ್ಟು 33 ವರ್ಷವಾದ ನಂತರ ಇದೇ ಮೊದಲ ಬಾರಿಗೆ ರಾಜ್ಯ ಸರ್ಕಾರದಿಂದ ಪ್ರಶಸ್ತಿ ಪಡೆದುಕೊಂಡಿದ್ದಾರೆ.ಖಾಲಿ ಶೀಶೆ ಮಾರುವ ಬಡ ಅಪ್ಪನಾಗಿ ಅವರು ನಟಿಸಿದ `ಉಯ್ಯಾಲೆ~ ಚಿತ್ರದ ಪಾತ್ರಕ್ಕೆ ಅತ್ಯುತ್ತಮ ಪೋಷಕ ನಟ ಗೌರವ ಸಂದಿದೆ. `ಇಷ್ಟು ವರ್ಷ ಸಿನಿಮಾದಲ್ಲಿದ್ದೀರಿ. ತುಂಬಾ ಪ್ರಶಸ್ತಿಗಳು ಬಂದಿರಬೇಕೇನೋ? ಎನ್ನುತ್ತಾರೆ ಕೆಲವರು. ಆದರೆ ಇದೇ ನನ್ನ ಮೊದಲ ಪ್ರಶಸ್ತಿ~ ಎಂದು ವಿಷಾದದಿಂದ ನಗುತ್ತಾರೆ.`ಮಿಂಚಿನ ಓಟ~, `ಆಕ್ಸಿಡೆಂಟ್~, `ಕರುಣಾಮಯಿ~, `ಅಶ್ವಮೇಧ~, `ಜೋಗಿ~, `ಗಣೇಶನ ಮದುವೆ~, `ಬೆಳದಿಂಗಳ ಬಾಲೆ~ ಸಿನಿಮಾಗಳು ಯಶಸ್ವಿಯಾದಾಗ ತಮ್ಮ ಪಾತ್ರಕ್ಕೆ ಪ್ರಶಸ್ತಿ ಬರಬಹುದು ಎಂದು ನಿರೀಕ್ಷಿಸಿದ್ದರಂತೆ. ಆದರೆ ನಿರಂತರವಾಗಿ ಅವರ ನಿರೀಕ್ಷೆಗಳು ಕೈಕೊಟ್ಟಾಗ ಅಪೇಕ್ಷೆಯನ್ನೇ ಕೈಬಿಟ್ಟು ಸುಮ್ಮನಾದರಂತೆ. `ಆ ಎಕ್ಸೈಟ್‌ಮೆಂಟ್ ಇರುವಾಗ ಪ್ರಶಸ್ತಿ ಬಂದಿದ್ದರೆ ತುಂಬಾ ಖುಷಿಯಾಗುತ್ತಿತ್ತು. ಈಗ ಸಾಧಾರಣ ಖುಷಿಯಾಗಿದೆ.ಈಗಲಾದರೂ ಗುರುತಿಸಿದರಲ್ಲಾ ಎಂಬ ಸಮಾಧಾನ ಸಿಕ್ಕಿದೆ~ ಎಂದು ನುಡಿಯುತ್ತಾರೆ.

ಈ ಸಂದರ್ಭದಲ್ಲಿ ಅವರು `ನಮ್ಮದು ಏನಿದ್ದರೂ ಆಕ್ಷನ್. ರಿಯಾಕ್ಷನ್ ನಮಗೆ ಬೇಕಾಗಿಲ್ಲ~ ಎನ್ನುತ್ತಿದ್ದ ತಮ್ಮ ಗುರು ಬಿ.ವಿ.ಕಾರಂತರ ಮಾತುಗಳನ್ನು ನೆನೆಯುತ್ತಾರೆ.ಕುಂದಾಪುರದವರಾದ ರಮೇಶ್ ಭಟ್ 70ರ ದಶಕದಲ್ಲಿ ಹವ್ಯಾಸಿ ರಂಗಭೂಮಿಯ ಸೆಳೆತಕ್ಕೆ ಬಿದ್ದವರು. ಬಿ.ವಿ.ಕಾರಂತರ ಗರಡಿಯಲ್ಲಿ ಪಳಗಿದ ಅವರು ಸಾಕಷ್ಟು ನಾಟಕಗಳಲ್ಲಿ ನಟಿಸಿದರು.

 

ಕಾರಂತರು `ಚೋಮನ ದುಡಿ~ ಸಿನಿಮಾ ಮಾಡಿದಾಗ ತಮಗೂ ಪಾತ್ರ ಬೇಕೆಂದು ಕೇಳಿದ್ದರಂತೆ. ಆಗ ಕಾರಂತರು `ನಾನು ಮಾಡುತ್ತಿರುವುದು ಗ್ರಾಮೀಣ ಕತೆಯುಳ್ಳ ಸಿನಿಮಾ. ನೀನು ಬೆಳ್ಳಗಿದ್ದೀಯಾ. ನಿನ್ನದು ನಗರದ ಮುಖ~ ಎಂದು ಪಾತ್ರ ನಿರಾಕರಿಸಿದ್ದರಂತೆ.ಅದಾದ ನಂತರ ಎನ್.ಲಕ್ಷ್ಮಿ ನಾರಾಯಣ ನಿರ್ದೇಶನದ `ಅಬಚೂರಿನ ಪೋಸ್ಟಾಪೀಸು~ ಚಿತ್ರದಲ್ಲಿ ಪ್ಲೇಬಾಯ್‌ಯಾಗಿ ನಟಿಸುವ ಅವಕಾಶ ಅವರಿಗೆ ಸಿಕ್ಕಿತು. ಅದೇ ಅವರ ಮೊದಲ ಸಿನಿಮಾ. ಅದಾದ ನಂತರ ಟಿ.ಎಸ್. ರಂಗ ಅವರ `ಗೀಜಗನ ಗೂಡು~, ಎಂ.ಆರ್.ವಿಠಲ್ ಅವರ `ಕೂಡಿ ಬಾಳೋಣ~ ಚಿತ್ರಗಳಲ್ಲಿ ಅವಕಾಶಗಳು ಸಿಕ್ಕವು.

 

ಬಳಿಕ ಶಂಕರ್‌ನಾಗ್ ಅವರ ಜೊತೆ ಗೆಳೆತನ ಬೆಳೆಯಿತು. ಅವರ ಸಂಕೇತ್ ತಂಡದಲ್ಲಿ ಒಬ್ಬರಾಗಿ ಸೇರಿಕೊಂಡ ರಮೇಶ್ ಭಟ್ `ನೋಡಿ ಸ್ವಾಮಿ ನಾವಿರೋದೆ ಹೀಗೆ~, `ಪರಮೇಶಿ ಪ್ರೇಮಪ್ರಸಂಗ~, `ಆಕ್ಸಿಡೆಂಟ್~, `ಮಿಂಚಿನ ಓಟ~ ಮುಂತಾದ ಚಿತ್ರಗಳಲ್ಲಿ ನಟಿಸಿದರು.`ನೀನು ನಕ್ಕರೆ ಹಾಲು ಸಕ್ಕರೆ~, `ಜನನಾಯಕ~, `ಗುರುಬ್ರಹ್ಮ~, `ಗಣೇಶ ಸುಬ್ರಹ್ಮಣ್ಯ~, `ಗೌರಿ ಗಣೇಶ~, `ಸಪ್ತಪದಿ~ ಹೀಗೆ 300ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ರಮೇಶ್ ಭಟ್ ಪೋಷಕ ನಟ ಮತ್ತು ಹಾಸ್ಯನಟರಾಗಿ ಕನ್ನಡದ ಪ್ರೇಕ್ಷಕರಿಗೆ ಚಿರಪರಿಚಿತ.ಬೇಡಿಕೆಯಲ್ಲಿ ಇದ್ದಾಗಲೇ ಕಿರುತೆರೆಯ `ಕ್ರೇಜಿ ಕರ್ನಲ್~ ಧಾರಾವಾಹಿಯಲ್ಲೂ ನಟಿಸಿ ಸೈ ಎನಿಸಿಕೊಂಡ ಕಲಾವಿದ ಅವರು. `ನಾನು ಚಿತ್ರರಂಗದಲ್ಲಿ ಬಿಜಿಯಾಗಿದ್ದೆ. ಆಗ `ಕ್ರೇಜಿ ಕರ್ನಲ್~ ಧಾರಾವಾಹಿಯಲ್ಲಿ ನಟಿಸಬೇಕೆಂಬ ಒತ್ತಡ ಬಂತು.

 

ನನ್ನ ಡೇಟ್‌ಗಳೊಂದಿಗೆ ಹೊಂದಿಕೊಂಡು ಆ ಧಾರಾವಾಹಿಯಲ್ಲಿ ನಟಿಸಲು ಅವಕಾಶ ನೀಡಲಾಯಿತು. ಇಂಥ ಪಾತ್ರಕ್ಕೆ ಇವರೇ ಸೂಕ್ತ ಎಂಬ ವೃತ್ತಿಪರತೆ ಆಗಿತ್ತು. ಈಗ ಯಾರಾದರೇನು ಎಂಬ ವ್ಯವಹಾರ ಬಂದಿದೆ~ ಎನ್ನುವ ರಮೇಶ್‌ಭಟ್, ಇತ್ತೀಚೆಗೆ `ಅಮ್ಮ ನಿನಗಾಗಿ~ ಧಾರಾವಾಹಿಯಲ್ಲಿ ನಟಿಸಿದ್ದರು.`ಎಷ್ಟೇ ನೋವಿದ್ದರೂ ಅಭಿನಯದ ಸೆಳೆತವನ್ನು ಬಿಡಲು ಸಾಧ್ಯವೇ ಇಲ್ಲ. ವೈದ್ಯನಲ್ಲದಿದ್ದರೂ ವೈದ್ಯನಾಗುವ, ನ್ಯಾಯಶಾಸ್ತ್ರ ಓದದಿದ್ದರೂ ನ್ಯಾಯಾಧೀಶನಾಗುವ, ಭಿಕ್ಷುಕನಲ್ಲದಿದ್ದರೂ ಭಿಕ್ಷೆ ಬೇಡುವಂಥ ಅನುಭವ ಎಲ್ಲರಿಗೂ ಆಗುವುದಿಲ್ಲ. ನಾವಲ್ಲದ್ದನ್ನು ನಾವಾಗಿ ಅನುಭವಿಸುವುದೇ ಒಂದು ನಿಶೆ.

 

ಆ ನಿಶೆಗಾಗಿ ಕಲೆಯನ್ನು ಇಷ್ಟಪಟ್ಟೆ. ಅದು ನನಗೆ ಜೀವನ ಕೊಟ್ಟಿತು. ಕಷ್ಟವೋ ಸುಖವೋ ಅದರಲ್ಲಿಯೇ ಮುಂದುವರಿಯುವೆ~ ಎನ್ನುವ ರಮೇಶ್ ಭಟ್ ಸದ್ಯ `ಜಿಂಕೆ ಮರಿ~, `ಐಯಾಮ್ ಇನ್ ಲವ್~, `ಬಂಗಾರಿ~, `ವ್ಯವಸ್ಥೆ~ ಮುಂತಾದ ಸಿನಿಮಾಗಳಿಗೆ ಬಣ್ಣ ಹಚ್ಚಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.