ಬೆಳೆಗಳಿಗೆ ಸಹಾಯಕ ಮಳೆಲೆಕ್ಕ

7

ಬೆಳೆಗಳಿಗೆ ಸಹಾಯಕ ಮಳೆಲೆಕ್ಕ

Published:
Updated:
ಬೆಳೆಗಳಿಗೆ ಸಹಾಯಕ ಮಳೆಲೆಕ್ಕ

ಬಹುತೇಕ ಕಡೆಗಳಲ್ಲಿ ಈಗ ಮಳೆಯಾಧರಿತ ಕೃಷಿ. ತಿಂಗಳ ಆರಂಭದಲ್ಲಿ ಬಿದ್ದ ಮಳೆಯನ್ನು ಆಧರಿಸಿ ಹಲವು ರೈತರು ವ್ಯವಸಾಯ ಮಾಡುತ್ತಾರೆ, ಇನ್ನು ಕೆಲವರು ಬರುವ ಲಾಭದ ಲೆಕ್ಕಾಚಾರ ಮಾಡುತ್ತಾರೆ. ಆದರೆ ಎಷ್ಟು ಮಳೆಯಾಗಿದೆ ಎಂಬ ಬಗ್ಗೆ ಹಲವು ಬಾರಿ ರೈತರಿಗೆ ಮಾಹಿತಿಯೇ ಸಿಗುವುದಿಲ್ಲ.

ಇಂಥ ಒಂದು ಕೊರತೆಯನ್ನು ನೀಗಿಸುತ್ತಿದ್ದಾರೆ ಕೊಡಗು ಜಿಲ್ಲೆ ಮಡಿಕೇರಿ ತಾಲ್ಲೂಕಿನ ಸಂಪಾಜೆಯ ಎಮ್. ಎಸ್.ಮುತ್ತಪ್ಪ. 88ರ ಇಳಿ ವಯಸ್ಸಿನಲ್ಲಿಯೂ ಮಳೆ ಬಿದ್ದ ಪ್ರಮಾಣವನ್ನು ದಾಖಲಿಸಿಕೊಳ್ಳುವುದೇ ಇವರ ವಿಶೇಷ.30 ವರ್ಷಗಳಿಂದ ಒಂದು ದಿನವೂ ಬಿಡದೆ ಈ ಕೆಲಸವನ್ನು ಮಾಡಿಕೊಂಡು ಬಂದಿದ್ದಾರೆ ಮುತ್ತಪ್ಪ. ಮಳೆ ಬಿದ್ದ ಪ್ರಮಾಣವನ್ನು ತಮ್ಮ ಮಳೆ ದಾಖಲಾತಿ ಪುಸ್ತಕ (ರೈನ್ ಫಾಲ್ ಅಕೌಂಟ್ ಬುಕ್) ನಲ್ಲಿ ದಾಖಲಿಸಿದ್ದಾರೆ. ಕೊಡಗಿನ ಮುಖ್ಯ ಬೆಳೆ ಕಾಫಿ. ಕಾಫಿ ಬೆಳೆಗಾರರಿಗೆ ಮಳೆಯ ಪ್ರಮಾಣ ಅತ್ಯಗತ್ಯ. ಬೆಳೆಗಾರರು ಮಾರ್ಚ್, ಏಪ್ರಿಲ್‌ನಲ್ಲಿ ಬಿದ್ದ ಮಳೆಯ ಆಧಾರದ ಮೇಲೆ ಆ ವರ್ಷದಲ್ಲಿ ಎಷ್ಟು ಕಾಫಿ ಬೆಳೆ ಕೈಗೆ ಸಿಗಬಹುದು ಎಂಬುದನ್ನು ಅಂದಾಜು ಮಾಡುತ್ತಾರೆ. ಅದರ ಆಧಾರದಲ್ಲಿ ಗೊಬ್ಬರ ಖರೀದಿ ಇತ್ಯಾದಿ ಬೆಳೆಗೆ ವಿನಿಯೋಗಿಸುವ ಖರ್ಚಿನ ಲೆಕ್ಕಾಚಾರ ನಡೆಯುತ್ತದೆ.ರೂಢಿಯಾದ ಹವ್ಯಾಸ

‘ನಾನು ಮಡಿಕೇರಿ ನಗರಸಭೆಯಲ್ಲಿ ಅಧಿಕಾರಿಯಾಗಿದ್ದೆ. ಕಚೇರಿಯಲ್ಲಿ ಮಳೆಮಾಪಕ ಇತ್ತು. ಇದರಿಂದ ಮಳೆಲೆಕ್ಕ ಬರೆಯುವುದನ್ನು ರೂಢಿಸಿಕೊಂಡೆ. ಇದೇ ಹವ್ಯಾಸವಾಯಿತು. 1982ರಲ್ಲಿ ನಿವೃತ್ತನಾದೆ. ಆದರೆ ಮಳೆಯ ನಂಟು ಬಿಡಲಿಲ್ಲ. 1983 ಜನವರಿ ಒಂದರಿಂದ ಇಂದಿನವರೆಗೂ ಪ್ರತಿದಿನ ಬಿದ್ದ ಮಳೆ ಪ್ರಮಾಣವನ್ನು ಕರಾರುವಾಕ್ಕಾಗಿ ಬರೆದು ಇಟ್ಟಿದ್ದೇನೆ. ದಿನಂಪ್ರತಿ ಬೆಳಿಗ್ಗೆ 8 ಗಂಟೆಗೆ ಮಳೆ ಅಳತೆ ಮಾಡುತ್ತೇನೆ. ಇದನ್ನು ಮನೆಗೆಲಸದವರಿಗೂ ಹೇಳಿಕೊಟ್ಟಿದ್ದೇನೆ. ನಾನು ಮನೆಯಲ್ಲಿ ಇಲ್ಲದ ದಿನ ಕೆಲಸಗಾರರು ಮಳೆ ಅಳತೆಯನ್ನು ಕಾಗದದಲ್ಲಿ ಬರೆದು ಇಡುತ್ತಾರೆ. ಬಂದ ಮೇಲೆ ಅದನ್ನು ನಾನು ಪುಸ್ತಕದಲ್ಲಿ ಬರೆಯುತ್ತೇನೆ. ಎರಡು ಪುಸ್ತಕ ಮುಗಿದು ಇದು ನನ್ನ ಮೂರನೇ ಪುಸ್ತಕ’ ಎನ್ನುತ್ತಾರೆ ಮುತ್ತಪ್ಪ.‘1985ರಲ್ಲಿ 50.40 ಇಂಚು ಮಳೆಯಾಗಿತ್ತು. ಅದನ್ನು ಬಿಟ್ಟರೆ ಈ ವರ್ಷ ಜೂನ್‌ನಲ್ಲಿ 44.7 ಇಂಚು ಮಳೆಯಾಗಿದ್ದೇ ದಾಖಲೆ. ಮಳೆಲೆಕ್ಕ ಪುಸ್ತಕದಿಂದ ಆಯಾಯ ವರ್ಷ ಬಿದ್ದ ಮಳೆಯ ವಿವರ ನಮಗೆ ತಿಳಿಯುತ್ತದೆ. ಅದೊಂದು ಆಸಕ್ತಿಕರ ವಿಷಯವೂ ಹೌದು’ ಎನ್ನುತ್ತಾರೆ ಅವರು. ಮುತ್ತಪ್ಪ ಅವರ ಮಳೆಮಾಪನದಿಂದ ಪ್ರಭಾವಿತರಾಗಿ ನೆರೆಹೊರೆಯವರೂ ಮಳೆ ಲೆಕ್ಕವನ್ನು ಬರೆದು ಇಡಲು ಆರಂಭಿಸಿದ್ದಾರೆ. ಮಗ ನವೀನಚಂದ್ರ ಅವರಿಗೂ ಮಳೆಮಾಪನ ಮಾಡುವುದನ್ನು ಕಲಿಸಿ ಕೊಟ್ಟಿದ್ದಾರೆ. ಸಂಪಾಜೆಯ ಅವರ ಮನೆಗೆ ಬಂದರೆ ನಿಮಗೂ ಕೋಷ್ಟಕ ನೋಡುವ ಭಾಗ್ಯ ಲಭಿಸಲಿದೆ. ರೈತರಿಗೆ ಮಾತ್ರವಲ್ಲದೇ ಹವಾಮಾನ ಅಧ್ಯಯನ ಮಾಡುವವರಿಗೆ ಈ ಕೋಷ್ಟಕ ಹೆಚ್ಚಿನ ನೆರವು ನೀಡಬಲ್ಲದು. ಮಾಹಿತಿಗೆ: 9740248123.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry