ಬೆಳೆಗಳ ನಾಶ ಮಾಡುವ `ಬಿಳಿಕಸ'

7

ಬೆಳೆಗಳ ನಾಶ ಮಾಡುವ `ಬಿಳಿಕಸ'

Published:
Updated:
ಬೆಳೆಗಳ ನಾಶ ಮಾಡುವ `ಬಿಳಿಕಸ'

ರೈತರಿಗೆ ತಲೆನೋವಾಗಿರುವ `ಬಿಳಿಕಸ' (ಸ್ಟ್ರೈಗಾ) ರೈತ ವರ್ಗದವರಿಗೆ  ಚಿರಪರಿಚಿತ. ಆದರೆ ಇದರಿಂದ ಜೋಳ, ಸಜ್ಜೆ, ಗೋವಿನಗೋಳ, ಹಾರಕ, ಬರಗು, ರಾಗಿ, ಬತ್ತ ಮತ್ತು ಕಬ್ಬು ಬೆಳೆಗಳಲ್ಲದೆ ಶೇಂಗಾ, ತಂಬಾಕು, ಗೆಣಸು ಮತ್ತು ಅವರೆ ಬೆಳೆಗಳು ಸೇರಿದಂತೆ 27 ಜಾತಿಯ ಬೆಳೆಗಳು ಇವುಗಳಿಗೆ ತುತ್ತಾಗುತ್ತಿವೆ ಎಂದು  ತಜ್ಞರು ನಡೆಸಿರುವ ಅಧ್ಯಯನದಿಂದ ಬಹಿರಂಗಗೊಂಡಿದೆ.ಈ ಬಿಳಿಕಸದಿಂದ ಶೇ.75 ರಷ್ಟು ಇಳುವರಿ ಕಡಿಮೆಯಾಗುವುದೂ ಅಲ್ಲದೇ ಇದು ಹೆಚ್ಚಿದರೆ ಬೆಳೆಯಲ್ಲಿ ತೆನೆ ಉತ್ಪಾದನೆಯಾಗುವುದಿಲ್ಲ.ಕರ್ನಾಟಕದಲ್ಲಿ ಈ ಸಸ್ಯವನ್ನು ಬಿಳಿಚಿಗನ ಕಸ, ಉರಿ ಮಲ್ಲಿಗೆ, ಬಿಳಿ ಮಲ್ಲಿಗೆ, ಬೇರುಮಾರಿ ಗಿಡ ಎಂದು ಕರೆಯುವರು.  ಜೋಳದ ಬೆಳೆ ಬಿಳಿಕಸಕ್ಕೆ ಅತಿಯಾಗಿ ತುತ್ತಾಗುವ ಬೆಳೆಯಾಗಿದೆ.ಲಕ್ಷ ಬೀಜಗಳ ಉತ್ಪಾದನೆ

ಬಿಳಿಕಸ ಲಕ್ಷಾಂತರ ಸೂಕ್ಷ್ಮ, ಸುಪ್ತಾವಸ್ಥೆ ಹೊಂದಿದ ಅನೇಕ ವರ್ಷಗಳವರೆಗೆ ಮೊಳಕೆಯಾಗುವ ಶಕ್ತಿ ಹೊಂದಿದ ಬೀಜಗಳನ್ನು ಉತ್ಪಾದಿಸುತ್ತದೆ. ಒಂದು ಸಸ್ಯ 90 ಸಾವಿರದಿಂದ 5 ಲಕ್ಷ ಬೀಜ ಉತ್ಪಾದಿಸಬಲ್ಲದು. ಬಿಳಿಕಸ ಭೂಮಿಯಲ್ಲಿ 20 ವರ್ಷಕಾಲದವರೆಗೆ ಮೊಳಕೆಯಾಗುವ ಶಕ್ತಿ ಇರಬಹುದೆಂದು ತಿಳಿದುಬಂದಿದೆ.ಬಿಳಿಕಸದ ಬೀಜಗಳು ಸೂಕ್ಷ್ಮವಾಗಿದ್ದು, ತುಂಬಾ ಹಗುರವಾಗಿರುತ್ತವೆ. ಗಾಳಿ ಮತ್ತು ಹರಿಯುವ ನೀರಿನ ಮೂಲಕ ಬೀಜಗಳು ತೇಲಿ, ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಚಲಿಸುತ್ತವೆ. ಹೊಲಗಳಲ್ಲಿ, ಹುಲ್ಲುಗಾವಲುಗಳಲ್ಲಿ ಮೇಯುತ್ತಿರುವ ದನಗಳು ಮತ್ತು ಈ ಕಳೆಯ ಬೀಜಗಳು ಬೆಳೆಯ ಬೀಜಗಳೊಂದಿಗೆ ಕಲಬೆರೆತು ಈ ಕಳೆಯ ಬೀಜಗಳ ಪ್ರಸರಣೆಗೆ ಅನುಕೂಲ ಮಾಡಿಕೊಡುತ್ತವೆ.

ಈ ಕಳೆಯಲ್ಲಿ ಕ್ಲೋರಿನ್ ಪ್ರಮಾಣ ಹೆಚ್ಚಾಗಿರುವುದರಿಂದ ದನಗಳು ಇದನ್ನು ತಿನ್ನಲು ಇಷ್ಟಪಡುತ್ತವೆ.ಬಿಳಿಕಸದ ಬೀಜಗಳು ಎರಡು ಹಂತಗಳಲ್ಲಿ ಮೊಳೆಯುತ್ತವೆ. ಮೊದಲನೆಯ ಹಂತದಲ್ಲಿ ಸಾಕಷ್ಟು ತೇವಾಂಶ (5 ರಿಂದ 20 ದಿನಗಳ ಕಾಲ) ಮತ್ತು ಉಷ್ಣತಾಮಾನ (80 ರಿಂದ 900 ಫ್ಯಾ)ಬೇಕು.ಎರಡನೆಯ ಹಂತದಲ್ಲಿ ಬೀಜದಿಂದ ಮೂಲ ಬೇರು ಉಷ್ಣತಾಮಾನ 80 ರಿಂದ 900 ಫ್ಯಾ ಇದ್ದಾಗ 24 ರಿಂದ 48 ಗಂಟೆಗಳಲ್ಲಿ ಹೊರಬರುವುದು. ಅದಕ್ಕೆ ಬೇಕಾದ ಸಸ್ಯದ ಬೇರಿನಿಂದ ಹೊರಚಿಮ್ಮಿದ ಉತ್ತೇಜನಕಾರಿ ರಾಸಾಯನಿಕ ಬೇಕು. ಮೊದಲು ಎರಡು ಗಂಟೆಗಳಲ್ಲಿ ಬೇಕಾದ ಸಸ್ಯ ಬೇರಿನಿಂದ ಹೊರಚಿಮ್ಮಿದ ಉತ್ತೇಜನಕಾರಿ ರಾಸಾಯನಿಕವನ್ನು ಈ ಬೀಜವು ಹೀರುತ್ತದೆ. ಮೊದಲನೆ ಹಂತವಾದ ಮೇಲೆ ಅದಕ್ಕೆ ಬೇಕಾದ ಸಸ್ಯದ ಬೇರಿನಿಂದ ಉತ್ಪತ್ತಿಯಾದ ರಾಸಾಯನಿಕವು ಸಿಗದಿದ್ದಲ್ಲಿ ಬೀಜಗಳು ಮೊಳಕೆಯಾಗುವುದಿಲ್ಲ.

ಆದರೆ ಆ ಬೀಜಗಳು ಮೊಳಕೆಯಾಗುವ ಶಕ್ತಿಯನ್ನು ಕಳೆದುಕೊಳ್ಳುವುದಿಲ್ಲ, ಕೆಲವೊಂದು ಸಾರಿ ಬೇರುಗಳಿಂದ ಉತ್ಪತ್ತಿಯಾದ ರಾಸಾಯನಿಕಗಳ ಅವಶ್ಯಕತೆ ಇಲ್ಲದೆಯೂ ಮೊಳಕೆಯಾಗಬಹುದು. ಒಮ್ಮೆ ಮೊಳಕೆಯಾದ ಬೀಜವು ಆಶ್ರಯ ಸಸ್ಯದ ಬೇರಿನ ಮೇಲೆ ಹಸ್ಟೋರಿಯಾ ವಿಶಿಷ್ಟ ಬೇರುಗಳನ್ನು ಬೆಳೆಸಿ ಪರಾವಲಂಬಿ ಸಸ್ಯದ ಬೇರಿನಲ್ಲಿ ಸೇರುತ್ತದೆ.ಬಿಳಿಕಸ ನಿಯಂತ್ರಣ

ಬಿಳಿಕಸದ ಹಾವಳಿ ಬಂಜರು ಹಾಗೂ ಫಲವತ್ತಲ್ಲದ ಜಮೀನಿನಲ್ಲಿ ಹೆಚ್ಚು. ಈ ಕಳೆಯ ಪ್ರಮಾಣ ಮತ್ತು ಇದರಿಂದಾಗುವ ಹಾನಿಯ ಫಲವತ್ತಾದ ಜಮೀನಿನಲ್ಲಿ ಕಡಿಮೆ. ಬಿತ್ತುವ ಕಾಲದಲ್ಲಿ ಮತ್ತು ಬಿತ್ತಿದ ನಂತರ ದೊಡ್ಡ ಮಳೆಯಾಗಿ ಭೂಮಿಯಲ್ಲಿ ಚೆನ್ನಾಗಿ ನೀರು ನಿಂತ ವರ್ಷದಲ್ಲಿ ಈ ಕಳೆಯ ಹಾವಳಿ ಕಡಿಮೆ.

ಯಾವ ವರ್ಷದಲ್ಲಿ ಮಳೆ ಕಡಿಮೆಯಾಗಿರುತ್ತದೋ ಅಥವಾ ಬರಗಾಲವಾಗಿರುತ್ತದೋ ಆ ವರ್ಷ ಈ ಕಳೆಯ ಹಾವಳಿ ಹೆಚ್ಚಾಗಿರುತ್ತದೆ. ಯಾವಾಗಲೂ ಭೂಮಿಯಲ್ಲಿ ಈ ಕಳೆಯ ಬೀಜದ ಪ್ರಮಾಣವನ್ನು ಕಡಿಮೆ ಮಾಡುವ ಪ್ರಯತ್ನ ಮುಂದುವರಿಯಬೇಕು. ಈ ದಿಶೆಯಲ್ಲಿ ಕೆಲವೊಂದು ಬೆಳೆಗಳ ಬೇರುಗಳಿಗೆ ಈ ಕಳೆಯ ಬೀಜಗಳನ್ನು ಮೊಳಕೆಯಾಗಿಸುವ ಶಕ್ತಿ ಇರುತ್ತದೆ.

ಆದರೆ, ಆ ಬೆಳೆಗಳ ಮೇಲೆ ಈ ಕಳೆಯು ಬೆಳೆಯುವುದಿಲ್ಲ. ಅಂಥ ಬೆಳೆಗಳಲ್ಲಿ ಹತ್ತಿ, ಅಲಸಂದೆ ಇತ್ಯಾದಿ, ಈ ಬೆಳೆಗಳನ್ನು ಸರದಿ ಬೆಳೆಯಲ್ಲಿ ಸೇರಿಸಿ ಬೆಳೆಯುವುದರಿಂದ ಭೂಮಿಯಲ್ಲಿನ ಈ ಕಳೆಯ ಬೀಜದ ಪ್ರಮಾಣವನ್ನು ಕಡಿಮೆ ಮಾಡಬಹುದು.ಆಳವಾಗಿ ಉಳುಮೆ ಮಾಡುವುದರಿಂದ ಇದರ ಬಾಧೆಯನ್ನು ಕಡಿಮೆ ಮಾಡಬಹುದು.ಬಿತ್ತುವಾಗ ಜೋಳದ ಬೀಜದ ಜೊತೆಗೆ ಹವೇಜ್ ಬೀಜ ಮಿಶ್ರ ಮಾಡಿ ಬಿತ್ತುವುದು. ಗಜ್ಜರಿ ಬಿತ್ತನೆ ಮಾಡುವುದು. ಬಿಳಿಕಸ ಹೂ ಬಿಡುವ ಮೊದಲೆ ಕುರ್ಚಗಿಯ ಮೂಲಕ ಅಥವಾ ಕೈಯಿಂದ ಕೀಳುವುದು ಒಂದು ಸರಳ ವಿಧಾನ.ಕೆಲವೊಂದು ಬೆಳೆಗಳು ಬಿಳಿಕಸಕ್ಕೆ ತುತ್ತಾಗದೆ ಬಿಳಿಕಸದ ಬೀಜಗಳನ್ನು ಮೊಳಕೆಯಾಗಿಸುವ ಶಕ್ತಿ ಹೊಂದಿವೆ, ಇಂಥ ಬೆಳೆಗಳನ್ನು ಬೆಳೆ ಸರದಿ ಅಥವಾ ಕಾಲುಗೈಯಲ್ಲಿ ಉಪಯೋಗಿಸಿ ಬಿಳಿಕಸದ ಬೀಜದ ಪ್ರಮಾಣವನ್ನು ಕಡಿಮೆ ಮಾಡಿ ಅದರ ಬಾಧೆಯನ್ನು ಕಡಿಮೆ ಮಾಡಬಹುದು.

ಉದಾ: ಹತ್ತಿ, ಅಲಸಂದೆ, ಸೂರ್ಯಕಾಂತಿ, ಅಗಸಿ, ಔಡಲ ಇತ್ಯಾದಿ. ಬಿಳಿಕಸಕ್ಕೆ ತುತ್ತಾಗುವ ಬೆಳೆಯನ್ನು ಬೆಳೆದು ಇದರ ಬೀಜಗಳನ್ನು ಮೊಳಕೆಯಾಗಿಸಿ ಈ ಕಳೆ ಬೀಜವಾಗುವ ಮೊದಲು ಕಳೆಯನ್ನು ನಾಶಪಡಿಸಬೇಕು. ಬೆಳೆಯನ್ನು ಮೇವಿನ ಸಲುವಾಗಿ ಅಥವಾ ಹಸುರು ಗೊಬ್ಬರವೆಂದು ಉಪಯೋಗಿಸಬೇಕಾಗುವುದು.ಹೆಚ್ಚಿನ ಪ್ರಮಾಣದಲ್ಲಿ ತಿಪ್ಪೆಗೊಬ್ಬರ/ಕೊಟ್ಟಿಗೆಗೊಬ್ಬರ ಬಳಸುವುದರಿಂದ ಬಿಳಿಕಸದ ಬಾಧೆಯನ್ನು ಕಡಿಮೆ ಮಾಡಬಹುದು. ಸಾರಜನಕ ಗೊಬ್ಬರವನ್ನು ಹೆಚ್ಚಿಗೆ ಪೂರೈಸುವುದರಿಂದ ಬಿಳಿಕಸದ ಬಾಧೆಯನ್ನು ಕಡಿಮೆ ಮಾಡಬಹುದು. ಬಿಳಿಕಸದ ಮೇಲೆ ಶೇಕಡಾ 1-2 ರ ಯೂರಿಯಾ ಸಿಂಪರಣೆ ಮಾಡುವುದರಿಂದ ಇದರ ಬಾಧೆಯನ್ನು ಕಡಿಮೆ ಮಾಡಬಹುದು.

ಜೋಳ ಬಿತ್ತನೆ ಅಥವಾ ಮರುದಿನ ಅಟ್ರಾಜಿನ್ ಒಂದು ಗ್ರಾಂ ಒಂದು ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಿ ಎಕರೆಗೆ 1.0 ಕಿ.ಗ್ರಾಂ 2,4-ಡಿ ಸೋಡಿಯಂ ಲವಣ 400 ಲೀಟರ್ ನೀರಿನಲ್ಲಿ ಬೆರೆಸಿ ಬಿಳಿಕಸ ಇರುವ ಪ್ರದೇಶದಲ್ಲಿ ಸಿಂಪರಿಸಿ. ಈ ರೀತಿಯಾಗಿ ಸಮಗ್ರ ನಿಯಂತ್ರಣಾ ಪದ್ಧತಿಗಳನ್ನು ಅನುಸರಿಸುವುದರಿಂದ ಬಿಳಿಕಸದ ಬಾಧೆಯನ್ನು ಕಡಿಮೆ ಮಾಡಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry