ಭಾನುವಾರ, ನವೆಂಬರ್ 17, 2019
29 °C
ಕೊಪ್ಪಳ ಜಿಲ್ಲೆಯಲ್ಲಿ ತೀವ್ರ ಅಪೌಷ್ಟಿಕತೆ ಸಮಸ್ಯೆ

ಬೆಳೆಯದ ದೇಹ, ತೆವಳುವ ಕಂದಮ್ಮಗಳು

Published:
Updated:

ಕೊಪ್ಪಳ:  ಒಂದೂವರೆ ವರ್ಷದ ಮಗು ವಿದ್ಯಾ ಇನ್ನೂ ತೆವಳುತ್ತಿದ್ದಾಳೆ. ತೊದಲು ನುಡಿಯೂ ಇಲ್ಲ. ಆಕೆಯ ತೂಕ 5 ಕೆ.ಜಿ, ಎರಡೂವರೆ ವರ್ಷದ ಮಾರುತಿ ತೂಕ ಕೇವಲ 7 ಕೆ.ಜಿ, ಮೂರು ವರ್ಷದ ಅಪ್ಸಾನಾ ಕೂಡಾ ವಿಪರೀತ ಕಡಿಮೆ ತೂಕದ ಸಮಸ್ಯೆಯಿಂದ ಬಳಲುತ್ತಿದ್ದಾಳೆ. ಇದೇ ಸಮಸ್ಯೆ ನಿರಂಜನನಿಗೂ ಇದೆ.ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ಶಿರೂರ, ತಿಪ್ಪರಸನಾಳ್, ಮಂಡಲಗಿರಿ, ಇಟಗಿ, ಕುಕನೂರು, ಸಂಗನಾಳ್ ಗ್ರಾಮಗಳ ಅಂಗನವಾಡಿಗಳಿಗೆ `ಪ್ರಜಾವಾಣಿ' ಭೇಟಿ ನೀಡಿದಾಗ ಕಂಡುಬಂದ ಚಿತ್ರಣವಿದು.ಕೊಪ್ಪಳ ತಾಲ್ಲೂಕಿನ ಬಿಸರಹಳ್ಳಿ, ಬೆಟಗೇರಿ ಮತ್ತಿತರ ಹಳ್ಳಿಗಳಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ ಹೆಚ್ಚುತ್ತಲೇ ಇವೆ.`ಸಾಮಾನ್ಯವಾಗಿ ಒಂದು ವರ್ಷದ ಮಗುವಿನ ತೂಕ 10 ಕೆ.ಜಿ, 3 ವರ್ಷದ ಮಗುವಿನ ತೂಕ 15ರಿಂದ 16 ಕೆ.ಜಿ ಇರಬೇಕು. ಈ ತೂಕದಲ್ಲಿ ಶೇ 50ಕ್ಕಿಂತ ಕಡಿಮೆ ಇದ್ದರೂ ಅದನ್ನು ತೀವ್ರತರದ ನ್ಯೂನ ಪೋಷಣೆ ಎಂದೇ ಪರಿಗಣಿಸಬೇಕಾಗುತ್ತದೆ. ಗರ್ಭಿಣಿಯನ್ನು ಸರಿಯಾಗಿ ಆರೈಕೆ ಮಾಡದಿದ್ದಲ್ಲಿ ಮಗುವಿನ ಮೇಲೆ ಪರಿಣಾಮ  ನೇರವಾಗಿ ಬೀರುತ್ತದೆ' ಎಂದು ದಾವಣಗೆರೆ ಬಾಪೂಜಿ ಆಸ್ಪತ್ರೆಯ ಮಕ್ಕಳ ತಜ್ಞ ಡಾ.ಗುರುಪ್ರಸಾದ್ ಹೇಳುತ್ತಾರೆ.ಶಿರೂರ ಗ್ರಾಮದ ಅಂಗನವಾಡಿಯಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ನಾಲ್ಕು ಮಕ್ಕಳು ಇದ್ದಾರೆ. ಅವರಲ್ಲಿ ಸಂದೀಪ ಶರಣಪ್ಪ ಕಮ್ಮಾರ್ ಎಂಬ ಬಾಲಕನಿಗೆ ಆಗಾಗ್ಗೆ ಆರೋಗ್ಯ ಸಮಸ್ಯೆ ಕಾಡುತ್ತದೆ. ಆಗ ಮನೆ ಮಂದಿ ಅರಶಿನ ಕೋಡನ್ನು ಸುಟ್ಟು ಕೈಗಳಿಗೆ ಚುಚ್ಚಿದ್ದಾರೆ.`ತಿಪ್ಪರಸನಾಳ್ ಗ್ರಾಮದಲ್ಲಿಯೂ ಇದೇ ಪರಿಸ್ಥಿತಿ. ಸಂಗನಾಳ್ ಗ್ರಾಮದ ಮಗುವೊಂದು ಚರ್ಮರೋಗದಿಂದ ಬಳಲುತ್ತಿದೆ. ಸಮಸ್ಯೆಗಳು ಹೀಗಿದ್ದರೂ ಸರ್ಕಾರದ ಬಾಲ ಸಂಜೀವಿನಿ ಯೋಜನೆ ಅಡಿ ನಿರಂತರ ಚಿಕಿತ್ಸೆ ಪಡೆಯಲೂ ಪೋಷಕರು ಮುಂದಾಗುತ್ತಿಲ್ಲ' ಎಂದು ಅಂಗನವಾಡಿ ಕಾರ್ಯಕರ್ತೆಯರು ಹೇಳುತ್ತಾರೆ.ಈ ತಾಲ್ಲೂಕುಗಳಲ್ಲಿ 17 ಮತ್ತು 18ರ ವಯಸ್ಸಿನಲ್ಲಿಯೇ ತಾಯಿಯಾಗುತ್ತಾರೆ. ಇದರಿಂದ ಮಕ್ಕಳು ಜನನದಲ್ಲಿಯೇ ದುರ್ಬಲಗೊಳ್ಳುತ್ತಾರೆ. ಮಗುವಿಗೆ ಚಿಕಿತ್ಸೆ ಕೊಡಿಸುವ ಬದಲು ದೇವರಿಗೆ ಹರಕೆ ಹೊರುತ್ತಾರೆ. ಸಮಸ್ಯೆ ಇನ್ನಷ್ಟು ಗಂಭೀರವಾಗುತ್ತದೆ ಎಂದು ಗ್ರಾಮದ ಅಂಗನವಾಡಿ ಕಾರ್ಯಕರ್ತೆಯರು ಹೇಳುತ್ತಾರೆ.ಮೇ ಅಂತ್ಯದವರೆಗಿನ ಅಂಕಿ ಅಂಶಗಳ ಪ್ರಕಾರ ಜಿಲ್ಲೆಯಲ್ಲಿ 3,554 ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಈ ಪೈಕಿ ಗಂಗಾವತಿ ತಾಲ್ಲೂಕಿನಲ್ಲಿ 844, ಯಲಬುರ್ಗಾದಲ್ಲಿ 705, ಕನಕಗಿರಿಯಲ್ಲಿ 686, ಕೊಪ್ಪಳದಲ್ಲಿ 660 ಮತ್ತು ಕುಷ್ಟಗಿಯಲ್ಲಿ 659 ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳು ಇದ್ದಾರೆ.

ಪ್ರತಿಕ್ರಿಯಿಸಿ (+)