ಭಾನುವಾರ, ಜೂನ್ 20, 2021
21 °C
ಮಾವು ಮೌಲ್ಯ ವರ್ಧನೆ ನಿರ್ವಹಣೆ: ರಾಷ್ಟ್ರೀಯ ವಿಚಾರ ಸಂಕಿರಣ ಆರಂಭ

ಬೆಳೆಯೋ ರೈತರಿಗೆ ನೆರವಾಗಲಿ ಸಂಶೋಧನೆ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀನಿವಾಸಪುರ: ಆಮ್ರಪಾಲಿ, ಮಲ್ಲಿಕಾ ಮಾವಿನ ತಳಿಗಳು ಸಂಶೋಧನೆ­ಗೊಂಡು 40 ವರ್ಷಗಳಾದವು. ಅದಾದ ಬಳಿಕ ಮತ್ತೊಂದು ಹೊಸ ತಳಿಯನ್ನು ಏಕೆ ಸಂಶೋಧಿಸಲಿಲ್ಲ? ಇರುವ ತಳಿಗಳನ್ನೂ ಅಭಿವೃದ್ಧಿ ಮಾಡಲಿಲ್ಲ. ಕಡಿಮೆ ಅವಧಿಯಲ್ಲಿ ಹೆಚ್ಚು ಇಳುವರಿ ಕೊಡುವ ತಳಿಗಳೂ ದೊರಕಲಿಲ್ಲ. ಬೆಳೆಯೋ ರೈತನಿಗೆ ವಿಶ್ವವಿದ್ಯಾಲಯಗಳು,..ಸಂಶೋಧನಾ ಸಂಸ್ಥೆಗಳ ಸಂಶೋಧನೆಗಳಿಂದ ನೆರವಾಗಲಿಲ್ಲ...–ತಾಲ್ಲೂಕಿನ ಹೊಗಳಗೆರೆಯ ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣೆ ಕೇಂದ್ರದಲ್ಲಿ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಗುರುವಾರದಿಂದ ಏರ್ಪಡಿಸಿರುವ ‘ಮಾವು ಉತ್ಪಾದನೆ ಮೌಲ್ಯ ವರ್ಧನೆ ನಿರ್ವಹಣೆ’ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟನೆ ಕಾರ್ಯಕ್ರಮ­ದಲ್ಲಿ ಮಾವು ಬೆಳೆಗಾರ ಎನ್‌.ಸಿ.ಪಟೇಲ್‌ ಅಸಮಾಧಾನದಿಂದ ಹೇಳಿದ ಮಾತುಗಳಿವು.ಮಳೆ ಬಂದರೆ ಮಾತ್ರ ಕಾಯಿ ಬಿಡುತ್ತವೆ. ಇಲ್ಲವಾದರೆ ಇಲ್ಲ. ಅಂಥ ಅನಿವಾರ್ಯ ಸನ್ನಿವೇಶದಲ್ಲಿ ಬೆಳೆಗಾರರಿದ್ದಾರೆ. ಅಂಥವರ ನೆರವಿಗೆ ಬರುವಂಥ ಸಂಶೋಧನೆಗಳು ಏಕೆ ನಡೆಯುತ್ತಿಲ್ಲ ಎಂದು ಪ್ರಶ್ನಿಸಿದರು.ಇಡೀ ದೇಶದಲ್ಲೆ ಹೆಚ್ಚು ಮಾವನ್ನು ರಾಜ್ಯದಲ್ಲಿ, ಅದರಲ್ಲೂ ಕೋಲಾರ ಜಿಲ್ಲೆಯಲ್ಲಿ ಬೆಳೆಯಲಾಗುತ್ತದೆ. ಯಾವ ವರ್ಷ ಎಷ್ಟು ಪ್ರಮಾಣದಲ್ಲಿ ಮಾವು ಬೆಳೆಯಲಾಯಿತು ಎಂಬ ಅಂಕಿ ಅಂಶಗಳನ್ನೂ ಸರ್ಕಾರ ಪ್ರಕಟಿಸುತ್ತದೆ.  ಆದರೆ ವಿಜ್ಞಾನಿಗಳು ರೈತರಿಗೆ ಬೆನ್ನೆಲುಬಾಗಿ ನಿಂತಿದ್ದಾರೆಯೇ ಎಂಬ ಬಗ್ಗೆ ಮಾತ್ರ ಯಾರೂ ಗಂಭೀರ ಗಮನ ಹರಿಸುವುದಿಲ್ಲ ಎಂದು ವಿಷಾದಿಸಿದರು.ಮಾವನ್ನು ಸಂಸ್ಕರಿಸುವ ಅತಿ ಸಣ್ಣ ಘಟಕಗಳು ಪೂನಾದಲ್ಲಿವೆ. ಸಣ್ಣದೊಂದು ಯಂತ್ರವನ್ನು ಇಟ್ಟುಕೊಂಡೇ ಅಲ್ಲಿನ ಬೆಳೆಗಾರರು ಸಣ್ಣಪ್ರಮಾಣದಲ್ಲಿ ಸಂಸ್ಕರಣೆ ಮಾಡಿ ಸ್ವಾವಲಂಬನೆ ಸಾಧಿಸಿದ್ದಾರೆ. ಆದರೆ ಆ ಬಗ್ಗೆ ಇದುವರೆಗೂ ರಾಜ್ಯದ ಮಾವು ಬೆಳೆಗಾರರಿಗೆ ಮಾಹಿತಿಯನ್ನೇ ನೀಡಿಲ್ಲ. ಇನ್ನಾದರೂ ನೆರೆಯ ರಾಜ್ಯಗಳಲ್ಲಿರುವ ಇಂಥ ಪ್ರಯೋಜನಕಾರಿ ವಿಷಯ­ಗಳನ್ನು ರಾಜ್ಯದ ಬೆಳೆಗಾರರಿಗೆ ನೀಡಬೇಕು. ಆ ನಿಟ್ಟಿನಲ್ಲಿ ವಿಶ್ವವಿದ್ಯಾ­ಲಯಗಳು, ಭಾರತೀಯ ಕೃಷಿ ಸಂಶೋ­ಧನಾ ಮಂಡಳಿಯಂಥ ಸಂಸ್ಥೆ­ಗಳು ಗಮನ ಹರಿಸಬೇಕು ಎಂದರು.ವಿಚಾರ ಸಂಕಿರಣದಲ್ಲಿ ಪಾಲ್ಗೊಳ್ಳಲು ಶಿರಸಿಯಿಂದ ಬಂದಿರುವ ರೈತರೊಬ್ಬರ ಬಳಿ ಅತ್ಯಾಧುನಿಕವಾದ ಮಾವು ಕಟಾವು ಯಂತ್ರವಿದೆ. ಅದರ ಕುರಿತು ಸಂಕಿರಣದಲ್ಲಿ ಪ್ರಾತ್ಯಕ್ಷಿಕೆ ನೀಡಬೇಕು. ಅಂಥ ಹಲವು ಪ್ರಾತ್ಯಕ್ಷಿಕೆ ನೀಡಿದರೆ ಮಾತ್ರ ಸಂಕಿರಣದಿಂದ ಬೆಳೆಗಾರರಿಗೆ ಪ್ರಯೋಜನವಾಗುತ್ತದೆ. ಇಲ್ಲವಾದರೆ ಸುಮ್ಮನೆ ಬಂದು ಭಾಷಣ ಕೇಳಿ ಹೋದಂತೆ ಆಗುತ್ತದೆ ಅಷ್ಟೆ ಎಂದರು.ವಿದೇಶಗಳಿಂದ ಸಂಶೋಧನೆಗಳನ್ನು ತಂದು ಇಲ್ಲಿ ಕೊಡುವುದು ಬೇಡ. ಬದಲಿಗೆ ನಮ್ಮ ರಾಜ್ಯದ ಅಕ್ಕಪಕ್ಕದಲ್ಲೇ ಇರುವ ಸಂಶೋಧನೆಗಳನ್ನು ಮೊದಲು ನಮಗೆ ತಿಳಿಸಿಕೊಡಿ. ತಂತ್ರಜ್ಞಾನ ಬಳಕೆ ಬಗ್ಗೆ ಮಾಹಿತಿ ನೀಡಿ ಎಂದರು.ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆ ಮಾವು ಬೆಳೆಗಾರರ ಸಂಘದ ಅಧ್ಯಕ್ಷರಾದ ಬಿ.ಎನ್.ಚಂದ್ರಾರೆಡ್ಡಿ, ಕೆ.ಶ್ರೀನಿವಾಸಗೌಡ ಅವರೂ ಬೆಳೆಗಾರ ಸ್ನೇಹಿಯಾದ ಸಂಶೋಧನೆಗಳು ನಡೆಯಬೇಕು ಎಂದು ಅಭಿಪ್ರಾಯಪಟ್ಟರು.ಉದ್ಘಾಟನೆ: ಸಂಕಿರಣವನ್ನು ಕೃಷಿ ವಿಜ್ಞಾನಿಗಳ ನೇಮಕಾತಿ ಮಂಡಳಿಯ ಅಧ್ಯಕ್ಷ ಡಾ.ಎಂ.ಮಹಾದೇವಪ್ಪ ಉದ್ಘಾಟಿಸಿದರು.ಕರ್ನಾಟಕ ರಾಜ್ಯ ಕೃಷಿ ಅಭಿವೃದ್ಧಿ ನಿಗಮದ ವಿಶೇಷ ಕಾರ್ಯದರ್ಶಿ ಡಾ.ಜಿ.ಕೆ.ವಸಂತ­ಕುಮಾರ್, ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್‌.ಬಿ.ದಂಡಿನ, ಭಾರತೀಯ ಕೃಷಿ ಅನುಸಂಧಾನ ಪರಿಷತ್‌ನ ರಾಷ್ಟ್ರೀಯ ಸಂಯೋಜಕ ಡಾ.ಬಿ.ಕೆ.­ಪಾಂಡೆ, ರಾಮನಗರ ಜಿಲ್ಲೆ ಮಾವು ಬೆಳೆಗಾರರ ಸಂಘದ ಎಚ್.ಕೆ.ನಂಜಪ್ಪ, ವಿಶ್ವವಿದ್ಯಾಲಯದ ಶಿಕ್ಷಣ ನಿರ್ದೇಶಕ ಡಾ,ಬಿ.ರಾಜು, ಸಂಶೋಧನಾ ವಿಭಾಗದ ಮುಖ್ಯಸ್ಥ ಡಾ.ವೆಂಕಟೇಶ್‌, ವ್ಯವಸ್ಥಾಪನ ಮಂಡಳಿ ಸದಸ್ಯರಾದ ಡಾ.ಟಿ.ವಿ.­ಮುನಿಯಪ್ಪ, ಲಕ್ಷ್ಮೀಬಾಯಿ ಜಿ.ಗೌರ್‌, ಮಾವು ಅಭಿವೃದ್ಧಿ ಮತ್ತು ಮಾರಾಟ ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ.ಆರ್‌.ಜಯಪ್ರಕಾಶ್‌, ಜೈವಿಕ ತಂತ್ರಜ್ಞಾನ ಕೋಶದ ಮುಖ್ಯಸ್ಥ ಡಾ.ಜಗದೀಶ ಮಿಟ್ಟೂರ, ಹೊಗಳಗೆರೆ ಕೇಂದ್ರದ ಸಹ ಸಂಶೋಧನಾ ಮತ್ತು ವಿಸ್ತರಣಾ ನಿರ್ದೇಶಕ ಡಾ.ಎಂ.ಕೆ.ಹೊನ್ನಭೈರಯ್ಯ, ಗೋಪಾಲ್‌ ಉಪಸ್ಥಿತರಿದ್ದರು.ಲಕ್ನೋ, ನವದೆಹಲಿ, ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ಹಲವು ರಾಜ್ಯಗಳ ವಿಜ್ಞಾನಿ, ರೈತ ಪ್ರತಿನಿಧಿಗಳು ಸಂಕಿರಣದಲ್ಲಿ ಪಾಲ್ಗೊಂಡಿದ್ದಾರೆ.ನೀತಿ ಸಂಹಿತೆ ಇದ್ದರೂ ಮೊಯ್ಲಿ ಶ್ಲಾಘನೆ

ಕುಲಾಂತರಿ ಹತ್ತಿ, ಬದನೆ ಬೆಳೆಗಳನ್ನು ಬೆಳೆಯುವುದರಿಂದ ಹೆಚ್ಚು ಲಾಭ ದೊರಕುತ್ತದೆ. ಅದೇ ರೀತಿ ಮಾವು ಬೆಳೆಗಾರರೂ ಕುಲಾತರಿ ಮಾವಿನ ತಳಿಗಳತ್ತ ಗಮನ ಹರಿಸಬೇಕು. ಕುಲಾಂತರಿ ತಳಿಗಳು ಬೇಡ ಎನ್ನುವವರು ವಿರೋಧಕ್ಕಾಗಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅಷ್ಟೆ. ಕುಲಾಂತರಿ ತಳಿಗಳನ್ನು ಅಭಿವೃದ್ಧಿಪಡಿಸುವ ವಿಚಾರದಲ್ಲಿ ವೀರಪ್ಪ ಮೊಯ್ಲಿ ನಿಲುವು ಶ್ಲಾಘನೀಯ ಎಂದು ಕೃಷಿ ವಿಜ್ಞಾನಿಗಳ ನೇಮಕಾತಿ ಮಂಡಳಿಯ ಅಧ್ಯಕ್ಷ ಡಾ.ಎಂ.ಮಹಾದೇವಪ್ಪ ಹೇಳಿದರು.

ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ಸಂದರ್ಭದಲ್ಲಿ ಯಾವುದೇ ರಾಜಕಾರಣಿಗಳ ಹೆಸರನ್ನು ಉಲ್ಲೇಖಿಸುವುದು, ಶ್ಲಾಘಿಸುವುದು ತಪ್ಪಾಗುತ್ತದೆ. ಆದರೆ ಸಾಮಾಜಿಕ ನೆಲೆಯಲ್ಲಿ ಒಂದು ಗಂಭೀರ ವಿಷಯದ ಪ್ರಸ್ತಾಪದ ಸಂದರ್ಭದಲ್ಲಿ ಮೊಯ್ಲಿ ಅವರನ್ನು ಶ್ಲಾಘಿಸಲೇಬೇಕಾಗುತ್ತದೆ. ಅವರು ಬೆಳೆಗಾರರು ಮತ್ತು ವಿಜ್ಞಾನಿಗಳ ಸ್ನೇಹಿ ನೆಲೆಯಲ್ಲಿ ನಿರ್ಧಾರಗಳನ್ನು ಕೈಗೊಳ್ಳುತ್ತಾರೆ ಎಂದರು.‘ಕೊಯ್ಲೋತ್ತರ ನಿರ್ವಹಣೆ: ಗುಣಮಟ್ಟ ಅಗತ್ಯ’

ಲಾಭದಾಯಕ ಉತ್ಪನ್ನ­ವಾಗಬೇಕಾದರೆ ಕೊಯ್ಲೋತ್ತರ ನಿರ್ವಹಣೆಯಲ್ಲಿ ಆಧುನಿಕ ತಂತ್ರ­ಜ್ಞಾನ ಬಳಸಿಕೊಂಡು ಗುಣಮಟ್ಟ ಕಾಪಾಡಬೇಕು ಎಂದು ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ನಿವೃತ್ತ ಉಪ ಮಹಾನಿರ್ದೇಶಕ ಡಾ.ಎಚ್‌.ಪಿ.ಸಿಂಗ್‌ ಅಭಿಪ್ರಾಯಪಟ್ಟರು.

ಮಾವನ್ನು ರುಚಿಕರ­ವಾದ ಹಣ್ಣು ಎಂದಷ್ಟೇ ಭಾವಿಸದೆ ಅದನ್ನು ಔಷಧಿಯಾಗಿ, ಸಂಸ್ಕರಣೆಗೆ ಯೋಗ್ಯವಾದ ಉತ್ಪನ್ನವಾಗಿ ಪರಿಗಣಿಸ­ಬೇಕಿದೆ. ಮಾವಿನ ಮಡಿಲು ಶ್ರೀನಿ­­ವಾಸ­ಪುರದಲ್ಲಿರುವ ಹಲವು ವಿಶೇಷ ಮಾವಿನ ತಳಿಗಳು ಇನ್ನೂ ಅಪರಿ­ಚಿತ­ವಾಗಿಯೇ ಉಳಿದಿದೆ. ಅವು­ಗಳನ್ನು ಮಾರುಕಟ್ಟೆಗೆ ಪರಿಚಯಿಸುವ ಪ್ರಯತ್ನಗಳೂ ನಡೆದೇ ಇಲ್ಲ ಎಂದು ವಿಷಾದಿಸಿದರು.ಮಿಶ್ರತಳಿ ಮಾವುಗಳ ಪೈಕಿ ಆಮ್ರ­ಪಾಲಿ, ಮಲ್ಲಿಕಾ ಹೊರತುಪಡಿಸಿದರೆ ಬೇರೆ ತಳಿಗಳನ್ನು ಸಂಶೋಧಿಸುವ ಪ್ರಯತ್ನ ನಡೆಯಬೇಕಿದೆ. ಹೈಬ್ರಿಡ್‌ ತಳಿಗಳು ಏಕೆ ವಿಫಲವಾಗುತ್ತವೆ ಎಂಬ ಕುರಿತ ಸಂಶೋಧನೆಯೂ ನಡೆಯಬೇಕು ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.