ಬೆಳೆಯ ಜೊತೆ ಬೆಳೆದ ಯುವಕ

7

ಬೆಳೆಯ ಜೊತೆ ಬೆಳೆದ ಯುವಕ

Published:
Updated:
ಬೆಳೆಯ ಜೊತೆ ಬೆಳೆದ ಯುವಕ

`ನನಗೆ ಇರುವುದು 12 ಎಕರೆ. ಆದರೆ, ಪ್ರತಿ ವರ್ಷ ಕೃಷಿಗೆ ಅಂತ ಬಳಸೋದು ಮೂರು ಎಕರೆ ಮಾತ್ರ. ಬಾಕಿ ಉಳಿದ ಒಂಬತ್ತು ಎಕರೆಯಲ್ಲಿ ಕೃಷಿ ಚಟುವಟಿಕೆ ಇರುತ್ತದೆ. ಆದರೆ, ಅಲ್ಲಿ ಬೆಳೆ ತೆಗೆಯುವುದಿಲ್ಲ. ಬದಲಿಗೆ ಹಸಿರು ಗೊಬ್ಬರ ತಯಾರಿಸುತ್ತೇನೆ. ಇದು ನನಗೆ ಲಾಭದಾಯಕ ಆಗಿ ಪರಿಣಮಿಸಿದೆ.ಮಾರ್ಕೆಟ್‌ನ ಬೆಲೆ ಇರಲಿ, ಇಲ್ಲದಿರಲಿ ಪ್ರತಿ ವರ್ಷ ನಮ್ಮ ಬೆಳೆ ಇರುವಂತೆ ನೋಡಿಕೊಳ್ಳಬೇಕು. ಒಂದು ವರ್ಷ ಕಡಿಮೆ ಸಿಕ್ಕರೆ ಮತ್ತೊಂದು ವರ್ಷ ಹೆಚ್ಚಿಗೆ ಸಿಗುವುದು ಗ್ಯಾರಂಟಿ.

 

ಕಡಿಮೆ ಸಿಕ್ಕಿತು ಅಂತ ಕುಗ್ಗಿ ಬಿಡುವುದಾಗಲಿ, ಹೆಚ್ಚಿಗೆ ಸಿಕ್ಕಿತು ಅಂತ ಅದನ್ನೇ ಹೆಚ್ಚಿಗೆ ಮಾಡುವುದಾಗಲಿ ಮಾಡಬಾರದು. ಕಳೆದ ವರ್ಷ ಮಳೆ ಚೆನ್ನಾಗಿ ಬರಲಿಲ್ಲ. ಅದರಿಂದ ಇಳುವರಿ ಕೂಡ ಕಡಿಮೆ ಆಯಿತು.ಪ್ರತಿ ಎಕರೆಗೆ ಕೇವಲ 198 ಕ್ವಿಂಟಲ್ ಮಾತ್ರ ಬೆಳೆಯಲು ಸಾಧ್ಯವಾಯಿತು. ಬೆಲೆ ಕೂಡ ಚೆನ್ನಾಗಿ ಸಿಗಲಿಲ್ಲ. ಪ್ರತಿ ಕ್ವಿಂಟಲ್‌ಗೆ ಕೇವಲ ಒಂದೂವರೆ ಸಾವಿರ ರೂಪಾಯಿಗಿಂತ ಹೆಚ್ಚಿಗೆ ಮಾರಲಿಕ್ಕೆ ಆಗಲಿಲ್ಲ. ಆದರು ಕೂಡ ವರ್ಷದ ಆದಾಯ ಬರಿ ಹಸಿಶುಂಠಿಯೊಂದರಿಂದಲೇ ಎಂಟು ಲಕ್ಷ 91 ಸಾವಿರ ರೂಪಾಯಿ ಬಂತು.

 

ಅದು ಬಹಳ ಕಡಿಮೆ. ವರ್ಷಕ್ಕೆ ಸರಾಸರಿ 18 ಲಕ್ಷ ರೂಪಾಯಿ ಆದಾಯ ಬರಿ ಶುಂಠಿಯೊಂದರಿಂದಲೇ ಬರುತ್ತದೆ~ ಎಂದು ವಿವರಿಸುವ ಬೀದರ್ ತಾಲ್ಲೂಕಿನ ಹೊನ್ನಿಕೇರಿ ಗ್ರಾಮದ ಯುವ ರೈತ ರವೀಂದ್ರ ಪಾಟೀಲ್ ಕೃಷಿಯತ್ತ ಮುಖ ಮಾಡಿರುವ ಯುವಕ.ರವೀಂದ್ರ ಅವರು ಹೊನ್ನಿಕೇರಿಯಲ್ಲಿ ತಮಗಿರುವ ಜಮೀನಿನ ಪೈಕಿ 12 ಎಕರೆಯನ್ನು ಕೃಷಿ ಯೋಗ್ಯ ಜಮೀನಾಗಿ ಪರಿವರ್ತಿಸಿಕೊಂಡಿದ್ದಾರೆ. ತಲಾ ಮೂರು ಎಕರೆಗಳ ನಾಲ್ಕು ಪ್ಲಾಟ್‌ಗಳನ್ನಾಗಿ ಮಾಡಿಕೊಂಡಿದ್ದಾರೆ. ಒಂದು ಪ್ಲಾಟ್‌ನಲ್ಲಿ ಶುಂಠಿ ಬೆಳೆದರೆ ಮುಂಬರುವ ಮೂರು ವರ್ಷಗಳಲ್ಲಿ ಆ ಪ್ಲಾಟ್‌ನಲ್ಲಿ ಶುಂಠಿ ಹಚ್ಚುವುದಿಲ್ಲ.

 ನಂತರದ ಮೂರು ವರ್ಷಗಳ ಕಾಲ ಆ ಜಮೀನಿಗೆ `ಹಸಿರೆಲೆ ಗೊಬ್ಬರ~ ನೀಡುತ್ತಾರೆ. ಬೇರಿನ ಮೇಲೆ ಗಂಟು ಇರುವ ನಾರು ಮತ್ತು ಕಾಡಹುರುಳಿಯಂತಹ ಬೆಳೆಯನ್ನು ಬೆಳೆದು ಅದರಿಂದ ಫಸಲು ತೆಗೆಯದೇ ಹೊಲದಲ್ಲಿಯೇ ಹೂಳಿ ಗೊಬ್ಬರವಾಗಿಸುತ್ತಾರೆ. `ಇದರಿಂದ ಜಮೀನಿನ ಸಾರ ಹೆಚ್ಚುತ್ತದೆ~ ಎನ್ನುವುದು ರವೀಂದ್ರ ಅವರ ಅನುಭವದ ಮಾತು.ರವೀಂದ್ರ ಅವರದು ಯೋಜನಾಬದ್ಧ ಕೃಷಿ ಚಟುವಟಿಕೆ. ಅವರಿಗಿರುವ ಜಮೀನು ಮತ್ತು ನೀರಿನ ಸೌಲಭ್ಯ ಸೇರಿದಂತೆ ಎಲ್ಲವನ್ನೂ ಲೆಕ್ಕಹಾಕಿ ಉಪಯೋಗಿಸುತ್ತಾರೆ.ಸೂರ್ಯೋದಯಕ್ಕೆ ಸ್ವಲ್ಪ ಮುಂಚೆ ಆರಂಭವಾಗುವ ರವಿಯ ಕೆಲಸ ಬಿಸಿಲು ನೆತ್ತಿಯ ಮೇಲೆ ಬರುವವರೆಗೂ ಇರುತ್ತದೆ. ನಂತರ ನಾಲ್ಕಾರು ಗಂಟೆಗಳ ಬಿಡುವು- ವಿಶ್ರಾಂತಿ, ಸ್ವಂತದ ಕೆಲಸ. ಸೂರ್ಯ ಪಡುವಣದತ್ತ ಮುಖ ಮಾಡುತ್ತಿದ್ದಂತೆಯೇ ಮತ್ತೆ ಹೊಲದಲ್ಲಿ ಕೆಲಸ ಆರಂಭ. ಕತ್ತಲಾಗುವವರೆಗೂ `ಬಿಜಿ~ಯ ಬಿಸಿ.

 

ಪ್ರತಿದಿನ ಮಾಡುವಷ್ಟು ಕೆಲಸ ಇರುತ್ತದೆಯೇ? ಎಂಬ ಪ್ರಶ್ನೆಗೆ `ವಾರಕ್ಕೊಮ್ಮೆ ರಜೆ ತೆಗೆದುಕೊಳ್ಳುವುದು ಕಷ್ಟ~ ಎಂದು ಉತ್ತರಿಸುತ್ತಾರೆ. ಅವರು ತಮ್ಮ ಚಟುವಟಿಕೆಯನ್ನು ದಿನದ ಕೆಲಸ, ತಿಂಗಳಿನ ಕೆಲಸ, ವರ್ಷದ ಕೆಲಸ ಎಂದು ವಿಂಗಡಿಸಿಕೊಂಡಿರುತ್ತಾರೆ.ಆಯಾ ದಿನದ ಕೆಲಸ ಅದೇ ದಿನ ಮಾಡಿ ಮುಗಿಸುತ್ತಾರೆ. ತಿಂಗಳಿನ ಕೆಲಸದ ಪಟ್ಟಿಯನ್ನು `ಥಿಂಗ್ಸ್ ಟು ಡು~ ಮಾದರಿಯಲ್ಲಿ ಪಟ್ಟಿ ಮಾಡಿ ಗೋಡೆಗೆ ನೇತು ಹಾಕಿರುತ್ತಾರೆ. 24 ನೇ ತಾರೀಖು ಹೆಚ್ಚುವರಿ ಗೊಬ್ಬರ ಹಾಕುವುದು, ಭೂಮಿಯ ಸಾರ ಕಡಿಮೆ ಆಗದಂತೆ ನೋಡಿಕೊಳ್ಳುವ ಕೆಲಸ, ಹೀಗೆ ಪಟ್ಟಿ ಸಿದ್ಧವಾಗಿರುತ್ತದೆ.ಮಾರ್ಚ್‌ನಲ್ಲಿ ಶುಂಠಿ ಬಿತ್ತನೆಗೆ ಹದಗೊಳಿಸುವ ಕೆಲಸ ಆರಂಭಿಸುತ್ತಾರೆ. ಮೇ ನಲ್ಲಿ ನಾಟಿ ಮಾಡುತ್ತಾರೆ. ಜೂನ್‌ನಲ್ಲಿ ಮಳೆ ಬೀಳುತ್ತಿದ್ದಂತೆಯೇ ಚಿಗಿಯಲು ಆರಂಭವಾಗುತ್ತದೆ. ಜುಲೈ ವರೆಗೂ ಶುಂಠಿ ಕೃಷಿಯ ಉಸ್ತುವಾರಿ ನೋಡಿಕೊಳ್ಳುವುದೇ ಆಗುತ್ತದೆ.ಅಕ್ಟೋಬರ್- ನವೆಂಬರ್‌ನಲ್ಲಿ ಖಾಲಿ ಇರುವ ಮೂರು ಪ್ಲಾಟ್‌ಗಳ ಪೈಕಿ ಒಂದರಲ್ಲಿ ಕಲ್ಲಂಗಡಿ ಹಚ್ಚುತ್ತಾರೆ. ಮೂರು ತಿಂಗಳಲ್ಲಿ ಕಾಯಿ ಬಿಟ್ಟು ಹಣ್ಣಾಗುವ ಕಲ್ಲಂಗಡಿ ಕೂಡ ಕೈತುಂಬ ಹಣ ತರುವ ಬೆಳೆಯೇ ಆಗಿದೆ. ಇದರ ಮಧ್ಯೆ 35 ದಿನಗಳ ಬೆಳೆಯಾಗಿ ಕೊತ್ತಂಬರಿ ಸೊಪ್ಪು ಕೂಡ ಬೆಳೆಯುತ್ತಾರೆ.ಬೆಳೆಯುವ ಬೆಳೆ, ಅದು ಮಾರುಕಟ್ಟೆಗೆ ಬಂದಾಗ ಸಿಗಬಹುದಾದ ಬೆಲೆ ಸೇರಿದಂತೆ ಪ್ರತಿಯೊಂದು ಸಂಗತಿಯನ್ನೂ ಲೆಕ್ಕ ಹಾಕಿಯೇ ಮಾಡುತ್ತಾರೆ. ಕೂಲಿ ಕೆಲಸಗಾರರು ಹೆಚ್ಚಿನ ಸಂಖ್ಯೆಯಲ್ಲಿ ಬೇಕಾಗದ ಮತ್ತು ಹೆಚ್ಚು ಆದಾಯ ತರುವ ಬೆಳೆ ಎನ್ನುವುದಕ್ಕಾಗಿಯೇ `ಶುಂಠಿ~ಯನ್ನು ಆಯ್ಕೆ ಮಾಡಿಕೊಂಡ ರವೀಂದ್ರ ಅವರು `ಶುಂಠಿಯಷ್ಟು ಕಡಿಮೆ ಶ್ರಮ ಮತ್ತು ಹೆಚ್ಚು ಆದಾಯ ತರುವ ಬೆಳೆ ಮತ್ತೊಂದಿಲ್ಲ. ಹಾಗೆಯೇ ಭೂಮಿಯ ಸಾರ ಕಡಿಮೆಯಾಗದಂತೆ ನೋಡಿಕೊಂಡಾಗ ಮಾತ್ರ ನಾವು ಬದುಕಲು ಸಾಧ್ಯ~ ಎಂಬ ಅಭಿಪ್ರಾಯ ಅವರದು.ಬಿಎಸ್ಸಿ (ಪ್ರಾಣಿಶಾಸ್ತ್ರ, ಸಸ್ಯಶಾಸ್ತ್ರ, ರಸಾಯನಶಾಸ್ತ್ರ) ಪದವೀಧರರರಾಗಿರುವ 31 ವರ್ಷ ವಯಸ್ಸಿನ ರವೀಂದ್ರ ಅವರು ತಮ್ಮ ಬಿಡುವಿನ ವೇಳೆಯನ್ನು ಪುಸ್ತಕ ಓದುವುದರಲ್ಲಿ ಕಳೆಯುತ್ತಾರೆ.ಜೀವ ವಿಜ್ಞಾನ ಮತ್ತು ಬಯೋ-ಟೆಕ್ನಾಲಜಿಗೆ ಸಂಬಂಧಿಸಿದ ಪುಸ್ತಕಗಳ ಓದು ಅವರ ಕೃಷಿ ಚಟುವಟಿಕೆ ಹೆಚ್ಚು ಸಿರಿವಂತಗೊಳಿಸಿದೆ. ಮಣ್ಣಿನ ಆರೈಕೆ ಮತ್ತು ಗೊಬ್ಬರ ಪೂರೈಕೆ ಸೇರಿದಂತೆ ಪ್ರತಿ ಹಂತದಲ್ಲಿಯೂ ತೋರಿಸುವ ಔದಾರ್ಯವು ಒಳ್ಳೆಯ ಫಲಿತಾಂಶವನ್ನೇ ತಂದುಕೊಟ್ಟಿದೆ.ಶುಂಠಿ ಕೃಷಿ ಅವರಿಗೆ ತಂದೆಯಿಂದ ದತ್ತವಾಗಿ ಬಂದ ಕೊಡುಗೆ. ರವಿ ಪಾಟೀಲ್ ಅವರ ತಂದೆ ಶಿವಾಜಿರಾವ್ ಪಾಟೀಲ್  `ಕೈ ಒಡ್ಡುವುದಿಲ್ಲ~ ಮತ್ತು `ತಲೆ ತಗ್ಗಿಸುವುದಿಲ್ಲ~ ಎಂಬ ಆತ್ಮಗೌರವದಿಂದ ಬದುಕುವ ವ್ಯಕ್ತಿ.ಮಹಾರಾಷ್ಟ್ರದಲ್ಲಿದ್ದ ಸರ್ಕಾರಿ ಎಂಜಿನಿಯರ್ ಕೆಲಸ ಬಿಟ್ಟು ಕೃಷಿಯನ್ನು ವೃತ್ತಿ ಅಂತ ಆರಿಸಿಕೊಂಡಿದ್ದರು. ಆಗ, ಊರಿನವರು ಮಾತ್ರವಲ್ಲ, ಸುತ್ತಲ ಹತ್ತೂರಿನ ಜನ `ಪಾಟೀಲ್‌ರೆ ನೆಲದಾಗ ಎಷ್ಟು ಅಗದರೂ, ಹುಡುಕಿದರೂ ಮಣ್ಣು, ಕಸ ಮಾತ್ರ ಸಿಗ್ತದೆ.

ನೋಟು ಬರಂಗಿಲ್ಲ~ ಅಂತ ಚಾಷ್ಟಿ ಮಾಡಿದ್ದರು. ಆಗ, ಛಲ ಬಿಡದ ಶಿವಾಜಿರಾವ್ ತಮ್ಮ ಹೊಲದಲ್ಲಿಯೇ ನೋಟು ಬೆಳೆದು ತೋರಿಸಿದ್ದರು.

 

ಶಿವಾಜಿರಾವ್ ಅವರ ಮೂವರು ಮಕ್ಕಳಲ್ಲಿ ರವಿ ಕೊನೆಯವರು. ಮೊದಲಿಬ್ಬರು ಮಕ್ಕಳು `ಸಾಲಿ~ ಕಲಿತು ದೂರ ಹೋದರು. ಮೊದಲ ಮಗ ಡಾ. ರಾಜೇಂದ್ರ ಎಂ.ಡಿ. ಮಾಡಿ ಔರಂಗಾಬಾದ್‌ನಲ್ಲಿ ವೈದ್ಯವೃತ್ತಿ ಕೈಗೊಂಡಿದ್ದಾರೆ. ಎರಡನೇ ಮಗ ದೇವಿಂದ್ರ ಇಂದೋರ್‌ನಲ್ಲಿ ದಂತವೈದ್ಯರಾಗಿದ್ದಾರೆ.

 

ರವಿ ಕೂಡ ಅಣ್ಣಂದಿರಂತೆ ಓದಬೇಕು ಮತ್ತು ಎಂಜಿನಿಯರ್ ಆಗಬೇಕು ಎಂದು ಕನಸು ಕಂಡಿದ್ದ. ಆದರೆ, ಶಿವಾಜಿರಾವ್ ಅದಕ್ಕೆ ಸುತರಾಂ ಒಪ್ಪಲಿಲ್ಲ. ಬಿ. ಎಸ್‌ಸಿ. ಪದವಿಗಾಗಿ ಓದುವ ನಿರ್ಧಾರಕ್ಕೆ ಬಂದ ರವಿ ಪದವಿ ಅಧ್ಯಯನ ನಡೆಸುತ್ತಿರುವಾಗಲೇ ಕೃಷಿ ಆರಂಭಿಸಿದರು.ತನ್ನ ಅಣ್ಣಂದಿರಂತೆ ರವಿಗೂ ಡಾಕ್ಟರ್, ಎಂಜಿನಿಯರ್ ಆಗಬೇಕು ಅಂತ ಕನಸಿತ್ತು. ತಂದೆಯ ಒತ್ತಾಯಕ್ಕೆ ಮಣಿದು ಕೃಷಿ ಆಯ್ಕೆ ಮಾಡಿಕೊಂಡರು. ಅದಾಗಿ ಹತ್ತು  ವರುಷ ಆಗಿದೆ. ಕಳೆದ ಒಂದು ದಶಕದ ಅವಧಿಯಲ್ಲಿ ಹಸಿರು ಗಿಡ-ಮರಗಳ ನಡುವೆ ನಡೆಸಿದ ಕಾಯಕ ತೃಪ್ತಿ ನೀಡಿದೆ.

 

ಅದು ಕೇವಲ ಆದಾಯ ತರುವ ವೃತ್ತಿ ಮಾತ್ರ ಆಗಿ ಉಳಿದಿಲ್ಲ. ಬೀಜ ಮೊಳಕೆಯೊಡೆದು ಸಸಿಯಾಗಿ ಗಿಡವಾಗಿ ಬೆಳೆಯುತ್ತ ಹೋಗುವ ಪರಿ ರವಿಗೆ ಪ್ರಿಯವಾಗಿದೆ. ವೃತ್ತಿ- ಹವ್ಯಾಸ ಎರಡೂ ಕೃಷಿ ಚಟುವಟಿಕೆಗಳಲ್ಲಿಯೇ ತೊಡಗಿಸಿಕೊಳ್ಳುವುದಾಗಿದೆ.ಅತ್ಯಂತ ವ್ಯವಸ್ಥಿತ ರೀತಿಯಲ್ಲಿ, ಅಚ್ಚುಕಟ್ಟಾಗಿ ಕೃಷಿ ನಡೆಸುವ ರವಿ ಅವರು `ಕೃಷಿ ಮಾಡಿಸುವ ಕೆಲಸ ಅಲ್ಲ ಸರ್, ಮಾಡುವ ಕೆಲಸ~ ಎನ್ನುತ್ತಾರೆ. ಬಹಳಷ್ಟು ಜನ ಹೊಲದಲ್ಲಿ ಕೆಲಸ ಮಾಡುವುದನ್ನು ಕಡಿಮೆ ಅಂತ ತಿಳಕೋತಾರೆ.

 

ನನಗೂ ಮೊದಲು ಹಂಗೇ ಅನಿಸಿತ್ತು. ಕೆಲಸದಾಗ ದೊಡ್ಡದು ಸಣ್ಣದು ಅಂತೇನು ಇರೋದಿಲ್ಲ. ಅದೆಲ್ಲ ನಾವೇ ಮಾಡಿಕೊಂಡದ್ದು. `ಕೃಷಿಯಲ್ಲಿ ಹಣ ಇಲ್ಲ~,  `ಲಾಭ ಇಲ್ಲ~ ಅಂತ ಜನ ಹೇಳ್ತಾರೆ.ಅದನ್ನೂ ಬೇರೆ ವೃತ್ತಿಗಳ ತರಹ ಸೀರಿಯಸ್ ಆಗಿ ತೆಗೆದುಕೊಂಡು ಮಾಡಿದರೆ ಲಾಭ ಖಂಡಿತ ಸಾಧ್ಯವಿದೆ. ಬೀಜ ಬಿತ್ತಿ ಕುಳಿತು ಒಮ್ಮೆಲೆ ರಾಶಿ ಮಾಡಲು ಹೋದರೆ ಫಲ ಹೇಗೆ ಬಂದೀತು? ಬೆಳೆಯ ಜೊತೆ ನಾವೂ ಬೆಳೆಯುತ್ತ ಹೋಗಬೇಕು.ಆಗ ಸುರಿಸಿದ ಬೆವರು ನೆಲದಲ್ಲಿ-ಹೊಲದಲ್ಲಿ ಬಿದ್ದು ಅದರ ಫಲ ರಾಶಿ ಮಾಡುವಾಗ ಸಿಗುತ್ತದೆ. ಕೃಷಿ ಅಂದರೆ ಬೀಜ, ನೀರು, ಗೊಬ್ಬರ ಅಷ್ಟೇ ಅಲ್ಲ. ಅದರಾಚೆಗಿನ ಸಂಗತಿಗಳೂ ಇವೆ. ಅವನ್ನು ವಿವರಿಸಿ ಹೇಳುವುದು ಕಷ್ಟ. ಮಾಡುತ್ತಲೇ ಅನುಭವಿಸುತ್ತ ಹೋಗಬೇಕು.ಅವರ ಹೊಲದ ಪಕ್ಕದಲ್ಲಿಯೇ ಸಣ್ಣ ತೊರೆಯೊಂದು ಹರಿದು ಹೋಗುತ್ತದೆ. ಅದರ ಹರಿಯುವ ವೇಗ ಕಡಿಮೆ ಮಾಡುವ ಮೂಲಕ ನೀರು ಇಂಗುವಂತೆ ಮಾಡಿಕೊಂಡಿದ್ದಾರೆ. ಹೊಲದ ಮತ್ತೊಂದು ಮೂಲೆಯಲ್ಲಿ ಕೃಷಿ ಹೊಂಡ ನಿರ್ಮಿಸಿಕೊಂಡು ಅದರಲ್ಲಿ ವರ್ಷದ ಹನ್ನೆರಡೂ ತಿಂಗಳು ನೀರು ಇರುವಂತೆ ನೋಡಿಕೊಳ್ಳುತ್ತಾರೆ.

 

ಜಮೀನಿನಲ್ಲಿ ನೀರಿನ ಪ್ರಮಾಣ ಹೆಚ್ಚಾದರೆ ಬಸಿದು ಹೋಗಿ, ಬೆಳೆಗೆ ತೊಂದರೆ ಆಗದಂತಹ ವ್ಯವಸ್ಥೆ ಕಲ್ಪಿಸಿದ್ದಾರೆ. ಹೊಲಕ್ಕೆ ಹೋಗುವುದಕ್ಕೆ `ದಾರಿ~ ಇರಲಿಲ್ಲ. ನೂರಾರು ವರ್ಷದಿಂದ ಯಾರೂ ಅದನ್ನು ಕೃಷಿಯೋಗ್ಯ ಭೂಮಿ ಅಂತ ಪರಿಗಣಿಸಿರಲಿಲ್ಲ. ಹಾಳು ಬಿದ್ದು ಹೋಗಿತ್ತು. ಅದಕ್ಕೊಂದು ದಾರಿ ಮಾಡಿಕೊಳ್ಳುವ ಮೂಲಕ ಕೃಷಿ ಆರಂಭಿಸಬೇಕಾಯಿತು.ಕಾಲುದಾರಿಯನ್ನು ಮೋಟಾರು- ಕಾರು ಓಡಾಡುವ `ರಸ್ತೆ~ಯನ್ನು ಸ್ವತಃ ನಿರ್ಮಿಸಿಕೊಂಡಿದ್ದಾರೆ. ಹೊಲ ಬೀಳು ಬಿದ್ದಾಗ ಸುಮ್ಮನಿದ್ದ ಜನ ಹಸಿರು ಕಾಣಿಸುತ್ತಿದ್ದಂತೆಯೇ ಅಕ್ಕಪಕ್ಕದ ಹೊಲದವರು ರಸ್ತೆ ನಿರ್ಮಾಣಕ್ಕೆ ತಕರಾರು ಎತ್ತಲು ಆರಂಭಿಸಿದರು. ಆರಂಭದ ದಿನಗಳಲ್ಲಿ `ಪಾಟೀಲ್‌ರಿಗೆ ತಲೆ ಕೆಟ್ಟಿದೆ.

ಅಪ್ಪ ದುಡಿದದ್ದನ ಮಗ ಮಜಾ ಮಾಡುವುದಕ್ಕಾಗಿ ಖರ್ಚು ಮಾಡ್ತಾನೆ~ ಎಂದು ಮಾತಾಡಿದವರ ಸಂಖ್ಯೆಯೇನೂ ಕೊರತೆ ಇರಲಿಲ್ಲ. ರಸ್ತೆ ಮಾಡಲು ಹೊರಟಾಗಂತೂ ಗ್ರಾಮದಲ್ಲಿ ಭಾರಿ ಪ್ರತಿರೋಧ ವ್ಯಕ್ತವಾಯಿತು.

 

`ಮೊದಲಿಗೆ ಕೇವಲ ನನ್ನ ಹೊಲಕ್ಕೆ ರಸ್ತೆ ಮಾಡಿಕೊಳ್ಳುತ್ತಿದ್ದೇನೆ ಎಂದು ತಿಳಿದಿದ್ದರು. ನಾನು ರಸ್ತೆಯನ್ನು ನನ್ನ ಹೊಲದ ನಂತರವೂ ನಿರ್ಮಾಣ ಮತ್ತೊಂದು ಮುಖ್ಯರಸ್ತೆಗೆ ತಲುಪಿಸಿದ ನಂತರ ಆಡಿಕೊಳ್ಳುತ್ತಿದ್ದ ಜನ ಸುಮ್ಮನಾದರು~ ಎಂದು ನೆನಪಿಸಿಕೊಳ್ಳುವ ರವಿ ಇತ್ತೀಚೆಗಷ್ಟೇ ತಂದೆ-ತಾಯಿ ಇಲ್ಲದ ನಿರ್ಗತಿಕ ಯುವತಿಯ ಕೈ ಹಿಡಿದಿದ್ದಾರೆ.`ಮೊದಲಿಗೆ ತಂದೆಯಿಂದ ಸ್ವಲ್ಪ ವಿರೋಧ ವ್ಯಕ್ತ ಆಯಿತು. ಆದರೆ, ನಾನು ತಪ್ಪು ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎನ್ನುವ ಕಾರಣಕ್ಕಾಗಿ ಒಪ್ಪಿಕೊಂಡು ಬೆಂಬಲಿಸಿದರು~ ಎಂದು ಹೇಳಲು ಮರೆಯುವುದಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry