ಮಂಗಳವಾರ, ಮಾರ್ಚ್ 2, 2021
31 °C

ಬೆಳೆ... ಬೆಳೆ... ದುಪ್ಪಟ್ಟು ಬೆಳೆ...

ಎಂ. ಮಹೇಶ Updated:

ಅಕ್ಷರ ಗಾತ್ರ : | |

ಬೆಳೆ... ಬೆಳೆ... ದುಪ್ಪಟ್ಟು ಬೆಳೆ...

`ಮನಸೊಂದಿದ್ದರೆ ಮಾರ್ಗವು ಉಂಟು ಕೆಚ್ಚೆದೆ ಇರಬೇಕೆಂದೆಂದು~... ಹೌದು. ಮನಸ್ಸಿದ್ದರೆ ಮಾರ್ಗ... ಪತಿಯನ್ನು ಕಳೆದುಕೊಂಡು ಜೀವನದ ಬಂಡಿಯ ನೊಗಕ್ಕೆ ಹೆಗಲೊಡ್ಡಿ, ಕಷ್ಟಗಳನ್ನು ಮೆಟ್ಟಿ ನಿಲ್ಲುತ್ತಾ ಕೃಷಿಯಲ್ಲಿ ಸಾಧನೆ ಮಾಡುವುದು ಸುಲಭದ ಮಾತೇನಲ್ಲ. ಸವಾಲುಗಳನ್ನು ಮೀರಿ ಮಾದರಿಯಾಗುವಂತಹ ಜೀವನವನ್ನು ಇಲ್ಲೊಬ್ಬ ಮಹಿಳೆ ನಡೆಸುತ್ತಿದ್ದಾರೆ.- ಅವರೇ ದುರುಗದ ಬಸವ್ವ. ದಾವಣಗೆರೆ ಜಿಲ್ಲೆ ಹರಪನಹಳ್ಳಿ ತಾಲ್ಲೂಕಿನ ಕೆ. ಕಲ್ಲಹಳ್ಳಿ ಗ್ರಾಮದವರು. ಪತಿಯೊಂದಿಗೆ ನೂರ್ಕಾಲ ಬಾಳುವ ಅವಕಾಶವನ್ನು ವಿಧಿ ಕಿತ್ತುಕೊಂಡಿತು. ಆದರೆ, ತನ್ನನ್ನು ನಂಬಿದ `ಶ್ರಮಗಾತಿ~ಗೆ ಭೂಮಿ ತಾಯಿ ದ್ರೋಹ ಬಗೆದಿಲ್ಲ!ಬಸವ್ವ ಸಾಂಪ್ರದಾಯಕ ಕೃಷಿ ಜತೆಗೆ ವಿವಿಧ ಪ್ರಯೋಗ ಮಾಡುತ್ತಾ, ಮಾದರಿ ಕೃಷಿ ಮಾಡುತ್ತಿದ್ದಾರೆ. ಹೀಗಾಗಿ, ರಾಜ್ಯ ಸರ್ಕಾರ ಕೃಷಿ ಕ್ಷೇತ್ರದಲ್ಲಿ ದುರುಗದ ಬಸವ್ವ ಮತ್ತು ಪುತ್ರ ಡಿ. ಮಾನಪ್ಪ ಅವರ ಸಾಧನೆ ಗುರುತಿಸಿ 2011-12ನೇ ಸಾಲಿನ `ಕೃಷಿ ಪಂಡಿತ~ ಪ್ರಶಸ್ತಿ ನೀಡಿ ಗೌರವಿಸಿದೆ.ಬಸವ್ವಗೆ ನಾಲ್ವರು ಪುತ್ರರು, ಮೂವರು ಪುತ್ರಿಯರು. ಅವರದು 30ಕ್ಕೂ ಹೆಚ್ಚು ಮಂದಿಯ ಅವಿಭಕ್ತ ಕುಟುಂಬ. ಶ್ರಮ, ಪ್ರೀತಿಯೇ ಈ ಕುಟುಂಬದ ಆಧಾರ. ತಾಯಿಯಿಂದ ಸ್ಫೂರ್ತಿಗೊಂಡಿರುವ ಎಲ್ಲರೂ ಕೃಷಿ ಕೆಲಸದಲ್ಲಿ ಭಾಗಿಯಾಗುತ್ತಾರೆ. ಇದರಿಂದ ಕೃಷಿ ಕಾರ್ಮಿಕರ ಕೊರತೆ ಕಾಡುವುದಿಲ್ಲ.ಅವರಿಗೆ 12.18 ಎಕರೆ ಜಮೀನಿದೆ. ಆದರೆ ಇದರಲ್ಲಿ ಏನುಂಟು ಏನಿಲ್ಲ? ಮಿಶ್ರ ಬೇಸಾಯಕ್ಕೆ ಆದ್ಯತೆ ನೀಡಿದ್ದಾರೆ. 6.37 ಎಕರೆಯಲ್ಲಿ ಮಾವು (ನೀಲಂ, ರಸಪೂರಿ, ಬಾದಾಮಿ ಸೇರಿದಂತೆ 7 ವಿವಿಧ ತಳಿಗಳ 300 ಗಿಡಗಳಿವೆ), 3 ಎಕರೆಯಲ್ಲಿ ಕಬ್ಬು, 300 ತೆಂಗಿನ ಗಿಡಗಳು, ಅದರ ಜತೆಯಲ್ಲಿಯೆ 450 ಸಪೋಟ ಗಿಡಗಳಿವೆ. ಮಿಶ್ರ ಬೆಳೆಯಲ್ಲಿ 1,190 ಏಲಕ್ಕಿ ಬಾಳೆ ಗಿಡಗಳಿವೆ. ಒಂದೂವರೆ ಎಕರೆಯಲ್ಲಿ `ಜಿ9~ ತಳಿಯ 3,200 ಬಾಳೆ ಬೆಳೆಯಲಾಗಿದೆ. ಇನ್ನೊಂದು ಎಕರೆಯಲ್ಲಿ ಹಿಪ್ಪನೇರಳೆ ಇದೆ.25 ಎಕರೆ ಜಮೀನಿನಲ್ಲಿ ನಿರ್ವಹಿಸುವ ಸಸ್ಯಕಾಶಿಯನ್ನು ಕೇವಲ 12.18 ಎಕರೆ ಪ್ರದೇಶದಲ್ಲಿ ಸಾಗುವಳಿ ಮಾಡುತ್ತಿರುವ ಪ್ರಗತಿಪರ ಕೃಷಿಕರಿವರು. ಜೋಳ, ರಾಗಿ, ಬತ್ತ, ಶೇಂಗಾ, ಕಬ್ಬು ಹಾಗೂ ತೋಟಗಾರಿಕೆ ಬೆಳೆಗಳಾದ ತೆಂಗು, ಅಡಿಕೆ, ಸಪೋಟ, ಮೋಸಂಬಿ, ನುಗ್ಗೆ, ಕರಿಬೇವು, ಬೇವು ಜತೆಗೆ ಸಾಗವಾನಿ ಮರ, ಬೆಂಡೆ ಬೀಜೋತ್ಪಾದನೆ ಮಾಡುತ್ತಾರೆ. 2010ರ ಜಿಲ್ಲಾ ತೋಟಗಾರಿಕೆ ಫಲಪುಷ್ಪ ಪ್ರದರ್ಶನದಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ತೋಟದ ಬದುವಿನಲ್ಲಿ ಕೃಷಿ ಅರಣ್ಯೀಕರಣ ಕೈಗೊಂಡಿದ್ದಾರೆ. ಒಮ್ಮೆಗೆ 160 ಕಿಲೊ ರೇಷ್ಮೆ ಗೂಡು ಉತ್ಪಾದನೆ ಮಾಡುತ್ತಾರೆ.ತಮಗೆ ಬೇಕಾದ ಸಸಿಗಳನ್ನು ತರುವುದಕ್ಕೆ ಬೇರೆ ಕಡೆಗೆ ಏಕೆ ಹೋಗಬೇಕು? ಇದಕ್ಕಾಗಿ ಅವರೇ ನರ್ಸರಿ ಮಾಡಿದ್ದಾರೆ. ಇತರೆಡೆ ರೇಷ್ಮೆ ಬಿತ್ತನೆ ಕಡ್ಡಿಯೊಂದಕ್ಕೆ ರೂ 3 ಇದೆ. ಇದಲ್ಲದೇ, ಸಾಗಾಣಿಕೆ ವೆಚ್ಚವೂ ತಗಲುತ್ತದೆ. ಇದನ್ನು ಉಳಿಸಲು ನರ್ಸರಿ ಬೆಳೆಸಿದ್ದಾರೆ.ಕಡ್ಡಿಯೊಂದಕ್ಕೆ ರೂ 1.25 ಪೈಸೆಗೆ ಮಾರುತ್ತಾರೆ. ಇದರಿಂದ ಸ್ಥಳೀಯ ರೈತರಿಗೂ ಅನುಕೂಲವಾಗಿದೆ. ರೇಷ್ಮೆ ಇಲಾಖೆಯಿಂದ ಸಹಾಯಧನ ದೊರೆತಿದೆ. ಸಾಕಣೆ ಕೇಂದ್ರಕ್ಕೆ ಸೌರಶಕ್ತಿ ಬಳಸಿ ನಾಲ್ಕು ದೀಪ ಅಳವಡಿಸಲಾಗಿದೆ. ಇದಲ್ಲದೇ, 3 ಸಾವಿರ ಸಪೋಟ ಸಸಿಗಳ ನರ್ಸರಿಯೂ ಇದೆ. ರೂ 25ಕ್ಕೆ ಒಂದು ಸಸಿ ಮಾರಾಟ ಮಾಡುತ್ತಾರೆ. ಬೇರೆಡೆಯಿಂದ ತಂದರೆ ರೂ 30 ಮೀರುತ್ತದೆ. ಇಲ್ಲಿ ಬೆಲೆ ಕಡಿಮೆ.ಬಸವ್ವನವರ ಜಮೀನಿನಲ್ಲಿ 300 ಮೋಸಂಬಿ ಗಿಡಗಳೂ ಇವೆ. 1,190 ಶ್ರೀಗಂಧ ಸಸಿಗಳನ್ನು ಸಹ ನೆಡಲಾಗಿದೆ. ಹೀಗಾಗಿ, ಇಲ್ಲಿ `ಬೆಳೆಯ ವೈವಿಧ್ಯತೆ~ ಕಂಡುಬರುತ್ತದೆ.

ಎರೆಹುಳು ಗೊಬ್ಬರವನ್ನು ಇಲ್ಲೇ ತಯಾರಿಸುತ್ತಾರೆ. ತೋಟಗಾರಿಕೆ ಇಲಾಖೆಯಿಂದ ಒಂದು ತೊಟ್ಟಿಗೆ ರೂ 30 ಸಾವಿರ ಸಹಾಯಧನ ಪಡೆದಿದ್ದಾರೆ. ಒಟ್ಟು 16 ತೊಟ್ಟಿಗಳಿವೆ.ಕೃಷಿ ತ್ಯಾಜ್ಯವನ್ನು ಗುಂಡಿಯಲ್ಲಿ ಕೊಳೆಸುತ್ತಾರೆ. ವರ್ಷಕ್ಕೆ 450 ಚೀಲ ಗೊಬ್ಬರ ದೊರೆಯುತ್ತದೆ. `ಇದಕ್ಕಿಂತ ಫಲವತ್ತಾದ ಮತ್ತ್ಯಾವ ಗೊಬ್ಬರಬೇಕು~ಎನ್ನುತ್ತಾರೆ.`ಜೀವಸಾರ~ ಘಟಕ ಸಹ ಇಲ್ಲಿದೆ. 10 ಹಸು, 2 ಎಮ್ಮೆಗಳಿವೆ. ನಿತ್ಯ 10 ಲೀಟರ್ ಹಾಲು ಉತ್ಪಾದನೆ ಆಗುತ್ತದೆ. ಅವಿಭಕ್ತ ಕುಟುಂಬ ಇದಾಗಿರುವುದರಿಂದ, ಹಾಲನ್ನು ಮನೆಗೆಬಳಸಿಕೊಳ್ಳಲಾಗುತ್ತಿದೆ.`ಜೀವಾಮೃತವನ್ನು ಸಹ ಇಲ್ಲಿ ಸಿದ್ಧಪಡಿಸುತ್ತೇವೆ. 20 ಲೀಟರ್ ನೀರು, 10 ಕಿಲೊ ಸಗಣಿ, 10 ಲೀಟರ್ ಗಂಜಲ, 2 ಕಿಲೊ ಬೆಲ್ಲ ಹಾಗೂ 2 ಕಿಲೊ ದ್ವಿದಳ ಧಾನ್ಯದ ಹಿಟ್ಟನ್ನು ನೆರಳಿನಲ್ಲಿ ಇಟ್ಟು ಕೊಳೆಸಲಾಗುತ್ತದೆ. ಬೆಳಿಗ್ಗೆ ಸಂಜೆ ಇದನ್ನು ಕಲಸುತ್ತಿರಬೇಕು. 7-8 ದಿನಗಳ ನಂತರ ಜೀವಾಮೃತ ಸಿದ್ಧವಾಗುತ್ತದೆ. ಒಟ್ಟು 6.37 ಎಕರೆ ಜಮೀನಿಗೆ ಹನಿ ನೀರಾವರಿ ಪದ್ಧತಿ ಅಳವಡಿಸಿದ್ದೇವೆ.

 

ಅದೇ ಕೊಳವೆಯಲ್ಲೇ ಜೀವಾಮೃತವನ್ನು ಗಿಡಗಳಿಗೆ ಕೊಡುತ್ತೇವೆ. ಇದಲ್ಲದೆ ತೋಟಗಾರಿಕೆ ಗಿಡಗಳಿಗೆ ರೋಗ ತಗುಲಿದರೆ ಮೂರು ಭಾಗ ನೀರು, ಒಂದು ಭಾಗ ಜೀವಾಮೃತ ಬೆರೆಸಿ ಸಿಂಪರಣೆ ಮಾಡುತ್ತೇವೆ. ಭೂಮಿಗೆ ಸಾವಯವ ಗೊಬ್ಬರ ಹಾಕುತ್ತೇವೆ. ಜಿಂಕ್ ಬಳಸುತ್ತೇವೆ. ಈ ಮೂಲಕ ಫಲವತ್ತತೆ ಕಾಯ್ದುಕೊಳ್ಳುವ ಪ್ರಯತ್ನ ಮಾಡುತ್ತಿದ್ದೇವೆ~ ಎಂದು ವಿವರಿಸುತ್ತಾರೆ ಮಾನಪ್ಪ.`ತಂದೆ ತೀರಿಕೊಂಡಾಗ ತೊಂದರೆ ಎದುರಾಯ್ತು. ತಾಯಿ ದುಡಿಯುತ್ತಿದ್ದರು. ಪಿಯುಸಿ ನಂತರ ಓದು ನಿಲ್ಲಿಸಿ, ಪಾರ್ಟ್ ಟೈಂ ಕೆಲಸಕ್ಕೆ ಸೇರಿದೆ. ಕೆರೆ ನೀರು ಬಳಸಿ ಜಮೀನಿನಲ್ಲಿ ತರಕಾರಿ ಹಾಕಿದೆವು. ಇದರಿಂದ ಬಂದ ಹಣದಿಂದ ಬೋರ್‌ವೆಲ್ ಕೊರೆಸಿದೆವು. ನಂತರ ಕಬ್ಬು ಹಾಕಿದೆವು. ಅದರಿಂದ ಬಂದ ಗಳಿಕೆಯಿಂದ ಮತ್ತೊಂದು ಕೊಳವೆಬಾವಿ ಕೊರೆಸಿದೆವು. ಸರ್ಕಾರದ ಸಹಾಯಧನ ಉಪಯೋಗ ಮಾಡಿಕೊಂಡಿದ್ದೇವೆ. ಕೃಷಿ ಚಟುವಟಿಕೆಗೆ ಅನುಕೂಲ ಆಗುವಂತೆ 2 ಟ್ರ್ಯಾಕ್ಟರ್‌ಗಳಿವೆ. ಇತರ ಕೃಷಿ ಉಪಕರಣಗಳಿವೆ.ಹಣ್ಣು ಸಂಸ್ಕರಣೆಗೆಂದು ಪ್ಯಾಕ್ ಹೌಸ್ ಮಾಡಿದ್ದೇವೆ. 200 ಮೀಟರ್ ಉದ್ದ 3 ಮೀಟರ್ ಎತ್ತರದ ಕೃಷಿ ಹೊಂಡಗಳಿವೆ. ಮೀನು ಸಾಕಣೆಯನ್ನು ಸಹ ಮಾಡುತ್ತೇವೆ. ಹನಿ ನೀರಾವರಿಯಿಂದಾಗಿ ನೀರನ್ನು ಸದ್ಬಳಕೆ ಮಾಡಿಕೊಳ್ಳುತ್ತಿದ್ದೇವೆ. ಮನೆ ಮಂದಿ ಎಲ್ಲರ ಶ್ರಮ ಹಾಗೂ ಸರ್ಕಾರದ ನೆರವಿನಿಂದ ಮೇಲೆ ಬಂದಿದ್ದೇವೆ. ಕೋಳಿ ಫಾರಂ ಹಾಗೂ ಹಾಲಿನ ಡೈರಿ ಮಾಡುವ ಉದ್ದೇಶವಿದೆ. ಎಲ್ಲಕ್ಕೂ ತಾಯಿ ಸ್ಫೂರ್ತಿ~ ಎಂದು ಸ್ಮರಿಸಿಕೊಳ್ಳುತ್ತಾರೆ.`ದುರುಗದ ಬಸವ್ವ ಅವರು ಸಾಧಕಿಯೇ ಸರಿ. ಪತಿ ಕಳೆದುಕೊಂಡ ನಂತರ, ಧೃತಿಗೆಡದೆ ಬದುಕು ಸಾಗಿಸುತ್ತಿದ್ದಾರೆ. ಕೃಷಿ ನಂಬಿ ಅಭಿವೃದ್ಧಿ ಹೊಂದುತ್ತಿದ್ದಾರೆ. ಈ ಮೂಲಕ ಅವರು ಇತರರಿಗೆ ಮಾದರಿಯಾಗಿದ್ದಾರೆ~ ಎಂದು ಮೆಚ್ಚುಗೆ ಸೂಚಿಸುತ್ತಾರೆ ಕೃಷಿ ಇಲಾಖೆ ಜಂಟಿ ನಿರ್ದೇಶಕ ಆರ್.ಜಿ. ಗೊಲ್ಲರ್. ಸಂಪರ್ಕಕ್ಕೆ ಮೊಬೈಲ್: 94807 23029 (ಪುತ್ರ ಮಾನಪ್ಪ).

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.