ಗುರುವಾರ , ಅಕ್ಟೋಬರ್ 17, 2019
28 °C

ಬೆಳೆ ಸಾಲ ಮರುಪಾವತಿ ಗಡುವು ವಿಸ್ತರಣೆ

Published:
Updated:
ಬೆಳೆ ಸಾಲ ಮರುಪಾವತಿ ಗಡುವು ವಿಸ್ತರಣೆ

ಬೆಂಗಳೂರು: ಬರಪೀಡಿತ ತಾಲ್ಲೂಕುಗಳಲ್ಲಿ ರೈತರು ಸಹಕಾರಿ ಸಂಘಗಳ ಮೂಲಕ ಪಡೆದಿರುವ ಬೆಳೆ ಸಾಲದ ಮರುಪಾವತಿ ಅವಧಿಯನ್ನು ಒಂದು ವರ್ಷ ವಿಸ್ತರಿಸಲಾಗುವುದು ಎಂದು ಸಹಕಾರ ಸಚಿವ ಲಕ್ಷ್ಮಣ ಸವದಿ ತಿಳಿಸಿದರು.

ಮಂಗಳವಾರ ವಿಧಾನಸೌಧದಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಅವರು, `90 ತಾಲ್ಲೂಕುಗಳನ್ನು ಬರಪೀಡಿತ ಎಂದು ಈಗಾಗಲೇ ಸರ್ಕಾರ ಘೋಷಿಸಿದೆ. ಅಲ್ಲಿನ ರೈತರಿಗೆ ನೆರವಾಗುವ ಉದ್ದೇಶದಿಂದ ಸಾಲ ಮರುಪಾವತಿ ಅವಧಿ ವಿಸ್ತರಿಸಲು ನಿರ್ಧರಿಸಲಾಗಿದೆ~ ಎಂದರು.

ಪ್ರಸಕ್ತ ಹಣಕಾಸು ವರ್ಷದಲ್ಲಿ ಸಹಕಾರ ಸಂಘಗಳ ಮೂಲಕ ರೂ.  7,000 ಕೋಟಿ ಬೆಳೆ ಸಾಲ ವಿತರಿಸುವ ಗುರಿಯನ್ನು ರಾಜ್ಯ ಸರ್ಕಾರ ಹೊಂದಿದೆ. ಕಳೆದ ನವೆಂಬರ್‌ವರೆಗೆ ಸಹಕಾರ ಇಲಾಖೆಯು ಶೇಕಡ 1ರ ಬಡ್ಡಿ ದರದಲ್ಲಿ ್ಙ 4,081 ಕೋಟಿ ಬೆಳೆ ಸಾಲ ವಿತರಿಸಿದೆ. ಉತ್ತರ ಕರ್ನಾಟಕದಲ್ಲಿ ಮುಂದಿನ ಎರಡು ತಿಂಗಳ ಕಾಲ ಕಬ್ಬು ನಾಟಿ ನಡೆಯುವುದರಿಂದ ಸಾಲ ವಿತರಣೆಯ ಗುರಿ ತಲುಪುವ ಸಾಧ್ಯತೆ ಇದೆ ಎಂದು ಸಚಿವರು ಹೇಳಿದರು.

`ವ್ಯಾಟ್~ ಇಳಿಕೆ: ಹತ್ತಿಯ ಖರೀದಿ ಮತ್ತು ಮಾರಾಟದಲ್ಲಿ ಮೌಲ್ಯವರ್ಧಿತ ತೆರಿಗೆಯ (ವ್ಯಾಟ್) ದರವನ್ನು ಶೇ 5ರಿಂದ ಶೇ 2ಕ್ಕೆ ಇಳಿಕೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದರು.ಹಿಂದೆ ಶೇ 5ರ ದರದಲ್ಲಿ ವ್ಯಾಟ್ ವಿಧಿಸಲಾಗುತ್ತಿತ್ತು. ಈ ಪೈಕಿ ಶೇ 3ರಷ್ಟು ತೆರಿಗೆಯನ್ನು ವ್ಯಾಪಾರಿಗಳಿಗೆ ಮರು ಪಾವತಿ ಮಾಡಬೇಕಿತ್ತು. ಈ ಪ್ರಕ್ರಿಯೆಯಲ್ಲಿ ಅವ್ಯವಹಾರ ನಡೆಯುತ್ತಿದೆ ಎಂಬ ದೂರುಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಮಂಗಳವಾರ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೆರಿಗೆ ಇಳಿಕೆ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.

ಈರುಳ್ಳಿ ಬೆಲೆ ಕುಸಿತದಿಂದ ಕಂಗಾಲಾಗಿರುವ ರೈತರನ್ನು ರಕ್ಷಿಸುವ ಉದ್ದೇಶದಿಂದ ಬೆಂಬಲ ಬೆಲೆಯಲ್ಲಿ ರಾಜ್ಯ ಸರ್ಕಾರ 2.26 ಲಕ್ಷ ಕ್ವಿಂಟಲ್ ಈರುಳ್ಳಿ ಖರೀದಿಸಿದೆ. ಇದಕ್ಕಾಗಿ ರೂ. 24.20 ಕೋಟಿ ವೆಚ್ಚ ಮಾಡಿದ್ದು, ಉತ್ತರ ಕರ್ನಾಟಕದಲ್ಲಿ ಹೆಚ್ಚಿನ ಖರೀದಿ ನಡೆದಿದೆ ಎಂದು ಹೇಳಿದರು.

ಗೃಹ ನಿರ್ಮಾಣ ಸಹಕಾರ ಸಂಘಗಳಲ್ಲಿನ ಅವ್ಯವಹಾರ ಕುರಿತ ಪ್ರಶ್ನೆಗೆ ಉತ್ತರಿಸಿದ ಸವದಿ, `ಅವ್ಯವಹಾರ ಆರೋಪಗಳ ಮೇಲೆ ಬೆಂಗಳೂರಿನ ವೈಯಾಲಿಕಾವಲ್ ಗೃಹ ನಿರ್ಮಾಣ ಸಹಕಾರ ಸಂಘ ಮತ್ತು ಕರ್ನಾಟಕ ವಿಧಾನಮಂಡಲ ಸಚಿವಾಲಯ ನೌಕರರ ಗೃಹ ನಿರ್ಮಾಣ ಸಹಕಾರ ಸಂಘಗಳ ಆಡಳಿತ ಮಂಡಳಿ ರದ್ದು ಮಾಡಿ, ಆಡಳಿತಾಧಿಕಾರಿಗಳನ್ನು ನೇಮಿಸಲಾಗಿದೆ. ಬೆಂಗಳೂರು ಮತ್ತು ಮೈಸೂರಿನ 112 ಗೃಹ ನಿರ್ಮಾಣ ಸಹಕಾರ ಸಂಘಗಳ ವ್ಯವಹಾರ ಕುರಿತ ತನಿಖೆ ಪ್ರಗತಿಯಲ್ಲಿದೆ~ ಎಂದರು.

Post Comments (+)