ಮಂಗಳವಾರ, ನವೆಂಬರ್ 19, 2019
27 °C

ಬೆಳೆ ಸಾಲ : ರೈತರಿಗೆ ಚಳ್ಳೆಹಣ್ಣು

Published:
Updated:

2011-12ನೇ ಸಾಲಿನಲ್ಲಿ ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕು ಸೇರಿದಂತೆ ಇನ್ನೂ ಕೆಲವು ತಾಲ್ಲೂಕುಗಳು ಬರ ಪೀಡಿತ ಪ್ರದೇಶಗಳಾಗಿದ್ದುದರಿಂದ, ರೈತರು ಸಹಕಾರ ಸಂಘಗಳ ಮೂಲಕ ಶೇ 1 ಬಡ್ಡಿ ದರದಲ್ಲಿ ಪಡೆದಿದ್ದ ಬೆಳೆ ಸಾಲದ ಪೈಕಿ 25 ಸಾವಿರ ರೂಪಾಯಿ ಮನ್ನಾ ಮಾಡಿ, ಉಳಿಕೆ ಸಾಲ ವಸೂಲಾತಿಯನ್ನು ಮುಂದೂಡಲಾಗುವುದು ಮತ್ತು ಮುಂದಿನ ಸಾಲಿಗೆ ಅಂದರೆ 2012-13ನೇ ಸಾಲಿಗೆ ಮತ್ತೆ ಬೆಳೆ ಸಾಲ ನೀಡಿ ರೈತರ ನೆರವಿಗೆ ಬರುವುದಾಗಿ ಸರ್ಕಾರ ಆಶ್ವಾಸನೆ ನೀಡಿತ್ತು. ರೈತರು ಇದನ್ನು ಕೇಳಿ ಸದ್ಯ 25 ಸಾವಿರ ರೂಪಾಯಿ ಸಾಲ ಮನ್ನಾ ದೊರೆತು, ಉಳಿಕೆ ಸಾಲ ವಸೂಲಾತಿಗಾಗಿ ಸಹಕಾರ ಸಂಘಗಳು ಮನೆ ಬಾಗಿಲಿಗೆ ಬರುವುದು ತಪ್ಪಿತಲ್ಲ ಎಂದು ನೆಮ್ಮದಿಯಿಂದ ಉಸಿರಾಡ ತೊಡಗಿದರು.ಆದರೆ ಸರ್ಕಾರದ ಆಶ್ವಾಸನೆ ನಂಬಿ 2012-13ನೇ ಸಾಲಿಗೆ ಮತ್ತೆ ಸಾಲ ಪಡೆಯಲು ಹುಣಸೂರು ಕಸಬಾ ಸಹಕಾರ ಸಂಘಕ್ಕೆ ರೈತರು ಹೋದರು. ಅಲ್ಲಿಯ ಅಧಿಕಾರಿಗಳ ಹೇಳಿಕೆ ಪ್ರಕಾರ 2011-12ನೇ ಸಾಲಿನಲ್ಲಿ ರೈತರು ಪಡೆದಿರುವ ಸಾಲವನ್ನು ಪೂರ್ತಿ ಶೇ 1 ಬಡ್ಡಿ ದರದ ಬದಲು ಶೇ 12 ಬಡ್ಡಿ ದರದಲ್ಲಿ ಪಾವತಿ ಮಾಡಬೇಕು, ಸಾಲಮನ್ನಾ ಯೋಜನೆ, 2011 ಆಗಸ್ಟ್‌ನಲ್ಲಿ ಪಡೆದಿರುವವರಿಗೆ ಮಾತ್ರ ಅನ್ವಯಿಸುತ್ತದೆ. ಅದಕ್ಕಿಂತ ಮೊದಲು ಪಡೆದವರಿಗೆ ಅನ್ವಯಿಸುವುದಿಲ್ಲ.

ಹಾಗಾಗಿ ಪ್ರತಿ ಸಾಲದ ಬಾಬ್ತು ಹಣವನ್ನು ಶೇ 12 ಬಡ್ಡಿ ದರದಲ್ಲಿ ಪಾವತಿ ಮಾಡಿದರೆ ಮಾತ್ರ ಮುಂದೆ ಬೆಳೆ ಸಾಲ ನೀಡುವ ಬಗ್ಗೆ ತೀರ್ಮಾನ ತೆಗೆದು ಕೊಳ್ಳಲಾಗುವುದು ಎಂಬ ಸೂಚನೆ ಕೇಳಿ ಬಂತು. ಸಾಲ ಮನ್ನಾ ಬೇಡ, ಹೊಸದಾಗಿ ಸಾಲ ಬೇಡ, ಪಡೆದಿರುವ ಸಾಲಕ್ಕೆ ಶೇ 1 ಬಡ್ಡಿ ದರದಲ್ಲಿ ಹಣ ತೆಗೆದುಕೊಂಡು ನಮ್ಮನ್ನು ಸಾಲ ಮುಕ್ತರನ್ನಾಗಿ ಮಾಡಿ ಎಂದು ರೈತರು ಕೇಳಿದರೆ, ನಮಗೆ ಆ ರೀತಿ ಸರ್ಕಾರದಿಂದ ಆದೇಶ ಬಂದಿಲ್ಲ ಎಂದರು. ಆಗ ರೈತರಿಗೆ ಸರ್ಕಾರದ ಮಾತು ನಂಬಿ ಮೋಸ ಹೋದುದರ ಅರಿವಾಗಿ ಶೇ 12 ಬಡ್ಡಿ ದರವನ್ನು ಸಾಲ ಹಿಂದಿರುಗಿಸಲಾಗದೆ ಮತ್ತೆ ಹೊಸದಾಗಿ ಬೆಳೆ ಸಾಲ ಪಡೆಯಲಾಗದೆ ಕಣ್ಣೀರಿಡುತ್ತ ಕಚೇರಿಯಿಂದ ಹೊರಬರಬೇಕಾಯಿತು. ರೈತರನ್ನು ಸರ್ಕಾರ ಮರುಳು ಮಾಡಲು ಹೊರಟಿದೆ ಎಂಬುದು ಈಗ ನಿಜವಾಗಿ ಪರಿಣಮಿಸಿದೆ.

- ಎ. ಬಿ. ಪುಟ್ಟರಾಜ್,ಹುಣಸೂರು .

ಪ್ರತಿಕ್ರಿಯಿಸಿ (+)