ಬೆಳೆ ಸಾಲ ವಸೂಲಾತಿ ಮುಂದೂಡಲು ಚಿಂತನೆ

7

ಬೆಳೆ ಸಾಲ ವಸೂಲಾತಿ ಮುಂದೂಡಲು ಚಿಂತನೆ

Published:
Updated:

ಬೆಂಗಳೂರು: ಕೆಲ ಜಿಲ್ಲೆಗಳಲ್ಲಿ ಬರಗಾಲ ಇರುವ ಕಾರಣಕ್ಕೆ ಬೆಳೆ ಸಾಲ ವಸೂಲಾತಿಯನ್ನು ಒಂದು ವರ್ಷದ ಮಟ್ಟಿಗೆ ಮುಂದೂಡುವ ಬಗ್ಗೆ ಚಿಂತನೆ ನಡೆದಿದೆ ಎಂದು ಸಹಕಾರ ಸಚಿವ ಲಕ್ಷ್ಮಣ ಸವದಿ ಬುಧವಾರ ಇಲ್ಲಿ ತಿಳಿಸಿದರು.

ಈ ಕುರಿತು ಗುರುವಾರ ಅಥವಾ ಶುಕ್ರವಾರ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರ ನೇತೃತ್ವದಲ್ಲಿ ಹಣಕಾಸು ಇಲಾಖೆ ಅಧಿಕಾರಿಗಳ ಸಭೆ ಕರೆದು ಚರ್ಚಿಸಲಾಗುವುದು ಎಂದರು.

ರಾಜ್ಯದ 84 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಲಾಗಿದೆ. ಈ ಭಾಗಗಳಲ್ಲಿ ಬೆಳೆನಷ್ಟದಿಂದ ರೈತರು ತತ್ತರಿಸಿದ್ದು, ಸಾಲ ಮರುಪಾವತಿ ಅಸಾಧ್ಯವಾಗಿದೆ. ಹೀಗಾಗಿ ಸಂಕಷ್ಟದಲ್ಲಿರುವ ರೈತರಿಗೆ ಪರಿಹಾರ ಕೊಡಿಸುವ ಉದ್ದೇಶದಿಂದ ಆ ಜಿಲ್ಲೆಗಳಲ್ಲಿ ಸಾಲ ವಸೂಲಾತಿಯನ್ನು ಮುಂದೂಡುವ ಬಗ್ಗೆ ಚಿಂತಿಸಲಾಗಿದೆ ಎಂದರು.

ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಕೃಷಿ ಸಾಲ ಅಥವಾ ಅದರ ಮೇಲಿನ ಬಡ್ಡಿ ಮನ್ನಾ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಉತ್ತರಿಸಿದರು.

ವ್ಯಾಟ್ ಕಡಿತ: ರಾಜ್ಯದ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ಒಣ ದ್ರಾಕ್ಷಿ ಮಾರಾಟದ ಮೇಲೆ ಶೇ 14ರಷ್ಟು ಮೌಲ್ಯ ವರ್ಧಿತ ತೆರಿಗೆ (ವ್ಯಾಟ್) ವಿಧಿಸುತ್ತಿದ್ದು, ಅದನ್ನು ಶೇ 2ಕ್ಕೆ ಇಳಿಸಲಾಗಿದೆ.

ನೆರೆಯ ಮಹಾರಾಷ್ಟ್ರದಲ್ಲಿ ಒಣ ದ್ರಾಕ್ಷಿ ಮೇಲೆ ವ್ಯಾಟ್ ತೆರಿಗೆ ಇಲ್ಲ. ಇದರಿಂದ ರಾಜ್ಯದ ಬೆಳೆಗಾರರು ದ್ರಾಕ್ಷಿ ಮಾರಾಟಕ್ಕೆ ಮಹಾರಾಷ್ಟ್ರಕ್ಕೆ ಹೋಗುತ್ತಿದ್ದು, ಇದರಿಂದ ರಾಜ್ಯ ಸರ್ಕಾರಕ್ಕೂ ನಷ್ಟ ಆಗುತ್ತಿತ್ತು. ಹೀಗಾಗಿ ವ್ಯಾಟ್ ಪ್ರಮಾಣವನ್ನು ಇಳಿಸಲಾಗಿದೆ. ರಾಜ್ಯದಲ್ಲಿ ಸುಮಾರು ರೂ. 500ರಿಂದ 600 ಕೋಟಿ ಮೊತ್ತದ ಒಣ ದ್ರಾಕ್ಷಿ ವ್ಯಾಪಾರ ನಡೆಯುತ್ತಿದೆ ಎಂದರು.

ಇದೇ ರೀತಿ ಗೋವಿನ ಜೋಳ, ಬೆಲ್ಲ, ಅರಿಶಿಣ ಮೇಲಿನ ಸೆಸ್ ನೆರೆ ರಾಜ್ಯಗಳಿಗಿಂತ ಕರ್ನಾಟಕದಲ್ಲಿ ಹೆಚ್ಚು ಇದೆ. ಇದನ್ನೂ ಕಡಿಮೆ ಮಾಡಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.

ಗೋವಿನ ಜೋಳದ ಪ್ರತಿ ಕ್ವಿಂಟಾಲ್ ಮೇಲೆ ಮಹಾರಾಷ್ಟ್ರದಲ್ಲಿ 50 ಪೈಸೆ ಸೆಸ್ ಹಾಕುತ್ತಿದ್ದರೆ ರಾಜ್ಯದಲ್ಲಿ ರೂ 1.5 ವಿಧಿಸಲಾಗುತ್ತಿದೆ. ಇಷ್ಟೇ ಮೊತ್ತದ ಸೆಸ್ ಅನ್ನು ಅರಿಶಿಣ ಮತ್ತು ಬೆಲ್ಲದ ಮೇಲೂ ವಿಧಿಸಲಾಗುತ್ತಿದೆ. ಇದನ್ನು ಕಡಿಮೆ ಮಾಡಬೇಕಾದ ಅನಿವಾರ್ಯ ಪರಿಸ್ಥಿತಿ ಇದ್ದು, ಆ ಕುರಿತು ಎಪಿಎಂಸಿ ಪ್ರತಿನಿಧಿಗಳ ಜತೆ ಚರ್ಚಿಸಲಾಗುವುದು ಎಂದರು.

ಸೆಸ್ ಇಳಿಸುವುದರಿಂದ ಎಪಿಎಂಸಿಗಳಿಗೆ ನಷ್ಟ ಆಗುತ್ತದೆ. ಇದನ್ನು ಗಮನದಲ್ಲಿ ಇಟ್ಟುಕೊಂಡೇ ಗಡಿ ಜಿಲ್ಲೆಗಳ ಎಪಿಎಂಸಿಗಳಲ್ಲಿ ಮಾತ್ರ ಸೆಸ್ ಇಳಿಸುವ ಬಗ್ಗೆ ಚಿಂತಿಸಲಾಗಿದೆ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry