ಬೆಳ್ತಂಗಡಿ ಮೂಲದ ಕ್ರೈಸ್ತ ಧರ್ಮ ಗುರು ಸಾವು

7
ದಕ್ಷಿಣ ಅಮೆರಿಕದಲ್ಲಿ ಅಪಘಾತ

ಬೆಳ್ತಂಗಡಿ ಮೂಲದ ಕ್ರೈಸ್ತ ಧರ್ಮ ಗುರು ಸಾವು

Published:
Updated:

ಮಂಗಳೂರು: ದಕ್ಷಿಣ ಅಮೆರಿಕದ ಐವರಿ ಕೋಸ್ಟ್‌ನಲ್ಲಿ ಭಾನುವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬೆಳ್ತಂಗಡಿ ಮೂಲದ ಆರ್ಚ್ ಬಿಷಪ್ ಆಂಬ್ರೋಸ್ ಮಾಡ್ತಾ (54) ಮೃತಪಟ್ಟಿದ್ದಾರೆ. 17ಭಾಷೆಗಳನ್ನು ಕಲಿತಿದ್ದ ಈ ಶಿಕ್ಷಣ ಪ್ರೇಮಿ  ಅಗಲಿಕೆಗೆ ಬೆಳ್ತಂಗಡಿ ಕಂಬನಿ ಮಿಡಿದಿದೆ.ಐವರಿ ಕೋಸ್ಟ್‌ನ ಒಡಿಯನ್ ಎಂಬಲ್ಲಿ ದೀಕ್ಷಾ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ತಮ್ಮ ಕಾರಿನಲ್ಲಿ ಹಿಂದಿರುಗುತ್ತಿದ್ದ ವೇಳೆ ಇನ್ನೊಂದು ವಾಹನಕ್ಕೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿತ್ತು.ಬೆಳ್ತಂಗಡಿಯ ಚರ್ಚ್ ಶಾಲೆ, ಮಂಗಳೂರಿನ ಸೇಂಟ್ ಅಲೋಶಿಯಸ್ ಹೈಸ್ಕೂಲ್‌ಗಳಲ್ಲಿ ವ್ಯಾಸಂಗ ಮಾಡಿ, ನಾಗಪುರ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಎಂ.ಎ, ಲಖನೌ ವಿಶ್ವವಿದ್ಯಾಲಯದಿಂದ ಬಿಇಡಿ ಪದವಿ ಗಳಿಸಿದ ಆಂಬ್ರೋಸ್ ಮಾಡ್ತಾ ಅವರು ನಾಗಪುರದ ಸೇಂಟ್ ಚಾರ್ಲ್ಸ್ ಸೆಮಿನರಿಯಲ್ಲಿ ತತ್ವಶಾಸ್ತ್ರ ಅಧ್ಯಯನ ನಡೆಸಿ ರೋಮ್ ನಗರ ವಿಶ್ವವಿದ್ಯಾಲಯದಿಂದ ಕ್ಯಾನನ್ ಲಾ ಪದವಿ ಪಡೆದಿದ್ದರು.1982ರ ಮಾರ್ಚ್ 28ರಂದು ಧರ್ಮಗುರು ದೀಕ್ಷೆ ಪಡೆದಿದ್ದರು. 1990ರಲ್ಲಿ ರಾಜತಾಂತ್ರಿಕ ಸೇವೆಗೆ ಸೇರ್ಪಡೆಗೊಂಡು ಹಲವಾರು ದೇಶಗಳಲ್ಲಿ ಕೈಸ್ತ ಧರ್ಮ ಪ್ರಸಾರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ದಕ್ಷಿಣ ಆಫ್ರಿಕಕ್ಕೆ ಆರ್ಚ್‌ಬಿಷಪ್ ಆಗಿ ಆಯ್ಕೆಯಾದಾಗ 2008ರ ಆಗಸ್ಟ್‌ನಲ್ಲಿ ಬೆಳ್ತಂಗಡಿಯಲ್ಲಿ ಅವರನ್ನು ಸನ್ಮಾನಿಸಲಾಗಿತ್ತು. ಕಳೆದ ಮೇಯಲ್ಲಿ ಅವರು ಕೊನೆಯದಾಗಿ ಬೆಳ್ತಂಗಡಿಗೆ ಬಂದಿದ್ದರು.ಜಗತ್ತಿನ 17 ಭಾಷೆಗಳ ಮೇಲೆ ಪ್ರಭುತ್ವ ಹೊಂದಿದ್ದ ಆಂಬ್ರೋಸ್ ಮಾಡ್ತಾ ಅವರು ಸರಳ ಜೀವನ, ಸ್ಥಿತಪ್ರಜ್ಞ ಸ್ವಭಾವಕ್ಕೆ ಹೆಸರಾಗಿದ್ದರು. ಅವರ ಸಹೋದರ ಫಾ.ಹೆನ್ರಿ ಮಾಡ್ತಾ ಚಿಕ್ಕಮಗಳೂರು ಧರ್ಮಪ್ರಾಂತದ ಧರ್ಮಗುರುವಾಗಿದ್ದು, ಅವರ ಇಬ್ಬರು ಸಹೋದರಿಯರು ಸಹ ಕ್ರೈಸ್ತ ಸನ್ಯಾಸಿನಿಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇನ್ನಿಬ್ಬರು ಸಹೋದರಿಯರಿಗೆ ವಿವಾಹವಾಗಿದ್ದು, ಒಬ್ಬ ಸಹೋದರಿ ಎಳೆಯ ಪ್ರಾಯದಲ್ಲೇ ಮೃತಪಟ್ಟಿದ್ದಾರೆ.ಬೆಳ್ತಂಗಡಿಯ ಹೋಲಿ ರಿಡೀಮರ್ ಚರ್ಚ್ ಎದುರುಗಡೆಯ ಮನೆಯಲ್ಲಿ ಜನಿಸಿದ ಮಾಡ್ತಾ ಅವರು ತಾವು ಬಾಲ್ಯದಿಂದ ನೋಡಿ ನಲಿದಾಡಿದ ಈ ಚರ್ಚ್‌ಗೆ ಇಟಲಿಯಿಂದ ತರಿಸಿದ 15 ಲಕ್ಷ ರೂಪಾಯಿ ಮೌಲ್ಯದ ಗಂಟೆಯನ್ನು ದೇಣಿಗೆಯಾಗಿ ನೀಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry