ಬೆಳ್ಳಿತೆರೆಯ ‘ವಿಲನ್‌ ಪೊಲೀಸ್‌’

7

ಬೆಳ್ಳಿತೆರೆಯ ‘ವಿಲನ್‌ ಪೊಲೀಸ್‌’

Published:
Updated:

ನಟಿಸಿರುವ ಸುಮಾರು 109 ಚಿತ್ರಗಳ ಪೈಕಿ ಖಾಕಿ ತೊಟ್ಟ ನೆಗೆಟಿವ್‌ ಛಾಯೆಯ ಪಾತ್ರಗಳ ಸಂಖ್ಯೆ ಅರ್ಧಶತಕ ದಾಟಿದೆ. ಪೊಲೀಸ್‌ ವೇಷ ತೊಟ್ಟ ವಿಲನ್‌ ಪಾತ್ರವೆಂದಾಕ್ಷಣ ಇವರಿಗೆ ಆಹ್ವಾನ ಬರುತ್ತದೆ. ಎತ್ತರದ ನಿಲುವು, ಗಂಭೀರ ಮುಖ, ಪೊಲೀಸ್‌ ಮತ್ತು ವಿಲನ್‌ ಪಾತ್ರಗಳಿಗೆ ಹೇಳಿ ಮಾಡಿಸಿರುವಂಥ ಶರೀರ ಮತ್ತು ಶಾರೀರ. ಈ ಕಾರಣಕ್ಕಾಗಿಯೇ ಪದೇಪದೇ ‘ವಿಲನ್’ ಪೊಲೀಸ್‌ ಆಗಿಯೇ ಬಣ್ಣಹಚ್ಚುತ್ತಾರೆ ಗಣೇಶ್‌ ರಾವ್‌.ಕಿರುತೆರೆ, ಹಿರಿತೆರೆ ಎರಡರ ಮೂಲಕವೂ ಗಣೇಶ್‌ ರಾವ್‌ ಪ್ರೇಕ್ಷಕರಿಗೆ ಪರಿಚಿತರು. ಕೆ.ಆರ್‌. ಪುರಂನಲ್ಲಿ ಹುಟ್ಟಿದ ಅವರು ಪಿಯುಸಿವರೆಗೆ ಓದಿದ್ದು ಕೊಳ್ಳೇಗಾಲದಲ್ಲಿ. ಚಿಕ್ಕಂದಿನಿಂದಲೂ ಬಣ್ಣದ ಲೋಕದತ್ತ ಕುತೂಹಲ ಮತ್ತು ಆಸಕ್ತಿ ಹೊಂದಿದ್ದ ಅವರಿಗೆ ಎಂಟನೇ ತರಗತಿಯಲ್ಲಿ ಅಂತರ್‌ಶಾಲಾ ನಾಟಕ ಸ್ಪರ್ಧೆಯಲ್ಲಿನ ಅಭಿನಯಕ್ಕೆ ದೊರೆತ ಮೊದಲ ಬಹುಮಾನ ನಟನೆಯ ಕುರಿತು ಒಲವು ಮೂಡಿಸಿತು.ಆದರೆ ಓದಿನ ಕಾರಣಕ್ಕೆ ನಾಟಕಗಳಿಂದ ಕೆಲ ಕಾಲ ದೂರ ಉಳಿಯುವಂತಾಯಿತು. ಬೆಂಗಳೂರಿನಲ್ಲಿ ಆಟೊಮೊಬೈಲ್‌ ಎಂಜಿನಿಯರಿಂಗ್‌ ಪೂರೈಸಿದ ಬಳಿಕ ಮತ್ತೆ ನಾಟಕ ಜಗತ್ತು ಕರೆಸಿಕೊಂಡಿತು. ಓದು ಮುಗಿಸಿದಾಗ ಉದ್ಯೋಗಕ್ಕೆ ಪ್ರಯತ್ನಿಸಿದರಾದರೂ ಲಂಚ ನೀಡದೆ ಎಲ್ಲಿಯೂ ಕೆಲಸ ಗಿಟ್ಟುವುದಿಲ್ಲ ಎಂಬ ಸ್ಥಿತಿ ಎದುರಿಗಿತ್ತು. ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿದ ತಂದೆಗೆ ಲಂಚ ಕೊಟ್ಟು ಮಗ ಕೆಲಸಕ್ಕೆ ಸೇರಿಕೊಳ್ಳುವುದು ಕಿಂಚಿತ್ತೂ ಇಷ್ಟವಿರಲಿಲ್ಲ. ಕೊನೆಗೆ ಸ್ವಂತ ಆಟೊಮೊಬೈಲ್‌ ಬಿಡಿಭಾಗ ಮಾರಾಟದ ಅಂಗಡಿ ತೆರೆದರು ಗಣೇಶ್‌ ರಾವ್‌. ಜೊತೆಗೇ ತಮ್ಮೊಳಗಿದ್ದ ನಟನನ್ನು ಸಂತೈಸಲು ‘ರಂಗ ಸಿಂಚನ’ ತಂಡದೊಂದಿಗೆ ಸೇರಿಕೊಂಡಿದ್ದರು. ಅಂದಾಜು 50 ನಾಟಕಗಳಲ್ಲಿ ಗಣೇಶ್‌ ರಾವ್‌ ಅಭಿನಯಿಸಿದರು.ಧಾರಾವಾಹಿಯ ಪ್ರೊಡಕ್ಷನ್‌ ಮ್ಯಾನೇಜರ್‌ ಒಬ್ಬರು ನಾಟಕದಲ್ಲಿ ಇವರ ಅಭಿನಯ ನೋಡಿ ಕಿರುತೆರೆಗೆ ಆಹ್ವಾನವಿತ್ತರು. ‘ಭಾಗ್ಯಚಕ್ರ’ ಧಾರಾವಾಹಿ ಮೂಲಕ ಅವರ ಹೊಸ ಬದುಕು ಶುರುವಾಗಿದ್ದು ಹೀಗೆ. ‘ಚಂದ್ರಿಕಾ’, ‘ಭಾಗೀರತಿ’, ‘ಮನ್ವಂತರ’, ‘ಪುಣ್ಯಕೋಟಿ’, ‘ಸೀತೆ’, ‘ಮಹಾಭಾರತ’, ‘ಅನುರಾಗ ಸಂಗಮ’ ಸೇರಿದಂತೆ ಹತ್ತಾರು ಧಾರಾವಾಹಿಗಳಲ್ಲಿ ಸುಮಾರು 2,500 ಸಂಚಿಕೆಗಳಲ್ಲಿ ನಟಿಸಿದ ಹೆಗ್ಗಳಿಕೆ ಇವರದು. ಕಿರುತೆರೆಯಿಂದ ಬೆಳ್ಳಿತೆರೆಗೆ ಕರೆತಂದದ್ದು ‘ಚಾಮುಂಡಿ’ ಚಿತ್ರ. ಪೊಲೀಸ್‌ ಪಾತ್ರ ಇವರಿಗೆ ಚೆನ್ನಾಗಿ ಒಪ್ಪಿಕೊಳ್ಳುತ್ತದೆಯೋ ಅಥವಾ ಪೊಲೀಸ್‌ ವ್ಯವಸ್ಥೆಯ ಬಗ್ಗೆ ಇವರು ತಿಳಿದುಕೊಂಡಿದ್ದಾರೆಯೋ ಎಂಬ ಕಾರಣಕ್ಕೆ ಮತ್ತೆ ಮತ್ತೆ ಪೊಲೀಸ್‌ ಪಾತ್ರಗಳೇ ಸಿಗುತ್ತವೆ.ಅದರಲ್ಲೂ ಆ ಪಾತ್ರಗಳು ನೇತ್ಯಾತ್ಮಕವಾಗಿಯೇ ಸೃಷ್ಟಿಯಾಗಿರುತ್ತವೆ. ಕಾನ್‌ಸ್ಟೆಬಲ್‌ನಿಂದ ಕಮೀಷನರ್‌ವರೆಗಿನ ಎಲ್ಲಾ ವಿಭಾಗಗಳನ್ನೂ ಗಣೇಶ್‌ ರಾವ್‌ ನಿಭಾಯಿಸಿದ್ದಾರೆ! ಪೊಲೀಸ್‌ ಇಲಾಖೆಯಲ್ಲಿ ಗೆಳೆಯರಿರುವ ಕಾರಣ ಪಾತ್ರದ ಸ್ವರೂಪವನ್ನು ಅವರೊಂದಿಗೆ ಚರ್ಚಿಸಿ ಪ್ರಮಾದಗಳಾಗದಂತೆ ಎಚ್ಚರಿಕೆ ವಹಿಸುತ್ತಾರೆ ಅವರು. ‘ಹ್ಯಾಂಗ್‌ ಟಿಲ್‌ ಡೆತ್‌’ ಎಂಬ ಇಂಗ್ಲಿಷ್‌ ಸಿನಿಮಾಕ್ಕೂ ಅವರು ಬಣ್ಣಹಚ್ಚಿದ್ದಾರೆ.ಅಂಬರೀಷ್‌ ಅಭಿನಯದ ‘ಅಣ್ಣಾವ್ರು’ ಚಿತ್ರದಲ್ಲಿ ನಾಯಕನ ಜೊತೆಗಿದ್ದು ಕೊನೆಗೆ ಅವರಿಗೇ ದ್ರೋಹ ಬಗೆಯುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು ಗಣೇಶ್‌ ರಾವ್‌. ಚಿತ್ರ ನಡೆಯುವಾಗಲೇ ಚಿತ್ರಮಂದಿರದಲ್ಲಿದ್ದ ಗಣೇಶ್‌ ರಾವ್‌ ಅವರ ಮೇಲೆ ಅಂಬರೀಷ್‌ ಅಭಿಮಾನಿಗಳು ಸಿಟ್ಟಿಗೆದ್ದು ಹೊಡೆಯಲು ಮುಂದಾಗಿದ್ದರಂತೆ. ‘ನಾನೂ ಅಂಬರೀಷ್‌ ಅಭಿಮಾನಿಯೇ. ಚಿತ್ರದಲ್ಲಿ ನಟಿಸಿದ್ದೇನೆ ಅಷ್ಟೇ’ ಎಂದು ಅವರನ್ನು ಸಮಾಧಾನ ಮಾಡುವಷ್ಟರಲ್ಲಿ ಹೈರಾಣಾಗಿದ್ದರಂತೆ. ಇಂಥ ವಿಶಿಷ್ಟ ಅನುಭವಗಳು ಅವರ ನೆನಪಿನ ಬುತ್ತಿಯಲ್ಲಿವೆ.ಖಳನಾಯಕನಿದ್ದರೆ ಮಾತ್ರ ನಾಯಕ ಗೆಲ್ಲಲು ಸಾಧ್ಯ ಎನ್ನುವುದು ಗಣೇಶ್‌ ರಾವ್‌ ಅಭಿಪ್ರಾಯ. ಖಳನಾಯಕನ ಪಾತ್ರಧಾರಿಯೂ ನಾಯಕನಟನಂತೆಯೇ ಜನರ ಮನಸಿನಲ್ಲಿ ಉಳಿಯುತ್ತಾನೆ. ಇದಕ್ಕೆ ವಜ್ರಮುನಿ ಅವರೇ ಸಾಕ್ಷಿ ಎನ್ನುವ ಅವರು, ಕನಸಿನ ಖಳನಾಯಕನ ಪಾತ್ರಕ್ಕೆ ಇನ್ನೂ ಕಾದು ಕುಳಿತಿದ್ದಾರೆ. ಏಕರೂಪದ ಪಾತ್ರಗಳ ಕುರಿತು ಅವರಿಗೆ ಬೇಸರವಿಲ್ಲ. ಕಲಾವಿದನಿಗೆ ಪಾತ್ರಗಳಲ್ಲಿ ಏಕತಾನತೆ ಕಾಡಬಾರದು. ಹಾಗೆ ಕಾಡದಂತೆ ಇರುವುದು ಅನಿವಾರ್ಯ ಕೂಡ ಎನ್ನುತ್ತಾರೆ. ಆದರೆ ಗ್ಲಾಮರ್‌ಗಾಗಿ ಪರಭಾಷೆಯ ನಾಯಕಿಯರನ್ನು ಕರೆತರುತ್ತಿದ್ದವರು ಈಗ ಪೋಷಕ ಪಾತ್ರಗಳಿಗೂ ಪರಭಾಷೆಯವರಿಗೆ ಮಣೆಹಾಕಲಾಗುತ್ತಿದ್ದಾರೆ ಎಂಬ ಬೇಸರ ಅವರಲ್ಲಿದೆ.ಗಾಡ್‌ಫಾದರ್‌ ಇಲ್ಲದೆಯೇ ಚಿತ್ರರಂಗದಲ್ಲಿ ತಾವು ಅನುಭವಿಸಿದ ಸಂಕಟಗಳನ್ನು, ಕಲಾವಿದರ ಸಮಸ್ಯೆಗಳನ್ನು ಸೂಕ್ಷ್ಮವಾಗಿ ಗ್ರಹಿಸಿರುವ ಅವರು ಅದನ್ನು ಕಥನದ ರೂಪದಲ್ಲಿ ದಾಖಲಿಸಿದ್ದಾರೆ. ಅದಕ್ಕೆ ಸಿನಿಮಾ ಸ್ವರೂಪ ನೀಡಿ ಆ್ಯಕ್ಷನ್‌ ಕಟ್‌ ಹೇಳಬೇಕೆಂಬ ಮಹತ್ವಾಕಾಂಕ್ಷೆ ಅವರದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry