ಬೆಳ್ಳಿಹಬ್ಬಕ್ಕೆ ಹೊಳಪು ತುಂಬುವ ಕನಸು

7

ಬೆಳ್ಳಿಹಬ್ಬಕ್ಕೆ ಹೊಳಪು ತುಂಬುವ ಕನಸು

Published:
Updated:
ಬೆಳ್ಳಿಹಬ್ಬಕ್ಕೆ ಹೊಳಪು ತುಂಬುವ ಕನಸು

ಮೈಸೂರು: “42 ವರ್ಷಗಳ ಹಿಂದಿನ ಮಾತು. ಇಂಗ್ಲೆಂಡ್‌ನಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ನಮ್ಮ ತಂಡ ಭರ್ಜರಿ ಜಯಗಳಿಸಿತ್ತು.  ಮುಂಬೈಗೆ ಬಂದಿಳಿದ ನಮಗೆ ಭವ್ಯ ಸ್ವಾಗತ ಸಿಕ್ಕಿತ್ತು. ವಿಮಾನ ನಿಲ್ದಾಣದಿಂದ ಮೆರವಣಿಗೆ ಸಾಗುವ ಮಾರ್ಗದಲ್ಲಿರುವ ಹಾಜಿ ಅಲಿ ಹತ್ತಿರ ಅಂಗವಿಕಲ ಯುವಕರು ಬಂದು ನಮನ್ನು ಅಭಿನಂದಿಸಿ, ನಾವೂ ಕ್ರಿಕೆಟ್ ಆಡಬೇಕು. ಏನಾದರೂ ಮಾಡಿ ಎಂದಿದ್ದರು. ಇವರಿಗಾಗಿ ಏನಾದರೂ ಮಾಡಬೇಕಲ್ಲ ಎಂಬ ವಿಚಾರ ತಲೆ ಹೊಕ್ಕಿತು. ಅದರ ಫಲವಾಗಿ ಅಂಗವಿಕಲರ ಕ್ರಿಕೆಟ್ ಸಂಸ್ಥೆ ಹುಟ್ಟಿತು”-ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ, ಅಖಿಲ ಭಾರತ ಅಂಗವಿಕಲರ ಕ್ರಿಕೆಟ್ ಸಂಸ್ಥೆ (ಐಕ್ಯಾಡ್) ಸಂಸ್ಥಾಪಕ ಅಧ್ಯಕ್ಷ ಅಜಿತ್ ವಾಡೇಕರ್ ನೆನಪಿನಂಗಳದಲ್ಲಿ ವಿಹರಿಸಿದ್ದರು.ಶನಿವಾರ ಮೈಸೂರಿನಲ್ಲಿ ದಕ್ಷಿಣ ಭಾರತ ಮಟ್ಟದ ಅಂಗವಿಕಲರ ಕ್ರಿಕೆಟ್ ಟೂರ್ನಿಗೆ ಚಾಲನೆ ನೀಡಿದ 71ರ ಹರೆಯದ ವಾಡೇಕರ್ `ಪ್ರಜಾವಾಣಿ'ಯೊಂದಿಗೆ ನಡೆಸಿದ ಮಾತುಕತೆ ಇಲ್ಲಿದೆ.* ಐಕ್ಯಾಡ್ ಸ್ಥಾಪನೆ ಬಗ್ಗೆ.

ಕ್ರಿಕೆಟ್ ಪ್ರೀತಿಯೇ ಹಾಗೆ. ಎಂತಹವರಲ್ಲೂ ಹೊಸ ಚೈತನ್ಯ ತುಂಬಿಬಿಡುತ್ತದೆ. ಹುಟ್ಟಿನಿಂದ ಅಥವಾ ಅವಘಡಗಳಲ್ಲಿ ಅಂಗವಿಕಲರಾದವರ ಕ್ರಿಕೆಟ್ ಪ್ರೀತಿಗೆ ಒಂದು ವೇದಿಕೆ ಕಲ್ಪಿಸಲು 1988ರಲ್ಲಿ ಈ ಸಂಸ್ಥೆಯನ್ನು ಆರಂಭಿಸಿದೆ. ಆಗ ಕೇವಲ ನಾಲ್ಕು ತಂಡಗಳು ಇದ್ದವು.  ಇವತ್ತು 24 ರಾಜ್ಯ ತಂಡಗಳು ನಮ್ಮ ಸಂಸ್ಥೆಯಲ್ಲಿ ಇವೆ.*ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ(ಬಿಸಿಸಿಐ) ಮಾನ್ಯತೆ ಇನ್ನೂ ಸಿಕ್ಕಿಲ್ಲ ಏಕೆ?

ನಾವು ಬಹಳಷ್ಟು ಬಾರಿ ಬಿಸಿಸಿಐಗೆ ಪ್ರಸ್ತಾವ ಸಲ್ಲಿಸಿದ್ದೇವೆ. ಆದರೆ ಅಂಗವಿಕಲರ ಕ್ರಿಕೆಟ್‌ಗೆ ಮಾನ್ಯತೆ ಕೊಡಲು ನಮ್ಮ ನಿಯಮಾವಳಿಯಲ್ಲಿ ಅವಕಾಶ ಇಲ್ಲ ಎಂದು ಹೇಳುತ್ತಾರೆ. ಇದು ನನಗೂ ಅಚ್ಚರಿ ಮೂಡಿಸುತ್ತಿದೆ. ಇಂಗ್ಲೆಂಡ್, ಆಸ್ಟ್ರೇಲಿಯಾಗಳಲ್ಲಿ ಈಗಾಗಲೇ ಅಂಗವಿಕಲರ ಕ್ರಿಕೆಟ್‌ಗೆ ಮಾನ್ಯತೆ ಸಿಕ್ಕಿದೆ. ನಮಗೆ ಬರೀ ಮಾನ್ಯತೆ ಕೊಡಿ ಎಂದಷ್ಟೇ ಕೇಳುತ್ತಿದ್ದೇವೆ. ಇವರಿಂದ ಹಣಕಾಸು ನೆರವಿನ ಅಪೇಕ್ಷೆ ನಮಗಿಲ್ಲ. ಮಾನ್ಯತೆ ಸಿಗುವುದರಿಂದ ಆಟಗಾರರಿಗೆ ಬಸ್, ರೈಲ್ವೆ ಪ್ರಯಾಣಗಳಲ್ಲಿ ರಿಯಾಯಿತಿ ಸೌಲಭ್ಯಗಳು ಮತ್ತು ಕೆಲವು ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳು ಸಿಗುತ್ತವೆ.*ಸಂಸ್ಥೆ ನಡೆಸಲು ಹಣಕಾಸಿನ ನಿರ್ವಹಣೆ ಹೇಗೆ?

ಬಹಳಷ್ಟು ಶ್ರಮಪಟ್ಟು ನಿರ್ವಹಣೆ ಮಾಡುತ್ತಿದ್ದೇವೆ. ಭಾರತೀಯ ಸ್ಟೇಟ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಕೆಲವು ಕಾರ್ಪೋರೇಟ್ ಸಂಸ್ಥೆಗಳು ನಮಗೆ ಪ್ರಾಯೋಜಕತ್ವ ನೀಡುತ್ತಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry