ಶುಕ್ರವಾರ, ಏಪ್ರಿಲ್ 16, 2021
25 °C

ಬೆಳ್ಳಿ ಮೂಡಿತು, ಖುಷಿ ತಂದಿತು...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್: `ಇಡೀ ದೇಶ ನನ್ನ ಮೇಲೆ ಪದಕದ ಭರವಸೆ ಇಟ್ಟುಕೊಂಡಿದೆ. ಜೊತೆಗೆ ಒಲಿಂಪಿಕ್ಸ್‌ನಲ್ಲಿ ತಂಡವನ್ನು ಮುನ್ನಡೆಸಲು ಅವಕಾಶ ಮಾಡಿಕೊಟ್ಟಿದ್ದಾರೆ. ಜನರು ನನಗೆ ನೀಡಿರುವ ಉಡುಗೊರೆ ಇದು. ನಾನು ಕೂಡ ಅವರಿಗೊಂದು ಕೊಡುಗೆ ನೀಡಬೇಕು~ ಎಂದು-ಲಂಡನ್ ಒಲಿಂಪಿಕ್ಸ್‌ಗೆ ತೆರಳುವ ಮೊದಲು ಸುಶೀಲ್ ಕುಮಾರ್ ಹೇಳಿದ್ದ ಮಾತಿದು. ಕ್ರೀಡಾ ಮೇಳದ ಕೊನೆಯ ದಿನ ಕುಸ್ತಿ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಜಯಿಸಿದ ನಜಾಫ್‌ಗಡದ ಸುಶೀಲ್ ತಮ್ಮ ಮಾತು ಉಳಿಸಿಕೊಂಡಿದ್ದಾರೆ. ಎಕ್ಸ್‌ಸೆಲ್ ನಾರ್ಥ್ ಅರೆನಾದಲ್ಲಿ ಭಾನುವಾರ ನಡೆದ ಪುರುಷರ ಕುಸ್ತಿಯ 66 ಕೆ.ಜಿ. ವಿಭಾಗದ ಫ್ರೀಸ್ಟೈಲ್‌ನಲ್ಲಿ ಫೈನಲ್ ಹೋರಾಟದಲ್ಲಿ ಸುಶೀಲ್ 1-3 ಪಾಯಿಂಟ್‌ಗಳಿಂದ ಜಪಾನ್‌ನ ತತ್ಸುಹಿರೊ ಯೊನೆಮಿತ್ಸು ಎದುರು ಸೋಲು ಕಂಡರೂ ಐತಿಹಾಸಿಕ ಸಾಧನೆಯೊಂದಕ್ಕೆ ಕಾರಣರಾದರು. ಸತತ ಎರಡನೇ ಬಾರಿಗೆ ಅವರು ಒಲಿಂಪಿಕ್ಸ್‌ನಲ್ಲಿ ಪದಕದ ಸಾಧನೆ ಮಾಡಿದ್ದಾರೆ. 2008ರಲ್ಲಿ ಕಂಚು ಗೆದ್ದಿದ್ದರು.`ಈ ಬಾರಿ ಚಿನ್ನದ ಪದಕ ಗೆಲ್ಲಬೇಕೆಂಬ ಛಲ ನನ್ನಲ್ಲಿತ್ತು. ಆದರೆ ನನ್ನ ತಂತ್ರಗಳು ಎದುರಾಳಿಗೆ ಗೊತ್ತಾಯಿತು. ಎಷ್ಟೇ ಪ್ರಯತ್ನಿಸಿದರೂ ಅವರ ಮೇಲೆ ಹಿಡಿತ ಸಾಧಿಸಲು ನನ್ನಿಂದ ಸಾಧ್ಯವಾಗಲಿಲ್ಲ~ ಎಂದು ಸುಶೀಲ್ ನುಡಿದರು.ಫೈನಲ್ ಹೋರಾಟ ಬಹುತೇಕ ಏಕಪಕ್ಷೀಯವಾಗಿತ್ತು. ಸುಶೀಲ್ ಅನಾರೋಗ್ಯದಿಂದ ಬಳಲಿದ್ದು ಸ್ಪಷ್ಟವಾಗಿತ್ತು. ಇದರ ಸದುಪಯೋಗ ಪಡೆದ 26 ವರ್ಷ ವಯಸ್ಸಿನ ಯೊನೆಮಿತ್ಸು ಭಾರತದ ಕುಸ್ತಿಪಟುವಿನ ಮೇಲೆ ಹಿಡಿತ ಸಾಧಿಸಿದರು. ಸುಶೀಲ್ ಅವರನ್ನು ಒಮ್ಮೆ ಮೇಲೆತ್ತಿ ಹಿಡಿದರು. ಇದರಿಂದ ಜಪಾನ್ ಕುಸ್ತಿಪಟುವಿಗೆ ಒಮ್ಮೆಲೇ ಮೂರು ಪಾಯಿಂಟ್ ಲಭಿಸಿದವು. ಅಲ್ಲಿಗೆ 29 ವರ್ಷ ವಯಸ್ಸಿನ ಸುಶೀಲ್ ಹೋರಾಟ ಅಂತ್ಯಗೊಂಡಿತು.ಸೆಮಿಫೈನಲ್‌ನಲ್ಲಿ ಕಜಕಸ್ತಾನದ ಅಕ್ಜುರೆಕ್ ತನತರೋವ್ ಎದುರಿನ ಪೈಪೋಟಿ ಸಾಕಷ್ಟು ಕುತೂಹಲ ಕೆರಳಿಸಿತ್ತು. ಏಕೆಂದರೆ ಆರಂಭದ ಪೀರಿಯಡ್‌ನಲ್ಲಿ ಸುಶೀಲ್ ಹಿನ್ನಡೆ ಸಾಧಿಸಿದ್ದರು. ಆದರೆ ಅಂತಿಮ ಪೀರಿಯಡ್‌ನಲ್ಲಿ ಭಾರತದ ಕುಸ್ತಿಪಟು ಹೆಚ್ಚಿನ ಪಾಯಿಂಟ್ ಗೆಲ್ಲುವಲ್ಲಿ ಯಶಸ್ವಿಯಾದರು.ಉಜ್ಬೆಕಿಸ್ತಾನದ ಇಖ್ತಿಯಾರ್ ನವ್ರಜೊವ್ ಎದುರಿನ ಕ್ವಾರ್ಟರ್ ಫೈನಲ್ ಹೋರಾಟ 2010ರ ವಿಶ್ವ ಚಾಂಪಿಯನ್ ಸುಶೀಲ್‌ಗೆ ಹೆಚ್ಚು ಕಷ್ಟ ಎನಿಸಲಿಲ್ಲ. ಎರಡನೇ ಪೀರಿಯಡ್‌ನಲ್ಲಿ ಅವರು ಪೈಪೋಟಿ ಮುಗಿಸಬಹುದಿತ್ತು. ಈ ಹಂತದಲ್ಲಿ ಸುಶೀಲ್ ಕೊಂಚ ಎಡವಟ್ಟು ಮಾಡಿಕೊಂಡರು. ಆದರೆ ಅದು ಯಾವುದೇ ಅಪಾಯ ಉಂಟು ಮಾಡಲಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಪ್ರೀ ಕ್ವಾರ್ಟರ್ ಫೈನಲ್‌ನಲ್ಲಿ ಬೀಜಿಂಗ್ ಚಾಂಪಿಯನ್ ಟರ್ಕಿಯ ರಮಜಾನ್ ಸಾಹಿನ್ ಎದುರು ಸುಲಭವಾಗಿ ಗೆದ್ದಿದ್ದು ವಿಶೇಷ.ಅಕಾಡೆಮಿಗೆ ಜಮೀನು: ಹರಿಯಾಣದ ಸೋನೆಪತ್ ಜಿಲ್ಲೆಯಲ್ಲಿ ಅಕಾಡೆಮಿ ಸ್ಥಾಪಿಸಲು ಸುಶೀಲ್‌ಗೆ ಜಮೀನು ನೀಡುವುದಾಗಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಪ್ರಕಟಿಸಿದ್ದಾರೆ. ಸುಶೀಲ್ ಅವರನ್ನು ಅಭಿನಂದಿಸಿರುವ ಅವರು `ಬೆಳ್ಳಿ ಗೆದ್ದು ದೇಶ ಹೆಮ್ಮೆ ಪಡುವಂತಹ ಸಾಧನೆಗೆ ಕಾರಣರಾಗಿದ್ದಾರೆ~ ಎಂದು ನುಡಿದಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.