ಬೆಳ್ಳಿ ಹೆಜ್ಜೆಯಲ್ಲಿ ರಾಜೇಶ್

7

ಬೆಳ್ಳಿ ಹೆಜ್ಜೆಯಲ್ಲಿ ರಾಜೇಶ್

Published:
Updated:
ಬೆಳ್ಳಿ ಹೆಜ್ಜೆಯಲ್ಲಿ ರಾಜೇಶ್

ಕರ್ನಾಟಕ ಚಲನಚಿತ್ರ ಅಕಾಡೆಮಿ:  ಶನಿವಾರ ಬೆಳ್ಳಿಹೆಜ್ಜೆಯಲ್ಲಿ ಚಿತ್ರ ನಟ ರಾಜೇಶ್ ಅವರೊಡನೆ ಸಂವಾದ.‘ನಿರುದ್ಯೋಗಿಯ ಬಾಳು, ನಿರಪರಾಧಿ, ದೇವ ಮಾನವ, ಆತ್ಮ ವಂಚನೆ, ಕರಾಮತ್, ಬಡತನದ ಬಾಳು’ ಇಂತಹ ಸಾಮಾಜಿಕ ನಾಟಕಗಳಿಂದ ಕಲಾವಿದರಾಗಿ ಗುರುತಿಸಿಕೊಂಡವರು ವಿದ್ಯಾಸಾಗರ್. ಅವರೇ ಮುಂದೆ ಸಿನಿಮಾದಲ್ಲಿ ರಾಜೇಶ್ ಎಂದು ಜನಪ್ರಿಯರಾದ ಚಿತ್ರನಟ.

 

ತಮ್ಮ ಪ್ರತಿಭೆಯಿಂದ ಕಪ್ಪುಬಿಳುಪು, ಎರಡು ಮುಖ, ಸುವರ್ಣಭೂಮಿ, ತವರು ಮನೆ ಉಡುಗೊರೆ ಮತ್ತಿತರ ಸಿನಿಮಾಗಳ ಮೂಲಕ ಕನ್ನಡ ಚಲನಚಿತ್ರ ರಂಗದಲ್ಲಿ ಹೆಮ್ಮೆರವಾಗಿ ಬೆಳೆದದ್ದು ಈಗ ಇತಿಹಾಸ.ಶಕ್ತಿ ನಾಟಕ ಮಂಡಳಿ ಸ್ಥಾಪಿಸಿ ತಾವೇ ನಾಟಕ ರಚಿಸಿ ಅಭಿನಯಿಸುತ್ತಿದ್ದ ವಿದ್ಯಾಸಾಗರ್, 1964ರಲ್ಲಿ ದಿ. ಹುಣಸೂರು ಕೃಷ್ಣಮೂರ್ತಿ ಅವರ ‘ವೀರ ಸಂಕಲ್ಪ’ ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಕಾಲಿಟ್ಟರು.

ಮುಂದೆ ಅವರಿಗೆ ಸಿನಿಮಾದಲ್ಲಿ ರಾಜೇಶ್ ಎಂದು ಮರು ನಾಮಕರಣ ಮಾಡಿದ್ದು ಚಿತ್ರ ನಿರ್ಮಾಪಕ ಬಿ.ಸಿ.ಎಸ್. ನಾರಾಯಣ. 1968ರಲ್ಲಿ ಅವರು ನಾಯಕ ನಟರಾಗಿದ್ದ ‘ನಮ್ಮ ಊರು’ ಚಿತ್ರ ಅಪಾರ ಜನಪ್ರಿಯತೆ ಗಳಿಸಿತು. ಅಂದಿನ ಮುಖ್ಯಮಂತ್ರಿ  ದಿ. ವೀರೇಂದ್ರ ಪಾಟೀಲರು ಈ ಚಿತ್ರದ ಸಾಮಾಜಿಕ ಸಂದೇಶದಿಂದ ಪ್ರಭಾವಿತರಾಗಿ ಶೇ100ರಷ್ಟು ಮನರಂಜನಾ ತೆರಿಗೆ ಮನ್ನಾ ಮಾಡಿದ್ದು ಉಲ್ಲೇಖಾರ್ಹ.

 

1969ರ ಅವಧಿಯಲ್ಲಿ ‘ಅರಿಶಿನ ಕುಂಕುಮ’ ಚಿತ್ರದಲ್ಲಿ ಅಭಿನಯಿಸುತ್ತಿದ್ದಾಗ ತಮಿಳು ಚಿತ್ರರಂಗ ಕೈ ಬೀಸಿ ಕರೆಯಿತು. ಆದರೆ ‘ನರಕಕ್ಕೀಳ್ಸಿ ನಾಲ್ಗೆ ಸೀಳ್ಸಿ ಹೊಲ್ಸಾಕಿದ್ರೂನು ಮೂಗ್ನಲ್ ಕನ್ನಡ್ ಪದವಾಡ್ತಿನಿ’ ಎಂದ ಜೆ.ಪಿ. ರಾಜರತ್ನಂ ಅವರಂತೆಯೇ ಕನ್ನಡ ಚಿತ್ರರಂಗ ಬಿಟ್ಟು ಅವರು ಬೇರೆಡೆ ಮುಖ ಮಾಡಲಿಲ್ಲ.

 

ಯಾಕೆ ಸರ್! ತಮಿಳು ಚಿತ್ರರಂಗಕ್ಕೆ ಹೋಗಿದ್ರೆ ಇನ್ನೂ ಹೆಸರು, ಹಣ ಮಾಡುಬಹುದಿತ್ತಲ್ಲ ಎಂದು ಹಿಂದೊಮ್ಮೆ ಅವರೊಡನೆ ಮಾಡನಾಡುತ್ತಾ ಪ್ರಶ್ನಿಸಿದಾಗ, ಅಲ್ಲಾ ಸ್ವಾಮಿ ‘ಹಣವೇನೊ ಮಾಡಬಹುದಿತ್ತು. ಆದರೆ ಕನ್ನಡಾನ ಉಳಿಸೋರು ಯಾರು ಸ್ವಾಮಿ’ ಎಂದಿದ್ದರು.

 

ಸ್ಥಳ: ಬಾದಾಮಿ ಹೌಸ್, ಜೆ ಸಿ ರಸ್ತೆ (ಪಾಲಿಕೆ ಮುಖ್ಯ ಕಚೇರಿ ಎದುರು). ಸಂಜೆ 4.30.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry