ಬೆಳ್ಳಿ ಹೆಜ್ಜೆ-ಪ್ರಣಯರಾಜನ ಮೆಲುಕು

7

ಬೆಳ್ಳಿ ಹೆಜ್ಜೆ-ಪ್ರಣಯರಾಜನ ಮೆಲುಕು

Published:
Updated:
ಬೆಳ್ಳಿ ಹೆಜ್ಜೆ-ಪ್ರಣಯರಾಜನ ಮೆಲುಕು

ಬೆಂಗಳೂರು: `ಕನ್ನಡ ಚಿತ್ರರಂಗದ ಇತಿಹಾಸ ಮತ್ತು ಅದರ ಕಾರ್ಯವೈಖರಿಯನ್ನು ಸವಿಸ್ತಾರವಾಗಿ ಅರ್ಥೈಸಿಕೊಂಡು ಪ್ರಸ್ತುತ ಇರುವ ಬಜೆಟಿನಲ್ಲಿ ಉತ್ತಮ ಗುಣಮಟ್ಟದ ಚಿತ್ರಗಳನ್ನು ನಿರ್ಮಿಸುವ ಅಗತ್ಯವಿದೆ~ ಎಂದು ನಟ, `ಪ್ರಣಯರಾಜ~ ಶ್ರೀನಾಥ್ ಅಭಿಪ್ರಾಯಪಟ್ಟರು.ಕರ್ನಾಟಕ ಚಲನಚಿತ್ರ ಅಕಾಡೆಮಿ ನಗರದ ಬಾದಾಮಿ ಹೌಸ್‌ನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬೆಳ್ಳಿ ಹೆಜ್ಜೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.`ಪ್ರಸ್ತುತ ಚಿತ್ರರಂಗದಲ್ಲಿ ವೃತ್ತಿ ಆರಂಭಿಸುತ್ತಿರುವ ನಟ- ನಟಿಯರಲ್ಲಿ ಆತ್ಮವಿಶ್ವಾಸ ಹೆಚ್ಚಿದ್ದು, ನಾನು `ಶುಭಮಂಗಳ~ ಅಭಿನಯಿಸಿ, ಗೆಲುವು ಪಡೆಯುವವರೆಗೂ ಆತ್ಮವಿಶ್ವಾಸವನ್ನು ಪಡೆದಿರಲಿಲ್ಲ. ಇದು ನಿಜಕ್ಕೂ ಉತ್ತಮ ಬೆಳವಣಿಗೆ~ ಎಂದು ಹೇಳಿದರು.`ನಟ ಕೆ.ಎಸ್. ಅಶ್ವತ್ಥ್ ಅವರು ನಟಿಸಿದಂತಹ ಪೋಷಕ ಪಾತ್ರಗಳು ನನಗೆ ಸಿಗಲಿಲ್ಲ ಎಂಬ ಕೊರಗಿದೆ. ಒಂದು ಹಂತದವರೆಗೆ ಚಿತ್ರರಂಗದಲ್ಲಿ ಗುರುತಿಸಿಕೊಂಡ ನಂತರ ಜೀವನದಲ್ಲಿ ಎದುರಾದ ಆರ್ಥಿಕ ಬಿಕ್ಕಟ್ಟು ಪೋಷಕ ಪಾತ್ರಗಳನ್ನು ಒಪ್ಪಿಕೊಳ್ಳುವಂತೆ ಮಾಡಿತು. ಒಮ್ಮಮ್ಮೆ ಪೋಷಕ ಪಾತ್ರಗಳನ್ನು ಒಪ್ಪಿಕೊಂಡು ತಪ್ಪು ಮಾಡಿದ ಭಾವ ಕಾಡುತ್ತದೆ~ ಎಂದರು.`ಚಿಕ್ಕಂದಿನಲ್ಲೇ ತಾಯಿಯನ್ನು ಕಳೆದುಕೊಂಡ ನನಗೆ, ತಂದೆಯ ನೈತಿಕ ಬೆಂಬಲ ಮತ್ತು ಬಸವನಗುಡಿಯ ಸನ್ನಿಧಿ ರಸ್ತೆಯಲ್ಲಿದ್ದ ವಠಾರ ಮನೆಯೇ ಎಲ್ಲವೂ ಆಗಿತ್ತು. ಜೀವನದಲ್ಲಿ ಆಳವಡಿಸಿಕೊಳ್ಳಬೇಕಿದ್ದ ಸ್ನೇಹ, ಪ್ರೀತಿ ಮತ್ತು ವಿಶ್ವಾಸಗಳನ್ನು ವಠಾರದ ಸ್ನೇಹಿತರು ನೀಡಿದ್ದರು. ಸಿನಿಮಾ ಪೋಸ್ಟರ್‌ಗಳನ್ನು ನೋಡಿ ಸಿನಿಮಾದ ಬಗ್ಗೆ ಆಸಕ್ತಿ ಇಟ್ಟುಕೊಂಡಿದ್ದ ನಾನು ಏಳನೇ ವರ್ಷಕ್ಕೆ ಬಸವನಗುಡಿಯ ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನದಲ್ಲಿ ನಡೆದ ನಾಟಕವೊಂದರಲ್ಲಿ ಈಶ್ವರನ ಪಾತ್ರ ಮಾಡಿ ಮೆಚ್ಚುಗೆ ಗಳಿಸಿದ್ದೆ. ಅಂದು ಪಡೆದ ಸಭಿಕರ ಚಪ್ಪಾಳೆಯು ನಾಟಕ ಮತ್ತು ಸಿನಿಮಾಗಳಲ್ಲಿ ತೊಡಗಿಕೊಳ್ಳುವಂತೆ ಪ್ರೇರಣೆ ನೀಡಿತು~ ಎಂದು ಹಳೆಯ ದಿನಗಳನ್ನು ನೆನಪಿಸಿಕೊಂಡರು.` ಪ್ರಭಾತ್ ಕಲಾವಿದರು ಹಮ್ಮಿಕೊಂಡಿದ್ದ ಮಹಾಭಾರತದ `ವಿರಾಟಪರ್ವ~ ಪೌರಣಿಕ ನಾಟಕಗಳಲ್ಲಿ ಅಭಿನಯಿಸಿದ್ದೆ. ನನ್ನ ಅಭಿನಯ ನೋಡಿ ಹೆಸರಾಂತ ಗುತ್ತಿಗೆದಾರ ಎಂ.ಎಸ್.ರಾಮಯ್ಯ ಅವರು ಆಗಿನ ಕಾಲಕ್ಕೆ 500 ರೂಪಾಯಿ ಮೆಚ್ಚುಗೆ ಹಣವನ್ನು ನೀಡಿದ್ದರು. ನಟ ಡಾ.ರಾಜ್‌ಕುಮಾರ್ ಅವರ `ಲಗ್ನ ಪತ್ರಿಕೆ~ ಸಿನಿಮಾದಲ್ಲಿ ಮನ್ಮಥ ಪಾತ್ರ ಮಾಡಿ ಗಮನ ಸೆಳೆದಿದ್ದೆ. ಆ ನಂತರ ಎಸ್.ಕೆ. ಅನಂತಾಚಾರಿ ಅವರು `ಮಧುರ ಮಿಲನ~ ಚಿತ್ರಕ್ಕೆ ನಾಯಕನಾಗಿ ಆಯ್ಕೆ ಮಾಡಿಕೊಂಡರು. ಕೆ.ಎಸ್.ಎಲ್.ಸ್ವಾಮಿ ನಿರ್ದೇಶನದ `ಶ್ರೀಕೃಷ್ಣ ರುಕ್ಮಿಣಿ ಸತ್ಯಭಾಮ~ ಸಿನಿಮಾದಲ್ಲಿ ನಾರದನ ಪಾತ್ರ ಕೊಟ್ಟು ಬೆಂಬಲ ನೀಡಿದರು~ ಎಂದು ಸ್ಮರಿಸಿದರು.  `ಮಧುರ ಮಿಲನ~ದ ನಂತರ ಸುಮಾರು 30 ಚಿತ್ರಗಳಲ್ಲಿ ಅಭಿನಯಿಸಿದೆ. ಆದರೆ ಅತೃಪ್ತ ಭಾವವಿತ್ತು. ಪುಟ್ಟಣ್ಣ ಅವರ ಸಿನಿಮಾಗಳಲ್ಲಿ ಅಭಿನಯಿಸಿದೇ ಇದ್ದರೇ ವೃತ್ತಿ ಜೀವನ ಪೂರ್ಣಗೊಳ್ಳುವುದಿಲ್ಲ ಎಂಬ ಕೊರಗು ಕಾಡುತ್ತಿರುವಾಗಲೇ ನಿರ್ದೇಶಕ ಮತ್ತು ನಿರ್ಮಾಪಕ ಕೆ.ಎಸ್.ಎಲ್.ಸ್ವಾಮಿ ಅವರ ಒತ್ತಾಸೆಯಂತೆ ಪುಟ್ಟಣ್ಣ ಅವರ ನಿರ್ದೇಶನದ `ಶುಭಮಂಗಳ~ ಚಿತ್ರದಲ್ಲಿ ಅಭಿನಯಿಸುವ ಅವಕಾಶ ದೊರೆಯಿತು. ಚಿತ್ರದ ಭರ್ಜರಿ ಯಶಸ್ಸಿನಿಂದ ಸ್ಟಾರ್‌ಗಿರಿ ಪಡೆದುಕೊಂಡೆ. ಇದೇ ಸಂದರ್ಭದಲ್ಲಿ ಡಾ.ರಾಜ್‌ಕುಮಾರ್ ಅವರು ಸಿನಿಮಾಗಳನ್ನು ಆಯ್ಕೆ ಮಾಡುವ ರೀತಿ ಹಾಗೂ ಬಂದಿರುವ ಖ್ಯಾತಿಯನ್ನು ಉಳಿಸಿಕೊಳ್ಳುವ ಕುರಿತು ನನಗೆ ಮಾರ್ಗದರ್ಶನ ನೀಡಿದ್ದರು~ ಎಂದರು.`ಇದಾದ ನಂತರ `ನನಗಾಗಿ ನೀನು~ ಚಿತ್ರದಲ್ಲಿ ನಟಿ ಮಂಜುಳಾ ಜೊತೆ ಅಭಿನಯಿಸುವ ಮೂಲಕ `ಪ್ರಣಯ ರಾಜ~ ಎಂಬ ಹೆಗ್ಗಳಿಕೆ ಬಂತು. ಆಕೆ ತನ್ನ ಕೊನೆಯ ಕ್ಷಣಗಳಲ್ಲೂ `ಶ್ರೀನಾಥ್ ಅಣ್ಣ ನಿನ್ನೊಂದಿಗೆ ಮಾತನಾಡಬೇಕು ಎಂದಿದ್ದಳು~ ಎಂಬುದನ್ನು ನೆನಪಿಸಿಕೊಂಡು ಗದ್ಗದಿತರಾದರು. `ಶುಭಮಂಗಳ ಚಿತ್ರದಲ್ಲಿ ಪುಟ್ಟಣ್ಣ ಕಣಗಾಲ್ ಅವರೊಂದಿಗೆ ಕೆಲಸ ಮಾಡಿರುವ ಅನುಭವ ವಿಶ್ವವಿದ್ಯಾಲಯದಲ್ಲಿಯೇ ಜ್ಞಾನಾರ್ಜನೆ ಪಡೆದುಕೊಂಡಂತೆ. ಜೀವನದಲ್ಲಿ ಹಲವು ಏರು-ಪೇರುಗಳನ್ನು ಕಂಡಿದ್ದ ಪುಟ್ಟಣ್ಣ ಅವರು `ಮಾನಸ ಸರೋವ~ ಚಿತ್ರದ ಮೂಲಕ ನನ್ನೊಳಗಿದ್ದ ಅದ್ಬುತ ನಟನನ್ನು ಹೊರತಂದರು~ ಎಂದು ಹೇಳಿದರು.ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಟಿ.ಎಸ್.ನಾಗಾಭರಣ ಇತರರು ಉಪಸ್ಥಿತರಿದ್ದರು.  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry